ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿದರೂ ಭತ್ತ ಬೆಳೆಯುವ ಅನಿವಾರ್ಯ

ಶೀತ ಬಾಧೆ, ಅಸಮರ್ಪಕ ಬೆಲೆಯಿಂದ ಇತರೆ ಬೆಳೆ ಬೆಳೆಯದ ಸ್ಥಿತಿ
Last Updated 19 ಆಗಸ್ಟ್ 2021, 3:27 IST
ಅಕ್ಷರ ಗಾತ್ರ

ಮಲೇಬೆನ್ನೂರು:ಈ ಬಾರಿ ಮಳೆಗಾಲದ ಹಂಗಾಮಿಗೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ಬೆಳೆ ಹಾಕಲು ಭದ್ರಾ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಆದರೆ ಸಮರ್ಪಕ ಬೆಲೆ ಇಲ್ಲದಿದ್ದರೂ ಭತ್ತ ಬೆಳೆಯುವ ಅನಿವಾರ್ಯತೆ ಇಲ್ಲಿನ ರೈತರದ್ದು.

ಭತ್ತ ಬಿಟ್ಟರೆ ಬೇರೆ ಬೆಳೆ ಸಮರ್ಪಕವಲ್ಲ. ಅಲ್ಲದೇ ಶೀತ ಬಾಧೆ, ಬೇರೆ ಬೆಳೆಗೆ ಸಮರ್ಪಕ ಬೆಲೆ ಸಿಗುವುದಿಲ್ಲ. ಈಕಾರಣ ರೈತರು ಭತ್ತವನ್ನೇ ಬೆಳೆಯುತ್ತಿದ್ದಾರೆ.

ಮಲೆನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿದ ಕಾರಣ ಲಕ್ಕವಳ್ಳಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಭದ್ರಾ ಜಲಾಶಯ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಟ್ರ್ಯಾಕ್ಟರ್ ಮೂಲಕ ಹೊಲ ಹೊಡೆದು ತಯಾರಾಗಿರುವ ಸಸಿ ಮಡಿ ನಾಟಿ ಮಾಡಲು ಹೋಬಳಿ ವ್ಯಾಪ್ತಿ ರೈತರು ಸಜ್ಜಾಗುತ್ತಿದ್ದಾರೆ. ಕಳೆದ ಬೇಸಿಗೆಯಲ್ಲಿ ಅಚ್ಚುಕಟ್ಟಿನ ಕೊನೆಭಾಗದ ಜಮೀನಿಗೂ ನಾಲೆ ನೀರು ತಲುಪಿದ್ದು, ರೈತರಿಗೆ ನೆಮ್ಮದಿ ಮೂಡಿಸಿದೆ.

ಭತ್ತದ ಬೆಳೆಗಾರರು ಹೊಲ ಹಸನು ಮಾಡುವಲ್ಲಿ ನಿರತರಾಗಿದ್ದಾರೆ. ಕೃಷಿ ಕಾರ್ಮಿಕರು, ಟ್ರ್ಯಾಕ್ಟರ್‌ಗಳಿಗೂ ಬೇಡಿಕೆ ಬಂದಿದೆ.ಸಣ್ಣ ಭತ್ತ ಶ್ರೀರಾಮ್ ಸೋನಾ ಆರೆನ್ನಾರ್, ತಳಿಗೆ ಬೇಡಿಕೆ ಬಂದಿದೆ. ಇದರಿಂದ ಬೆಲೆ ಇಲ್ಲದಿದ್ದರೂ ಈ ಭಾಗದಲ್ಲಿ ಭತ್ತದ ಕೃಷಿ ಗರಿಗೆದರಿದೆ.

‘ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಸ್ಥಳೀಯವಾಗಿ ಕೊಳ್ಳುವವರಿಲ್ಲ ಭತ್ತ ಗೋದಾಮಿನಲ್ಲಿ ಕೊಳೆಯುತ್ತಿವೆ. ಆದರೂ ನಾವು ಅದನ್ನೇ ಬೆಳೆಯುವುದು ಅನಿವಾರ್ಯ’ ಎನ್ನುತ್ತಾರೆ ನಂದಿಗುಡಿ ಷಣ್ಮುಖಯ್ಯ.

‘ಈಗಾಗಲೇ ರೈತರುಕಬ್ಬು ಬೆಳೆದು ಕೈಸುಟ್ಟುಕೊಂಡಿದ್ದಾರೆ. ಭತ್ತ ಬಿಟ್ಟು ಬೇರೆ ಯಾವ ಬೆಳೆ ಮಾಡಲು ಈ ಭಾಗದಲ್ಲಿ ಸಾಧ್ಯವಿಲ್ಲ. ಹೀಗಾಗಿ ಅದೇ ಬೆಳೆಯಬೇಕು’ ಎನ್ನುತ್ತಾರೆ ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಸಂಚಾಲಕ ಆಂಜನೇಯ.

ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿತವಾಗಿದೆ. ನೀರಿನ ಸೌಕರ್ಯ ಇದ್ದರೆ ಮಾತ್ರ ತೋಟ ಕಟ್ಟಬಹುದು. ಸರ್ಕಾರ ಬೆಳೆ ಪರಿವರ್ತನೆಗೆ ಹೊಸ ಯೋಜನೆ ರೂಪಿಸಬೇಕು. ಇದರಿಂದ ಅನುಕೂಲ ಆಗಲಿದೆ ಎಂದು ಒತ್ತಾಯಿಸುತ್ತಾರೆ ರೈತ ಸಂಘದ ಪ್ರಭುಗೌಡ, ಕೊಟ್ರೇಶ್.

ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.ರಸಗೊಬ್ಬರ, ಕ್ರಿಮಿನಾಶಕ, ರಾಸಾಯನಿಕ, ಕಾರ್ಮಿಕ ಕೂಲಿ, ಕಟಾವು ಯಂತ್ರದ ಬಾಡಿಗೆ, ಡೀಸೆಲ್, ಪೆಟ್ರೋಲ್, ಖರ್ಚುವೆಚ್ಚ ಹೆಚ್ಚಾಗಿದೆ. ಭತ್ತದ ಬೆಲೆ ಮಾತ್ರ ಕುಸಿದಿದೆ. ಮುಂಬರುವ ದಿನ ಭತ್ತ ಬೆಳೆಯುವುದು ಇನ್ನೂ ಕಷ್ಟ ಎಂದು ಬೇಸರಿಸಿದರು ಹೊಳೆಸಿರಿಗೆರೆಯ ಫಾಲಾಕ್ಷಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT