ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೆ ಕೊಳವೆ ಹುಳುಬಾಧೆ

ಕಾಡಜ್ಜಿಯಲ್ಲಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಕೃಷಿ ಅಧಿಕಾರಿಗಳು
Last Updated 5 ಸೆಪ್ಟೆಂಬರ್ 2020, 15:40 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕೊಳವೆ ಹುಳುಬಾಧೆ ಕಾಣಿಸಿಕೊಂಡಿದೆ. ಹುಳು ನಿಯಂತ್ರಣ ಮಾಡುವ ವಿಧಾನದ ಬಗ್ಗೆ ಕೃಷಿ ಅಧಿಕಾರಿಗಳು ಕಾಡಜ್ಜಿಯ ರೈತ ರಾಜಪ್ಪ ಅವರ ಭತ್ತದ ಗದ್ದೆಯಲ್ಲಿ ಶನಿವಾರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ವಿ.ಚಿಂತಾಲ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಾಲತೇಶ ಪುಟ್ಟಣ್ಣವರ ಅವರು ತಾಂತ್ರಿಕ ಮಾಹಿತಿಗಳನ್ನು ನೀಡಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಉಪ ಕೃಷಿ ನಿರ್ದೇಶಕ ಆರ್‌. ತಿಪ್ಪೇಸ್ವಾಮಿ ಅವರೂ ಹಾಜರಿದ್ದು, ರೈತರಿಗೆ ಸಲಹೆ ನೀಡಿದರು.

‘ಕೊಳವೆ ಹುಳು ಸಾಮಾನ್ಯ ಕೀಟವಾಗಿದೆ. ನಿರ್ಲಕ್ಷ್ಯ ಮಾಡಿದರೆ ಇಡೀ ಹೊಲಕ್ಕೆ ವ್ಯಾಪಿಸಿದಾಗ ಸ್ವಲ್ಪ ಮಟ್ಟಿಗೆ ಇಳುವರಿ ಕಡಿಮೆಯಾಗಲಿದೆ. ಈ ರೋಗ ಕಾಣಿಸಿಕೊಂಡಾಗ ರೈತರು ಆತಂಕಗೊಂಡು ಮಾರುಕಟ್ಟೆಯಲ್ಲಿ ಸಿಗುವ ಯಾವುದೋ ಕೀಟನಾಶಕ ತಂದು ಸಿಂಪಡಿಸುತ್ತಾರೆ. ಇದರಿಂದ ಬೆಳೆಗೆ ಪೂರಕವಾಗಿರುವ ಪರಸರ ಸ್ನೇಹಿ ಕೀಟವೂ ನಾಶವಾಗುತ್ತದೆ’ ಎಂದು ಶ್ರೀನಿವಾಸ್‌ ಚಿಂತಾಲ್‌ ಅಭಿಪ್ರಾಯಪಟ್ಟರು.

‘ದಾವಣಗೆರೆ ಹೋಬಳಿಯ ಕಾಡಜ್ಜಿ, ಎಲೆಬೇತೂರು, ಪುಟಗನಾಳ, ಆನೆಕೊಂಡ ಭಾಗದಲ್ಲಿ ಕೊಳವೆ ಹುಳುಬಾಧೆ ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಈ ಹುಳು ಪತ್ತೆಯಾಗಿದೆ. ಕಾಡಜ್ಜಿಯ ರಾಜಪ್ಪ ಅವರ ಮೂರು ಎಕರೆ ಗದ್ದೆಯಲ್ಲಿ ಒಂದೂವರೆ ಎಕರೆ ಗದ್ದೆಗೆ ಈಗಾಗಲೇ ಕೊಳವೆ ಹುಳು ವ್ಯಾಪಿಸಿದೆ’ ಎಂದು ಮಾಲತೇಶ ಪುಟ್ಟಣ್ಣವರ ತಿಳಿಸಿದರು.

ಹುಳುವಿನ ಜೀವನಚಕ್ರ: ಮರಿ ಹುಳು ಎಲೆಯನ್ನು ಕತ್ತರಿಸಿ ಕೊಳವೆಯನ್ನು ಮಾಡಿಕೊಂಡು ಅದರೊಳಗಿನ ಎಲೆಯ ಭಾಗದ ಹಸಿರನ್ನು ಕೆರೆದು ತಿನ್ನುತ್ತದೆ. ಇದರಿಂದ ಎಲೆಗಳ ಮೇಲೆ ಬಿಳಿ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಇದರ ತೀವ್ರತೆ ಹೆಚ್ಚಾದಾಗ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಅವರು ಹೇಳಿದರು.

ಪ್ರೌಢ ಹೆಣ್ಣು ಚಿಟ್ಟೆಯು 50 ಮೊಟ್ಟೆಗಳನ್ನು ಒಂದೊಂದಾಗಿ ಎಲೆಗಳ ಮೇಲ ಇಡುತ್ತದೆ. 2ರಿಂದ 6 ದಿನಗಳ ಒಳಗೆ ಮೊಟ್ಟೆ ಒಡೆದು ಮರಿಗಳು ಹೊರಗೆ ಬರುತ್ತವೆ. ಮರಿಯು 14ರಿಂದ 20 ದಿನಗಳಲ್ಲಿ ದೊಡ್ಡದಾಗುತ್ತದೆ. ನಂತರ ಎಲೆಯ ಸುರುಳಿಯಲ್ಲೇ ಕೋಶಾವಸ್ಥೆಗೆ ಹೋಗುತ್ತದೆ. ನಾಲ್ಕೈದು ದಿನಗಳ ಬಳಿಕ ಚಿಟ್ಟೆಯಾಗುತ್ತದೆ ಎಂದು ಜೀವನಚಕ್ರವನ್ನು ವಿವರಿಸಿದರು.

ಹಗ್ಗದಿಂದ ಹತೋಟಿ: ಹಗ್ಗವನ್ನು ತೆಂಡೆಗಳಿಗೆ ತಾಗಿಸಿ ಎಳೆಯುವುದರಿಂದ ತೆಂಡೆಯ ಕೆಳಭಾಗದಲ್ಲಿ ಜೋತು ಬಿದ್ದಿರುವ ಕೊಳವೆ ಹುಳುಗಳನ್ನು ಕೆಳಗೆ ಬೀಳಿಸಬಹುದು. ನಂತರ ಗದ್ದೆಯಿಂದ ನೀರು ಹೊರಗೆ ಹಾಕುವುದರಿಂದ ಕೊಳವೆಗಳು ಹೊರಗೆ ಹೋಗುತ್ತವೆ.

ಕೀಟನಾಶಕ ಬಳಕೆ: 2 ಮಿ.ಲೀ ಕ್ವಿನಾಲ್‌ ಫಾಸ್‌ 25 ಇಸಿ ಅಥವಾ 2 ಮಿ.ಲೀ ಕ್ಲೋರೋಪೈರಿಫಾಸ್‌ 20 ಇಸಿ ಅಥವಾ 13 ಮಿ.ಲೀ ಮೊನೊಕ್ರೋಟೋಫಾಸ್‌ 36 ಎಸ್‌.ಎಲ್‌ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT