ದಾವಣಗೆರೆ: ಎಂಎಸ್‌ಎಂಇ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ- ರಾಮಾ ನಾಯ್ಕ್

ದಾವಣಗೆರೆ: ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆದಾರರು ಮತ್ತು ಕೈಗಾರಿಕೆಗಳು ದೇಶದ ಆರ್ಥಿಕ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿವೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್‌ಎಂಇ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೆನರಾ ಬ್ಯಾಂಕ್‌ನಿಂದ ಎಂಎಸ್‌ಎಂಇ ಸುಲಭ್ ಕಚೇರಿ ಆರಂಭಿಸಲಾಗಿದೆ ಎಂದು ಕೆನರಾ ಬ್ಯಾಂಕಿನ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ರಾಮಾ ನಾಯ್ಕ್ ಹೇಳಿದರು.
ಇಲ್ಲಿನ ಡಿಸಿಎಂ ಲೇಔಟ್‌ನ ಎಂಎಸ್‌ಎಂ ಪ್ಲಾಜಾದಲ್ಲಿ ಶುಕ್ರವಾರ ಕೆನರಾ ಬ್ಯಾಂಕಿನಿಂದ ನೂತನವಾಗಿ ಆರಂಭಿಸಲಾದ ಎಂಎಸ್‌ಎಂಇ ಸುಲಭ್ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಎಂಎಸ್‌ಎಂಇ ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ನೀಡುವುದು ಕೆನರಾ ಬ್ಯಾಂಕಿನ ಸಂಕಲ್ಪ. ಸದ್ಯ ಕೆನರಾ ಬ್ಯಾಂಕ್ ದೇಶದಲ್ಲೇ ಅಗ್ರಗಣ್ಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಗೃಹ ನಿರ್ಮಾಣ, ವಾಹನ, ವಿದ್ಯಾಭ್ಯಾಸ ಸಾಲ, ಕೃಷಿ ಸಾಲಗಳಿಗೆ ಈಗಾಗಲೇ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈಗ ದೇಶದಾದ್ಯಂತ ಎಂಎಸ್‌ಎಂಇ ಸುಲಭ್ ಕಚೇರಿಗಳನ್ನು ಆರಂಭಿಸುತ್ತಿದ್ದು, ಗ್ರಾಹಕರು ಇದರ ಅನುಕೂಲ ಪಡೆಯಬೇಕು ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕಿನ ದಾವಣಗೆರೆ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ಎಚ್.ರಘುರಾಜ, ‘ಎಂಎಸ್‌ಎಂಇ ಕ್ಷೇತ್ರದಲ್ಲಿ ಸ್ವ-ಉದ್ಯೋಗಕ್ಕೆ ಮತ್ತು ಉದ್ಯೋಗ ಸೃಷ್ಟಿಸಲು ವಿಪುಲ ಅವಕಾಶಗಳಿವೆ. ದೇಶದ ಅಡಿಪಾಯ ಇರುವುದೇ ಇದರಲ್ಲಿ. ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದ್ದು, ಈಗಾಗಲೇ ₹ 690 ಕೋಟಿ ಸಾಲವನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು ₹ 1000 ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ’ ಎಂದರು.
ಕೋವಿಡ್ ಕಾರಣ ಗ್ರಾಹಕರ ಅನುಕೂಲಕ್ಕಾಗಿ ಕೆನರಾ ಜೀವನ್ ರೇಖಾ, ಕೆನರಾ ಚಿಕಿತ್ಸಾ ಹಾಗೂ ಕೆನರಾ ಸುರಕ್ಷಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ್, ‘ಈಗ ಪ್ರತಿಯೊಂದು ಸರ್ಕಾರಿ ಪ್ರಾಯೋಜಿತ ಸಾಲ ಯೋಜನೆಗಳು ಬ್ಯಾಂಕುಗಳ ಮೂಲಕವೇ ಜನರನ್ನು ತಲುಪುತ್ತವೆ. ಈ ಕಾರಣ ಬ್ಯಾಂಕುಗಳು ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಇನ್ನಷ್ಟು ಸಮನ್ವಯತೆಯಿಂದ ಕೆಲಸ ಮಾಡಬೇಕಾಗುತ್ತದೆ’ ಎಂದರು.
ಬಳಿಕ ಎಂಎಸ್‌ಎಂಇ ಗ್ರಾಹಕರ ಸಮಾಲೋಚನಾ ಸಭೆ ನಡೆಯಿತು.
ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ್ ಡಿ. ಶಾಸ್ತ್ರಿ, ವಿಭಾಗೀಯ ಪ್ರಬಂಧಕರಾದ ಜಿ.ಜಿ.ದೊಡ್ಡಮನಿ, ಜಿ.ಆರ್. ನಾಗರತ್ನ, ಎಂಎಸ್‌ಎಂಇ ಸುಲಭ್ ಕಚೇರಿಯ ವಿಭಾಗೀಯ ಪ್ರಬಂಧಕ ಅಶೋಕ್ ತಿಖೆ, ಮುಖ್ಯ ಪ್ರಬಂಧಕರಾದ ಎಸ್. ಭಾರತಿ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಅಧಿಕಾರಿಗಳಾದ ಬಿ.ಎ.ಸುರೇಶ್, ಎನ್.ರಾಮಮೂರ್ತಿ, ವಾಸಂತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.