ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: 2.45 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ

Published 16 ಮೇ 2024, 8:21 IST
Last Updated 16 ಮೇ 2024, 8:21 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಕೆಲವೆಡೆ ಪ್ರಸಕ್ದತ ಸಾಲಿನ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರ ಆವರಿಸಿ ನಷ್ಟ ಅನುಭವಿಸಿರುವ ರೈತರು, ಈ ಬಾರಿ ಉತ್ತಮ ಮಳೆಯಾಗಿ ಆಸರೆಯಾಗಬಲ್ಲದು ಎಂಬ ಆಶಾಭಾವ ಹೊಂದಿದ್ದಾರೆ.

ಈ ಬಾರಿ ಚುನಾವಣೆಯ ಕಾವಿನ ಜೊತೆಗೆ ಬಿಸಿಲ ಬೇಗೆಯೂ ಜಾಸ್ತಿಯಾಗಿದ್ದು, ಅಲ್ಲಲ್ಲಿ ಸುರಿದಿರುವ ಅಲ್ಪ ಮಳೆಯಿಂದಾಗಿ ರೈತರು ಕೃಷಿಯತ್ತ ದೃಷ್ಟಿ ನೆಟ್ಟಿದ್ದಾರೆ. ಭಾರಿ ಮಳೆ ಸುರಿಯುವುದನ್ನು ಎದುರು ನೋಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಲ್ಲಲ್ಲಿ ಮಳೆಯಾಗಿದ್ದು, ರೈತರು ಮಾಗಿ ಉಳುಮೆ ಮಾಡಿದ್ದಾರೆ. ಭೂಮಿ ಹಸನು ಮಾಡಿ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದಾರೆ. ಕೃಷಿ ಇಲಾಖೆ ಈ ಬಾರಿ ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯ ಗುರಿಯನ್ನು ಇಟ್ಟುಕೊಂಡಿದೆ.

ಶೇ 42ರಷ್ಟು ಮಳೆಯ ಕೊರತೆ:

ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜನವರಿಯಿಂದ ಮೇ 14ರವರೆಗೆ ಶೇ 42ರಷ್ಟು ಮಳೆ ಕೊರತೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಶೇ 33ರಷ್ಟು ಮಳೆ ಕೊರತೆಯಾಗಿದೆ. ಆದರೆ, ಕಳೆದ 7 ದಿನಗಳ ಅವಧಿಯಲ್ಲಿ ವಾಡಿಕೆಗಿಂತ ಶೇ 18ರಷ್ಟು ಹೆಚ್ಚಿನ ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಅಂತರ ಬೆಳೆಗಳಿಗೆ ಪ್ರೋತ್ಸಾಹ:

‘ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳಕ್ಕೆ ಅಕ್ಕಡಿ ಬೆಳೆಯಾಗಿ ತೊಗರಿ ಹಾಗೂ ಅವರೆ ಕಾಯಿಯನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು. ಬೇಸಿಗೆಯಲ್ಲಿ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಾಗಿಯಲ್ಲಿ ಮೇವು ಹಾಗೂ ಕಾಳು ಜಾಸ್ತಿ ಇರುವ ತಳಿಗಳು ಹಾಗೂ ಭತ್ತದಲ್ಲಿ ಚೆಲ್ಲು ಭತ್ತ, ನಾಟಿ ಪದ್ಧತಿಯನ್ನು ಪ್ರೋತ್ಸಾಹಿಸಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ  ನೀಡಿದರು.

ಹೊಸ ತಳಿ ಶೇಂಗಾ: ‘ಶೇಂಗಾದಲ್ಲಿ ಈ ಬಾರಿ ಹೊಸ ತಳಿ ಪರಿಚಯಿಸಲಾಗುವುದು. ಈ ತಳಿಯಲ್ಲಿ ಕಾಳು ಗಟ್ಟಿಯಾಗಿ ಬರಲಿದ್ದು, ಕಟಾವು ವೇಳೆ ಬೆಳೆಯು ಹಸಿರಾಗಿರುವುದರಿಂದ ಜಾನುವಾರುಗಳಿಗೆ ಮೇವು ಸಿಗುತ್ತದೆ. ಅಲ್ಲದೇ ಉತ್ತಮ ಇಳುವರಿಯೂ ಬರುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು;ಗುರಿ (ಹೆಕ್ಟೇರ್‌ಗಳಲ್ಲಿ)

ದಾವಣಗೆರೆ; 60,426

ಹರಿಹರ; 32,280

ಜಗಳೂರು; 57,418

ಹೊನ್ನಾಳಿ; 27,990

ಚನ್ನಗಿರಿ; 46,194

ನ್ಯಾಮತಿ; 20,995

ಮೂರು ಬಾರಿ ಮಳೆ ಸುರಿದಿದ್ದರೂ ನಮ್ಮ ಕಡೆ ಹದವಾಗಿ ಸುರಿದಿಲ್ಲ. ಹದ ಮಳೆಯಾದರೆ ವ್ಯವಸಾಯಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು.
ಪ್ರಭಯ್ಯ ಬಿದರಗುಡ್ಡೆಯ ರೈತ
ಭೂಮಿ ಸಿದ್ಧತೆ ಮಾಡಿಕೊಳ್ಳಲು ಮಳೆ ಜೋರಾಗಿ ಬೀಳಬೇಕು. ಮಳೆ ಬಂದರೆ ಬಿತ್ತನೆ ಬೀಜ ಗೊಬ್ಬರ ತಂದು ಇಟ್ಟುಕೊಳ್ಳುತ್ತೇವೆ. ಮಳೆ ಇಲ್ಲದೇ ಈಗಾಗಲೇ ಅಡಿಕೆ ಗಿಡಗಳು ಒಣಗಿಹೋಗಿವೆ.
ಜಗದೀಶ್ ಕಕ್ಕರಗೊಳ್ಳದ ರೈತ
ಹವಾಮಾನ ಇಲಾಖೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ಆಶಾದಾಯಕ ಮುನ್ಸೂಚನೆ ನೀಡಿದ್ದು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.
ಶ್ರೀನಿವಾಸ್ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ
43646 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು
‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 23154 ಮೆಟ್ರಿಕ್‌ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು 43646 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ. ‘ಮೇ ತಿಂಗಳಿಗೆ 6303 ಮೆಟ್ರಿಕ್‌ ಟನ್ ಯೂರಿಯಾಗೆ ಬೇಡಿಕೆ ಬಂದಿದ್ದು 11996 ಮೆಟ್ರಿಕ್ ಟನ್ ದಾಸ್ತಾನು ಇದೆ. ಡಿ.ಎ.ಪಿಗೆ 3908 ಮೆಟ್ರಿಕ್‌ ಟನ್ ಬೇಡಿಕೆ ಇದ್ದು 6626 ಮೆಟ್ರಿಕ್ ಟನ್ ಸಂಗ್ರವಿದ್ದರೆ 11627 ಮೆಟ್ರಿಕ್ ಟನ್ ಬೇಡಿಕೆ ಇರುವ ಎನ್.ಪಿ.ಕೆ.ಕಾಂಪ್ಲೆಕ್ಸ್‌ ಗೊಬ್ಬರ 22885 ಮೆಟ್ರಿಕ್ ದಾಸ್ತಾನು ಇದೆ. ಎಂಒಪಿ 781 ಮೆಟ್ರಿಕ್ ಟನ್ ಬೇಡಿಕೆ ಇದ್ದು 1253 ಮೆಟ್ರಿಕ್ ಟನ್ ಇದೆ. ಎಸ್‌.ಎಸ್.ಪಿಗೆ 535 ಮೆಟ್ರಿಕ್ ಟನ್ ಬೇಡಿಕೆ ಇದ್ದು 886 ಮೆಟ್ರಿಕ್ ಟನ್ ದಾಸ್ತಾನು ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಮುಂಗಾರು ಹಂಗಾಮಿಗೆ 53238 ಮೆಟ್ರಿಕ್ ಟನ್ ಯೂರಿಯಾ 18060 ಮೆಟ್ರಿಕ್ ಟನ್‌ ಡಿಎಪಿ 73969 ಮೆಟ್ರಿಕ್ ಟನ್ ಎನ್‌.ಪಿ.ಕೆ.ಕಾಂಪ್ಲೆಕ್ಸ್ 4851 ಮೆಟ್ರಿಕ್ ಟನ್ ಎಂಒಪಿ 3565 ಟನ್ ಎಸ್‌ಒಪಿ ಸೇರಿ ಒಟ್ಟು 153683 ಮೆಟ್ರಿಕ್‌ ಟನ್ ಬೇಡಿಕೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT