ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯ ಸಾಂಸ್ಕೃತಿಕ ಚೇತನ ಎಂ.ಜಿ ಈಶ್ವರಪ್ಪ

ನಾಗರಾಜ ಸಿರಿಗೆರೆ
Published 2 ಜೂನ್ 2024, 6:14 IST
Last Updated 2 ಜೂನ್ 2024, 6:14 IST
ಅಕ್ಷರ ಗಾತ್ರ

ದಾವಣಗೆರೆ: ಎಂ.ಜಿ. ಈಶ್ವರಪ್ಪ ಅವರು ಮಧ್ಯ ಕರ್ನಾಟಕ ಭಾಗದಲ್ಲಿ ‘ಮೇಷ್ಟ್ರು’ ಎಂದೇ ಹೆಸರು ಪಡೆದಿದ್ದರು. ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಅವರ ನಿಧನದಿಂದ ದಾವಣಗೆರೆಯ ಸಾಂಸ್ಕೃತಿಕ ಚೇತನವೊಂದು ಅಸ್ತಂಗತವಾದಂತೆ ಆಗಿದೆ.

ರಂಗಭೂಮಿ, ಜಾನಪದ, ಸಾಹಿತ್ಯ ಮತ್ತು ಬೋಧನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಈಶ್ವರಪ್ಪ ಯಾವುದೇ ಸಭೆ, ಸಮಾರಂಭ, ಉಪನ್ಯಾಸವಿರಲಿ ಅಲ್ಲಿ ಸ್ಫುಟವಾಗಿ, ಅಚ್ಚುಕಟ್ಟಾಗಿ, ನಿರರ್ಗಳವಾಗಿ ವಿಷಯ ಮಂಡನೆ ಮಾಡುತ್ತಿದ್ದರು.  ಅವರ ಕನ್ನಡ ಭಾಷಾ ತರಗತಿಗಳು ವಿದ್ಯಾರ್ಥಿಗಳ ಮನಸ್ಸನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು.

ವಿದ್ವತ್ತಿನೊಂದಿಗೆ ವಿನಯ, ಅಧ್ಯಾಪನದೊಂದಿಗೆ ಅಧ್ಯಯನ, ಆಡಳಿತದೊಂದಿಗೆ ಸಾಂಸ್ಕೃತಿಕ ಚಿಂತನೆಗಳ ಮೊತ್ತದಂತಿದ್ದ  ಅವರು ದಾವಣಗೆರೆಯ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಪ್ರಧಾನ ಹೆಸರು. ಡಿಆರ್‌ಎಂ ಕಾಲೇಜಿನ ಅಧ್ಯಾಪಕರಾಗಿ, ಮಾಗನೂರು ಬಸಪ್ಪ ಕಾಲೇಜಿನ ಪ್ರಾಚಾರ್ಯರಾಗಿ, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಬಾಪೂಜಿ ಬ್ಯಾಂಕ್ ನಿರ್ದೇಶಕರಾಗಿ, ವಿವಿಧ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಗುಣಮಟ್ಟದ ಕಾರ್ಯ ಯೋಜನೆಗಳನ್ನು ರೂಪಿಸುವಲ್ಲಿ ಸಿದ್ಧಹಸ್ತರಾಗಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿಗಳಲ್ಲೊಬ್ಬರಾಗಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಪ್ರತಿಮಾ ಸಭಾದಂತಹ ಪ್ರಾತಿನಿಧಿಕ ಸಂಸ್ಥೆಯ ಕ್ರಿಯಾಶೀಲ ಕಾರ್ಯಕರ್ತರಾಗಿ ಸರಿಸುಮಾರು ಅರ್ಧ ಶತಮಾನದಷ್ಟು ಕಾಲ ದಾವಣಗೆರೆ ನಗರದಲ್ಲಿ ಸಾಂಸ್ಕೃತಿಕ ಜೀವಂತಿಕೆಗೆ ಕಾರಣರಾದವರು.

ವಿದ್ಯಾರ್ಥಿ ದೆಸೆಯಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಈಶ್ವರಪ್ಪ, ನಟನೆ ಮತ್ತು ನಿರ್ದೆಶನದಲ್ಲೂ ಸೈ ಎನಿಸಿಕೊಂಡವರು. ಅದಕ್ಕೆ ಇಂಬು ಕೊಟ್ಟದ್ದು ಕೇರಳದ ತ್ರಿಶೂರಿನ ಸ್ಕೂಲ್ ಆಫ್ ಡ್ರಾಮಾ ಮತ್ತು ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಭೂಪಾಲ್ ಮತ್ತು ದೆಹಲಿಯಲ್ಲಿ ರಂಗಭೂಮಿಯ ತಲಸ್ಪರ್ಶಿ ಅಧ್ಯಯನ. ಅದರ ಪ್ರತಿಫಲವಾಗಿ ‘ಮೆರವಣಿಗೆ’, ‘ಸೆಜುವಾನಿನ ಸಾಧ್ವಿ’, ‘ಕೊಡೆಗಳು’, ‘ಈಡಿಪಸ್’, ‘ಸಂಕ್ರಾಂತಿ’, ‘ಸಂತೆಯಲ್ಲಿ ನಿಂತ ಕಬೀರ’ ಮುಂತಾದ ನಾಟಕಗಳಲ್ಲಿ ಅಭಿನಯ. ‘ಜಾತ್ರೆ’, ‘ಸಾಯೋ ಆಟ’, ‘ಅಪ್ಪ’, ‘ಕಡೇಮನೆ ಕಡೇಗಲ್ಲಿ’, ‘ಹಳ್ಳಿಚಿತ್ರ’, ‘ಹಳ್ಳಿಮೇಷ್ಟ್ರು’, ‘ಮಾರೀಚನ ಬಂಧುಗಳು’, ‘ಇಲಿ ಬೋನು’, ‘ನಾಗನ ಕತೆ’ ಮುಂತಾದ ನಾಟಕಗಳನ್ನೂ ನಿರ್ದೇಶಿಸಿದ್ದರು. ದಾವಣಗೆರೆಯ ಹೆಸರಾಂತ ರಂಗ ತಂಡ ‘ಪ್ರತಿಮಾ ಸಭಾ’ದ ಉಸ್ತುವಾರಿ. ಆ ಮೂಲಕ ದಾವಣಗೆರೆ ನಗರದಲ್ಲಿ ಹವ್ಯಾಸಿ ರಂಗಭೂಮಿಯ ಜೀವಂತಿಕೆ. ಜೊತೆಗೆ ಸಿದ್ಧಪ್ರಸಿದ್ಧರ ಸಂಗೀತ ಕಚೇರಿಗಳ ಆಯೋಜನೆಯ ರೂವಾರಿ. ‌

ಕೃಷಿ ಹಿನ್ನೆಲೆಯ ಕಟುಂಬದಿಂದ ಬಂದ ಈಶ್ವರಪ್ಪನವರಿಗೆ ಕೃಷಿ ಮತ್ತು ಜಾನಪದದಲ್ಲಿ ವಿಶೇಷ ಆಸಕ್ತಿ. ಹೊಳೆ ದಂಡೆಯ, ಮಲೆನಾಡಿನ ಸೆರಗಿನ ಹಾಡೋನಹಳ್ಳಿ ಈಶ್ವರಪ್ಪನವರ ಜನ್ಮಸ್ಥಳ. ಅಲ್ಲಿ ಸಮೃದ್ಧ ಗ್ರಾಮಿಣ ಬದುಕಿನ ಸವಿಯನ್ನು ಸವಿದವರು. ಜನಪದ ಸಂಸ್ಕೃತಿ ಕೇವಲ ಓದಿನ ಕಾರಣಕ್ಕೆ ಮಾತ್ರವಲ್ಲ, ಅನುಭವದ ಮೂಸೆಯಿಂದ ಬಂದಂಥದ್ದು. ಹಾಗಾಗಿ `ಜಾನಪದ ವ್ಯವಸಾಯ’ ಎಂಬ ಮಹಾಪ್ರಬಂಧ ಕೇವಲ ಪದವಿಗಾಗಿ ರಚಿಸಿದ್ದಾಗದೆ, ಒಂದು ಕಾಲಘಟ್ಟದ ಕೃಷಿಕರ ಜೀವನ ವಿಧಾನ, ಕೃಷಿಯಲ್ಲಿ ನಂಬಿಕೆಗಳು, ಆಚರಣೆಗಳನ್ನು ಕುರಿತು ವಿವರವಾಗಿ ತಿಳಿಹೇಳುವ ಸಂಕಥನ ಎಂದರೆ ತಪ್ಪಾಗಲಾರದು.

ಜಾನಪದ, ರಂಗಭೂಮಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಅನುಭವ, ಪಾಂಡಿತ್ಯದಿಂದಾಗಿ ಹತ್ತಾರು ಮಹತ್ವದ ಸಾಹಿತ್ಯ ಕೃತಿಗಳ ಪ್ರಕಟಣೆ. ಜೊತೆಗೆ ಇವರ ಸಂಪಾದಕತ್ವದಲ್ಲಿ ಹಲವು ಮಹತ್ವದ ಕೃತಿಗಳ ಬೆಳಕುಕಂಡಿವೆ. ಡಾ.ಪಂಡಿತ್‌ ಪುಟ್ಟರಾಜ ಸೇವಾ ಸಮಿತಿಯ ರಾಜ್ಯಮಟ್ಟದ 5ನೇ ಭಕ್ತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ. ಶಿವಮೊಗ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನ ಮತ್ತು 2013ರಲ್ಲಿ ಹರಿಹರದಲ್ಲಿ ನಡೆದಿದ್ದ 6ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಅನುಭವಿ.

ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಲಿಂಗಾಯತ- ವೀರಶೈವ ಮಹಾ ಅಧಿವೇಶನದ ಸ್ಮರಣ ಸಂಚಿಕೆಯ  ಸಂಪಾದಕರಾಗಿ ಸಂಗ್ರಹಯೋಗ್ಯ ಸಂಚಿಕೆಯನ್ನು ಹೊರತಂದಿದ್ದರು. 1991ರಲ್ಲಿ ದಾವಣಗೆರೆ ನಗರದಲ್ಲಿ ನಡೆದ ಅಖಿಲ ಭಾರತ 61ನೆಯ ಸಾಹಿತ್ಯ ಸಮ್ಮೇಳನದ ‘ದವನ ಸಿರಿ’ ಸ್ಮರಣ ಸಂಚಿಕೆ, ಶಾಮನೂರು ಶಿವಶಂಕರಪ್ಪನವರ ‘ಅಮೃತ ಪುರುಷ’ ಅಭಿನಂದನಾ ಗ್ರಂಥ, ಬಾಪೂಜಿ ವಿದ್ಯಾಸಂಸ್ಥೆ ಮತ್ತು ಡಿಆರ್‌ಎಂ ಕಾಲೇಜಿನ ಸುವರ್ಣ ಮಹೋತ್ಸವಗಳ ಸ್ಮರಣ ಸಂಚಿಕೆ ಮುಂತಾದ ಹತ್ತಾರು ಮಹತ್ವದ ಸಂಚಿಕೆಗಳನ್ನು ಪ್ರಕಟಿಸಿದ್ದರು. ‘ಜಾನಪದ ವ್ಯವಸಾಯ’, ‘ಮ್ಯಾಸಬೇಡರ ಸಂಸ್ಕೃತಿ’, ‘ಜನಪದ ಇಬ್ಬನಿ’, ‘ಸಾಹಿತ್ಯ ಸಂಚಯ’, ‘ನಟ ಬಾಬಣ್ಣ’ ಮುಂತಾದ ಕೃತಿಗಳು ಇವರ ಲೇಖನಿಯಿಂದ ಮೂಡಿದ್ದವು.

ಪತ್ನಿ ಕನ್ನಡ ಅಧ್ಯಾಪಕಿ ಬಸಮ್ಮ, ಪುತ್ರಿ ಪತ್ರಲೇಖ, ಪುತ್ರ ಪೃಥುವೈನ್ಯ ಇದ್ದಾರೆ.

ಶ್ರದ್ಧಾಂಜಲಿ ಸಭೆ ಇಂದು

ಎಂ.ಜಿ. ಈಶ್ವರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಜೂನ್ 2ರಂದು ಸಂಜೆ 5ಕ್ಕೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಪರಿಷತ್ತು ವತಿಯಿಂದ  ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ  ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.

ಹಲವರ ಸಂತಾಪ ಎಂ.ಜಿ.ಈಶ್ವರಪ್ಪ ಅವರ ನಿಧನಕ್ಕೆ ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಡಾ. ಪ್ರಭಾ ಮಲ್ಲಿಕಾರ್ಜುನ್ ಅಥಣಿ ವೀರಣ್ಣ ಎಚ್.ಬಿ.ಮಂಜಪ್ಪ ಕನ್ನಡ ಸಾಹಿತ್ಯ ಪರಿಷತತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ದಿನೇಶ್ ಕೆ. ಶೆಟ್ಟಿ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ರಂಗ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ  ಪತ್ರಕರ್ತ ಬಾ.ಮ. ಬಸವರಾಜಯ್ಯ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT