ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬೀಡಿಕಾರ್ಮಿಕರಿಗೆ ಇಲ್ಲ ಕೆಲಸ, ಪರಿಹಾರವೂ ಮರೀಚಿಕೆ

ಕೋವಿಡ್‌ ವಿಶೇಷ ಪ್ಯಾಕೇಜ್‌ನಲ್ಲಿ ₹ 3 ಸಾವಿರ ನೀಡಲು ಬೀಡಿ ಕಟ್ಟುವ ಮಹಿಳೆಯರ ಆಗ್ರಹ
Last Updated 5 ಜೂನ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಆದರೆ ಅದರಲ್ಲಿ ಬೀಡಿ ಕಾರ್ಮಿಕರನ್ನು ಹೊರಗಿಟ್ಟಿದೆ. ಹಾಗಾಗಿ ಅವರಿಗೆ ₹ 3 ಸಾವಿರ ಪರಿಹಾರ ಹಣ ಸಿಗುತ್ತಿಲ್ಲ. ದಿನಕ್ಕೆ ಕೊಡಬೇಕಾದ ಎಲೆ, ತಂಬಾಕುಗಳನ್ನು ಈಗ ವಾರಕ್ಕೆ ನೀಡಲಾಗುತ್ತಿದೆ. ಇದರಿಂದ ಕೆಲಸವೂ ಇಲ್ಲದಂತಾಗಿದೆ.

‘ನನ್ನ ಗಂಡ ತರಗಾರ ಕೆಲಸ ಮಾಡುತ್ತಿದ್ದರು. ಲೋ ಬಿಪಿಯಾಗಿ ಈಗ ಮಲಗಿದ್ದಲ್ಲೇ ಇದ್ದಾರೆ. ನಾನು ಬೀಡಿ ಕಟ್ಟಿ ಅವರನ್ನು ಮತ್ತು ಮೂವರು ಮಕ್ಕಳನ್ನು ಸಾಕಬೇಕು. ದಿನಕ್ಕೆ ಒಂದು ಕೆ.ಜಿ. ಎಲೆಯ ಬೀಡಿ ಕಟ್ಟುತ್ತಿದ್ದೆ. ಈಗ ವಾರಕ್ಕೆ ಒಂದು ಕೆ.ಜಿ. ನೀಡುತ್ತಿದ್ದಾರೆ. ಜೀವ ಸಾಗಿಸುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ನೆರಳು ಬೀಡಿಯೂನಿಯನ್‌ನ ಮೇಡಂ ನಮಗೆ ಆಹಾರ ಕಿಟ್‌ ಕೊಟ್ಟಿದ್ದರಿಂದ ಜೀವ ಉಳಿಸಿಕೊಂಡಿದ್ದೇವೆ’ ಎಂದು ಬೀಡಿ ಕಾರ್ಮಿಕರಾದ ನಾಜೀಮಾಬಾನು ಅಳಲು ತೋಡಿಕೊಂಡರು.

‘ರಾಜ್ಯದಲ್ಲಿ 10 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಬೀಡಿ ಕಾರ್ಮಿಕರಿದ್ದಾರೆ. ಅದರಲ್ಲಿ 10 ಸಾವಿರ ಮಂದಿ ದಾವಣಗೆರೆ ನಗರದಲ್ಲಿಯೇ ಇದ್ದಾರೆ. ಸಾವಿರ ಬೀಡಿಗೆ ₹ 210 ಎಂದು ನಿಗದಿ ಮಾಡಲಾಗಿದೆ. ಆದರೆ ಬೇರೆ ಬೇರೆ ನೆಪ ಹೇಳಿ ಬೀಡಿ ಕಟ್ಟಿಸುವವರು ಮುರ್ಕೊಂಡು ₹ 160–₹ 170 ಕೊಡುತ್ತಾರೆ. ಈಗ ಅದೂ ಇಲ್ಲದಂತಾಗಿದೆ’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಾರ್ಯದರ್ಶಿ ಕರಿಬಸಪ್ಪ ವಿವರಿಸಿದರು.

‘ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ಇದೆ. ಆದರೆ ಬೀಡಿ ಕಾರ್ಮಿಕರ ಒಳಿತಿಗಾಗಿ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಅಂಬೇಡ್ಕರ್‌ ಹಸ್ತ ಯೋಜನೆಯಡಿ ಎಲ್ಲ ಬೀಡಿ ಕಾರ್ಮಿಕರನ್ನು ಗುರುತಿಸಬೇಕು. 74 ಅಸಂಘಟಿತ ಕಾರ್ಮಿಕರಲ್ಲಿ ಬೀಡಿ ಕಾರ್ಮಿಕರೂ ಬರುತ್ತಾರೆ. ಹಾಗಾಗಿ ಬೀಡಿ ಕಾರ್ಮಿಕ ಕುಟುಂಬಕ್ಕೆ ₹ 10 ಸಾವಿರ ಹಾಕಬೇಕು. ಎಲ್ಲರಿಗೂ ಆಹಾರ ಕಿಟ್‌ ಒದಗಿಸಬೇಕು. ಆಹಾರ ಕಿಟ್‌ ಅಂದರೆ ಅಕ್ಕಿ, ಗೋಧಿ ಮಾತ್ರವಲ್ಲ, ಮನೆಗೆ ಅಗತ್ಯ ಇರುವ ಎಲ್ಲ ವಸ್ತುಗಳು ಅದರಲ್ಲಿ ಇರಬೇಕು’ ಎಂಬುದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ ಸಲಹೆ.

ಬೀಡಿ ಕಟ್ಟುವವರ ಕುಟುಂಬದಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ಬಂದರೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಉಚಿತವಾಗಿರಬೇಕು ಅವರು ಎಂದು ಆಗ್ರಹಿಸಿದರು.

‘ನಮಗೆ ಎಲ್ಲ ಅಸಂಘಟಿತ ಕಾರ್ಮಿಕ ರಂತೆ ₹ 3 ಸಾವಿರ ಆದರೂ ಕೊಡಿ. ಕಳೆದ ವರ್ಷವೂ ನಮಗೆ ಕೆಲಸ ಇಲ್ಲದಂತಾಗಿತ್ತು. ಪ್ಯಾಕೇಜ್‌ನಲ್ಲಿ ಯಾವುದೇ ಹಣ ನೀಡಿಲ್ಲ. ಈ ಬಾರಿಯಾದರೂ ನೀಡಿ’ ಎಂದು ಬೀಡಿ ಕಾರ್ಮಿಕರಾದ ನೂರ್‌ ಫಾತಿಮಾ ಮನವಿ ಮಾಡಿದರು.

ಪ್ಯಾಕೇಜ್‌ ನಿರ್ಧಾರ ಸರ್ಕಾರದ ಮಟ್ಟದಲ್ಲಿ ನಡೆಯುವುದರಿಂದ ನಾವೇನೂ ಮಾಡಲಾಗುವುದಿಲ್ಲ. ಬೀಡಿ ಕಾರ್ಮಿಕರು ಮನವಿ ಸಲ್ಲಿಸಿದರೆ ಸರ್ಕಾರಕ್ಕೆ ತಲುಪಿಸುತ್ತೇವೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT