ಸೋಮವಾರ, ಮೇ 23, 2022
22 °C
ಶಾಲೆ ದತ್ತು ಪಡೆದಿದ್ದ ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್ ಅವರಿಂದಲೇ ಕೊಠಡಿಗಳ ನೆಲಸಮ

ಬಯಲಿನಲ್ಲಿ ಪಾಠ ಕಲಿಯುತ್ತಿರುವ ಮಕ್ಕಳು

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಹೊಸ ಶಾಲಾ ಕಟ್ಟಡ ನಿರ್ಮಾಣದ ನೆಪದಲ್ಲಿ 3 ವರ್ಷಗಳ ಹಿಂದೆ ತರಾತುರಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳನ್ನು ನೆಲಸಮ ಮಾಡಿದ್ದು, 300ಕ್ಕೂ ಹೆಚ್ಚು ಮಕ್ಕಳ ಬಿಸಿಲು, ಮಳೆ–ಗಾಳಿಯಲ್ಲಿ ಬಯಲಿನಲ್ಲಿಯೇ ಕಲಿಯಬೇಕಾದ ದುಃಸ್ಥಿತಿ ಎದುರಾಗಿದೆ.

ಹುಚ್ಚಂಗಿಪುರ ಗ್ರಾಮದವರಾದ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ತಾವು ಓದಿದ ಶಾಲೆ ಸೇರಿ ಇಡೀ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವುದಾಗಿ 3 ವರ್ಷಗಳ ಹಿಂದೆ ಭರವಸೆ ನೀಡಿದ್ದರು. ಆದಕಾರಣ ಬೆಂಗಳೂರು ಮೂಲದ ಚಂದ್ರಶೇಖರ್ ಎಂಬ ಗುತ್ತಿಗೆದಾರ ಜೆಸಿಬಿ ಯಂತ್ರಗಳಿಂದ ಉತ್ತಮ ಗುಣಮಟ್ಟದಲ್ಲಿದ್ದ ನಾಲ್ಕು ಶಾಲಾ ಕೊಠಡಿಗಳನ್ನು ನೆಲಸಮ ಮಾಡಿ ಹೋಗಿದ್ದರು. ನಂತರ ಅವರ ಪತ್ತೆ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಅನುದಾನ ಬಂದಿಲ್ಲ. ಬಂದಾಗ ಹೇಳುತ್ತೇವೆ’ ಎಂದು ಸಾಗಹಾಕುತ್ತಿದ್ದಾರೆ.

300 ಮಕ್ಕಳಿಗೆ ಎರಡೇ ಕೊಠಡಿ: 1ರಿಂದ 7ನೇ ತರಗತಿವರೆಗೆ ಒಟ್ಟು 300 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. 5 ಎಕರೆ ಪ್ರದೇಶದಲ್ಲಿ ಒಟ್ಟು 11 ಕೊಠಡಿಗಳಿದ್ದವು. 3 ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಾಣದ ನೆಪದಲ್ಲಿ ಸುಸ್ಥಿತಿಯಲ್ಲಿದ್ದ 4 ಕೊಠಡಿಗಳನ್ನು ಕೆಡವಲಾಗಿದೆ. 3 ಕೊಠಡಿಗಳ ಚಾವಣಿ ಕುಸಿದು, ಗೋಡೆಗಳು ಬಿರುಕುಬಿಟ್ಟಿವೆ. ಅಡುಗೆ ಕೋಣೆ ಮತ್ತು ಸಾಮಗ್ರಿ ದಾಸ್ತಾನಿಗೆ ಎರಡು ಕೊಠಡಿಗಳನ್ನು ಬಳಸಲಾಗುತ್ತಿದ್ದು, 11 ಕೊಠಡಿಗಳ ಪೈಕಿ ಎರಡರಲ್ಲಿ ಮಾತ್ರ ತರಗತಿಗಳನ್ನು ನಡೆಸಲಾಗುತ್ತಿದೆ.

‘ಎರಡು ಕೊಠಡಿಗಳಲ್ಲಿ ನೂರು ಮಕ್ಕಳಿಗೆ ಪಾಠ ಮಾಡಿದರೆ, ಉಳಿದ 200 ಮಕ್ಕಳು ಶಾಲೆಯ ಹೊರಗಿನ ಬಯಲಿನಲ್ಲಿ ಕಾಲ ಕಳೆಯಬೇಕು. ಕೊಠಡಿಗಳ ಕೊರತೆಯಿಂದ 400 ಇದ್ದ ಮಕ್ಕಳ ಸಂಖ್ಯೆ 300ಕ್ಕೆ ಕುಸಿದಿದೆ. ಗುಳೆ ಹೋಗುವ ಕುಟುಂಬಗಳ ಮಕ್ಕಳಿಗಾಗಿ ಪ್ರತಿ ಬೇಸಿಗೆ ಸಮಯದಲ್ಲಿ ಆರಂಭಿಸಬೇಕಿದ್ದ ಬಿಸಿಯೂಟ ಸೌಲಭ್ಯದ ಋತುಮಾನ ಶಾಲೆ ಸಹ ಕಟ್ಟಡದ ಕೊರತೆಯ ಕಾರಣ ಎರಡು ವರ್ಷಗಳಿಂದ ರದ್ದಾಗಿದೆ’ ಎಂದು ಗ್ರಾಮದ ಶಿವಣ್ಣ, ನಾಗರಾಜ್ ಹೇಳುತ್ತಾರೆ.

‘ಹೊಸ ಕಟ್ಟಡ ಕಟ್ಟಲು ಸಾಧ್ಯವಿಲ್ಲದವರು ಸುಳ್ಳು ಭರವಸೆ ಕೊಟ್ಟು ಕಟ್ಟಡ ನೆಲಸಮ ಮಾಡಿದ್ದು ತಪ್ಪು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಈರಮ್ಮ ನಾಗರಾಜ್ ಆರೋಪಿಸುತ್ತಾರೆ.

‘3 ವರ್ಷಗಳ ಹಿಂದೆ ಶಾಲೆಯಲ್ಲಿ 11 ಶಿಕ್ಷಕರಿದ್ದರು. ಕೊಠಡಿಗಳ ಕೊರತೆ ಹಾಗೂ ಅವ್ಯವಸ್ಥೆಯಿಂದ 8 ಶಿಕ್ಷಕರು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಅತಿಥಿ ಶಿಕ್ಷಕರು ಹಾಗೂ ಪ್ರಭಾರ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಪ್ರಸ್ತುತ ಕೇವಲ ನಾಲ್ವರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಕೂಲಿ ಕೆಲಸಕ್ಕೆ ಬೇರೆಡೆಗೆ ತೆರಳಿದ್ದಾರೆ’ ಎಂದು ದೂರಿದರು.

ತಾಲ್ಲೂಕಿನ ಅತಿ ದೊಡ್ಡ ಗ್ರಾಮಗಳಲ್ಲಿ ಒಂದಾದ ಹುಚ್ಚಂಗಿಪುರದಲ್ಲಿ 400 ಕುಟುಂಬಗಳವರು ಪ್ರತಿವರ್ಷ ಹೊಟ್ಟೆಪಾಡಿಗಾಗಿ ಮಲೆನಾಡಿನ ಕಾಫಿ, ಟೀ ಎಸ್ಟೇಟ್‌ಗಳಿಗೆ ಕೂಲಿ ಕೆಲಸಕ್ಕೆ ಗುಳೆ ಹೋಗುತ್ತಾರೆ. ಮಕ್ಕಳು ತಮ್ಮಂತೆ ಆಗಬಾರದು ಎಂದು ಶಾಲೆಗೆ ಸೇರಿಸಿದ್ದರು. ಪೂರ್ವಾಪರ ಯೋಚನೆ ಇಲ್ಲದ ಕ್ರಮದಿಂದಾಗಿ ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅನುದಾನ ಲಭ್ಯತೆ ಆಧರಿಸಿ ಶಾಲಾ ಕೊಠಡಿಗಳನ್ನು ಕೆಡವಬೇಕು. ಆದರೆ, ಈ ಶಾಲೆಯಲ್ಲಿ ನಿಯಮ ಉಲ್ಲಂಘಿಸಿ ಅವಸರದಲ್ಲಿ ಕೊಠಡಿಗಳನ್ನು ಕೆಡವಲಾಗಿದೆ. ಈಗ ₹ 25 ಲಕ್ಷ ಅನುದಾನ ಬಂದಿದ್ದು, ಎರಡು ಕೊಠಡಿಗಳ ನಿರ್ಮಾಣಕ್ಕೆ ಶಿಘ್ರ ಚಾಲನೆ ನೀಡಲಾಗುವುದು ಎಂದು ಬಿಇಒ ಕಚೇರಿ ಮೂಲಗಳು ತಿಳಿಸಿವೆ.

ಶಾಲೆ ಆರಂಭಿಸದಿರಲು ಪತ್ರ

‘ಮೇ ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತದೆ. ಗುಡುಗು, ಸಿಡಿಲು ಮಳೆಯಲ್ಲಿ ನೂರಾರು ಮಕ್ಕಳನ್ನು ಬಯಲಿನಲ್ಲಿ ಕೂರಿಸುವುದು ಅಪಾಯಕಾರಿ. ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ನಾನು ಹೊಣೆಗಾರನಾಗುತ್ತೇನೆ. ಆದ್ದರಿಂದ ಬರುವ ಶೈಕ್ಷಣಿಕ ವರ್ಷ ಶಾಲೆ ಆರಂಭಿಸಲು ಆಗುವುದಿಲ್ಲ ಎಂದು ಮೇಲಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದೇನೆ’ ಎಂದು ಶಾಲೆಯ ಮುಖ್ಯಶಿಕ್ಷಕ ಸಿದ್ದೇಶ್ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.