ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರಿಂದ ದೀಡು ನಮಸ್ಕಾರ, ಉರುಳು ಸೇವೆ

ಬಟ್ಟೆ ಮೇಲೆ ಬೇವಿನುಡುಗೆ ತೊಟ್ಟು ಹರಕೆ ಸಲ್ಲಿಸಿದ ಮಹಿಳೆಯರು
Last Updated 3 ಮಾರ್ಚ್ 2020, 14:53 IST
ಅಕ್ಷರ ಗಾತ್ರ

ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಮಂಗಳವಾರ ಕಳೆಗಟ್ಟಿದೆ. ದೀಡು ನಮಸ್ಕಾರ, ಉರುಳು ಸೇವೆಗಳು ಭಕ್ತರಿಂದ ನಿರಂತರ ನಡೆಯತೊಡಗಿದೆ. ಬೆತ್ತಲೆ ದೇಹಕ್ಕೆ ಬೇವಿನುಡುಗೆ ತೊಡುವುದನ್ನು ನಿಷೇಧಿಸಿರುವುದರಿಂದ ಹರಕೆ ಹೊತ್ತ ಮಹಿಳೆಯರು ಬಟ್ಟೆಯ ಮೇಲೆಯೇ ಬೇವಿನುಡುಗೆ ತೊಟ್ಟು ಹರಕೆ ತೀರಿಸಿದರು. ಕೆಲವರು ಸಾಂಕೇತಿಕವಾಗಿ ಬೇವನ್ನು ಕೈಯಲ್ಲಿ ಹಿಡಿದುಕೊಂಡು ಭಕ್ತಿ ಸಮರ್ಪಿಸಿದರು.

ಅರಿಶಿಣ ಕುಂಕುಮಗಳೊಂದಿಗೆ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಉಡಿ ತುಂಬಿದರು. ದೇವಸ್ಥಾನದ ಎಲ್ಲಡೆ ಸಂಭ್ರಮ ಮನೆಮಾಡಿತ್ತು. ಬೆಳಿಗ್ಗೆ ದಾಸೋಹದ ಮಹೋಪಕರಣ ಸಮಾರಂಭೋತ್ಸವ ನಡೆಯಿತು. ರಾತ್ರಿ ಅಮ್ಮನಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು ಎಂದು ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು.

ದೇವಸ್ಥಾನದ ಸುತ್ತ ಮರಳು ಹಾಕಲಾಗಿದ್ದು, ಅದರ ಮೇಲೆ ಸಾವಿರಾರು ಭಕ್ತರು ದೀಡು ನಮಸ್ಕಾರ ಹಾಕಿದರು. ಮಹಿಳೆಯರ ಸಹಿತ ಹಲವರು ಉರುಳು ಸೇವೆ ಸಮರ್ಪಿಸಿದರು. ಅವರ ಸೇವೆ ನೀಡುವಾಗ ಪದ್ಧತಿಯಂತೆ ನೀರು ಸುರಿಯಲಾಯಿತು. ಹರಕೆ ಸಲ್ಲಿಸುವವರ ಜತೆಗೆ ಅವರ ಕುಟುಂಬದವರೂ ಪ್ರದಕ್ಷಿಣೆ ಹಾಕಿ ಭಕ್ತಿಯಿಂದ ಕೈ ಮುಗಿದರು. ಹರಕೆ ಸಲ್ಲಿಕೆಯಾದ ಬಳಿಕ ಮತ್ತೆ ಸ್ನಾನ ಮಾಡಿ, ಹಳೆಬಟ್ಟೆಯನ್ನು ಅಲ್ಲೇ ಬಿಟ್ಟು ಹೊಸಬಟ್ಟೆ ತೊಟ್ಟು ನಡೆದರು. ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಅವುಗಳನ್ನು ಎತ್ತಿ ಪಾಲಿಕೆ ವಾಹನಕ್ಕೆ ಹಾಕುವ ಮೂಲಕ ನಿರಂತರ ಸ್ವಚ್ಛತಾ ಕಾರ್ಯ ನಡೆಸಿದರು.

ಬಲಿ ನೀಡುವ ಕತ್ತಿಗಳನ್ನು ಕೂಡ ದೇವಾಲಯದ ಸುತ್ತ ತರಲಾಯಿತು. ಕೆಲವರು ಕುರಿಗಳನ್ನು ತಂದು ಪ್ರದಕ್ಷಿಣೆ ಹಾಕಿಸಿ ಒಯ್ದರು. ಪಟ್ಟದ ಕೋಣವನ್ನು ಕೂಡ ಪ್ರದಕ್ಷಿಣೆ ಹಾಕಿಸಿ ಆರತಿ ಎತ್ತಲಾಯಿತು. ವಿವಿಧ ಬ್ಯಾಂಡ್‌, ವಾದ್ಯಗಳು ಎಲ್ಲ ಕಾರ್ಯಕ್ರಮಗಳಿಗೆ ಸಾಥ್‌ ನೀಡಿದವು.

ವಿಶೇಷ ಅಲಂಕಾರ: ಜಾತ್ರೆಯ ಪ್ರಯುಕ್ತ ದುರ್ಗಾಂಬಿಕಾ ದೇವಿ ವಿಗ್ರಹವನ್ನು ಪ್ರತಿದಿನ ಭಿನ್ನವಾಗಿ ಅಲಂಕಾರ ಮಾಡಲಾಗುತ್ತಿದ್ದು, ಮಂಗಳವಾರ ಮಹಿಷಾಸುರ ಮರ್ದಿನಿ ಅಲಂಕಾರ ಮಾಡಲಾಯಿತು. ₹ 60 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಆಭರಣಗಳನ್ನು ಹಾಕಲಾಗಿತ್ತು.

ಸಿಹಿಯೂಟ: ದುಗ್ಗಮ್ಮನ ಹಬ್ಬದಲ್ಲಿ ಮಂಗಳವಾರ ಸಿಹಿಯೂಟ, ಬುಧವಾರ ಮಾಂಸದೂಟ ಎಂಬ ಪದ್ಧತಿ ಹಲವರಲ್ಲಿ ಇದೆ. ಅದರಂತೆ ಮಂಗಳವಾರ ಬೆಳಿಗ್ಗೆ ಮಹಿಳೆಯರು ಮಡಿಯಿಂದ ಸಿಹಿ ಅಡುಗೆ ತಯಾರಿಸಿದರು. ಬಳಿಕ ದೇವಿಗೆ ಮಡಿಲು ತುಂಬಿ ಎಡೆ ಅರ್ಪಿಸಲಾಯಿತು. ಎಡೆ ಅರ್ಪಿಸುವ ಹರಕೆ ಹೊತ್ತವರು ಕೂಡ ಎಡೆತಂದು ಅರ್ಪಿಸಿದರು.

ಮಂಗಳವಾರ ಮಧ್ಯರಾತ್ರಿ ದಾಟಿದ ಮೇಲೆ ಚರಗ (ಬಿಳಿ ಜೋಳ) ಬೇಯಿಸಲಾಗುತ್ತದೆ. ಜತೆಗೆ ಐದು ಮನೆಗಳ ಮುತ್ತೈದೆಯರು ಉಪವಾಸ ಇದ್ದು ಚರಗ ಬೇಯಿಸಿ ತರುವರು. ಬಳಿಕ ಸಿರಿಂಜ್‌ ಮೂಲಕ ರಕ್ತ ತೆಗೆದು ಚರಗದೊಂದಿಗೆ ದೇವಿಗೆ ಅರ್ಪಿಸಲಾಗುತ್ತದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ತಹಶೀಲ್ದಾರ್‌, ಪಾಲಿಕೆ ಆಯುಕ್ತರು ಸಹಿತ ವಿವಿಧ ಅಧಿಕಾರಿಗಳು ರಾತ್ರಿ ಪೂರ್ತಿ ಇದ್ದು, ಕೋಣ ಬಲಿ ನಡೆಯದಂತೆ ಕಣ್ಹಾಗವಲು ಇಟ್ಟಿದ್ದರು.

ದೇವಿಗೆ ಚರಗ ಅರ್ಪಿಸುಲ್ಲಿಗೆ ಉಪವಾಸ ಇರುವವರ ಉಪವಾಸ ಅಂತ್ಯಗೊಳ್ಳುತ್ತದೆ. ಆನಂತರವಷ್ಟೇ ಮನೆಮನೆಗಳಲ್ಲಿ ಮಾಂಸದೂಟಕ್ಕೆ ತಯಾರಿಗಳಾಗುತ್ತವೆ. ಬುಧವಾರ ನಗರದಾದ್ಯಂತ ಮಾಂಸದೂಟದ ಘಮ ಹರಡಲಿದೆ.

ಲಕ್ಷಾಂತರ ಜನ ಭಾಗಿ

ಮಂಗಳವಾರ ಮತ್ತು ಬುಧವಾರ ಮುಖ್ಯಜಾತ್ರೆ ನಡೆಯುವುದರಿಂದ ಮಂಗಳವಾರ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನ ದೇವಸ್ಥಾನಕ್ಕೆ ಬಂದಿದ್ದರು. ದೇವಿ ದರ್ಶನಕ್ಕಾಗಿ ಮಾಡಿದ್ದ ಸಾಮಾನ್ಯ ಸರತಿ ಸಾಲು ಕಿಲೋಮೀಟರ್‌ ಉದ್ದ ಚಾಚಿತ್ತು. ವಿಶೇಷ ಸರತಿ ಸಾಲಿನಲ್ಲಿ ಕೂಡ ಭಾರಿ ಸಂಖ್ಯೆಯಲ್ಲಿ ಭಕ್ತರು ನಿಂತಿದ್ದರು.

ದೇವಸ್ಥಾನದ ಸುತ್ತಲಿನ ರಸ್ತೆಗಳೆಲ್ಲ ವಿವಿಧ ಅಂಗಡಿಗಳಿಂದ ತುಂಬಿ ಹೋಗಿತ್ತು. ಜಾತ್ರೆಗೆ ಬಂದಿದ್ದ ಜನರೆಲ್ಲ ಅಂಗಡಿಗಳ ಕಡೆಗೆ ತೆರಳಿದ್ದರಿಂದ ಅಲ್ಲಿಯೂ ಜನದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT