ಸೋಮವಾರ, ನವೆಂಬರ್ 28, 2022
20 °C
ದೇಶದ 100 ಸ್ಮಾರ್ಟ್‌ಸಿಟಿಯಲ್ಲಿ ಮೊದಲ ಸ್ಥಾನ ಪಡದ ನಗರ

ಸುರಕ್ಷತೆ: ದಾವಣಗೆರೆ ಸ್ಮಾರ್ಟ್‌ಸಿಟಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸುರಕ್ಷತೆಯ ವ್ಯವಸ್ಥೆಯಲ್ಲಿ ದಾವಣಗೆರೆ ಸ್ಮಾರ್ಟ್‌ಸಿಟಿಯೂ ದೇಶದ 100 ಸ್ಮಾರ್ಟ್‌ಸಿಟಿಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಕೇಂದ್ರ ವಸತಿ ಮತ್ತು ನಗರ ಸಚಿವಾಲಯದ ಪ್ರಶಸ್ತಿಗೆ ಆಯ್ಕೆಯಾಗಿದೆ.

ಒಟ್ಟು 12 ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಸೇಫ್ಟಿ ಆ್ಯಂಡ್‌ ಸೆಕ್ಯೂರಿಟಿ ಸಿಸ್ಟಂ ಆ್ಯಂಡ್ ರೆಕಾರ್ಡ್‌ ವಿಭಾಗದಲ್ಲಿ ಮೊದಲು 21 ನಗರಗಳನ್ನು ಆಯ್ಕೆ ಮಾಡಲಾಯಿತು. ಈ 21 ನಗರಗಳಲ್ಲಿ ಅತ್ಯುತ್ತಮ ಯಾವುದು ಎಂದು ವಿಶ್ಲೇಷಣೆ ಮಾಡಿದಾಗ ದಾವಣಗೆರೆಗೆ ಪ್ರಶಸ್ತಿ ಬಂತು. ಇದಲ್ಲದೇ ಅರ್ಬನ್‌ ಮೊಬಿಲಿಟಿ ವಿಭಾಗದಲ್ಲಿ ದಾವಣಗೆರೆಯು ಮೊದಲ 21 ಸ್ಮಾರ್ಟ್‌ಸಿಟಿಗಳ ಒಳಗೆ ಬಂದಿತ್ತು. ಬಳಿಕ ಮೊದಲ 5 ನಗರಗಳಲ್ಲಿ ಕೂಡ ದಾವಣಗೆರೆ ಬಂದಿತ್ತು ಎಂದು ಸ್ಪರ್ಧೆಯಲ್ಲಿ ದಾವಣಗೆರೆಯ ಪರವಾಗಿ ಭಾಗವಹಿಸಿದ್ದ ಸ್ಮಾರ್ಟ್‌ಸಿಟಿ ಐಟಿ ಡಿಜಿಎಂ ಮಮತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಮಾಂಡ್‌ ಕಂಟ್ರೋಲ್‌ ಸೆಂಟರ್‌ನಲ್ಲಿ (ಸಿಸಿಸಿ)ದಾವಣಗೆರೆ ನಗರದ ಎಲ್ಲ ಆಗುಹೋಗುಗಳು ದಾಖಲಾಗುತ್ತಿವೆ. 248 ಸಿಸಿಟಿವಿ ಕ್ಯಾಮೆರಾಗಳು ನಗರದ ಎಲ್ಲ ಕಡೆ ಕಣ್ಗಾವಲು ಇಟ್ಟಿವೆ. ಯಾವುದೇ ಅಪರಾಧ, ನಾಪತ್ತೆ, ನಿಯಮ ಉಲ್ಲಂಘನೆಗಳನ್ನು ಈ ಸೆಂಟರ್‌ ಮೂಲಕವೇ ತಿಳಿಯಬಹುದು. ಅಲ್ಲದೇ ವಾಹನ ಸಂದಣಿಯಿಂದ ಯಾವುದೇ ಅಪಘಾತ ಆಗದೇ ಇರುವುದು ಕೂಡ ಉಪಯೋಗವಾಯಿತು ಎಂದು ಅವರು ವಿವರಿಸಿದರು.

ಅಂಧ ವಿದ್ಯಾರ್ಥಿ ಕಳೆದುಕೊಂಡ ಲ್ಯಾಪ್‌ಟಾಪ್‌ ಪತ್ತೆ, ಸಾರ್ವಜನಿಕರೊಬ್ಬರು ಬ್ಯಾಂಕ್‌ನಿಂದ ಹಣ ಬಿಡಿಸಿಕೊಂಡು ಹೊರಬಂದಾಗ ಕಳವಾಗಿದ್ದ ಪ್ರಕರಣದ ಪತ್ತೆ, ಬೇತೂರು ರಸ್ತೆಯಲ್ಲಿ ಮಾರಾಕಾಯುಧ ಹಿಡಿದು ದಾಂಧಲೆ ಮಾಡುತ್ತಿದ್ದ ಐವರ ಪತ್ತೆ ಹೀಗೆ ಅನೇಕ ಪ್ರಕರಣಗಳಲ್ಲಿ ಸಿಸಿಸಿ ನೆರವಾಗಿದೆ. ಸ್ಮಾರ್ಟ್‌ಸಿಟಿ ವ್ಯಾಪ್ತಿಯಲ್ಲಿ 18,610 ಪ್ರಕರಣಗಳನ್ನು ದಾಖಲಿಸಿ, ₹ 97.16 ಲಕ್ಷ ದಂಡ ವಸೂಲಿಗೆ ಈ ತಂತ್ರಜ್ಞಾನ ನೆರವಾಗಿತ್ತು.

‘ಪೊಲೀಸ್‌ ಇಲಾಖೆಯನ್ನು ಸ್ಮಾರ್ಟ್‌ಸಿಟಿಯು ಆರಂಭದಿಂದಲೂ ಒಳಗೊಂಡು ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಇರುವ ಎರಡು ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗಳ ಮೂಲಕ ನಗರದ ಸುರಕ್ಷತೆ ಮತ್ತು ಭದ್ರತೆಯನ್ನು ನಿರ್ವಹಿಸಲು ಪೊಲೀಸ್‌ ಇಲಾಖೆಗೆ ಸುಲಭವಾಗಿದೆ. ಅವರ ಸಹಕಾರ ಕೂಡ ಪ್ರಶಸ್ತಿ ಬರಲು ಕಾರಣವಾಯಿತು’ ಎಂದು ಸ್ಮಾರ್ಟ್‌ಸಿಟಿ ಆಡಳಿತ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾಹಿತಿ ನೀಡಿದರು. ನ.6ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಅರ್ಬನ್‌ ಮೊಬಿಲಿಟಿ ಇಂಡಿಯಾ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು