ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ನಿಲ್ಲಿಸಲಿ

ಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ಆಗ್ರಹ
Last Updated 11 ಜುಲೈ 2021, 5:23 IST
ಅಕ್ಷರ ಗಾತ್ರ

ದಾವಣಗೆರೆ: ತುಂಗಾ ನದಿಯಿಂದ ನೀರು ಎತ್ತುವಳಿ ಮಾಡದೇ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುತ್ತಿರುವುದಕ್ಕೆ ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ವಿರೋಧ ವ್ಯಕ್ತಪಡಿಸಿದೆ.

‘ಎರಡು ಚಂಡ ಮಾರುತಗಳಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಭದ್ರಾ ಜಲಾಶಯದ ಒಳಹರಿವು ಕಡಿಮೆಯಾಗಿದ್ದು, ಇದರ ನಡುವೆಯೂ ರಾಜ್ಯ ಸರ್ಕಾರ ಜುಲೈ 6ರಿಂದ ಅಕ್ಟೋಬರ್ 10ರವರೆಗೆ 12.5 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಲು ಆದೇಶಿಸಿದೆ. ಭದ್ರಾ ನೀರಾವರಿ ಸಲಹಾ ಸಮಿತಿಯ ಜೊತೆಗೆ ಚರ್ಚಿಸದೇ ನಿರ್ಧಾರ ಕೈಗೊಂಡಿರುವುದು ಅವೈಜ್ಞಾನಿಕ’ ಎಂದು ಮಹಾಮಂಡಳದ ನಿರ್ದೇಶಕ ತೇಜಸ್ವಿ ಪಟೇಲ್ ಹಾಗೂಮುದೇಗೌಡ್ರ ಗಿರೀಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ, ನೀರಿಗೆ ಬೇಡಿಕೆ, ಹರಿವಿನ ಪ್ರಮಾಣ, ಡೆಡ್‌ ಸ್ಟೋರೇಜ್ ಇವುಗಳನ್ನು ಪರಿಗಣನೆಗೆ ತೆಗೆದುಕೊಂಡು ನೀರು ಹರಿಸುವ ಜವಾಬ್ದಾರಿ ಸಲಹಾ ಸಮಿತಿಯ ಹೊಣೆಗಾರಿಕೆ. ಭದ್ರಾ ಅಚ್ಚು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ವಿರೋಧದ ನಡುವೆಯೂ 700 ಕ್ಯೂಸೆಕ್ ನೀರನ್ನು ಹರಿಸಿದೆ’ ಎಂದು ಆರೋಪಿಸಿದರು.

‘ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಎತ್ತುವಳಿ ಮಂದಗತಿಯಲ್ಲಿ ಇದೆ. ಅರಣ್ಯ ಇಲಾಖೆ ಅಡ್ಡಿ ಇದ್ದು, ಎತ್ತುವಳಿ ಆಗಲು ಇನ್ನೂ 2ರಿಂದ 3 ವರ್ಷಗಳು ಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ 2019ರಲ್ಲಿ 5 ಟಿಎಂಸಿ, 2020ರಲ್ಲಿ 10 ಹಾಗೂ 2021ರಲ್ಲಿ 12 ಟಿಎಂಸಿ ನೀರು ಹರಿಸಿದ್ದು, ವರ್ಷದಿಂದ ವರ್ಷಕ್ಕೆ ನೀರು ಹರಿಸುವ ಪ್ರಮಾಣ ಜಾಸ್ತಿಯಾಗಿದೆ’ ಎಂದು ಆಪಾದಿಸಿದರು.

‘ಜುಲೈ 15ರಂದು ನೀರಾವರಿ ಸಲಹಾ ಸಮಿತಿಯ ಸಭೆ ಇದ್ದು, ಅಲ್ಲಿ ಚರ್ಚೆಯಾದಂತೆ ತೀರ್ಮಾನ ಕೈಗೊಳ್ಳಲಿ. ಅಲ್ಲಿಯವರೆಗೂ ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿದು ನೀರು ಹರಿಸಬಾರದು. ನೀರಾವರಿ ಯೋಜನೆಗಳಿಗೆ ಗಣಿತಕ್ಕಿಂತ ವಾಸ್ತವ ಮುಖ್ಯ. ಕೂಡಲೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ’ ಎಂದು ಹೇಳಿದರು.

ಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ, ರೈತ ಮುಖಂಡರಾದ ದೇವೇಂದ್ರಪ್ಪ, ಎ.ಬಿ.ಕರಿಬಸಪ್ಪ, ಹನುಮಂತರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT