ಗುರುವಾರ , ಜೂನ್ 30, 2022
22 °C

ಅಸಮಾನತೆ ಮಾಧ್ಯಮದಲ್ಲಿ ಪ್ರತಿಫಲಿಸಲಿ: ಪತ್ರಕರ್ತ ಪಿ. ಸಾಯಿನಾಥ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಭಾರತದ ಸಮಾಜದಲ್ಲಿನ ಅಸಮಾನತೆಗಳು ಮಾಧ್ಯಮ ಹಾಗೂ ನ್ಯಾಯಾಂಗದಲ್ಲಿ ಪ್ರತಿಫಲಿಸಬೇಕು. ಆದರೆ, ಭಾರತದ ಹಲವು ಮಾಧ್ಯಮಗಳು ಕೋಟ್ಯಾಧಿಪತಿ ಮುಖೇಶ್‌ ಅಂಬಾನಿ ಕೈಯಲ್ಲಿ ಸಿಲುಕಿದೆ’ ಎಂದು ಪತ್ರಕರ್ತ ಪಿ. ಸಾಯಿನಾಥ್‌ ಕಳವಳ ವ್ಯಕ್ತಪಡಿಸಿದರು.

ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ, ದಾವಣಗೆರೆಯ ಮೇ ಸಾಹಿತ್ಯ ಮೇಳದ ಬಳಗದ ಆಶ್ರಯದಲ್ಲಿ ತಾಜ್ ಪ್ಯಾಲೇಸ್‌ನಲ್ಲಿ ಶುಕ್ರವಾರ ಆರಂಭಗೊಂಡ ಮೇ ಸಾಹಿತ್ಯ ಮೇಳದಲ್ಲಿ ಅವರು
ಮಾತನಾಡಿದರು.

‘1992ರಲ್ಲಿ ಡಾಲರ್ ಕೋಟ್ಯಾಧಿಪತಿ ಭಾರತದಲ್ಲಿ ಒಬ್ಬರೂ ಇರಲಿಲ್ಲ. 2012–13ರಲ್ಲಿ 15 ಮಂದಿ ಇದ್ದರು. ಈಗ 166 ಡಾಲರ್‌ ಕೋಟ್ಯಧಿಪತಿಗಳಿದ್ದಾರೆ. ಇವರ ಒಟ್ಟು ಸಂಪತ್ತು ಭಾರತದ ಜಿಡಿಪಿಯ ನಾಲ್ಕನೇ ಒಂದು ಭಾಗದಷ್ಟಿದೆ. ದೇಶದಲ್ಲಿ 18 ಕೋಟಿ ಗ್ರಾಮೀಣ ಕುಟುಂಬಗಳಿವೆ. ಇದರಲ್ಲಿ ಮೂರನೇ ಎರಡು ಭಾಗದಷ್ಟು ಜನರ ತಿಂಗಳ ಆದಾಯವು ₹ 10 ಸಾವಿರಕ್ಕಿಂತ ಕಡಿಮೆ ಇದೆ. ಇದರಲ್ಲಿ ಶೇ 4ರಷ್ಟು ದಲಿತರು, ಆದಿವಾಸಿಗಳಿದ್ದಾರೆ. ಇಂತಹ ಚಿತ್ರಣಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬರುವುದಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

‘ಕೋವಿಡ್‌ ಬಂದಾಗ ದೇಶದ ಸಂಪತ್ತು ಕುಸಿದಿತ್ತು. ಆದರೆ, ಅಂಬಾನಿ ಹಾಗೂ ಅದಾನಿಗಳ ವೈಯಕ್ತಿಕ ಆದಾಯ ಶೇ 400ರಷ್ಟು ಹೆಚ್ಚಾಯಿತು. ಆರೋಗ್ಯ, ಆನ್‌ಲೈನ್‌ ಶಿಕ್ಷಣದ ಲಾಭ ಯಾರಿಗೆ ಸಿಕ್ಕಿತು? ಆದಿವಾಸಿಗಳು, ದಲಿತರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರು. ಶೇ 77ರಷ್ಟು ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷಣವೂ ಲಭಿಸಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು, ‘ಈಚೆಗೆ ಹೈಕೋರ್ಟ್‌ಗೆ ಬೇಸಿಗೆ ರಜೆ ನೀಡುವಾಗ ನ್ಯಾಯಮೂರ್ತಿಯೊಬ್ಬರು ಕೋವಿಡ್‌ ಸಂದರ್ಭದಲ್ಲಿ ಎರಡು ವರ್ಷ ಯಾರೂ ಕೆಲಸ ಮಾಡಿಲ್ಲ. ಪ್ರಕರಣಗಳು ಹೆಚ್ಚಿರುವುದರಿಂದ ಈ ಬಾರಿ ರಜೆ ರದ್ದು ಮಾಡಿ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು. ಆದರೆ, ಉಳಿದ ನ್ಯಾಯಮೂರ್ತಿಗಳು ಇದಕ್ಕೆ ಒಪ್ಪಲಿಲ್ಲ. ಮಾನವ ಹಕ್ಕುಗಳ ರಕ್ಷಣೆಗೆ ಬರಬೇಕಾದ ಕೋರ್ಟ್‌ಗಳು ಏನು ಮಾಡುತ್ತಿವೆ? ಜಮ್ಮು–ಕಾಶ್ಮೀರ ವಿಚಾರ ಜೊತೆಗೆ ಕರ್ನಾಟಕದ ಹಿಜಾಬ್‌ ವಿವಾದವೂ ನಮ್ಮೆದುರಿಗಿದೆ. ಜನರ ಪರವಾಗಿ ಮಧ್ಯ ಪ್ರವೇಶಿಸಲು ನ್ಯಾಯಾಲಯಗಳಿಗೆ ಸೆಕ್ಷನ್ 227, 334ನಲ್ಲಿ ಅವಕಾಶಗಳಿವೆ. ಆದರೆ, ಅದನ್ನು ಬಳಸಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ಪ್ರಗತಿಪರ ಮಹಿಳೆಯರ ಸಂಘದ ಜಂಟಿ ಕಾರ್ಯದರ್ಶಿ ಕವಿತಾ ಕೃಷ್ಣನ್‌, ‘ಭಾರತದಲ್ಲಷ್ಟೇ ಅಲ್ಲ; ಇಂದು ಇಡೀ ವಿಶ್ವದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದರೆ, ಅಮೆರಿಕದಲ್ಲಿ ಟ್ರಂಪ್‌ ಇದ್ದರು. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ಪುಟಿನ್‌ ಕೂಡ ಹಿಟ್ಲರ್‌ನಂತೆ ಇದ್ದಾರೆ. ಪುಟಿನ್‌ ಅಖಂಡ ರಷ್ಯಾದ ಬಗ್ಗೆ ಮಾತನಾಡುತ್ತಿರುವಂತೆ ಸಂಘ ಪರಿವಾರದವರು ಅಖಂಡ ಭಾರತ ನಿರ್ಮಾಣದ ಬಗ್ಗೆ ಪ್ರತಿಪಾದಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹುಡುಗಿಯರ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಮೂಲಕ ಮಹಿಳೆಯರ ಪರವಾಗಿದ್ದೇವೆ ಎಂದು ಕೇಂದ್ರದ ಬಿಜೆಪಿ ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ, ಇಂದು ಹುಡುಗಿಯವರು ಮದುವೆಯಾಗುತ್ತಿರುವ ಸರಾಸರಿ ವಯಸ್ಸೇ 19 ಆಗಿದೆ. 18 ವರ್ಷಕ್ಕೆ ಮತದಾನ ಮಾಡುವ, ಶಾಸಕರು, ಸಂಸದರನ್ನು ಆಯ್ಕೆ ಮಾಡುವ ಅಧಿಕಾರವನ್ನು ನೀಡಿರುವಾಗ ಮದುವೆಯ ವಯಸ್ಸನ್ನು ಏಕೆ ಹೆಚ್ಚಿಸಬೇಕಾಗಿತ್ತು? ಹುಡುಗಿಯರು ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದಲೇ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಕರ್ನಾಟಕದಲ್ಲಿ ಅಂತರ್ಧರ್ಮಿಯರ ವಿವಾಹಕ್ಕೆ ತಡೆಯೊಡ್ಡುವ ಕಾಯ್ದೆಯನ್ನೂ ಜಾರಿಗೆ ತರಲು ಯತ್ನಿಸಲಾಗುತ್ತಿದೆ’ ಎಂದು ದೂರಿದರು.

ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಐವನ್‌ ಡಿಸಿಲ್ವಾ, ಡಿ.ಬಿ. ರಜಿಯಾ, ಅಶೋಕ ಬರಗುಂಡಿ, ವಕೀಲ ಅರುಣಕುಮಾರ ಎಲ್‌.ಎಚ್‌. ಅವರು ಹಾಜರಿದ್ದರು. ನ್ಯಾಯಾಲಯದ ಆಡಳಿತಾಧಿಕಾರಿ ಬಿ. ಶ್ರೀನಿವಾಸ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್‌.ಎಸ್‌. ಅನುಪಮಾ ಅವರು ನಿರೂಪಿಸಿದರು.

ಇಪ್ಟಾ, ಆರ್‌.ಸಿ.ಎಫ್‌, ದಲಿತ ಕಲಾ ಮಂಡಳಿಯ ಸಂಗಾತಿಗಳು ಕ್ರಾಂತಿಗೀತೆಗಳನ್ನು ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು