ಗುರುವಾರ , ಫೆಬ್ರವರಿ 25, 2021
28 °C

ದೇವರ ಕೋಣಕ್ಕಾಗಿ ಮೂರು ಗ್ರಾಮಸ್ಥರ ಜಗಳ: ಪೊಲೀಸರಿಂದ ಬಗೆಹರಿದ ವಿವಾದ

ಗಿರೀಶ್ ಎಂ. ನಾಡಿಗ್ Updated:

ಅಕ್ಷರ ಗಾತ್ರ : | |

Prajavani

ಸಾಸ್ವೆಹಳ್ಳಿ: ಗ್ರಾಮದಲ್ಲಿ ನಾಲ್ಕು ದಿನಗಳಿಂದ ಕೋಣಕ್ಕಾಗಿ ವಾದ–ಪ್ರತಿವಾದಗಳು ನಡೆದು, ಪೊಲೀಸ್ ಇಲಾಖೆಯ ಮೂಲಕ ಸೋಮವಾರ ರಾತ್ರಿ ಇತ್ಯರ್ಥಗೊಂಡ ಕುತೂಹಲಕಾರಿ ಘಟನೆ ನಡೆದಿದೆ.

‘ನಾಲ್ಕು ವರ್ಷಗಳ ಹಿಂದೆ ಮರಿಕೋಣವು ಸಾಸ್ವೆಹಳ್ಳಿ ಗ್ರಾಮಕ್ಕೆ ಎಲ್ಲಿಂದಲೋ ಬಂದಿತ್ತು. ಇಲ್ಲಿ ಓಡಾಡಿಕೊಂಡಿದ್ದ ಕೋಣವು ನಮ್ಮ ಎಮ್ಮೆಗಳ ಜೊತೆಯಲ್ಲಿಯೇ ಸುತ್ತಾಡಿಕೊಂಡಿತ್ತು. ಮನೆ ಮಗನಂತೆ ಆಗಿಬಿಟ್ಟಿತ್ತು. ಈಗ ತಮ್ಮೂರಿನ ದೇವರ ಕೋಣ ಎಂದು ಮೂರ್ನಾಲ್ಕು ಹಳ್ಳಿಯವರು ಕೇಳುತ್ತಿದ್ದಾರೆ. ಆಂಜನೇಯನು ಈ ಸಮಸ್ಯೆಯನ್ನು ಯಾವುದೇ ರೀತಿಯಲ್ಲಿ ಜಗಳವಾಗದಂತೆ ಇತ್ಯರ್ಥಗೊಳಿಸಲಿ’ ಎಂದು ಸಾಸ್ವೆಹಳ್ಳಿಯ ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗೇಂದ್ರಪ್ಪ ಹೇಳಿದರು.

ಭದ್ರಾವತಿ ತಾಲ್ಲೂಕಿನ ಜಂಬರಗಟ್ಟೆ ಗ್ರಾಮದಿಂದ 70 ಜನ ಬಂದು, ‘ಹದಿನೈದು ದಿನಗಳಿಂದ ಕೋಣವನ್ನು ಹುಡುಕುತ್ತಿದ್ದೆವು. ಗ್ರಾಮ ದೇವತೆ ದುರ್ಗಾದೇವಿಯು ಉತ್ತರ ಭಾಗದಲ್ಲಿ ನಮ್ಮ ದೇವರ ಕೋಣ ಸಿಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ನಾವು ಹುಡುಕುತ್ತ ಬಂದೆವು. ಈ ಗ್ರಾಮದಲ್ಲಿ ನಮ್ಮ ಕೋಣ ಸಿಕ್ಕಿದೆ’ ಎಂದರು.

ಕೋಣವನ್ನು ಒಯ್ಯಲು ಭಾನುವಾರ ಬಂದಾಗ ನ್ಯಾಮತಿ ತಾಲ್ಲೂಕಿನ ಮಡಿಕೆ ಚೀಲೂರಿನವರು ತಮ್ಮ ಕೋಣ ಎಂದು ತಕರಾರು ತೆಗೆದರು. ಕೋಟೆ ಆಂಜನೇಯ ದೇವಸ್ಥಾನ ಸಮಿತಿಯವರು ಗ್ರಾಮದಲ್ಲಿ ಹನುಮಂತ ದೇವರ ಅಪ್ಪಣೆ ಕೇಳಿ ಯಾರಿಗೆ ವರ ನೀಡುತ್ತದೆಯೋ ಅವರು ಕೋಣ ತೆಗೆದುಕೊಂಡು ಹೋಗಬಹುದು ಎಂದರು. ಮಧ್ಯರಾತ್ರಿಯವರೆಗೂ ಯಾರಿಗೂ ದೇವರು ಅಪ್ಪಣೆ ನೀಡಲಿಲ್ಲ. ಕೊನೆಗೆ ‘ನಿಮ್ಮೂರಿನ ದೇವರ ಅಪ್ಪಣೆ ಪಡೆದು ಕೋಣವನ್ನು ಒಯ್ಯಿರಿ’ ಎಂದು ಸೂಚಿಸಿದರು. ಸೋಮವಾರ ಬೆಳಗ್ಗೆ ಮಡಿಕೆ ಚೀಲೂರಿನವರಿಗೆ ದೇವರು ಅಪ್ಪಣೆ ನೀಡದ ಕಾರಣ ಅವರು ಜಂಬರಗಟ್ಟೆ ಗ್ರಾಮದವರಿಗೆ ಒಯ್ಯುವಂತೆ ಸೂಚಿಸಿದರು. ಜಂಬರಗಟ್ಟೆ ಗ್ರಾಮದ ದೇವತೆ ಅಪ್ಪಣೆ ನೀಡಿದ ಕಾರಣ ಕೋಣವನ್ನು ಒಯ್ಯಲು ಗ್ರಾಮದ ಮುಖಂಡ ರಾಮಪ್ಪ ನೇತೃತ್ವದಲ್ಲಿ ವಾಹನದಲ್ಲಿ ಒಯ್ಯಲು ಸಿದ್ಧತೆ ಮಾಡಿಕೊಂಡಿದ್ದರು. ಹನುಮಪ್ಪ ದೇವರಿಗೆ ಹಾಗೂ ದೇವರ ಕೋಣನಿಗೆ ಪೂಜೆ ಸಲ್ಲಿಸಿ ಸಿದ್ಧರಾದರು.

ಅದೇ ಸಮಯಕ್ಕೆ ಮರಿಗೊಂಡನಹಳ್ಳಿಯ ಮುಖ್ಯಸ್ಥರಾದ ಶೇಖರಪ್ಪ, ಸ್ವಾಮಿ ಪೊಲೀಸರೊಂದಿಗೆ ಬಂದು, ‘ಇದು ನಮ್ಮೂರಿನ ಕೋಣ’ ಎಂದು ತಕರಾರು ತೆಗೆದರು. ಎಎಸ್‍ಐ ಟಿ. ಪರಶುರಾಮಪ್ಪ ಎರಡೂ ಗ್ರಾಮದವರಿಂದ ಸಾಕ್ಷಿ, ಪುರಾವೆ ಕೇಳಿ ಚರ್ಚಿಸಿದರು. ಸಮಸ್ಯೆ ಬಿಗಡಾಯಿಸಿದ್ದಾರಿಂದ ಕೋಣವನ್ನು ಪೊಲೀಸ್ ಠಾಣೆಗೆ ವಾಹನ ಸಮೇತ ಒಯ್ಯಲಾಯಿತು.

ಸೋಮವಾರ ರಾತ್ರಿ ಹೊನ್ನಾಳಿ ಎಸ್‍ಐ ಬಸವನಗೌಡ ಬಿರಾದಾರ್ ಬಂದು, ಎರಡೂ ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ, ಕೋಣಕ್ಕಾಗಿ ಗ್ರಾಮಗಳ ನಡುವೆ ವೈಷಮ್ಯ ಮೂಡಿಸುವುದು ಬೇಡ ಎಂದು ಸಂಧಾನ ಸೂತ್ರ ಅನುಸರಿಸಿದರು. ಮರಿಗೊಂಡನಹಳ್ಳಿ ಗ್ರಾಮದವರ ಮನವೊಲಿಸಿ ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯಲು ಅನುಮತಿ ನೀಡಿದರು.

‘ಇಂತಹ ಕ್ಲಿಷ್ಟಕರ ಸಮಸ್ಯೆಗಳು ನಿತ್ಯ ನಡೆಯುತ್ತಿರುತ್ತವೆ. ಕಳೆದ ವರ್ಷ ಬೇಲಿಮಲ್ಲೂರು ಗ್ರಾಮದ ಕೋಣದ ಗಲಾಟೆಯು ವಿಕೋಪಕ್ಕೆ ಹೋಗಿರುವುದನ್ನು ಸ್ಮರಿಸಬಹುದು. ಆದ್ದರಿಂದ ಪ್ರತಿ ಗ್ರಾಮದವರು ತಮ್ಮ ಊರಿನ ಕೋಣಗಳಿಗೆ ಗುರುತಿನ ಬಳೆ ಹಾಕುವುದು, ವರ್ಷಕ್ಕೊಮ್ಮೆ ಕೋಣ ಎಲ್ಲಿದೆ ಎಂದು ತಿಳಿದು ಇಟ್ಟುಕೊಳ್ಳುವುದು ಒಳ್ಳೆಯದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು’ ಎಂದು ಎಸ್‍ಐ ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು