ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಸಾವಿನ ಹಾದಿಯಾಗಿದೆ ಹೆದ್ದಾರಿ

ಪಾದಚಾರಿ, ಸೈಕಲ್, ಬೈಕ್ ಸವಾರರಿಗೆ ತೊಂದರೆ, ಅತಿಕ್ರಮಣ
ಇನಾಯತ್ ಉಲ್ಲಾ ಟಿ.
Published 29 ಡಿಸೆಂಬರ್ 2023, 6:54 IST
Last Updated 29 ಡಿಸೆಂಬರ್ 2023, 6:54 IST
ಅಕ್ಷರ ಗಾತ್ರ

ಹರಿಹರ: ನಗರದಲ್ಲಿ ಹಾದು ಹೋಗಿರುವ ಹೊಸಪೇಟೆ– ಶಿವಮೊಗ್ಗ ಹೆದ್ದಾರಿಯಲ್ಲಿ ಪಾದಚಾರಿಗಳು ಹಾಗೂ ಬೈಕ್, ಸೈಕಲ್ ಸವಾರರು ಸಂಚರಿಸುವುದೆಂದರೆ ಸಾವಿನ ಹಾದಿಯಲ್ಲಿ ಸಾಗಿದಂತಾಗುತ್ತದೆ.

ನಗರದ ರೈಲ್ವೆ ಕೆಳ ಸೇತುವೆ ಮೂಲಕ (ಆರ್‌ಯುಬಿ) ಶಿವಮೊಗ್ಗ ವೃತ್ತದಿಂದ ಸಾಗಿ ಮಹಜೇನಹಳ್ಳಿ ದೇವಸ್ಥಾನ ಪಕ್ಕದ ಮಲೇಬೆನ್ನೂರು ಬಸ್ ನಿಲ್ದಾಣದವರೆಗೆ ಈ ಹೆದ್ದಾರಿ ಅತ್ಯಂತ ಅಪಾಯಕಾರಿಯಾಗಿದೆ.

ಈ ರಸ್ತೆಯಲ್ಲಿ ಭಾರಿ ವಾಹನಗಳ ಜೊತೆಗೆ ಲಘು ವಾಹನಗಳಿಂದಾಗಿಯೂ ಸಂಚಾರ ದಟ್ಟಣೆ ಅಧಿಕವಾಗುತ್ತದೆ. ಈ ವಾಹನಗಳ ಜೊತೆಗೆ ಪಾದಚಾರಿ, ಸೈಕಲ್, ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದೇ ಸಂಚರಿಸುತ್ತಾರೆ.

ನಗರದ ಹೊರಭಾಗದಲ್ಲಿ ವಿಶಾಲವಾಗಿರುವ ಹೆದ್ದಾರಿಗಳು ನಗರದೊಳಗೆ ಕಿರಿದಾಗುತ್ತವೆ. ಪ್ರಭಾವಿಗಳು ಕಟ್ಟಡ ನಿರ್ಮಾಣದ ವೇಳೆ ಆದಷ್ಟು ಹೆದ್ದಾರಿಯೆಡೆಗೇ ಚಾಚುವುದು, ಇರುವ ಫುಟ್‌ಪಾತ್‌ಗಳಲ್ಲಿ ಅಂಗಡಿಯವರು ನಾಮಫಲಕ, ಮಾರಾಟದ ವಸ್ತುಗಳನ್ನಿಡುವುದರಿಂದ ಜನ, ವಾಹನ ಸಂಚಾರ ಮತ್ತಷ್ಟು ಜಟಿಲಗೊಂಡಿದೆ.

ನಗರದೊಳಗಿರುವ ಈ ಹೆದ್ದಾರಿಯ ವಿಸ್ತೀರ್ಣ ಶಿವಮೊಗ್ಗ ವೃತ್ತ ಕೆಳಭಾಗದ ಮಲೇಬೆನ್ನೂರು ಬಸ್ ನಿಲ್ದಾಣದಿಂದ ವಿಶಾಲವಾಗಿದ್ದರೆ ನಂತರದ ಭಾಗದಲ್ಲಿ ಕಿಷ್ಕಿಂಧೆಯಂತಾಗಿದೆ. ಶಿವಮೊಗ್ಗ ವೃತ್ತದಲ್ಲಂತೂ ಒಂದು ಬದಿಯ ಹೆದ್ದಾರಿ 20 ಅಡಿಗಳಿಗೆ ಸೀಮಿತವಾಗಿದೆ.

‘ಫುಟ್‌ಪಾತ್‌ಗಳ ಮೇಲೆ ಹಲವು ಕಟ್ಟಡಗಳ ಮಾಲೀಕರು ತಮ್ಮ ಅಂಗಡಿಯ ಮೇಲಂತಸ್ತಿಗೆ ತೆರಳಲು ಮೆಟ್ಟಿಲು ನಿರ್ಮಿಸಿದ್ದಾರೆ. ಗ್ರಾಹಕರು ನಿಂತುಕೊಳ್ಳಲು ಜಾಗ ಮಾಡಿಕೊಂಡಿದ್ದರಿಂದ ಪಾದಚಾರಿಗಳು ಓಡಾಡಲು ಜಾಗ ಇಲ್ಲವಾಗಿದೆ’ ಎಂಬ ಆರೋಪ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅಮಾಯಕರ ಬಲಿ: ಹೆದ್ದಾರಿಯ ಈ ಭಾಗದ ಮೂಲಕವೇ ನಗರದ ದಕ್ಷಿಣ ಭಾಗದಲ್ಲಿರುವ ಗಿರಿಯಮ್ಮ, ಡಿಆರ್‌ಎಂ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಂಬೇಡ್ಕರ್, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಐಟಿಐ ಸೇರಿ ವಿವಿಧ ಶಾಲೆ– ಕಾಲೇಜುಗಳಿಗೆ, ಉತ್ತರ ಭಾಗದಲ್ಲಿರುವ ಎಂಕೆಇಟಿ, ವಿದ್ಯಾದಾಯಿನಿ, ಸೇಂಟ್ ಮೆರೀಸ್ ಹಾಗೂ ವಿವಿಧ ಶಾಲೆ, ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ.

ಈ ಭಾಗದಲ್ಲಿ ಸಂಚರಿಸುವಾಗಲೇ ಹಲವು ವಿದ್ಯಾರ್ಥಿಗಳು, ಜನರು ಲಾರಿ, ಬಸ್‌ಗಳಿಗೆ ಆಹುತಿಯಾಗಿದ್ದಾರೆ. ಕೆಲವರು ಶಾಶ್ವತವಾಗಿ ವಿಕಲಚೇತನರಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಗಣ್ಯರು ನಗರಕ್ಕೆ ಭೇಟಿ ನೀಡುವಾಗ ಹಾಗೂ ಮೆರವಣಿಗೆಗಳಿದ್ದಾಗ ರಸ್ತೆ ಫುಟ್‌ಪಾತ್‌ಗಳ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗುವ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರು ನಂತರ ಮೈ ಮರೆಯುತ್ತಾರೆ.

ಈ ಹೆದ್ದಾರಿ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಜನರ ಸುರಕ್ಷತೆಗೆ ಗಮನ ನೀಡಬೇಕಾದ ನಗರಸಭೆ, ಪೊಲೀಸ್ ಇಲಾಖೆ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕಿದೆ. ಇದರೊಂದಿಗೆ ಕಟ್ಟಡಗಳ ಮಾಲೀಕರು, ತಾಲ್ಲೂಕು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೂಡ ಕೈಜೋಡಿಸಬೇಕಿದೆ. ಸಾವಿನ ಹಾದಿಯನ್ನು ಸುರಕ್ಷಿತ ಹಾದಿಯಾಗಿ ಬದಲಿಸಬೇಕಿದೆ.

ಹರಿಹರದ ಶಿವಮೊಗ್ಗ ವೃತ್ತದಲ್ಲಿ ಫುಟ್‌ಪಾತ್ ಅತಿಕ್ರಮಿಸಿರುವುದು
ಹರಿಹರದ ಶಿವಮೊಗ್ಗ ವೃತ್ತದಲ್ಲಿ ಫುಟ್‌ಪಾತ್ ಅತಿಕ್ರಮಿಸಿರುವುದು
ಹರಿಹರದ ಶಿವಮೊಗ್ಗ ವೃತ್ತದಲ್ಲಿ ಫುಟ್‌ಪಾತ್ ಅತಿಕ್ರಮಿಸಿರುವುದು
ಹರಿಹರದ ಶಿವಮೊಗ್ಗ ವೃತ್ತದಲ್ಲಿ ಫುಟ್‌ಪಾತ್ ಅತಿಕ್ರಮಿಸಿರುವುದು
ಎಸ್.ಗೋವಿಂದ
ಎಸ್.ಗೋವಿಂದ
ಐಗೂರು ಬಸವರಾಜ್   
ಐಗೂರು ಬಸವರಾಜ್   

Quote - ಹತ್ತಾರು ವಿದ್ಯಾರ್ಥಿಗಳು ಅಮಾಯಕರು ಅಪಘಾತಗಳಲ್ಲಿ ಸಾವಿಗೀಡಾಗಿದ್ದರಿಂದ ಈ ಹೆದ್ದಾರಿಗೆ ಕಿಲ್ಲರ್ ರಸ್ತೆ ಎಂಬ ಕುಖ್ಯಾತಿ ಇದೆ. ಅಧಿಕಾರಿಗಳು ಜನಪ್ರತಿನಿಧಿಗಳು ಜನರ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಎಸ್.ಗೋವಿಂದ್ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ

Quote - ಪಾದಚಾರಿಗಳು ಹಾಗೂ ವಾಹನ ಸವಾರರ ಸುಲಲಿತ ಸಂಚಾರಕ್ಕೆ ಫುಟ್‌ಪಾತ್ ಆಕ್ರಮಿಸಿಕೊಂಡು ನಿರ್ಮಿಸಿರುವ ಮೆಟ್ಟಿಲು ಅಳವಡಿಸಲಾದ ನಾಮಫಲಕಗಳಿದ್ದರೆ ಪೊಲೀಸ್ ಇಲಾಖೆ ಸಹಕಾರದಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತೇವೆ ಐಗೂರು ಬಸವರಾಜ್ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT