ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಾಸ್ವಾಮಿ ಹತ್ಯೆ ಖಂಡಿಸಿ ವೀರಶೈವ ಜಂಗಮ ಸಮಾಜ ಪ್ರತಿಭಟನೆ

Published 17 ಜೂನ್ 2024, 16:03 IST
Last Updated 17 ಜೂನ್ 2024, 16:03 IST
ಅಕ್ಷರ ಗಾತ್ರ

ದಾವಣಗೆರೆ: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಕ್ರೂರವಾಗಿ ಹತ್ಯೆ ಮಾಡಿರುವ ನಟ ದರ್ಶನ್‌ ಹಾಗೂ ಸಹಚರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ವೀರಶೈವ ಜಂಗಮ ಸಮಾಜದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ದರ್ಶನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ದರ್ಶನ್‌ ಗಡಿಪಾರು ಮಾಡಿ’, ‘ರಾಜಕೀಯ ಒತ್ತಡಕ್ಕೆ ಮಣಿಯಬೇಡಿ’ ಹಾಗೂ ‘ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿ’ ಎಂದು ಘೋಷಣೆ ಕೂಗಿದರು.

‘ರೇಣುಕಾಸ್ವಾಮಿ ತಪ್ಪು ಮಾಡಿದ್ದು ಕಂಡುಬಂದಿದ್ದರೆ ಪೊಲೀಸರಿಗೆ ದೂರು ನೀಡುವ ಅವಕಾಶ ದರ್ಶನ್‌ಗೆ ಇತ್ತು. ಕಾನೂನು ಕೈಗೆತ್ತಿಕೊಂಡು ಕ್ರೂರವಾಗಿ ವರ್ತಿಸಿದ ರೀತಿಯನ್ನು ಗಮನಿಸಿದರೆ ದರ್ಶನ್‌ ಕರಾಳ ಮುಖ ಬಯಲಿಗೆ ಬಂದಿದೆ. ಅಮಾಯಕ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ಖಂಡನೀಯ. ಅತ್ಯಂತ ಪ್ರಭಾವಿಯಾಗಿರುವ ದರ್ಶನ್‌ ವಿರುದ್ಧ ಪೊಲೀಸರು ಕೈಗೊಂಡಿರುವ ಕಾನೂನು ಕ್ರಮ ಶ್ಲಾಘನೀಯ’ ಎಂದು ವೀರಶೈವ ಜಂಗಮ ಸಮಾಜದ ಮುಖಂಡ ಎನ್‌.ಎ.ಮುರುಗೇಶ್‌ ತಿಳಿಸಿದರು.

‘ದರ್ಶನ್‌ ಬಂಧನದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ. ತಪ್ಪು ಮಾಡಿದ ವ್ಯಕ್ತಿ ಕಾನೂನು ಕುಣಿಕೆಯಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ವರ್ತಿಸಿದ ರೀತಿ ಮನಕಲಕಿದೆ. ರೇಣುಕಾಸ್ವಾಮಿ ಸಾವಿಗೆ ಕೇವಲ ಅನುಕಂಪ ತೋರದೇ ಆರ್ಥಿಕ ನೆರವು ನೀಡಬೇಕು’ ಎಂದು ಹೇಳಿದರು.

ಸಾಹಿತಿ ಭಾ.ಮ.ಬಸವರಾಜಯ್ಯ, ‘ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ವಿಧಿಸಲು ನೆಲದ ಕಾನೂನು ಇದೆ. ದರ್ಶನ್‌ ಕಾನೂನು ಪ್ರಕಾರ ನಡೆದುಕೊಳ್ಳುವ ಬದಲು ಕಾನೂನನ್ನೇ ಕೈಗೆತ್ತಿಕೊಂಡಿದ್ದು ಅಕ್ಷಮ್ಯ. ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವುದು ಕ್ರೌರ್ಯದ ಪರಮಾವಧಿ. ಇಂತಹದೇ ಕ್ರೌರ್ಯದಿಂದ ನೇಹಾ ಹತ್ಯೆ ನಡೆದಿತ್ತು’ ಎಂದು ಹೇಳಿದರು.

‘ಇತ್ತಿಚಿನ ಸಿನಿಮಾಗಳಲ್ಲಿ ಕ್ರೌರ್ಯ ವಿಜೃಂಭಿಸುತ್ತಿದೆ. ಇಂತಹ ಸಿನಿಮಾಗಳು ಯುವ ಸಮೂಹವನ್ನು ಪ್ರಚೋದಿಸುತ್ತಿವೆ. ಸಮಾಜವನ್ನು ದಾರಿ ತಪ್ಪಿಸುವ ಸಿನಿಮಾ, ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸೆನ್ಸಾರ್‌ ಮಂಡಳಿ ಇಂತಹ ಸಿನಿಮಾಗಳ ಮೇಲೆ ವಿಶೇಷ ಗಮನ ಇಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇತ್ತ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ವೀರಶೈವ ಜಂಗಮ ಸಮಾಜದ ಮುಖಂಡರಾದ ಎ.ಎಂ.ಕೊಟ್ರೇಶ್‌, ದಾಕ್ಷಾಯಣಮ್ಮ, ಪುಷ್ಪಾ, ರಾಜೇಶ್ವರಿ, ಪಿ.ಜಿ.ರಾಜಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT