ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸವಲತ್ತೂ ಇಲ್ಲ, ಉದ್ಯೋಗ ಭದ್ರತೆಯೂ ಇಲ್ಲ:

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಜಿಲ್ಲಾ ಆಸ್ಪತ್ರೆಯ ‘ಡಿ’ ಗ್ರೂಪ್‌ ನೌಕರರ ಅಳಲು
Last Updated 13 ಜುಲೈ 2020, 13:00 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮನ್ನು ಕೊರೊನಾ ಸೈನಿಕರು ಎಂದು ಬಾಯಿಮಾತಿಗೆ ಕರೆಯುತ್ತಾರೆ. ಆದರೆ ಸೈನಿಕರಿಗೆ ನೀಡುವ ಸವಲತ್ತು ಬಿಡಿ, ಕನಿಷ್ಠ ಆಹಾರದ ಕಿಟ್‌ ಅನ್ನು ಕೂಡ ಯಾರೂ ಕೊಟ್ಟಿಲ್ಲ’.

ಸಿ.ಜಿ. ಆಸ್ಪತ್ರೆಯಲ್ಲಿ ‘ಡಿ’ ಗ್ರೂಪ್‌ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಅಳಲು ಇದು.

‘ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದವರಿಗೆ ಸರ್ಕಾರ ಪ್ರೋತ್ಸಾಹಧನ ನೀಡಿದೆ. ಆದರೆ ನಮಗೆ ನೀಡಿಲ್ಲ. ಐದು ತಿಂಗಳ ವೇತನ ಬಾಕಿ ಇತ್ತು. ಆರೋಗ್ಯ ಸಚಿವ ಶ್ರೀರಾಮುಲು ಬಂದಾಗ ಈ ಬಗ್ಗೆ ಮನವಿ ಸಲ್ಲಿಸಿದ್ದೆವು. ಅಂದೇ ಸಂಜೆ ಎರಡು ತಿಂಗಳ ವೇತನ ಬಂದಿತ್ತು. ಮೂರು ತಿಂಗಳ ವೇತನ ಬಾಕಿ ಇದೆ. ಅದು ಮುಂದೆ ಸಿಗಬಹುದು. ಆದರೆ ನಮಗೆ ಉದ್ಯೋಗದ ಭದ್ರತೆ ನೀಡುವ ಕೆಲಸ ಮೊದಲು ಆಗಬೇಕು’ ಎನ್ನುವುದು ನೌಕರ ಸುರೇಂದ್ರ ಅವರ ಒತ್ತಾಯ.

‘ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು ಮತ್ತು ‘ಡಿ’ ಗ್ರೂಪ್‌ ನೌಕರರಾದ ನಾವು ಕೊರೊನಾ ಸೋಂಕಿತರ ಜತೆಗೆ ಇರುತ್ತೇವೆ. ನಮ್ಮದೇ ಹೆಚ್ಚು ಸವಾಲಿನ ಕೆಲಸ. ಯಾಕೆಂದರೆ ಸೋಂಕಿತರು ಇರುವ ವಾರ್ಡ್‌, ಶೌಚಾಲಯ ಸ್ವಚ್ಛಗೊಳಿಸುವುದು, ಬೆಡ್‌, ಅದರ ಮೇಲಿನ ಬಟ್ಟೆ ಬದಲಾಯಿಸುವುದರಿಂದ ಹಿಡಿದು ಎಲ್ಲ ಕೆಲಸ ಮಾಡುತ್ತೇವೆ. ಕೊರೊನಾ ವೈರಸ್‌ ಸೋಂಕು ತಗುಲಬಹುದು ಎಂದು ನಾವು ಯೋಚಿಸಿಲ್ಲ. ಸಿ.ಜಿ. ಆಸ್ಪತ್ರೆಯಲ್ಲಿ 258 ಮಂದಿ ಕೆಲಸ ಮಾಡುತ್ತಿದ್ದೇವೆ. ಅದರಲ್ಲಿ ಮೂವರಿಗೆ ಕೊರೊನಾ ಸೋಂಕು ಬಂದಿತ್ತು. ಮೂವರೂ ಈಗ ಗುಣಮುಖರಾಗಿದ್ದಾರೆ. ಕೊರೊನಾಗಿಂತಲೂ ಉದ್ಯೋಗ ಕಾಯಂ ಇಲ್ಲದಿರುವುದೇ ಚಿಂತೆಗೆ ಕಾರಣ’ ಎಂದು ವಿವರಿಸಿದರು.

ಹೊರಗುತ್ತಿಗೆಯನ್ನು ನಾಳೆ ಇನ್ಯಾರೋ ವಹಿಸಿಕೊಂಡರೆ ಆಗ ನಮ್ಮನ್ನು ತೆಗೆದು ಬೇರೆಯವರನ್ನು ಅವರು ನೇಮಿಸಿಕೊಳ್ಳಬಹುದು. ಆಗ 10–15 ವರ್ಷಗಳಿಂದ ಕೆಲಸ ಮಾಡಿದ ನಾವು ಎಲ್ಲಿಗೆ ಹೋಗುವುದು? ಅದಕ್ಕಾಗಿ ಜಿಲ್ಲಾಧಿಕಾರಿ ನೇರ ವೇತನದಡಿ ನಮ್ಮನ್ನು ತರಬೇಕು. ಇಲ್ಲವೇ ಉದ್ಯೋಗವನ್ನು ಕಾಯಂಗೊಳಿಸಬೇಕು’ ಎಂದು ಸುರೇಂದ್ರ, ಮಾಲತೇಶ್‌, ಕಮಲಮ್ಮ, ದುಗ್ಗಮ್ಮ, ಭಾಗ್ಯಮ್ಮ ಆಗ್ರಹಿಸಿದರು.

‘ಕಾಯಂಗೊಳಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಆರೋಗ್ಯ ಸಚಿವರು ಬಂದಾಗಲೂ ಮನವಿ ಸಲ್ಲಿಸಿದ್ದೇವೆ’ ಎಂದು ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT