ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ ಪುಂಡ ವಿದ್ಯಾರ್ಥಿಗಳು

Last Updated 11 ಡಿಸೆಂಬರ್ 2021, 12:47 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಪ್ರಕಾಶ್ ಭೋಗೆರ್ ಅವರ ತಲೆಗೆ ಕಸದ ಬುಟ್ಟಿ ಹಾಕಿ ಪುಂಡಾಟಿಕೆ ನಡೆಸಿದ್ದ ಆರು ವಿದ್ಯಾರ್ಥಿಗಳು ಶನಿವಾರ ಶಾಲೆಯಲ್ಲಿ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆಕೋರಿದ್ದಾರೆ.

‘ಶಾಲಾ ಕೊಠಡಿಯೊಳಗೆ ಗುಟ್ಕಾ ತರುವುದು ಸರಿಯಲ್ಲ’ ಎಂದು ಡಿಸೆಂಬರ್‌ 3ರಂದು ಬುದ್ಧಿವಾದ ಹೇಳಿದ ಶಿಕ್ಷಕರ ತಲೆ ಮೇಲೆಯೇ ಕಸದ ಬುಟ್ಟಿಯನ್ನು ಹಾಕಿ ಕೀಟಲೆ ಮಾಡಿದ್ದ ವಿಡಿಯೊ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದೀಗ ಗ್ರಾಮದ ಮುಖಂಡರು ಹಾಗೂ ಪೊಷಕರ ಸಮ್ಮುಖದಲ್ಲಿ ಪುಂಡ ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆರಗಿ ಕ್ಷಮೆಯಾಚಿಸಿದ ವಿಡಿಯೊ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆ ಬೆಳಕಿಗೆ ಬಂದ ಬಳಿಕ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಡಿಡಿಪಿಐ ಜಿ.ಆರ್‌. ತಿಪ್ಪೇಶಪ್ಪ ನೇತೃತ್ವದಲ್ಲಿ ಶುಕ್ರವಾರ ಶಾಲೆಯಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆಯಿಂದ ಉಚ್ಚಾಟಿಸಬಾರದು ಎಂದು ಪೋಷಕರು ಮನವಿ ಮಾಡಿದ್ದರು. ಹೀಗಾಗಿ ‘ಪೊಲೀಸ್‌ ಠಾಣೆಗೆ ದೂರು ನೀಡಿ, ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಡಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಪುಂಡಾಟಿಕೆ ನಡೆಸಿದ್ದ ವಿದ್ಯಾರ್ಥಿಗಳನ್ನು ಗ್ರಾಮದ ಮುಖಂಡರು ಹಾಗೂ ಪೋಷಕರು ಶನಿವಾರ ಬೆಳಿಗ್ಗೆ ಹಿಂದಿ ಶಿಕ್ಷಕ ಪ್ರಕಾಶ್ ಬೋಗೆರ್ ಅವರ ಬಳಿಗೆ ಕರೆ ತಂದರು. ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮದ ಮುಖಂಡರು, ಕ್ಷಮೆ ಕೋರುವಂತೆ ಸೂಚಿಸಿದರು. ‘ನಾವು ಮಾಡಿದ್ದು ತಪ್ಪು. ನಮ್ಮನ್ನು ಕ್ಷಮಿಸಿ’ ಎಂದು ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೋರಿದರು.

ಶಿಕ್ಷಕ ಪ್ರಕಾಶ್ ಭೋಗೆರ್ ಮಾತನಾಡಿ, ‘ವಿದ್ಯಾರ್ಥಿಗಳು ಶಾಲೆಗೆ ಓದುವುದಕ್ಕಾಗಿ ಬರುತ್ತಾರೆ. ಶಾಲೆ ಗುಡಿ ಇದ್ದಂತೆ. ಗುಡಿಯನ್ನು ಅಪವಿತ್ರ ಮಾಡಿದಾಗ ಶಿಕ್ಷಕರು ಬೈಯುವುದು ಸಹಜ. ಇದನ್ನು ಅರಿತುಕೊಳ್ಳದೇ ಹುಡುಗಾಟಿಕೆ ಬುದ್ಧಿಯನ್ನು ಹೊಂದಿರುವ ಈ ವಿದ್ಯಾರ್ಥಿಗಳು ನನಗೆ ಕಿರುಕುಳ ನೀಡಿದ್ದಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಅವರ ತಪ್ಪನ್ನು ಮನ್ನಿಸಿದ್ದೇನೆ. ಮುಂದೆ ಇಂತಹ ಘಟನೆಗಳು ನಡೆಯಬಾರದು’ ಎಂದು ಹೇಳಿದರು.

ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರೌಢಶಾಲೆ ವಿಭಾಗದ 10ನೇ ತರಗತಿಯ ‘ಸಿ’ ವಿಭಾಗದ ಆರು ವಿದ್ಯಾರ್ಥಿಗಳ ವಿರುದ್ಧ ಶಾಲೆಯ ಶಿಕ್ಷಕರು ಚನ್ನಗಿರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT