ಶನಿವಾರ, ಮೇ 21, 2022
27 °C
ವಾಲ್ಮೀಕಿ ಜಾತ್ರೆಯ ಧರ್ಮಸಭೆ

ವ್ಯಾಪಾರದ ಸರಕಾಗುತ್ತಿರುವ ಧರ್ಮ: ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಧರ್ಮ ವ್ಯಾಪಾರದ ಸರಕಾಗುತ್ತಿದೆ. ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಹರಿಹರ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಮಂಗಳವಾರ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಧರ್ಮದ ಕಟ್ಟೆಯಲ್ಲಿ ಕುಳಿತವರು ಜಾತಿ, ಧರ್ಮ ಎಂದು ನೋಡದೇ ಎಲ್ಲರನ್ನು ಅಪ್ಪಿಕೊಳ್ಳುವ ಕೆಲಸವನ್ನು ಮಾಡಬೇಕಾಗುತ್ತದೆ. ಬುದ್ಧ, ಕ್ರಿಸ್ತ, ಪೈಗಂಬರ್‌, ವಾಲ್ಮೀಕಿ, ಬಸವಣ್ಣ ಇವರೆಲ್ಲ ಜಾತಿಗೆ ಸೀಮಿತರಾದವರಲ್ಲ. ಜ್ಯೋತಿ ಸ್ವರೂಪರಾಗಿ ಮನುಕುಲಕ್ಕೆ ಬೆಳಕನ್ನು ನೀಡಿದವರು. ಆದರೆ ಧರ್ಮದ ಕಟ್ಟೆಯಲ್ಲಿ ಕುಳಿತ ನಾವು ಆ ವಿಶಾಲವಾದ ತತ್ವವನ್ನು ಜಾಅತಿಗೆ ಸೀಮಿತಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಜಾತ್ರೆಯಲ್ಲಿ ಎಷ್ಟು ಜನ ಸೇರಿದ್ದೇವೆ ಎಂಬುದು ಮುಖ್ಯವಲ್ಲ. ಎಷ್ಟು ಸಂಸ್ಕಾರವಂತರಾಗಿದ್ದೇವೆ ಎಂಬುದು ಮುಖ್ಯ. ಸಂಸ್ಕಾರ, ಸಂಸ್ಕೃತಿಯ ಮೂಲಕ ವಾಲ್ಮೀಕಿಗಳಾಗಬೇಕೇ ಹೊರತು ಬೇಡರು ಆಗುವುದಲ್ಲ ಎಂದು ಎಚ್ಚರಿಸಿದರು.

ಮಠಗಳು ಬೆಳೆಯುವುದು ಸ್ವಾಮೀಜಿಗಳಿಂದ ಅಲ್ಲ. ಸ್ವಾಮೀಜಿ ಮತ್ತು ಶಿಷ್ಯರು ಒಂದಾಗಿದ್ದರೆ ಮಾತ್ರ ಬೆಳೆಯುತ್ತದೆ. ಶಿಷ್ಯರು ಗುರುಗಳಿಗೆ, ಗುರು ಶಿಷ್ಯರಿಗೆ ಅಂಜಿ ನಡೆಯಬೇಕು. ಇಬ್ಬರೂ ತಪ್ಪು ದಾರಿಯಲ್ಲಿ ನಡೆಯಬಾರದು. ಯಾರೇ ತಪ್ಪು ಮಾಡಿದರು ತಪ್ಪು ತಪ್ಪೇ ಎಂದು ಹೇಳುವ ನಿಷ್ಠುರ ಗುಣ ಇರಬೇಕು ಎಂದು ಸಲಹೆ ನೀಡಿದರು.

ಮುಂಡರಗಿ ತೋಂಟದಾರ್ಯ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಈ ದೇಶದ ಒಳಗೆ ಧಾರ್ಮಿಕದ ಬೇರು ಉಜ್ವಲವಾಗಿ ಬೆಳಕನ್ನು ನೀಡುತ್ತಿದೆ. ಹಾಗಾಗಿ ನಾವು ಭಾವೈಕ್ಯದಿಂದ ಬದುಕಲು ಸಾಧ್ಯವಾಗಿದೆ. ಭಾರತ ಎಂಬುದು ಭಾವೈಕ್ಯದ ಹಡಗು. ಇದಕ್ಕೆ ಯಾರೇ ಆದರೂ ಸಣ್ಣ ತೂತು ಕೊರೆದರೂ ಭಾರತ ಮುಳುಗಿ ಹೋಗುತ್ತದೆ ಎಂದು ಎಚ್ಚರಿಸಿದರು.

ಮನುಷ್ಯನಿಗೆ ಮೂಲಭೂತವಾಗಿ ಅನ್ನ, ಅರಿವು, ಅರಿವೆ, ಆಶ್ರಯ, ಔಷಧ ಬೇಕು. ಬದುಕಿನ ಮೂಲ ಹಕ್ಕುಗಳಾದ ಇವುಗಳನ್ನು ಪಡೆಯಬೇಕಿದ್ದರೆ ಅನ್ನ ಕೊಡುವ ರೈತ ಸಂತುಷ್ಟನಾಗಿರಬೇಕು. ರೈತನಿಗೆ ಜಯ ಸಿಕ್ಕಿದರೆ ದೇಶಕ್ಕೆ ಜಯ ಸಿಕ್ಕಂತೆ. ಶ್ರಮಿಕವರ್ಗ ಸಂತೋಷದಿಂದ ಇರಬೇಕು ಎಂದು ತಿಳಿಸಿದರು.

ಒಂದು ಕಾಲದಲ್ಲಿ ರಾಜರಿಂದ ದೇಶ ಉದ್ದಾರವಾಗುತ್ತಿತ್ತು. ಆಮೇಲೆ ರಾಜಕಾರಣಿಗಳಿಂದ ಆಗುತ್ತದೆ ಎಂದು ತಿಳಿದಿದ್ದೆವು. ನಾಲ್ಕನೇ ವರ್ಗದ ಶ್ರಮಿಕ ವರ್ಗದಿಂದ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬ ಅರಿವು ಮೂಡಿದೆ ಎಂದರು.

ಜಾತ್ರೆ ಅಂದರೆ ಜನ ಕೂಡುವಿಕೆಯ ಪ್ರದರ್ಶನವಲ್ಲ. ಹೇರಿಕೆಯ ಜ್ಞಾನವನ್ನು ಮೀರಿ ನಿಜವಾದ ಜ್ಞಾನವನ್ನು ಪಡೆದು ಅಜ್ಞಾನವನ್ನು ಓಡಿಸುವ ಜಾತ್ರೆ ಆಗಬೇಕು. ವಾಲ್ಮೀಕಿ, ಬುದ್ಧ ಬಸವಣ್ಣ ಮೊದಲಾದ ದಾರ್ಶನಿಕರು ಒಂದು ಕುಲಕ್ಕೆ ಸೀಮಿತರಾವರಲ್ಲ. ಮಾನವ ಕುಲವನ್ನು ಮೇಲೆತ್ತಲು ಬಂದವರು ಎಂದು ಹೇಳಿದರು.

ದ್ರಾವಿಡ ಜನಾಂಗದ ನಾಯಕರು ಆಳಿದ ದೇಶವಿದು. ಅವರು ಜಾತಿಯಿಂದ ಸಮಾಜ ಕಟ್ಟಿದವರಲ್ಲ. ಜಗ ಬದುಕಲಿ, ಜನ ಬದುಕಲಿ ಎಂದು ಜ್ಯೋತಿಯ ಸಮಾಜ ಕಟ್ಟಿದವರು. ಬಹುಭಾಷಾ ದೇಶವಿದು. ಮಠಾಧೀಶರು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬಳಸಿದರೆ ಭಾರತವನ್ನು ಕಳೆದುಕೊಳ್ಳುತ್ತೇವೆ. ಕಲಾವಿದರು, ಸಂಗೀತ, ಜ್ಞಾನ, ಸ್ವಾಮೀಜಿಗಳು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಮನುಕುಲಕ್ಕೆ ಸೇರಿದವರು ಎಂದು ಹೇಳಿದರು.

ಗ್ರಂಥಸ್ಥವಾಗಿ ಉಳಿದಿದ್ದ ವಾಲ್ಮೀಕಿಯನ್ನು ಜನಮುಖಿಯಾಗಿ ಈ ಜಾತ್ರೆ ಮೂಲಕ ಮಾಡಿದ ಕೀರ್ತಿ ಪ್ರಸನ್ನಾನಂದ ಸ್ವಾಮೀಜಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.

ಶ್ರೀರಂಗಪಟ್ಟಣದ ದುರ್ದುಂಡೇಶ್ವರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಭಾರತ ಎಂದರೆ ಭಾವನಾತ್ಮಕವಾಗಿ ಇರುವ, ರಾಗದ್ವೇಷವಿಲ್ಲದ, ತಾರತಮ್ಯ ಇಲ್ಲದ ದೇಶ. ಉಳಿದೆಲ್ಲವೂ ಭೋಗರಾಷ್ಟ್ರಗಳಾದರೆ ಭಾರತ ತ್ಯಾಗರಾಷ್ಟ್ರ. ಇಲ್ಲಿ ಕತ್ತಿಬೇಡ, ಸಮಾಜದ ಬಾಂಧವ್ಯ ಹೊಲಿಯುವ ಸೂಜಿಗಳಾಗಿ ನಾವಾಗಬೇಕು’ ಎಂದರು.

ನಿಮ್ಮ ದುಷ್ಟಗುರುಣಗಳನ್ನು ಇಲ್ಲಿ ಬಿಟ್ಟು ಹೋಗಲು ಸಾಧ್ಯವಾದರೆ ಜಾತ್ರೆ ಸಾರ್ಥಕ. ಪರಿವರ್ತನೆ, ಬದಲಾವಣೆಗೆ ಕಾರಣವಾಗಲಿ. ಜಗತ್ತಿಗೆ ಮೊದಲ ಧರ್ಮಗ್ರಂಥ ನೀಡಿದವರು ವಾಲ್ಮೀಕಿ ಮಹರ್ಷಿಗಳು. ಅದು ಒಂದು ಜಾತಿಯ ಗ್ರಂಥವಲ್ಲ ಎಂದು ಎಚ್ಚರಿಸಿದರು.

ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಇಳಕಲ್‌ ಚಿತ್ತರಗಿ ವಿಜಯ ಮಹಂತೇಶ್ವರ ಸಂಸ್ಥಾನದ ಗುರುಮಹಾಂತ ಶಿವಯೋಗಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿಡ್ಲಕೋಣ ವಾಲ್ಮೀಕಿ ಆಶ್ರಮದ ಸಂಜಯಕುಮಾರ ಸ್ವಾಮೀಜಿ, ಲಿಂಗಸಗೂರು ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ಶಿವಮೊಗ್ಗ ಸಿದ್ಧರೂಢ ಆಶ್ರಮದ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಚ್‌.ಡಿ. ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಎಚ್‌.ಎಸ್‌. ಶಿವಶಂಕರ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು