ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಒಕ್ಕಲೇಳುವ ಆತಂಕದಲ್ಲೇ ದಿನದೂಡುವ ರೈತರು

ಬಗರ್‌ಹುಕುಂ ಹಕ್ಕುಪತ್ರ ನೀಡಲು ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ
Last Updated 28 ಸೆಪ್ಟೆಂಬರ್ 2021, 2:42 IST
ಅಕ್ಷರ ಗಾತ್ರ

ದಾವಣಗೆರೆ: ಜೀವನೋಪಾಯಕ್ಕಾಗಿ ದಶಕಗಳಿಂದ ಸರ್ಕಾರಿ ಮತ್ತು ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಜಿಲ್ಲೆಯ ಸಾವಿರಾರು ರೈತರಿಗೆ ಇದುವರೆಗೂ ಹಕ್ಕುಪತ್ರ ಸಿಗದ ಕಾರಣ ನಿತ್ಯವೂ ಒಕ್ಕಲೇಳುವ ಆತಂಕದಲ್ಲಿಯೇ ದಿನ ನೂಕುವಂತಾಗಿದೆ.

ಸರ್ಕಾರಕ್ಕೆ ಸೇರಿದ ಗೋಮಾಳ, ಸೇಂದಿವನ, ಹುಲ್ಲುಬನಿ, ಖರಾಬು, ದರಕಾಸ್ತ ಹಾಗೂ ಇತರೆ ಜಮೀನಿನಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ಅಂತಹ ಜಮೀನುಗಳನ್ನು ಸಕ್ರಮ ಮಾಡಲು ಕಾನೂನಿಗೆ ತಿದ್ದುಪಡಿ ತಂದು 1991ರಲ್ಲಿ ನಮೂನೆ 50, 1998ರಲ್ಲಿ ನಮೂನೆ 53 ಮತ್ತು 2015ರಲ್ಲಿ ನಮೂನೆ 57ರ ಅಡಿ ಅರ್ಜಿ ಸಲ್ಲಿಸಲು ರೈತರಿಗೆ ಅವಕಾಶ ನೀಡಲಾಗಿತ್ತು. ದಾವಣಗೆರೆ ತಾಲ್ಲೂಕಿನಲ್ಲಿ ನಮೂನೆ 50 ಮತ್ತು 53ರ ಅಡಿ 7,521 ರೈತರು ಅರ್ಜಿ ಸಲ್ಲಿಸಿದ್ದು, 5,215 ಅರ್ಜಿಗಳು ತಿರಸ್ಕೃತಗೊಂಡಿವೆ. 2,433 ಜನರಿಗೆ ಮಾತ್ರವೇ ಹಕ್ಕುಪತ್ರ ನೀಡಲಾಗಿದೆ. ನಮೂನೆ 57ರ ಅಡಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಇದುವರೆಗೂ ಕೈಗೆತ್ತಿಕೊಂಡಿಲ್ಲ.

‘ಅರಣ್ಯ ಹಕ್ಕು ಕಾಯ್ದೆ–2006ರ ಅಡಿ ಜಿಲ್ಲೆಯಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ 11,034 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 2,987 ಅರ್ಜಿಗಳು ಪರಿಶಿಷ್ಟ ಪಂಗಡದವರು ಸಲ್ಲಿಸಿದ್ದು, 527 ಜನರಿಗೆ ಈಗಾಗಲೇ ಹಕ್ಕುಪತ್ರಗಳನ್ನು ನೀಡಲಾಗಿದೆ. ಇತರೆ 8,047 ಮಂದಿ ಮೂರು ತಲೆಮಾರಿನ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದ ಕಾರಣ ಹಕ್ಕುಪತ್ರ ಮಂಜೂರಾಗಿಲ್ಲ’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

ದಾವಣಗೆರೆ ದಕ್ಷಿಣಕ್ಕೆ ರಚನೆಯಾಗದ ಸಮಿತಿ: ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಬಗರ್‌ಹುಕುಂ ಭೂಮಿ ಸಕ್ರಮೀಕರಣ ಸಮಿತಿ ರಚಿಸಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ತಹಶೀಲ್ದಾರ್ ಅವರೇ ಸದಸ್ಯ ಕಾರ್ಯದರ್ಶಿ ಹಾಗೂ ಇತರೆ ಮೂವರು ಸದಸ್ಯರು ಇರುತ್ತಾರೆ. ಆದರೆ, ಜಿಲ್ಲೆಯ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮಿತಿ ಇನ್ನೂ ರಚನೆಯಾಗಿಲ್ಲ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ನಡೆಯದ ಸಭೆ: ಜಿಲ್ಲೆಯಲ್ಲಿ ಚನ್ನಗಿರಿ ತಾಲ್ಲೂಕು ಹೊರತುಪಡಿಸಿ ಇತರೆಡೆ ಸಮಿತಿ ಸಭೆಗಳು ನಿಯಮಿತವಾಗಿ ನಡೆಯದ ಕಾರಣ ಅರ್ಜಿಗಳ ವಿಲೇವಾರಿ ನಡೆಸಿ, ಹಕ್ಕುಪತ್ರ ನೀಡುವ ಕೆಲಸಕ್ಕೆ ಹಿನ್ನಡೆಯಾಗಿದೆ. ಪರಿಣಾಮವಾಗಿ ವಿವಿಧ ಸರ್ಕಾರಿ ಸೌಲಭ್ಯಗಳಿಂದ ಬಗರ್‌ಹುಕುಂ ರೈತರು ನಿರಂತರವಾಗಿ ವಂಚಿತರಾಗುತ್ತಿದ್ದಾರೆ.

‘ಕಾಡಜ್ಜಿ ಗ್ರಾಮದ 15 ಎಕರೆಯಲ್ಲಿ 40ಕ್ಕೂ ಹೆಚ್ಚು ಜನರು ಸಾಗುವಳಿ ಮಾಡುತ್ತಿದ್ದು, ಯಾರಿಗೂ ಹಕ್ಕುಪತ್ರ ಸಿಕ್ಕಿಲ್ಲ. ಇದರಲ್ಲಿ 7 ಎಕರೆ ಭೂಮಿಯನ್ನು ಅಲ್ಪಸಂಖ್ಯಾತರ ಮಹಿಳಾ ಮೊರಾರ್ಜಿ ವಸತಿಶಾಲೆಗೆ ನೀಡಿರುವುದು ಪಹಣಿಯಲ್ಲಿ ನೋಂದಣಿಯಾಗಿದೆ. ಭೂ ಸ್ವಾಧೀನಕ್ಕೆ ಬಂದಾಗ ಭೂಮಿಯನ್ನು ಬಿಟ್ಟುಕೊಡದೆ ತೀವ್ರ ಹೋರಾಟ ನಡೆಸಿದೆವು. ಆದರೆ, ಯಾವಾಗ ಬಲವಂತವಾಗಿ ಓಡಿಸುತ್ತಾರೋ ಎಂಬ ಆತಂಕವಿದೆ. ಕಾನೂನು ತೊಡಕನ್ನು ನಿವಾರಿಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ರೈತ ಪ್ರಕಾಶ್‌ ಆಗ್ರಹಿಸಿದ್ದಾರೆ.

‘ಗ್ರಾಮದ ಗೋಮಾಳದ 6 ಎಕರೆಯಲ್ಲಿ 3 ಎಕರೆ ಭೂಮಿಯನ್ನು 40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇನೆ. ತೆಂಗಿನ ಮರಗಳು, ಹಣ್ಣಿನ ಮರಗಳನ್ನು ಬೆಳೆಸಿದ್ದೇನೆ. ಇದು ಸ್ಮಶಾನಕ್ಕೆ ಸೇರಿದ ಜಾಗ ಎಂದು ಹೇಳುತ್ತಿದ್ದಾರೆ. ಸ್ಮಶಾನದ ಜಾಗವನ್ನು ನಾನು ಮುಟ್ಟಿಲ್ಲ. ಹಕ್ಕುಪತ್ರಕ್ಕಾಗಿ ತಾಲ್ಲೂಕು ಕಚೇರಿ, ಕೋರ್ಟ್‌ಗೆ ಅಲೆದು ಅಲೆದು ಸಾಕಾಗಿದೆ’ ಎಂದು ಕೊಗ್ಗನೂರಿನ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

‘ಆಲೂರು, ಗಿರಿಯಾಪುರ, ಗುಡಾಳು, ಗುಮ್ಮನೂರು, ಮಂಡಲೂರು, ನೀರ್ತಡಿ, ಬಾವಿಹಾಳು, ನರಗನಹಳ್ಳಿ, ಎದ್ನಿ, ರಾಂಪುರ, ಹುಚ್ಚವ್ವನಹಳ್ಳಿ ಗ್ರಾಮಗಳಲ್ಲಿ ನೂರಾರು ಜನರು ಸಾಗುವಳಿ ಮಾಡುತ್ತಿದ್ದಾರೆ. ಈ ಸರ್ವೆ ನಂಬರ್‌ಗಳ ಪಹಣಿಯಲ್ಲಿ ಅರಣ್ಯ ಇಲಾಖೆ ಎಂದಿದೆ. ಇತರೆ ದಾಖಲೆಗಳಲ್ಲಿ ಅರಣ್ಯ ಇಲಾಖೆ ಎಂದು ಇಲ್ಲ. ಸರಿಯಾಗಿ ಸರ್ವೆ ನಡೆಸಿ ಎಲ್ಲರಿಗೂ ಹಕ್ಕುಪತ್ರ ನೀಡಲು ಅಧಿಕಾರಿಗಳು ಮುಂದಾಗಬೇಕು’ ಎಂದು ಆಗ್ರಹಿಸುತ್ತಾರೆ ಗುಮ್ಮನೂರು ಬಸವರಾಜ.

‘ಸರಿಯಾದ ಸರ್ವೆ ನಡೆಯಬೇಕಿದೆ’
‘ಹಕ್ಕುಪತ್ರಕ್ಕೆ ಅರ್ಜಿ ಹಾಕಿದ್ದರೂ ಭೂಸ್ವಾಧೀನದಲ್ಲಿ ಇಲ್ಲದಿರುವುದು, ಉಳುಮೆಯ ಭೂಮಿ ಮತ್ತು ಸರ್ವೆ ನಂಬರ್ ತಾಳೆಯಾಗದಿರುವುದು, ಅರಣ್ಯಭೂಮಿಯಲ್ಲಿ ಉಳುಮೆ ಮಾಡಿರುವುದು ಇತ್ಯಾದಿ ಕಾರಣಗಳಿಂದಾಗಿ ಅರ್ಜಿಗಳು ತಿರಸ್ಕೃತವಾಗುತ್ತವೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಭೂಮಿ ಯಾವುದು ಎಂಬ ಗೊಂದಲಗಳಿದ್ದು, ಸರಿಯಾದ ಸರ್ವೆ ನಡೆಯಬೇಕಿದೆ. ಸರ್ಕಾರಿ ಗೋಮಾಳ, ಹುಲ್ಲುಬನಿ, ಶೇಂದಿಬನಗಳನ್ನು ಗುರುತಿಸಿ ಸಮಸ್ಯೆ ಇತ್ಯರ್ಥಪಡಿಸುವ ಕೆಲಸ ನಡೆದಿದೆ’ ಎಂದು ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದ್ದಾರೆ.

*
ಕಲ್ಲುಗಣಿಗಾರಿಕೆ, ವಸತಿಶಾಲೆ ಇತ್ಯಾದಿ ಉದ್ದೇಶಗಳಿಗೆ ಭೂಮಿಯನ್ನು ನೀಡಲಾಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಅರ್ಜಿ ತಿರಸ್ಕೃತಗೊಂಡ ಎಲ್ಲರಿಗೂ ಸರಿಯಾಗಿ ಸರ್ವೆ ನಡೆಸಿ ಹಕ್ಕುಪತ್ರ ನೀಡಬೇಕು.
-ಹೆಗ್ಗೆರೆ ರಂಗಪ್ಪ, ಜಿಲ್ಲಾ ಅಧ್ಯಕ್ಷ, ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ, ದಾವಣಗೆರೆ

*
ಹಕ್ಕುಪತ್ರವಿಲ್ಲದ ಕಾರಣ ಅತಿವೃಷ್ಟಿ–ಅನಾವೃಷ್ಟಿ ಪರಿಹಾರ, ಸಬ್ಸಿಡಿ ಬೀಜ, ಗೊಬ್ಬರ, ಖರೀದಿ ಕೇಂದ್ರಗಳಲ್ಲಿ ಬೆಳೆಗಳ ಮಾರಾಟ, ಬ್ಯಾಂಕ್ ಸಾಲ, ಸಾಲ ಮನ್ನಾ ಸರ್ಕಾರಿ ಸೌಲಭ್ಯಗಳಿಂದ ರೈತರು ವಂಚಿತರಾಗಿದ್ದಾರೆ.
-ಹುಚ್ಚವ್ವನಹಳ್ಳಿ ಮಂಜುನಾಥ್, ರಾಜ್ಯ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT