ಮಂಗಳವಾರ, ಅಕ್ಟೋಬರ್ 26, 2021
20 °C

ದುರ್ಗಾಂಬಿಕಾ ದೇವಸ್ಥಾನದಲ್ಲಿ ಅ.7ರಿಂದ ನವರಾತ್ರಿ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಅಕ್ಟೋಬರ್‌ 7ರಿಂದ 16ರವರೆಗೆ ನವರಾತ್ರಿ ಮಹೋತ್ಸವ ಹಾಗೂ ಪುರಾಣ ಪ್ರವಚನ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಸದಸ್ಯ ಗೌಡರ ಚನ್ನಬಸಪ್ಪ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ಅಕ್ಟೋಬರ್‌ 7ರಂದು ಬೆಳಿಗ್ಗೆ 6.30ಕ್ಕೆ ವಿಘ್ನೇಶ್ವರ ಘಟ ಸ್ಥಾಪನೆ ಹಾಗೂ ದೇವಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಟ್ರಸ್ಟ್‌ನ ಗೌರವ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಕಾರ್ಯಾಧ್ಯಕ್ಷ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಕುಟುಂಬ ಸಮೇತ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್‌ನ ಎಲ್ಲಾ ಸದಸ್ಯ, ಗೌಡರು, ಶಾನಭೋಗರು, ಬಣಕಾರರು, ರೈತರು, ಬಾರಿಕರು, ಕುಂಬಾರರು ಹಾಗೂ ಸಾಂಸ್ಕೃತಿ ಸಮಿತಿಯ ಸದಸ್ಯರೆಲ್ಲ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.

‘ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ದೇವಸ್ಥಾನದ ಪಾದಗಟ್ಟೆ ಬಳಿ ಶ್ರೀದೇವಿ ಪುರಾಣ ಪ್ರವಚನವನ್ನು ಹಾವೇರಿ ಜಿಲ್ಲೆಯ ಹಾವನೂರಿನ ಕರಡಗಿ ಗ್ರಾಮದ ಹರಿಕಥಾ ವಿದ್ವಾನ್‌ ರೇವಣಸಿದ್ದಯ್ಯ ಶಾಸ್ತ್ರಿ ನೆರವೇರಿಸಿಕೊಡಲಿದ್ದಾರೆ. ಹತ್ತು ದಿನಗಳ ಕಾಲ ದೇವಿಗೆ ವಿವಿಧ ಬಗೆಯ ಅಲಂಕಾರ ಮಾಡಿ ಪೂಜಿಸಲಾಗುವುದು’ ಎಂದರು. 

‘ಅ.14ರಂದು ಬೆಳಿಗ್ಗೆ 10.30ಕ್ಕೆ ಆಯುಧ ಪೂಜೆ ಹಾಗೂ ಕುಂಭಾಭಿಷೇಕ ನಡೆಯಲಿದೆ. 15ರಂದು ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. 16ರಂದು ಕಳಸ ಪೂಜೆಯ ಬಳಿಕ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ’ ಎಂದು ಹೇಳಿದರು.

ನೂತನ ಉತ್ಸವ ಮೂರ್ತಿ: ‘ಇದುವರೆಗೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮಾಡಿರುವ ದೇವಿಯ ಉತ್ಸವ ಮೂರ್ತಿಯನ್ನು ನವರಾತ್ರಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ದೇವಿಯ ಭಕ್ತರಾದ ಪದ್ಮ ಬಸವಂತಪ್ಪ ಅವರು ಅಂದಾಜು ₹ 5 ಲಕ್ಷ ವೆಚ್ಚದಲ್ಲಿ 5 ಅಡಿ ಎತ್ತರದ ಚಿನ್ನ ಲೇಪಿತ ಹಿತ್ತಾಳೆಯ ದೇವಿಯ ಉತ್ಸವ ಮೂರ್ತಿಯನ್ನು ಮಾಡಿಸಿಕೊಟ್ಟಿದ್ದಾರೆ. ನಾಯಕನಹಟ್ಟಿಯ ವೇಂಕಟೇಶ್‌ ಆಚಾರ್ಯ ಅವರು ನಿರ್ಮಿಸಿರುವ ಈ ಉತ್ಸವ ಮೂರ್ತಿಯನ್ನೇ ಈ ವರ್ಷದಿಂದ ನವರಾತ್ರಿಯಲ್ಲಿ ಪ್ರತಿಷ್ಠಾಪಿಸಲಾಗುವುದು’ ಎಂದು ಗೌಡರ ಚನ್ನಬಸಪ್ಪ ತಿಳಿಸಿದರು.

‘ವಿಜಯ ದಶಮಿಯಂದು ದಸರಾ ಮೆರವಣಿಗೆ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದರೆ ಟ್ರಸ್ಟಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ಕಡ್ಡಾಯವಾಗಿ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು. ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಧ್ಯಾಹ್ನ ದಾಸೋಹ ನಡೆಯುತ್ತದೆ. ನವರಾತ್ರಿಯ ಎಲ್ಲಾ ದಿನದಂದೂ ದಾಸೋಹ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಟ್ರಸ್ಟ್‌ನ ಸದಸ್ಯರಾದ ಎಚ್‌.ಬಿ. ಗೋಣೆಪ್ಪ, ಸೋಪ್ಪಿನ ಗುರುರಾಜ್‌ ಎಸ್‌.ಎಂ., ಹನುಮಂತರಾವ್‌ ಸಾವಂತ್‌ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ನವರಾತ್ರಿ ಅಲಂಕಾರ ವಿವರ

ದಿನಾಂಕ ; ಅಲಂಕಾರ

ಅ.7 ; ಹಂಸವಾಹಿನಿ

ಅ.8 ; ವೃಷಭ ವಾಹನ

ಅ.9 ; ಮಯೂರ ವಾಹನ

ಅ.10 ; ಗರುಡ ವಾಹನ

ಅ.11 ; ಮೋಹಿನಿ

ಅ.12 ; ಸರಸ್ವತಿ

ಅ.13 ; ರಾಜರಾಜೇಶ್ವರಿ

ಅ. 14 ; ಸಿಂಹವಾಹನ

ಅ.15 ; ಗಜಲಕ್ಷ್ಮಿ

ಅ.16 ; ಲಕ್ಷ್ಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು