ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ವಿತರಕರ ದಿನಾಚರಣೆ: ಎಲ್ಲರೂ ಮಲಗಿರುವಾಗ ಎಚ್ಚರ ಇರುವವರು

Last Updated 4 ಸೆಪ್ಟೆಂಬರ್ 2018, 11:51 IST
ಅಕ್ಷರ ಗಾತ್ರ

ದಾವಣಗೆರೆ: ಮುಂಜಾನೆಯ ಸವಿಗನಸು ಕಾಣುತ್ತಾ ಎಲ್ಲರೂ ಸಿಹಿ ನಿದ್ದೆಯಲ್ಲಿರುವಾಗ ಪತ್ರಿಕೆ ವಿತರಕರು ಮಾತ್ರ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಚಳಿ, ಮಳೆ, ಗಾಳಿ ಯಾವುದೂ ಇವರ ಕೆಲಸಕ್ಕೆ ಅಡ್ಡಿಯಾಗುವುದಿಲ್ಲ. ಹಬ್ಬ, ಉತ್ಸವ ಏನೇ ಇದ್ದರೂ ಈ ಕಾಯಕ ಮಾತ್ರ ತಪ್ಪಿಸುವಂತಿಲ್ಲ.

ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಅಧಿಕೃತವಾಗಿ ಅದು ನಿಜವೋ ಎಂಬುದು ಚರ್ಚಿತ ವಿಚಾರ. ಆದರೆ, ಈ ವಿತರಕರು ಪತ್ರಿಕೆಯ ನಾಲ್ಕನೇ ಅಂಗವಾಗಿರುವುದು ಮಾತ್ರ ಸತ್ಯ. ಸುದ್ದಿಗಾರರು ಸುದ್ದಿ ಬರೆದರೂ ಜಾಹೀರಾತುದಾರರು ಜಾಹೀರಾತು ತಂದರೂ, ಪ್ರಿಂಟಿಂಗ್‌ನವರು ಮುದ್ರಿಸಿದರೂ ಪತ್ರಿಕೆಯ ಯಶಸ್ಸು ನಿಂತಿರುವುದು ಪತ್ರಿಕೆ ಜನರಿಗೆ ತಲುಪಿದಾಗ ಮಾತ್ರ. ಹಾಗಾಗಿಯೇ ವರ್ಷಕ್ಕೆ ಒಮ್ಮೆ ಪತ್ರಿಕೆ ವಿತರಕರ ದಿನವನ್ನು ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಕೆಲವು ವಿತರಕರು ತಮ್ಮ ಕಷ್ಟ ಸುಖಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

ವಿಮೆ ನೀಡಿ

‘ಬೆಳಕು ಹರಿಯುವ ಮೊದಲೇ ಪೇಪರ್‌ ಹಂಚ ಬೇಕಿರುವುದರಿಂದ ಮುಂಜಾನೆ 3.30ಕ್ಕೆ ಎದ್ದು 4 ಗಂಟೆಗೆ ಪತ್ರಿಕೆ ಜೋಡಿಸುವ ಕೆಲಸ ಮಾಡುತ್ತೇವೆ. ಆನಂತರ ಬೇರೆ ಬೇರೆ ಮಾರ್ಗದಲ್ಲಿ ಆಯಾ ಬೀಟ್‌ ಹುಡುಗರು ಪತ್ರಿಕೆ ಹಿಡಿದುಕೊಂಡು ಹೋಗುತ್ತಾರೆ. ಮಂದ ಬೆಳಕಿನಲ್ಲಿ ಹೆಚ್ಚು ಅಪಘಾತಗಳು ಉಂಟಾಗುತ್ತಿವೆ. ಹಾಗಾಗಿ ಎಲ್ಲ ಪತ್ರಿಕಾ ವಿತರಕರಿಗೆ ಸರ್ಕಾರ ವಿಮೆ ಮಾಡಬೇಕು’ ಎಂದು 14 ವರ್ಷದಿಂದ ಪತ್ರಿಕೆ ವಿತರಿಸುವ ಅರುಣ್‌ಕುಮಾರ್‌ ಅವರ ಒತ್ತಾಯ.

ಹಣ ಪಾವತಿಸಲು ಸತಾಯಿಸಬೇಡಿ

‘17 ವರ್ಷಗಳಿಂದ ಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದೇನೆ. ಮಳೆ ಬಂದು ಪತ್ರಿಕೆ ಒದ್ದೆಯಾದರೆ, ತಡವಾದರೆ ಕೆಲವರು ಬೈಯ್ಯುತ್ತಾರೆ. ಕೆಲವರು ಇರ್ಲಿ ಬಿಡಿ ಅನ್ನುತ್ತಾರೆ. ಗ್ರಾಹಕರ ನಿರೀಕ್ಷೆಗೆ ತಕ್ಕ ಕೆಲಸ ಮಾಡುತ್ತೇವೆ. ಒಂದು ದಿನವೂ ತಪ್ಪದಂತೆ ಪತ್ರಿಕೆ ಮುಟ್ಟಿಸುತ್ತೇವೆ. ಆದರೆ, ಬೇಸರದ ಸಂಗತಿ ಎಂದರೆ ತಿಂಗಳಿಗೊಮ್ಮೆ ಪತ್ರಿಕೆಯ ದುಡ್ಡು ನೀಡಲು ಕೆಲವು ಸತಾಯಿಸುತ್ತಾರೆ. ಮತ್ತೆ ಬನ್ನಿ, ನಾಳೆ ಬನ್ನಿ ಎಂದು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ದಯವಿಟ್ಟು ಈ ರೀತಿ ಸತಾಯಿಸಬೇಡಿ ಎಂದು ಏಳು ವರ್ಷದ ಹಿಂದೆ ಜಾಹೀರಾತು ಹಾಕಿದ್ದೆವು. ಆದರೂ ಪ್ರಯೋಜವಾಗಿಲ್ಲ’ ಎಂದು ಪತ್ರಿಕೆ ವಿತರಕ ಕರಿಬಸವರಾಜ್‌ ನೋವು ತೋಡಿಕೊಂಡರು.

‘ಸರ್ಕಾರ ಎಲ್ಲರಿಗೂ ವಿಮೆ ಮಾಡಬೇಕಿತ್ತು. ಆದರೆ, ನಾನು ಅದಕ್ಕೆ ಕಾಯದೇ ನನಗೆ ಮತ್ತು ನನ್ನ ಅಡಿಯಲ್ಲಿ ಪತ್ರಿಕೆ ವಿತರಿಸುವ ಹುಡುಗರಿಗೆ ಆರೋಗ್ಯ ವಿಮೆ ಮಾಡಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ನಾಲ್ಕೇ ರಜೆ

ಪತ್ರಿಕೆಗೆ ಯುಗಾದಿ, ಗಣೇಶ ಚತುರ್ಥಿ, ಆಯುಧಪೂಜೆ ಮತ್ತು ದೀಪಾವಳಿ ಹೀಗೆ ನಾಲ್ಕು ರಜೆಗಳಷ್ಟೇ ಇವೆ. ಹಬ್ಬಗಳ ಸಮಯದಲ್ಲಾದರೂ ಹೆಚ್ಚು ರಜೆ ಇದ್ದರೆ ಉಪಯೋಗವಾಗುತ್ತದೆ ಎಂಬುದು 20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿರುವ ಟಿ.ಪಿ. ನಾಗರಾಜ್‌ ಅವರ ಬೇಡಿಕೆಯಾಗಿದೆ.

‘ವರದಿಗಾರರಿಗೆ, ಸಂಪಾದಕರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚು ಹತ್ತಿರ ಇರುತ್ತಾರೆ. ಯಾವ ಪತ್ರಿಕೆಯವರೂ ನಮ್ಮ ಸಮಸ್ಯೆಗಳನ್ನು ಅವರಿಗೆ ಮುಟ್ಟಿಸಿಲ್ಲ. ನಾವಾಗಿಯೇ ಕಟ್ಟಡ ಬೇಕು, ವಿಮೆ ಬೇಕು ಎಂದು ಸಚಿವರಿಗೆ, ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ಎಂಬುದು ಅವರ ಅಳಲು.

ಮನೆಯಲ್ಲಿ ಯಾರಿಗೋ ಅಸೌಖ್ಯ ಇದ್ದರೂ, ಯಾರೂ ಸತ್ತರೂ, ಹುಟ್ಟಿದರೂ ಪತ್ರಿಕೆ ವಿತರಣೆ ನಿಲ್ಲಿಸದ ಈ ವಿತರಕರ ಬೇಡಿಕೆಗಳಿಗೆ ಪಾಲಿಕೆ, ಜಿಲ್ಲಾಡಳಿತ ಸ್ಪಂದಿಸುವುದೇ ಎಂಬ ಪ್ರಶ್ನೆ ಮಾತ್ರ ಉಳಿದಿದೆ.

ವಿತರಕರ ದಿನಚರಿ

ಮುಂಜಾನೆ 3.30ಕ್ಕೆ ಎಳುತ್ತಾರೆ. 7.30ರಿಂದ 8ರ ಒಳಗೆ ವಿತರಣೆ ಮುಗಿಸುತ್ತಾರೆ. ಬಳಿಕ ಹುಡುಗರು ಮನೆಗೆ ಹೋಗಿ ನಿದ್ದೆ ಮಾಡಿ 9.30ರ ನಂತರ ಕಾಲೇಜಿಗೆ ಹೋಗುತ್ತಾರೆ. ಏಜೆಂಟರು ಬೆಳಿಗ್ಗೆ 8ರಿಂದ 10 ಗಂಟೆವರೆಗೆ ಬಿಲ್‌ ಸಂಗ್ರಹಿಸುತ್ತಾರೆ. ಬಳಿಕ ಮನೆಗೆ ಹೋಗಿ ಉಪಾಹಾರ ಮುಗಿಸಿ ಮಧ್ಯಾಹ್ನ 12ಕ್ಕೆ ಮಲಗುತ್ತಾರೆ. ಸಂಜೆ 4ರ ನಂತರ ಮತ್ತೆ ಬಿಲ್‌ ಸಂಗ್ರಹ ಮುಂದುವರಿಸುತ್ತಾರೆ. ಇನ್ನು ಕೆಲವರು ಬೆಳಿಗ್ಗೆ ಹಣ ಸಂಗ್ರಹಿಸುವುದಿಲ್ಲ. ಅವರು ಬೇರೆ ಕೆಲಸಕ್ಕೆ ಹೋಗುತ್ತಾರೆ. ಸಂಜೆಯಷ್ಟೇ ಪತ್ರಿಕೆಯ ಹಣ ಸಂಗ್ರಹಿಸುತ್ತಾರೆ.

ಪತ್ರಿಕೆ ಜೋಡಣೆಗೆ ಕಟ್ಟಡ ಕೊಡಿ

ನಗರದಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುವ ಮೊದಲು ಜೋಡಿಸಲು ಒಂದು ವ್ಯವಸ್ಥಿತ ಜಾಗ ಇಲ್ಲ. ಹಳೇ ಬಸ್‌ನಿಲ್ದಾಣ, ಇನ್ನಿತರ ಕಡೆಗಳಲ್ಲಿ ಮುಚ್ಚಿದ ಅಂಗಡಿಗಳ ಮುಂದೆಯೇ ಜೋಡಿಸುತ್ತಿದ್ದೇವೆ. ಮಳೆಗಾಲದಲ್ಲಿ ಪತ್ರಿಕೆಗಳು ಒದ್ದೆಯಾಗುತ್ತಿವೆ. ಈ ಬಗ್ಗೆ ಪಾಲಿಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬುವುದು ನಗರದ ಮುಖ್ಯ ಪತ್ರಿಕಾ ವಿತರಕ ಅರುಣ್‌ಕುಮಾರ್‌ ಅವರ ನೋವು.

ಹಿಂದಿನ ರಾಜ್ಯ ಸರ್ಕಾರ ಪತ್ರಿಕಾ ವಿತರಕರ ಅಭಿವೃದ್ಧಿಗಾಗಿ ಬಜೆಟಲ್ಲಿ ₹ 2 ಕೋಟಿ ಘೋಷಣೆ ಮಾಡಿದೆ. ಬಳಿಕ ಅದಕ್ಕೆ ಸರಿಯಾಗಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿಲ್ಲ. ಪತ್ರಿಕಾ ವಿತರಕರ ಸಮಸ್ಯೆಗಳನ್ನು ಪರಿಹರಿಸಲು ಈ ಅನುದಾನ ವಿನಿಯೋಗವಾಗಬೇಕು. ಈಗಿನ ಸರ್ಕಾರ ಇನ್ನಷ್ಟು ಅನುದಾನ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT