ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಕನ್ನಡ ಭಾಷಾ ಸಾಹಿತ್ಯ ಚಿರನೂತನ

ತಾಲ್ಲೂಕು 10ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಬಿ.ಟಿ.ಜಾಹ್ನವಿ; ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಮೆರುಗು
Published 6 ಮಾರ್ಚ್ 2024, 6:57 IST
Last Updated 6 ಮಾರ್ಚ್ 2024, 6:57 IST
ಅಕ್ಷರ ಗಾತ್ರ

ಮಾಯಕೊಂಡ: ‘ಕನ್ನಡ ಭಾಷಾ ಸಾಹಿತ್ಯ ಚಿರನೂತನವಾದುದು. ಜಗತ್ತಿನ ಯಾವ ಭಾಷೆಯೂ ಕನ್ನಡ ಭಾಷೆಗೆ ಸಾಟಿ ಇಲ್ಲ. ಅಷ್ಟೊಂದು ಶ್ರೀಮಂತವಾದ ಭಾಷೆ ಕನ್ನಡ’ ಎಂದು ದಾವಣಗೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಬಿ.ಟಿ.ಜಾಹ್ನವಿ ಹೇಳಿದರು.

ಸಮೀಪದ ಹೆಬ್ಬಾಳು ಗ್ರಾಮದ ವಿರಕ್ತ ಮಠದ ಸಮುದಾಯ ಭವನದಲ್ಲಿ ನಡೆದ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ನುಡಿಗಳನ್ನಾಡಿದರು.

‘ಹೆಬ್ಬಾಳು ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿನ ಮಠ ಧಾರ್ಮಿಕ ಚಿಂತನೆ, ಶಿಕ್ಷಣ, ಅನ್ನ ದಾಸೋಹ, ಗೋಶಾಲೆ, ಸಾಮೂಹಿಕ ವಿವಾಹಗಳನ್ನು ಆಚರಣೆಗೆ ತರುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ. ದಾವಣಗೆರೆ ತಾಲ್ಲೂಕು ಕಲೆ ಸಾಹಿತ್ಯಗಳ ತವರೂರಾಗಿದೆ. ಇಲ್ಲಿ ಪುರಾತನ ಕಲಾಕೃತಿಯ ದೇವಾಲಯಗಳಿವೆ. ಇವೆಲ್ಲಾ ಸಂಸ್ಕೃತಿಯ ಒಂದು ಭಾಗವಾಗಿವೆ’ ಎಂದು ಹೇಳಿದರು.

‘ಕನ್ನಡ ಭಾಷೆಯನ್ನು ಉಳಿಸಲು ಬುನಾದಿಯಾಗಿ ನಿಂತದ್ದು ಜಾನಪದ. ಒಬ್ಬರ ಬಾಯಿಂದ ಒಬ್ಬರಿಗೆ ಹರಿದು ಬೆಳೆದಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪ ಜಾತಿ ಮತದ ಭೇದವಿಲ್ಲದೆ ಮುಕ್ತ ಅವಕಾಶ ಕೊಟ್ಟಿತು. ಅವರ ಬದುಕಿನ ಅನುಭವಗಳನ್ನು ವಚನಗಳನ್ನು  ರಚಿಸುವ ಮೂಲಕ ಕನ್ನಡ ಕಟ್ಟಿಕೊಟ್ಟಿದ್ದಾರೆ’ ಎಂದು ಸ್ಮರಿಸಿದರು.

‘ಪ್ರಪಂಚದಲ್ಲಿ ಎಷ್ಟೋ ಭಾಷೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಕನ್ನಡವೂ ಇಂಗ್ಲಿಷ್ ವ್ಯಾಮೋಹದಿಂದ ಕಳೆಗುಂದುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳೇ ಮರೆಯಾಗುತ್ತಿವೆ. ವ್ಯಾವಹಾರಿಕ ಭಾಷೆಯಾಗಿ ಕನ್ನಡ ಬಳಕೆ ಕಡಿಮೆಯಾಗಿ ಇಂಗ್ಲಿಷ್ ಹೆಚ್ಚು ಬಳಕೆಗೆ ಬರುತ್ತಿದೆ. ಪರಿಸ್ಥಿತಿ ಅರಿತು ಭಾವನಾತ್ಮಕವಾಗಿ ಚಿಂತಿಸದೆ ಕನ್ನಡದ ಜೊತೆ ಇಂಗ್ಲಿಷ್ ಕಲಿಯುವ ಅನಿವಾರ್ಯತೆ ಇದೆ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಶಾಸಕ ಬಸವಂತಪ್ಪ, ಇಂಗ್ಲಿಷ್‌ನ ವ್ಯಾಮೋಹದಿಂದ ಕನ್ನಡ ಉಳಿಸಿ ಬೆಳೆಸಬೇಕಿದೆ. ಕನ್ನಡ ಒಂದು ವೈಶಿಷ್ಟ್ಯಉಳ್ಳ ಭಾಷೆ. ಮಾತಾಡಿದ್ದನ್ನೇ ಬರೆಯುವ ಏಕೈಕ ಭಾಷೆಯಾಗಿದೆ. ಬಸವಣ್ಣರ ಆದಿಯಾಗಿ ಹಲವಾರು ವಚನಕಾರರು ಹನ್ನೆರಡನೇ ಶತಮಾನದಿಂದ ವಚನಗಳ ಮೂಲಕ ಕನ್ನಡವನ್ನ ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವ ಕಾಯ್ದೆಯನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದೆ. ಇಂತಹ ನಿರ್ಧಾರಗಳಿಂದ ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ರೈತರು ಬರದ ಹೊಡೆತಕ್ಕೆ ತತ್ತರಿಸಿದ್ದಾರೆ. ತೋಟಗಳಿಗೆ ನೀರಿನ ಕೊರತೆಯಿಂದ ಕಂಗಾಲಾಗಿದ್ದಾರೆ. ಸರ್ಕಾರಗಳಿಂದ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಆಗಬೇಕಿದೆ. ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚು ತೆರೆಗೆ ಸಂಗ್ರಹವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆಯನ್ನೇ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತರು ತಮ್ಮ ಹಕ್ಕುಗಳನ್ನುನ ಪಡೆಯಲು ಪ್ರತಿಭಟನೆ ನಡೆಸಲು ಅವಕಾಶ ನೀಡದೆ ಸರ್ವಾಧಿಕಾರಿ ಧೋರಣೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ’ ಎಂದರು.

‘ಸಾಹಿತ್ಯ ಬೆಳೆಯಲು ಅನೇಕ ದಾರ್ಶನಿಕರು ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಕನ್ನಡ ನಾಡು ನುಡಿ ಉಳಿವು ಪೋಷಕರ ಕೈಯಲ್ಲಿದೆ. ಇಂದು ಇಂಗ್ಲಿಷ್ ಭಾಷೆ ಅಗತ್ಯವಿದೆ. ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದರೂ ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಅವರಿಗೆ ಭಾಷೆ ಕಲಿಸುವ ಕೆಲಸ ಕುಟುಂಬದಿಂದ ಆಗಬೇಕು’ ಎಂದು ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

‘ಈ ಬಾರಿ ಬರಗಾಲದಿಂದ ಸಮ್ಮೇಳನ ಮುಂದೂಡಬೇಕು ಎಂದುಕೊಂಡಿದ್ದೆವು. ಆದರೆ, ಮಹಾಂತ ರುದ್ರೇಶ್ವರರ ಆಶೀರ್ವಾದ ಹಾಗೂ ಜನರ ಅಪೇಕ್ಷೆ ಇಂದು ಹೆಬ್ಬಾಳು ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದು ಪ್ರಾಸ್ತವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ.ಎನ್.ಮಲ್ಲೇಶ್ ಕನ್ನಡ ಧ್ವಜವನ್ನು ಸಮ್ಮೇಳನ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದರು.

‘ಕನ್ನಡ ಸಾಹಿತ್ಯ ಅದ್ಬುತವಾದದು. ಸಾಹಿತ್ಯ ಮಾನವನ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಜೊತೆಗೆ, ಮಾನಸಿಕ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ಸಾಹಿತ್ಯದತ್ತ ಒಲವು ಹೊಂದಬೇಕು. ಮಕ್ಕಳಿಗೆ ಪೋಷಕರು ಸಾಹಿತ್ಯ ಓದುವ ಹಾಗೂ ಬರೆಯುವಂತೆ ಪ್ರೋತ್ಸಾಹಿಸಬೇಕು’ ಎಂದು ಜಾನಪದ ತಜ್ಞ ಎಂ.ಜಿ.ಈಶ್ವರಪ್ಪ ಹೇಳಿದರು.

ಸಾಹಿತಿ ರುದ್ರೇಶ್ವರ ಸ್ವಾಮಿ ಅಧ್ಯಕ್ಷತೆಯಲ್ಲಿ ಸಾಹಿತ್ಯ ಗೋಷ್ಠಿಯನ್ನು ನಡೆಸಲಾಯಿತು. ಪ್ರಾಂಶುಪಾಲ ಎಂ.ಮಂಜಣ್ಣ, ಶಿಕ್ಷಕ ಎಚ್.ಎಸ್.ದ್ಯಾಮೇಶ್ ವಿಷಯ ಮಂಡಿಸಿದರು.

‘ಕೃಷಿ ಗೋಷ್ಠಿ’ಯಲ್ಲಿ ಸಾವಯವ ಕೃಷಿಕ ನೇರ್ಲಿಗೆ ಪ್ರಕಾಶ್, ಪ್ರಗತಿಪರ ರೈತ ಹಾಲವರ್ತಿ ದ್ಯಾಮಣ್ಣ ಭಾಗವಹಿಸಿ ವಿಷಯ ಮಂಡಿಸಿದರು.
ಸಾಹಿತಿ ಸಂಧ್ಯಾ ಸುರೇಶ್ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಿತು. ಸಾಹಿತಿ ಸಂತೇಬೆನ್ನೂರು ಫೈಜ್ನಟ್ರಾಜ್, ಸಾಹಿತಿ ಪಾಪು ಗುರು ವಿಷಯ ಮಂಡಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಜಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಂಪಮ್ಮ, ಹೆದ್ನೆ ಮುರಿಗೇಂದ್ರಪ್ಪ, ಮಾಜಿ ಯೋಧ ಎಚ್.ಎಸ್.ದೊರೆಸ್ವಾಮಿ, ಶಿವಕುಮಾರ್, ಹೊನ್ನನಾಯ್ಕನಹಳ್ಳಿ ಮುರಿಗೇಂದ್ರಪ್ಪ, ಹೆಬ್ಬಾಳು ಮಹೇಂದ್ರ, ಬಿಇಒ ಶೇರ್‌ಅಲಿ, ರುದ್ರಮುನಿ, ಸಂಡೂರ್ ರಾಜಶೇಖರ್, ನರೇಂದ್ರ ಬಾಬು, ಮಹೇಂದ್ರ ಹೆಬ್ಬಾಳು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು
ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು
ಸಾಹಿತ್ಯ ಸಮ್ಮೇಳನವನ್ನು ಶಾಸಕ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು. ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಇತರರು ಭಾಗವಹಿಸಿದ್ದರು
ಸಾಹಿತ್ಯ ಸಮ್ಮೇಳನವನ್ನು ಶಾಸಕ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು. ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಇತರರು ಭಾಗವಹಿಸಿದ್ದರು

ಭವ್ಯ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹೆಬ್ಬಾಳು ಗ್ರಾಮದ ರುದ್ರೇಶ್ವರ ವಿರಕ್ತ ಮಠದಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಿತು. ಸ್ತ್ರೀ ಶಕ್ತಿ ಮಹಿಳಾ ಸಂಘಗಳಿಂದ ಕುಂಭಮೇಳ ರೇಣುಕಾಯಲ್ಲಮ್ಮ ಭಜನಾ ತಂಡ ವೀರಗಾಸೆ ತಂಡ ಡೊಳ್ಳು ಕುಣಿತ ತಂಡಗಳು ಭುವನೇಶ್ವರಿ ಮೆರವಣಿಗೆಗೆ ಮೆರುಗು ತಂದವು. ಮೆರವಣಿಗೆಯಲ್ಲಿ ಜಾನಪದ ವಾದ್ಯಗಳಿಗೆ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮತಿ ಜಯಪ್ಪ ಸೇರಿ ಹಲವು ಮಹಿಳೆಯರು ನೃತ್ಯದ ಮೂಲಕ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಕರಕುಶಲ ವಸ್ತುಗಳನ್ನು ತಯಾರಿಸಿದ ಮಹಿಳೆಯರು ಮಾರಾಟ ಮಳಿಗೆ ಆಯೋಜಿಸಿದ್ದರು.

ಸಮ್ಮೇಳನದ ನಿರ್ಣಯ

* ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ದಿಪಡಿಸಬೇಕು. * ಹೆಬ್ಬಾಳು ಗ್ರಾಮದ ಸುತ್ತಮುತ್ತಲ ಕೆರೆಗಳನ್ನು ಅಭಿವೃದ್ದಿಪಡಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. * ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT