ಸೋಮವಾರ, ಸೆಪ್ಟೆಂಬರ್ 20, 2021
26 °C

ದಾವಣಗೆರೆ: ವಿದ್ಯುತ್ ಕಾಯ್ದೆ ತಿದ್ದುಪಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿದ್ಯುತ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು, ಕೂಲಿ ಕಾರ್ಮಿಕರು, ಭಾಗ್ಯಜ್ಯೋತಿ, ಕುಬೇರ ಜ್ಯೋತಿ, ಕೃಷಿ ಪಂಪ್‌ಸೆಟ್‌ಗಳಿಗೆ ನೀರು ಸರಬರಾಜಿಗೆ ಸರ್ಕಾರದ ಸಬ್ಸಿಡಿ ಸಿಗದೆ ತೊಂದರೆಯುಂಟಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅವರು ತಿಳಿಸಿದರು.

ಈ ಹಿಂದೆ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾಯ್ದೆಗಳನ್ನು ತಂದಿದ್ದು, ಇದನ್ನು ವಿರೋಧಿಸಿ ರಾಷ್ಟ್ರವ್ಯಾಪ್ತಿ ರೈತ
ಚಳವಳಿ ನಡೆಯುತ್ತಿದ್ದು, ದೆಹಲಿಯಲ್ಲಿ ಸುಮಾರು 18 ತಿಂಗಳುಗಳಿಂದ ಹೆದ್ದಾರಿಗಳಲ್ಲಿ ರೈತರು ಬೀಡು ಬಿಟ್ಟು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈಗ ಮತ್ತೆ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಜನರು ಬಳಸುವ ಅಡುಗೆ ಅನಿಲಕ್ಕೆ ಸಬ್ಸಿಡಿ ಕೊಡುವುದಾಗಿ ನಂಬಿಸಿ ಈಗ ಸಬ್ಸಿಡಿ ಹಣವನ್ನು ಕೊಡದೇ ಮೋಸ ಮಾಡಲಾಗುತ್ತಿದೆ. ಈಗ ವಿದ್ಯುತ್ ಖಾಸಗೀಕರಣಗೊಂಡರೆ ರೈತರು ಮೊದಲು ಹಣ ಪಾವತಿಸಿ, ಬಳಿಕ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರೀಪೇಡ್ ಶುಲ್ಕ ಪಾವತಿಸಿ ಜನರು ಮೊಬೈಲ್ ಬಳಸುವ ಹಾಗೆ ಪಂಪ್ ಸೆಟ್‌ಗಳಿಗೆ ವಿದ್ಯುತ್ ಬಳಸಬೇಕಾಗುತ್ತದೆ ಎಂದರು.

ಕೋವಿಡ್ ನಂತಹ ಸಾಂಕ್ರಾಮಿಕ ಮಹಾಮಾರಿ ರೋಗ ತಗುಲಿ ದೇಶದಲ್ಲಿ ಜನರು, ಕೈಗಾರಿಕೆಗಳು, ರೈತರು, ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ಕಾಯ್ದೆಗಳು ಮರಣ ಶಾಸನವಾಗಿ ಪರಿಣಮಿಸಲಿವೆ. ಆದ್ದರಿಂದ, ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದೆಂದು ಅವರು ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಕೆಂಚನಹಳ್ಳಿ ಶೇಖರಪ್ಪ, ಚಿನ್ನಸಮುದ್ರ ಶೇಖರನಾಯ್ಕ್, ಹೊನ್ನೂರು ಮುನಿಯಪ್ಪ, ಸಂತೋಷ, ಕಾಳೇಶ ಯಲೋದಹಳ್ಳಿ, ಎನ್. ಬಸವರಾಜ ದಾಗಿನಕಟ್ಟೆ, ಎಂ. ಪರಮೇಶ್ವರಪ್ಪ, ನಿರಂಜನಗೌಡ ಅವರೂ ಇದ್ದರು.

ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು