ಶನಿವಾರ, ಜೂನ್ 25, 2022
25 °C
ಕಂಪ್ಯೂಟರ್‌ ಸಹಿತ ಎಲ್ಲ ಸೊತ್ತುಗಳನ್ನು ನೀಡಿದ ಹಳೇ ವಿದ್ಯಾರ್ಥಿಗಳು

ಸರ್ಕಾರಿ ಶಾಲೆ ಹೈಟೆಕ್‌ ಮಾಡಿದ ಊರವರು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಮುಚ್ಚುವ ಹಂತಕ್ಕೆ ಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ಊರಿನ ಹಳೇ ವಿದ್ಯಾರ್ಥಿಗಳೇ ಸೇರಿ ಉಳಿಸಿದ್ದಾರೆ. ಶಾಲೆಗೆ ಬೇಕಾದ ಎಲ್ಲ ಪರಿಕರಗಳನ್ನು ನೀಡಿ ಹೈಟೆಕ್‌ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿದೆ.

ಇದು ಜಿಲ್ಲೆಯ ಚನ್ನಗಿರಿ ತಾಲ್ಲೂಕು ಯರಗಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. ಎರಡು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 25 ಮಕ್ಕಳು ಇದ್ದರು. ಈಗ ಮಕ್ಕಳ ಸಂಖ್ಯೆ 60ಕ್ಕೇರಿದೆ.

1958ರಲ್ಲಿ ಯರಗಟ್ಟಿ ಸರ್ಕಾರಿ ಶಾಲೆ ಆರಂಭವಾಗಿತ್ತು. ಅಲ್ಲಿಂದ ನಾಲ್ಕು ದಶಕಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿತ್ತು. 1998ರಲ್ಲಿ 92 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದರು. ಅಲ್ಲಿಂದ ನಿಧಾನಕ್ಕೆ ಕಡಿಮೆಯಾಗತೊಡಗಿತು. ಶಾಲಾ ಕಟ್ಟಡವೂ ದುರ್ಬಲವಾಗುತ್ತಾ ಬಂದಿತ್ತು. ಹೆತ್ತವರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಕಳುಹಿಸಲು ಆರಂಭಿಸಿದ್ದರು. ಇದರ ಪರಿಣಾಮ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. 2020ರ ಹೊತ್ತಿಗೆ 25ಕ್ಕಿಳಿದಿತ್ತು. ಕೆಲವೇ ವರ್ಷಗಳಲ್ಲಿ ಮುಚ್ಚಿಹೋಗುವ ಆತಂಕ ಎದುರಾಗಿತ್ತು.

‘ಶಾಲೆಯ ಕೆಲವು ಭಾಗ ಬಿದ್ದು ಹೋಗುವ ಸ್ಥಿತಿಗೆ ಬಂದಿತ್ತು. ನಾವು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಗಮನಕ್ಕೆ ತಂದಾಗ ಅವರು ₹ 21 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿ ಮಂಜೂರು ಮಾಡಿಸಿದರು. ಸರ್ಕಾರಿ ಶಾಲೆಯಲ್ಲಿಯೂ ಕಾನ್ವೆಂಟ್‌ ಶಾಲೆಯ ರೀತಿಯಲ್ಲಿ ಸೌಲಭ್ಯಗಳು ಇದ್ದರೆ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂಬುದು ಗೊತ್ತಾಯಿತು. ನಾವೇ ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ಹೈಟೆಕ್‌ ಶಾಲೆ ಆಗಬೇಕಿದ್ದರೆ ಏನೆಲ್ಲ ಬೇಕು ಎಂದು ಮುಖ್ಯೋಪಾಧ್ಯಾಯರಿಂದ ಪಟ್ಟಿ ಪಡೆದು ಕೊಡಿಸಿದೆವು’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ ಎಂ.ಸಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘6 ದಶಕಗಳಿಂದ ಈ ಶಾಲೆಯಲ್ಲಿ ಕಲಿತು ಬೇರೆ ಬೇರೆ ಹುದ್ದೆಗೆ ಅನೇಕರು ಹೋಗಿದ್ದಾರೆ. ಹಲವರು ನಿವೃತ್ತರಾಗಿದ್ದಾರೆ. ಅವರೆಲ್ಲನ್ನು ನಾವು ಸಂಪರ್ಕಿಸಿದೆವು. ಯಾರಿಂದಲೂ ಹಣ ಕೇಳಲಿಲ್ಲ. ಇಂಥ ಪರಿಕರ ಬೇಕು. ಒದಗಿಸಿ ಎಂದು ಕೇಳಿ ಪಡೆದೆವು. ಡೆಸ್ಕ್, ಕಂಪ್ಯೂಟರ್, ನಲಿಕಲಿ ಟೇಬಲ್, ಡಯಾಸ್, ವಿಜ್ಞಾನ ಉಪಕರಣಗಳು, ಅಲ್ಮೇರಾ, ಬಿಸಿಯೂಟಕ್ಕೆ ತಟ್ಟೆ ಲೋಟ, ಗ್ರೀನ್ ಬೋರ್ಡ್, ಬ್ಯಾಗ್, ಪೆನ್ನು ಪೆನ್ಸಿಲ್, ನೋಟ್‌ಬುಕ್‌, ಮೈಕ್, ಫ್ಯಾನ್, ಟಿ.ವಿ. ಹೀಗೆ ನಾಲ್ಜೈದು ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಒದಗಿಸಿದ್ದೇವೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಮಾಡಿದ್ದೇವೆ’ ಎಂದು ಹಳೇ ವಿದ್ಯಾರ್ಥಿ ಶಿವಕುಮಾರ್‌ ಯರಗಟ್ಟಿಹಳ್ಳಿ ಹೆಮ್ಮೆಯಿಂದ ವಿವರಿಸಿದರು.

‘ಹೊಸಕೊಠಡಿಗಳನ್ನು ಶಾಸಕರು ಉದ್ಘಾಟನೆ ಮಾಡುವ ದಿನ ಈ ಶಾಲೆಯಲ್ಲಿ ಪಾಠ ಮಾಡಿ ನಿವೃತ್ತರಾಗಿರುವ ಎಲ್ಲ ಶಿಕ್ಷಕರನ್ನು ಕರೆದು ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ನಿಧನರಾಗಿರುವ ನಿವೃತ್ತ ಶಿಕ್ಷಕರ ಮನೆಯ ಸದಸ್ಯರನ್ನು ಕರೆದು ಗೌರವಿಸಿದ್ದೇವೆ. ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದೇ ನಮ್ಮ ಗುರಿ’ ಎಂದು ಹೇಳಿದರು.

ಸರ್ಕಾರಿ ಶಾಲೆಯನ್ನು ಉಳಿಸಬೇಕು. ಅದಕ್ಕೆ ಮಕ್ಕಳು ಬರುವಂತೆ ಮಾಡಬೇಕು ಎಂದು ಹಟ ತೊಟ್ಟು ಯರಗಟ್ಟಿಹಳ್ಳಿ ಶಾಲೆಯ ಹಳೇ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ.

ಮಂಜುನಾಥ್‌ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ

ಇಲ್ಲಿನ ಹಳೇ ವಿದ್ಯಾರ್ಥಿಗಳಾಗಿರುವ ಉತ್ಸಾಹಿ ಯುವಕರು ಬಂದು ಶಾಲೆಗೆ ಏನು ಬೇಕು ಎಂದು ಪಟ್ಟಿ ಮಾಡಿಕೊಂಡು ಹೋಗಿ ಎಲ್ಲ ಪರಿಕರಗಳನ್ನು ಒದಗಿಸಿದ್ದಾರೆ.

ಪ್ರಭಾಕರ, ಮುಖ್ಯ ಶಿಕ್ಷಕರು, ಯರಗಟ್ಟಿಹಳ್ಳಿ ಸರ್ಕಾರಿ ಶಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು