ಬುಧವಾರ, ಸೆಪ್ಟೆಂಬರ್ 22, 2021
29 °C
ಮಸೀದಿಗೆ ಹೋಗುವಂತಿಲ್ಲ; ಮನೆಯಲ್ಲೇ ನಮಾಜ್‌, ಕುರಾನ್‌ ಪಠಣ

ಲಾಕ್‌ಡೌನ್‌ ನಡುವೆ ರಂಜಾನ್‌ ಉಪವಾಸ ಆರಂಭ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಾಕ್‌ಡೌನ್‌ ನಡುವೆಯೇ ಮುಸ್ಲಿಮರು ಪವಿತ್ರ ರಂಜಾನ್‌ ತಿಂಗಳ ಉಪವಾಸವನ್ನು ಶನಿವಾರ ಆರಂಭಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಅವಕಾಶ ನೀಡಿಲ್ಲ. ಹೀಗಾಗಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವ ಅನಿವಾರ್ಯತೆ ನಡುವೆಯೇ ರೋಜಾ ನಡೆಯುತ್ತಿದೆ.

‘ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ಆದರೆ, ಕಷ್ಟ ಕಾಲದಲ್ಲಿ ಮಸೀದಿಗೆ ಹೋಗದೇ ಮನೆಯಲ್ಲಿಯೂ ಪ್ರಾರ್ಥನೆ ಮಾಡಲು ಅವಕಾಶ ಇದೆ. ಖಲೀಫ್‌ ಉಮ್ಮರ್‌ ಕಾಲದಲ್ಲಿ ಒಮ್ಮೆ ಒಂದು ಶುಕ್ರವಾರ ಮೆಕ್ಕಾದಲ್ಲಿ ಜೋರಾಗಿ ಮಳೆ ಬಂತು. ‘ಯಾರೂ ಮನೆಯಿಂದ ಹೊರಗೆ ಬರಬೇಡಿ. ಮನೆಯ ಒಳಗೇ ಇದ್ದು ಪ್ರಾರ್ಥನೆ ಮಾಡಿ’ ಎಂದು ಪೈಗಂಬರರ ಅನುಯಾಯಿ ಅಬ್ಬಾಸ್‌ ಅವರು ದೊಡ್ಡ ಧ್ವನಿಯಲ್ಲಿ ಹೇಳಿದ್ದರು’ ಎಂದು ಮೆಹಬೂಬ್‌ ನಗರದ ದಾರೂಲ್‌ ಉಲೂಮ ಅಲ್ಪಾಯ್‌ ಮರ್ಕಝ್‌ ತೊಯ್ಬಾ ಮಸೀದಿಯ ಧರ್ಮಗುರು ಹೈದರ್‌ ಮೊಯಿನಿ ನಾವೂರು ವಿವರಿಸಿದರು.

‘ಈಜಿಫ್ಟ್‌ಗೆ ಯಾತ್ರೆಗೆ ಖಲೀಫ್‌ ಉಮ್ಮರ್‌ ತನ್ನ ಸಹಚರರ ಜತೆಗೆ ಹೋಗುವಾಗ ಮುಂದಿನ ಊರಲ್ಲಿ ಸಾಂಕ್ರಮಿಕ ರೋಗ ಇರುವುದು ಗೊತ್ತಾಗುತ್ತದೆ. ಸಾಂಕ್ರಮಿಕ ರೋಗ ಇರುವ ಊರಿಂದ ಜನ ಹೊರಗೆ ಹೋಗಬಾರದು. ಆ ಊರಿಗೆ ಜನ ಬರಬಾರದು ಎಂದು ಖಲೀಫರು ಹೇಳಿದ್ದರು. ಲಾಕ್‌ಡೌನ್‌ ಕಾಲದಲ್ಲಿ ನಾವೂ ಹಾಗೇ ಮಾಡಬೇಕು’ ಎನ್ನುತ್ತಾರೆ ಅವರು.

ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡೇ ನಮ್ಮ ಇಬಾದತ್‌ಗಳನ್ನು (ಆಚರಣೆಗಳನ್ನು) ಮಾಡಬೇಕು. ಲಾಕ್‌ಡೌನ್‌ ಸಮಯದಲ್ಲಿಯೇ ರಂಜಾನ್‌ ಬಂದಿದೆ. ಕೆಲಸವಿಲ್ಲದೇ ಹಣದ ಕೊರತೆಯಾಗಬಹುದು. ಆಹಾರ ಕಡಿಮೆಯಾಗಬಹುದು. ಆದರೆ, ಆರಾಧನೆಗೆ ಯಾವುದೇ ತೊಂದರೆ ಇಲ್ಲ. ಕುರಾನ್‌ ಓದಲು ಹೆಚ್ಚು ಅವಕಾಶ ಸಿಗುತ್ತದೆ. ಈಗ ಅಲ್ಲಾಹ್‌ ಕಷ್ಟ ಕಾಲ ಕೊಟ್ಟಿರಬಹುದು. ಮುಂದೆ ಒಳ್ಳೆಯ ದಾರಿ ತೋರಬಹುದು. ಹಾಗಾಗಿ ವಿಶ್ವಾಸ ಇಟ್ಟು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

‘ಬೆಳಿಗ್ಗೆ 4 ಗಂಟೆಯ ಹೊತ್ತಿಗೆ ಏಳಬೇಕು. 5 ಗಂಟೆಯ ಒಳಗೆ ಆಹಾರ ಸೇವನೆ ಮುಗಿಸಬೇಕು. 5 ಗಂಟೆಯ ನಮಾಜ್‌ ಮನೆಯಲ್ಲೇ ಮುಗಿಸಿ ಕುರಾನ್‌ ಪಠಣ ಮಾಡಬೇಕು. ಹೀಗೆ ದಿನದ ಐದು ನಮಾಜ್ ಆದ ಮೇಲೆ ಕುರಾನ್‌ ಪಠಣ ಮಾಡಬೇಕು. ಸಂಜೆ ಇಫ್ತಾರ್‌ ಕೂಡ ಅವರವರ ಮನೆಯಲ್ಲೇ ಮಾಡಬೇಕು. ಹಿಂದೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಸಾಮೂಹಿಕವಾಗಿ ಇಫ್ತಾರ್‌ ಮಾಡಲಾಗುತ್ತಿತ್ತು. ಈಗ ಖರ್ಜೂರ, ಹಣ್ಣು ಎಲ್ಲ ಅವರವರ ಮನೆಗೇ ನೀಡಲಾಗುವುದು’ ಎಂದು ರಜಾವುಲ್ಲಾ ಮುಸ್ತಾಫ ಅನಾಥಾಶ್ರಮದ ಧರ್ಮಗುರು ಮೌಲನಾ ಅಬ್ದುಲ್‌ ಮುನಾಫ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪವಿತ್ರ ತಿಂಗಳು
ಗ್ರೆಗೊರಿ ಕ್ಯಾಲಂಡರ್‌ ಮತ್ತು ಹಿಜರಿ ಕ್ಯಾಲೆಂಡರ್‌ಗಳಿವೆ. ಮುಸ್ಲಿಮರು ಹಿಜರಿ ಕ್ಯಾಲೆಂಡರ್‌ ಅನುಸರಿಸುತ್ತಾರೆ. ಮಹಮ್ಮದ್‌ ಪೈಗಂಬರ್‌ ಮೆಕ್ಕಾದಿಂದ ಮದೀನಾಕ್ಕೆ ಹೋದಲ್ಲಿಂದ ಈ ಕ್ಯಾಲೆಂಡರ್‌ ಆರಂಭವಾಯಿತು. 12 ತಿಂಗಳುಗಳಲ್ಲಿ ರಂಜಾನ್‌ ತಿಂಗಳಿಗೆ ಹೆಚ್ಚು ಮಹತ್ವ ಇದೆ. ಈ ತಿಂಗಳಲ್ಲಿ ಪವಿತ್ರ ಗ್ರಂಥ ಕುರಾನ್‌ ಅವತೀರ್ಣಗೊಂಡಿರುವುದು ಅದಕ್ಕೆ ಕಾರಣ. ಈ ತಿಂಗಳಲ್ಲಿ ಉಪವಾಸ ಇದ್ದು, ಇನ್ನೊಬ್ಬರ ಕಷ್ಟವನ್ನು ಅರ್ಥ ಮಾಡಿಕೊಳ್ಳಲಾಗುತ್ತದೆ. ಕುರಾನ್‌ ಪಠಣ, ಪ್ರಾರ್ಥನೆಗಳು ನಡೆಯುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು