ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ನಿಂತ ಭಾರತ ಕಣ್ಣಮುಂದೆ: ಶ್ರೀಪಾದ ಭಟ್‌

ತೋರಣಘಟ್ಟರ ನೆನಪಿನ ‘ಚಂದ್ರನಮನ’ ಕಾರ್ಯಕ್ರಮ
Last Updated 7 ಮಾರ್ಚ್ 2021, 15:26 IST
ಅಕ್ಷರ ಗಾತ್ರ

ದಾವಣಗೆರೆ: ಮಾತು ಸೋತ ಭಾರತವಲ್ಲ. ಈಗ ಮಾತು ನಿಂತ ಭಾರತ ನಮ್ಮ ಕಣ್ಣ ಮುಂದಿದೆ ಎಂದು ಪ್ರಗತಿಪರ ಚಿಂತಕ ಬಿ. ಶ್ರೀಪಾದ ಭಟ್‌ ಬೆಂಗಳೂರು ವಿಷಾದಿಸಿದರು.

ಹೋರಾಟಗಾರ ಚಂದ್ರಶೇಖರ್‌ ತೋರಣಘಟ್ಟ ಅವರು ಅಗಲಿ ಒಂದು ವರ್ಷ ಆಗಿರುವ ನೆನ‍ಪಿನಲ್ಲಿ ಭಾನುವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ನಡೆದ ‘ಚಂದ್ರನಮನ’ ಕಾರ್ಯಕ್ರಮದಲ್ಲಿ ಅವರು ‘ಚಂದ್ರಶಿಕಾರಿ’ ಕೃತಿಯ ಬಗ್ಗೆ ವಿಶ್ಲೇಷಣೆ ನಡೆಸಿ ಮಾತನಾಡಿದರು.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಎಂಬುದು ಮುಖರಹಿತ ಮತ್ತು ನಾಯಕರಿಲ್ಲದವರ ಹೋರಾಟ. ಆದರೆ ಅಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ ಇದೆ. ಚಂದ್ರಶೇಖರ್‌ ತೋರಣಘಟ್ಟ ಅವರ ವ್ಯಕ್ತಿತ್ವ ಕೂಡ ಇಂಥದ್ದೇ ಆಗಿತ್ತು. ಅವರು ನಾಯಕರಾಗಲು, ಸಂಘಟನೆ ಕಟ್ಟಲು ಮುಂದಾದವರಲ್ಲ. ಎಲ್ಲಿ ಕಷ್ಟ, ಸಂಕಷ್ಟಗಳಿವೆಯೋ ಅಲ್ಲಿಗೇ ಹೋಗಿ ಆ ಜನರ ಜತೆಗೆ ಬದುಕಿ ಚಳವಳಿ ಕಟ್ಟಿದವರು. ಹೋರಾಟ ನಡೆಸಿದವರು ಎಂದು ತಿಳಿಸಿದರು.

ಚಂದ್ರಗುತ್ತಿ ಬೆತ್ತಲೆ ಸೇವೆಯ ವಿರುದ್ಧದ ಹೋರಾಟದಿಂದ ಚಂದ್ರಶೇಖರ್‌ ಅವರು ದಿಟ್ಟತೆ ಪಡೆದರು. ಸಿದ್ದರಹಳ್ಳಿಯ ಕುಳುಮೆ ಅವರ ಬದುಕಿನ ದಿಕ್ಸೂಚಿಯಂತೆ ಇದೆ. ‘ಚಂದ್ರಶಿಕಾರಿ’ಯಲ್ಲಿ ಬರುವ ‘ಗೌತಮ ನಗರ ಕಟ್ಟಿದ ಕತೆ’ ಮತ್ತು ‘ಸಿದ್ದರಹಳ್ಳಿಯ ಕುಲುಮೆ’ ಇವೆರಡು ಕೂಡ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಬೇಕಾದ, ಸಂಶೋಧನೆಗೆ ಒಳಗಾಗಬೇಕಾದ ವಿಚಾರಗಳು ಎಂದರು.

ತೋರಣಘಟ್ಟ ಅವರ ಬಾಳ ಸಂಗಾತಿ ಸಿ.ವೈ. ಯಶೋದಾ ಮಾತನಾಡಿ, ‘ಹೋರಾಟದ ಕುಟುಂಬದಿಂದ ಬಂದ ನಮ್ಮಂಥ ಹೆಣ್ಣುಮಕ್ಕಳ ಅಂತರಾಳದ ಮಾತು ಅಂದರೆ ಅದು ಕೆಂಡದ ಉಂಡೆ. ಹೇಳಲೂ ಆಗದೇ ಇಟ್ಟುಕೊಳ್ಳಲೂ ಆಗದೇ ಇರುವ ಸ್ಥಿತಿ. ಸವಾಲು ಮತ್ತು ಬಿಕ್ಕಟ್ಟುಗಳ ನಡುವೆ ಚಳವಳಿಗಾರನ ಬದುಕು ಇರುತ್ತದೆ’ ಎಂದು ಹೇಳಿದರು.

ಬದ್ಧತೆಯ, ಪ್ರಾಮಾಣಿಕ ಹೋರಾಟಗಾರನ ಕಟ್ಟಕಡೆಯ ದಿನಗಳಲ್ಲಿ ಇವನಿಂದ ಏನೂ ಪ್ರಯೋಜನವಿಲ್ಲ ಎಂದು ಬಿಡುವುದಲ್ಲ. ಕೇವಲ ಸಂಪರ್ಕಕ್ಕಾಗಿ ಸಂಪರ್ಕ ಇಟ್ಟುಕೊಳ್ಳುವುದೂ ಅಲ್ಲ. ಮಾನವೀಯ ಸಂಪರ್ಕ ಇಟ್ಟುಕೊಳ್ಳಬೇಕು. ಸಮಾಜ, ಚಳವಳಿ, ಸಂಘಟನೆಗಳು ಇಂಥ ವ್ಯಕ್ತಿಗಳನ್ನು ಕಾಪಿಡುವ ಕೆಲಸವನ್ನು ಮಾಡಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.

ಒಬ್ಬ ಹೋರಾಟಗಾರನಿಗೆ ಶ್ರದ್ಧಾಂಜಲಿ ಅರ್ಪಿಸಿದರೆ ಸಾಕೇ? ಆತನ ಹೋರಾಟದ ಹಾದಿಗಳನ್ನು ಗುರುತಿಸುವುದು ಬೇಡವೇ? ಈ ಪ್ರಶ್ನೆ ಎದುರಾಗಿದ್ದರಿಂದಲೇ ಇಂದು ‘ಚಂದ್ರ ಶಿಕಾರಿ’ ಎಂದು ಅವರ ನೆನಪಿನಲ್ಲಿ ಕೃತಿ ಹೊರತರಲು ಸಾಧ್ಯವಾಗಿದೆ ಎಂದು ನೆನಪಿಸಿಕೊಂಡರು.

ಸಾಮಾಜಿಕ ಹೋರಾಟಗಾರ ನೂರ್‌ ಶ್ರೀಧರ್‌ ಅಧ್ಯಕ್ಷತೆ ವಹಿಸಿದ್ದರು. ‘ಚಂದ್ರ ಶಿಕಾರಿ’ ಸಂಪಾದಕ ಕೈದಾಳ್‌ ಕೃಷ್ಣಮೂರ್ತಿ, ತೋರಣಘಟ್ಟ ಅವರ ಒಡನಾಡಿ ಶಿವಣ್ಣ ಕಂದೇಗಾಲ್‌, ವಕೀಲ ಅನೀಸ್‌ ಪಾಷ, ರೈತ ಚಿಂತಕ ತೇಜಸ್ವಿ ಪಟೇಲ್‌ ಅವರೂ ಇದ್ದರು.

ಅರಿವಿನ ಹಾಡುಗಳ ಪಯಣಗಳನ್ನು ನಾದ ಮಣಿನಾಲ್ಕೂರು, ಬಸವರಾಜ ಬಾದರ್ಲಿ, ಎಂಪಿಎಂ ಚಂದ್ರಶೇಖರ್‌, ಜಿಂಕ್‌ಲೈನ್‌ ಮಣಿ ನಡೆಸಿಕೊಟ್ಟರು. ಹಕ್ಕಿಪಿಕ್ಕಿ ಸಮುದಾಯದ ವಂದುವರ್ಬಿ, ಸುಜಾತಾ, ಭೂಮಿಕಾ ಉದ್ಘಾಟಿಸಿದರು. ಜನಶಕ್ತಿಯ ಸತೀಶ್‌ ಅರವಿಂದ್ ಸ್ವಾಗತಿಸಿದರು. ರೇವಣ್ಣ ಕಾರ್ಯಕ್ರಮ ನಿರೂಪಿಸಿದರು.

‘ಮೋದಿ ಸರ್ಕಾರ ಹೋಗುವವರೆಗೆ ಹೋರಾಟದ ಅಲೆಗಳು ಅಪ್ಪಳಿಸಲಿವೆ’

ಚಳವಳಿಗಳು ಮತ್ತೆ ಎದ್ದಿವೆ. ಬದಲಾವಣೆಯ ಆಶಾಭಾವನೆ ಮೂಡಿಸಿವೆ. ಮೋದಿ ಸರ್ಕಾರ ಹೋಗಿ ಪ್ರಜಾಪ್ರಭುತ್ವವಾದಿ ಸರ್ಕಾರ ಬರುವವರೆಗೆ ಹೋರಾಟದ ಅಲೆಗಳು ಅಪ್ಪಳಿಸಲಿವೆ ಎಂದು ಸಾಮಾಜಿಕ ಹೋರಾಟಗಾರ ನೂರ್‌ ಶ್ರೀಧರ್‌ ತಿಳಿಸಿದರು.

ಕಳೆದ ಶತಮಾನದ 80ರ ದಶಕದಲ್ಲಿ ಚಳವಳಿಗಳು ಉಚ್ಛ್ರಾಯ ಸ್ಥಿತಿಗೆ ತಲುಪಿದ್ದವು. ಬಳಿಕ ಇಳಿಮುಖವಾದವು. ತೋರಣಘಟ್ಟ ಅವರು ಉಚ್ಛ್ರಾಯ ಸ್ಥಿತಿಯಿಂದ ಕೆಳಮುಖವಾಗಿ ಬರುತ್ತಿರುವ ಕಾಲದಲ್ಲಿ ಬದುಕಿದ್ದರಿಂದ ಅವರಿಗೆ ಸಹಜವಾಗಿಯೇ ನಿರಾಸೆ ಉಂಟು ಮಾಡಿತ್ತು. ಈ ಶತಮಾನದಲ್ಲಿ ರೋಹಿತ್‌ ವೇಮುಲ ಮೂಲಕ ಮೊದಲ ಅಲೆ ಎದ್ದಿತ್ತು. ಬಳಿಕ ಗುಜರಾತ್‌ನ ಉನ್ನಾವೊ, ಹೀಗೆ ಒಂದೊಂದೇ ಅಲೆಗಳು ಬರತೊಡಗಿದವು. ಈಗ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಐದನೇ ಅಲೆ. ಅದರ ಬಳಿಕವೂ ಅಲೆಗಳು ಬರಲಿವೆ. ಬದಲಾದ ಹೊಸರೂಪದ ಅಲೆಗಳು ಹುಟ್ಟುತ್ತಲೇ ಬೆಳೆಯುತ್ತಲೇ ಇರಲಿವೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT