ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ| ಹರ ಜಾತ್ರೆಯಲ್ಲಿ ಸಮಕಾಲೀನ ಧ್ವನಿ: ವಚನಾನಂದ ಸ್ವಾಮೀಜಿ

ಪಂಚಮಸಾಲಿ ಪೀಠ
Last Updated 8 ಜನವರಿ 2020, 20:00 IST
ಅಕ್ಷರ ಗಾತ್ರ

ದಾವಣಗೆರೆ: ಇದೇ 14–15ರಂದು ಹರಿಹರದ ಪಂಚಮಸಾಲಿ ಮಠದಲ್ಲಿ ಹರ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೀಠದ ವಚನಾನಂದ ಸ್ವಾಮೀಜಿ ‘ಪ್ರಜಾವಾಣಿ’ಯ ಜತೆ ಮುಖಾಮುಖಿಯಾದರು.

* ಹರ ಜಾತ್ರೆ ಎಂದೇ ಯಾಕೆ ಹೆಸರಿಟ್ಟಿರಿ?

‘ಹ’ ಎಂದರೆ ಸೂರ್ಯ. ‘ರ’ ಎಂದರೆ ಚಂದ್ರ. ಜಪಾನೀ ಭಾಷೆಯಲ್ಲಿ ‘ಹರ’ ಎಂದರೆ ಸೂರ್ಯ, ಚಂದ್ರನ ಶಕ್ತಿಯನ್ನು ಸಮತೋಲನ ಮಾಡುವುದು. ‘ಹರ’ ಆತ್ಮವಿಶ್ವಾಸದ ಧ್ವನಿ; ಶಿವನೂ ಹೌದು. ಅದಕ್ಕೇ ಈ ಹೆಸರನ್ನು ಇಟ್ಟೆವು.

* ಹರ ಜಾತ್ರೆಯ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲು ಅಕ್ಕಮಹಾದೇವಿಯ ವಚನಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಯಾಕೆ?

ಅಕ್ಕ ಮಹಾದೇವಿ ಕನ್ನಡದ ಮೊದಲ ಕವಯಿತ್ರಿ. ಕಿತ್ತೂರು ರಾಣಿ ಚನ್ನಮ್ಮ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ. ಶಿವಾಜಿಯ ಮಗ ಸಾಂಬಾಜಿಗೆ ಆಶ್ರಯ ನೀಡಿದವರು ಕೆಳದಿ ಚನ್ನಮ್ಮ. ಬೆಳವಡಿ ಮಲ್ಲಮ್ಮ ದೇಶದ ಮೊದಲ ಸೈನ್ಯ ಕಟ್ಟಿದವರು. ಇವರೆಲ್ಲ ಪಂಚಮಸಾಲಿಯವರೇ ಆದರೂ ದೇಶಕ್ಕಾಗಿ ಜಾತ್ಯತೀತವಾಗಿ ಯೋಚಿಸಿದವರು. ಇವರೆಲ್ಲರ ಜತೆಗೆ ಅಕ್ಕಮಹಾದೇವಿ. ವೈರಾಗ್ಯಮೂರ್ತಿ. ಯೋಗದಲ್ಲಿಯೂ ಸಾಧಕಿ. ಈ ನಾಲ್ಕೂ ಜನ ನಮ್ಮ ಸಮುದಾಯದ ಹಾಗೂ ದೇಶದ ಮುಕುಟಮಣಿಗಳು, ಸ್ತಂಭಗಳು. ಅದಕ್ಕೇ ಅಕ್ಕಮಹಾದೇವಿಯ ವಚನಗಳನ್ನು ಆನೆ ಅಂಬಾರಿ ಮೇಲೆ ಮೆರವಣಿಗೆ ಮಾಡಿ, ಆಮೇಲೆ ತಲೆ ಮೇಲೆ ಹೊತ್ತು ಸಾಗಿ, ಅವುಗಳ ಮಹತ್ವ ತಿಳಿಸುವೆವು.

* ಪಂಚಮಸಾಲಿಯ ಮೂವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ನಿಮ್ಮ ಒತ್ತಾಯ ಜಾತ್ರೆಯಲ್ಲೂ ಮುಂದುವರಿಯುವುದಾ?

ಖಂಡಿತ. 15 ಶಾಸಕರು ನಮ್ಮ ಸಮಾಜದವರಿದ್ದಾರೆ. ಐವರಿಗೆ ಒಂದರಂತೆ ಸಚಿವ ಸ್ಥಾನ ನೀಡಲೇಬೇಕು. ಶೇ 80ರಷ್ಟು ನಮ್ಮ ಸಮುದಾಯದವರ ಬಲದಿಂದಲೇ ಬಿಜೆಪಿ ಸರ್ಕಾರ ರಚಿತವಾಗಿದೆ. ವೀರಶೈವ ಲಿಂಗಾಯತ ಎನ್ನುತ್ತಾ ನಮ್ಮನ್ನು ತುಳಿದರು. ಸರ್ಕಾರದಲ್ಲಿ ಎಲ್ಲರೂ ನಮ್ಮನ್ನು ಬಳಸಿಕೊಂಡರು. ವೀರಶೈವ ಹೆಸರಿನಲ್ಲಿ ಆರು ಜನ ಸಚಿವರಾದರು. ನಮ್ಮ ಸಮುದಾಯಕ್ಕೆ ಒಂದೇ ಎಂದರೆ ಹೇಗೆ? ಇದು ಸಾಮಾಜಿಕ ಅಸಮಾನತೆಯಲ್ಲವೇ?

* ದೇಶ ಈಗ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿಚಾರದಲ್ಲಿ ಪ್ರಶ್ನೆಗಳನ್ನು, ಪ್ರಕ್ಷುಬ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಕುರಿತು ಜಾತ್ರೆಯಲ್ಲಿ ಸಂದೇಶವೇನಾದರೂ ಹೊಮ್ಮುವುದೇ?

ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಿದ್ದೇಶ್ವರ ಸ್ವಾಮೀಜಿ, ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ಅವರಲ್ಲದೆ ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೂಡ ಬರಲಿದ್ದಾರೆ. ನಾನೂ ಈ ವಿಷಯವಾಗಿ ಅಧ್ಯಯನ ಮಾಡುತ್ತಿರುವೆ. ಏನು ಸಂದೇಶ ಕೊಡಲಾದೀತೋ ನೋಡೋಣ.

* ಇದು ಅಧ್ಯಾತ್ಮ ಕೇಂದ್ರಿತ ಜಾತ್ರೆಯಷ್ಟೆಯೋ, ಸಮಕಾಲೀನ ವಿಚಾರಗಳಿಗೂ ವೇದಿಕೆಯಾಗುವುದೋ?

ಖಂಡಿತ ಸಮಕಾಲೀನ ವಿಚಾರಗಳ ಕುರಿತು ಸಂದೇಶ ಹೋಗುತ್ತದೆ. ಅಧ್ಯಾತ್ಮ ಒಂದು ಭಾಗ, ವಿಚಾರ ಇನ್ನೊಂದು. 1994ರಲ್ಲಿ ಪಂಚಮಸಾಲಿಯವರ ಸಂಖ್ಯೆ 80 ಲಕ್ಷ ಇತ್ತು. ಈಗ ಒಂದು ಕೋಟಿಯನ್ನು ದಾಟಿದೆ. ಎಲ್ಲರಿಗೂ ಇಲ್ಲಿನ ಸಂದೇಶ ಮುಟ್ಟುತ್ತದೆ, ತಟ್ಟುತ್ತದೆ.

* ಜಾತ್ರೆಗೆ ಎಷ್ಟು ಜನರನ್ನು ನಿರೀಕ್ಷಿಸುತ್ತಿರುವಿರಿ?

ಕನಿಷ್ಠ 2 ಲಕ್ಷ ಜನ ಬರಲಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಷ್ಟೇ ಅಲ್ಲದೆ ಹಾವೇರಿ, ರಾಣೆಬೆನ್ನೂರಿನ ಗ್ರಾಮಗಳ ಎಲ್ಲ ಸಮುದಾಯದವರನ್ನು ಭೇಟಿ ಮಾಡಿ ಆಹ್ವಾನಿಸಿದ್ದೇನೆ. 150ಕ್ಕೂ ಹೆಚ್ಚು ಗ್ರಾಮಗಳಿಗೆ ಖುದ್ದು ಹೋಗಿ ಬಂದಿದ್ದೇನೆ.

* ಇದು ಮೊದಲ ಜಾತ್ರೆ. ಪ್ರತಿ ವರ್ಷವೂ ಇದೇ ಸಂದರ್ಭದಲ್ಲಿ ಜಾತ್ರೆ ನಡೆಯುವುದೇ?

ಅದೇ ಉದ್ದೇಶವಿದೆ. ಮುಂದೆ ಅನುಕೂಲವಾದರೆ ಎರಡು ದಿನಗಳಿಗಿಂತ ಹೆಚ್ಚು ಅವಧಿ ನಡೆದರೂ ನಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT