ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಎಪಿಎಂಸಿ– ಆನ್‌ಲೈನ್‌ ಟೆಂಡರ್‌ಗೆ ಉತ್ತಮ ಬೆಲೆ

ಗುಣಮಟ್ಟದ ಭತ್ತಕ್ಕೆ ಕ್ವಿಂಟಲ್‌ಗೆ ₹2,400
Last Updated 1 ಡಿಸೆಂಬರ್ 2022, 5:04 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಾದ್ಯಂತ ಬಿರುಸಿನಿಂದ ಭತ್ತದ ಕೊಯ್ಲು ಸಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಮಾರಾಟ ಜೋರಾಗಿ ನಡೆದಿದೆ. ಬೆಂಬಲಬೆಲೆಗಿಂತ ಅಧಿಕ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ರೈತರಲ್ಲಿ ಸಹಜವಾಗಿಯೇ ಖುಷಿ ಉಂಟುಮಾಡಿದೆ. ಆದರೆ, ಈ ಬಾರಿ ಅಧಿಕ ಮಳೆ ಸುರಿದಿದ್ದರಿಂದ ಇಳುವರಿ ಕಡಿತಗೊಂಡಿರುವುದು ನಿರಾಶೆ ತಂದಿದೆ.

ಕಳೆದ ವರ್ಷ ಕ್ವಿಂಟಲ್ ಭತ್ತಕ್ಕೆ ₹ 1,900ರಿಂದ ₹ 2,000 ಇದ್ದ ದರ, ಈ ಬಾರಿ ₹ 2,200–₹ 2,400ರವರೆಗೆ ಇದ್ದು, ₹ 200ರಿಂದ ₹ 300ರಷ್ಟು ಅಧಿಕ ದರ ದೊರೆಯುತ್ತಿದೆ. 2020ರ ಏಪ್ರಿಲ್‌ ತಿಂಗಳಿನಿಂದಎಪಿಎಂಸಿಯಲ್ಲಿ ಆನ್‌ಲೈನ್ ಟೆಂಡರ್ ಆರಂಭವಾಗಿದ್ದು, ರೈತರಿಗೆ ಸ್ಪರ್ಧಾತ್ಮಕ ಬೆಲೆ
ಸಿಗುತ್ತಿದೆ.

‘ಭತ್ತದ ದರ ಹೆಚ್ಚಿದೆ. ಸಾಮಾನ್ಯ ಭತ್ತಕ್ಕೆ ಬೆಂಬಲ ಬೆಲೆ ಒಂದು ಕ್ವಿಂಟಲ್‌ಗೆ ₹ 2,040 ಇದ್ದು, ಉತ್ತಮ ಗುಣಮಟ್ಟದ ಭತ್ತಕ್ಕೆ ₹ 2,060 ಬೆಂಬಲ ಬೆಲೆ ಇದೆ’ ಎಂದು ಎಪಿಎಂಸಿ ನಿರ್ದೇಶಕ ಕೆ.ಸಿ.ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ನವೆಂಬರ್‌ನಲ್ಲಿ 88,433 ಕ್ವಿಂಟಲ್ ವಹಿವಾಟು ನಡೆದಿತ್ತು. ಈ ಬಾರಿ ಆವಕ ಕಡಿಮೆ ಇದೆ. ನವೆಂಬರ್ 8ರಿಂದ 25ರವರೆಗೆ 19,473 ಕ್ವಿಂಟಲ್ ವಹಿವಾಟು ನಡೆದಿದೆ’ ಎಂದು ಎಪಿಎಂಸಿ ಅಂಕಿ ಅಂಶಗಳು
ಹೇಳುತ್ತವೆ.

ಅಧಿಕ ಮಳೆಯಿಂದಾಗಿ ಸೆಪ್ಟೆಂಬರ್ ತಿಂಗಳವರೆಗೆ ಜಿಲ್ಲೆಯಲ್ಲಿ 129 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ನಷ್ಟವಾಗಿತ್ತು. ಈಚೆಗೆ ಮಳೆ ಸುರಿದಿದ್ದರಿಂದ ಕೊಯ್ಲಿಗೆ ಅಡ್ಡಿಯಾಗಿತ್ತು. ಈಗ ಬಿಸಿಲು ಬೀಳುತ್ತಿದ್ದು, ರೈತರು ಕೊಯ್ಲು ಮಾಡಿ ರಸ್ತೆಯ ಪಕ್ಕದಲ್ಲೇ ಭತ್ತ ಒಣಗಿಸಲು ರಾಶಿ ಹಾಕುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಾಣಸಿಗುತ್ತಿವೆ.

‘ಕಳೆದ ವರ್ಷ ಖರೀದಿ ಮಾಡಿದ ಭತ್ತ ಈಗಾಗಲೇ ಖಾಲಿಯಾಗಿದ್ದು, ಇಳುವರಿ ಕಡಿಮೆ ಆಗಿರುವುದರಿಂದ ಮುಂದಿನ ದಿನ ಗಳಲ್ಲಿ ಸಿಗುವುದೋ ಇಲ್ಲವೋ ಎಂಬ ಆತಂಕದಿಂದ ವರ್ತಕರು ಹಾಗೂ ರೈಸ್‌ ಮಿಲ್ ಮಾಲೀಕರು ಈಗಾಗಲೇ ಭತ್ತದ ದಾಸ್ತಾನು ಆರಂಭಿಸಿದ್ದಾರೆ. ಇದ ರಿಂದಾಗಿ ರೈತರಿಗೆ ಉತ್ತಮ ದರವೂ ಸಿಗುತ್ತಿದೆ’ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಪ್ರಭು
ಹೇಳಿದರು.

‘ಗ್ರಾಮೀಣ ಭಾಗದಲ್ಲೂ ಖರೀದಿ ನಡೆಯುತ್ತಿದೆ. ಆದರೆ, ಎಪಿಎಂಸಿಯಲ್ಲಿ ಸ್ಪರ್ಧಾತ್ಮಕ ಬೆಲೆ ಸಿಗುತ್ತಿರುವುದರಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಬೆಳಿಗ್ಗೆ ಎಪಿಎಂಸಿ ಆವರಣಕ್ಕೆ ಬರುವ ರೈತರು ಸಂಜೆಯವರೆಗೂ ಭತ್ತ ಒಣಗಿಸಿ ಮಾರಾಟ ಮಾಡಿ ಹೋಗುತ್ತಿದ್ದಾರೆ’ ಎಂದರು.

‘5 ಎಕರೆಯಲ್ಲಿ ಆರ್‌ಎನ್‌ಆರ್ ತಳಿಯ ಭತ್ತ ಬೆಳೆದಿದ್ದು, ಈ ಬಾರಿ ಎಕರೆಗೆ 28ರಿಂದ 30 ಕ್ವಿಂಟಲ್‌ ಇಳುವರಿ ಬಂದಿದೆ. ‌ಕ್ವಿಂಟಲ್‌ಗೆ ₹ 2,250 ದರ ಸಿಕ್ಕಿದೆ. ಕಳೆದ ಬಾರಿಯೂ ಇಷ್ಟೇ ಇಳುವರಿ ಬಂದಿತ್ತು. ₹ 1,880ರಿಂದ ₹ 1,950 ದರ ಇತ್ತು. ಆನ್‌ಲೈನ್‌ ಟೆಂಡರ್‌ನಿಂದಾಗಿ ಉತ್ತಮ ಬೆಲೆ ದೊರೆತಿದೆ’ ಎಂದು ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದ ರೈತ ಶಿವಮೂರ್ತಿ ತಿಳಿಸಿದರು.

‘8 ಎಕರೆಯಲ್ಲಿ ಭತ್ತ ಬೆಳೆದಿದ್ದು, ಇಳುವರಿ ಕಡಿಮೆಯಾಗಿದ್ದರಿಂದ ಎಕರೆಗೆ 25 ಕ್ವಿಂಟಲ್‌ನಷ್ಟು ಬಂದಿದೆ. ₹ 2,300 ಬೆಲೆ ಸಿಕ್ಕಿದೆ. ‌200 ಕ್ವಿಂಟಲ್‌ ಭತ್ತ ಬಂದಿದೆ. ಡೀಸೆಲ್‌ ಬೆಲೆ ಹೆಚ್ಚಾಗಿರುವುದರಿಂದ ಯಂತ್ರಗಳಿಗೆ ಗಂಟೆಗೆ ₹ 2,400 ತೆಗೆದುಕೊಳ್ಳುತ್ತಿದ್ದಾರೆ. ಇದು ಹೊರೆಯಾಗಿದೆ’ ಎಂದು ದಾವಣಗೆರೆ ತಾಲ್ಲೂಕಿನ ನಾಗನೂರು ರೈತ ರಾಜು ಹೇಳಿದರು.

ಆಂಧ್ರ, ತುಮಕೂರಿನಲ್ಲಿ ಹೆಚ್ಚಿನ ಬೇಡಿಕೆ

ಜಿಲ್ಲೆಯಲ್ಲಿ ಬೆಳೆಯುವ ‘ಜಯ’ ತಳಿಯ ಭತ್ತ ಹೆಚ್ಚಾಗಿ ಮಂಡಕ್ಕಿ ಭಟ್ಟಿಗಳಿಗೆ ಹೋಗುತ್ತದೆ. ‘ಶ್ರೀರಾಮ್ ಸೋನಾ’ ಹಾಗೂ ‘ಆರ್‌ಎನ್ಆರ್’ ತಳಿಗಳು ಹೆಚ್ಚಾಗಿ ಎಪಿಎಂಸಿಗೆ ಬರಲಿದ್ದು, ಇವು ಸ್ಥಳೀಯವಾಗಿ ಅಲ್ಲದೆ ತುಮಕೂರು ಹಾಗೂ ಆಂಧ್ರಕ್ಕೆ ಹೆಚ್ಚಾಗಿ ಹೋಗುತ್ತವೆ’ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT