ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಿ ಟೂರಿಸಂ ಮಾಡಲು ಕ್ರಮ ವಹಿಸಿ: ಸಚಿವ ನಾರಾಯಣ ಗೌಡ ಸೂಚನೆ

Last Updated 10 ಸೆಪ್ಟೆಂಬರ್ 2020, 16:22 IST
ಅಕ್ಷರ ಗಾತ್ರ

ದಾವಣಗೆರೆ: ಯುವಪೀಳಿಗೆಗೆ ಕೃಷಿ, ತೋಟಗಾರಿಕೆಯನ್ನು ಅರ್ಥ ಮಾಡಿಸಲು ಅಗ್ರಿ ಟೂರಿಸಂ ಯೋಜನೆ ಹಮ್ಮಿಕೊಳ್ಳಲಾಗುವುದು. ಈ ಜಿಲ್ಲೆಯಲ್ಲಿ ಕೂಡ ಅಗ್ರಿ ಟೂರಿಸಂ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಸಚಿವ ನಾರಾಯಣ ಗೌಡ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತೋಟಗಾರಿಕೆ, ರೇಷ್ಮೆ, ಮತ್ತು ಪೌರಾಡಳಿತ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ದಾಳಿಂಬೆ ತಿನ್ನುವುದು ಮಕ್ಕಳಿಗೆ ಗೊತ್ತು. ಆದರೆ ಹೇಗೆ ಬೆಳೆಯುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಗದ್ದೆ ಕೃಷಿ ಗೊತ್ತಿಲ್ಲ. ಇವೆಲ್ಲವನ್ನೂ ತಿಳಿಸಿಕೊಡುವ ಕೆಲಸ ಆಗಬೇಕು. ಅದಕ್ಕಾಗಿ ವೀಕ್ಷಣೆಗೆ ಉತ್ತಮ ಅವಕಾಶ ಇರುವ, ಒಳ್ಳೆಯ ಕೃಷಿ ಇರುವ ಪ್ರದೇಶವನ್ನು ಇದಕ್ಕೆ ಬಳಸಿಕೊಳ್ಳಬೇಕು. ರೈತರಲ್ಲಿ ತೋಟದ ಮನೆಗಳು ಇರುತ್ತವೆ. ಅವುಗಳನ್ನು ಹೋಂಸ್ಟೇಗಳಾಗಿ ಬಳಸಬೇಕು. ಅಗ್ರಿ ಟೂರಿಸಂಗೆ ಬಂದವರಿಗೆ ಉಳಿಯಲು, ಊಟ, ನೀರು, ಸ್ನಾನಕ್ಕೆ ತೊಂದರೆ ಆಗದಂತೆ ಮಾಡಿಕೊಳ್ಳಲು ಸಾಧ್ಯ ಇರುವ ಕಡೆ ಈ ವ್ಯವಸ್ಥೆ ಮಾಡಿ. ಅಗ್ರಿ ಟೂರಿಸಂಗೆ ದಿನಕ್ಕೆ ಇಷ್ಟು ಎಂದು ಶುಲ್ಕ ನಿಗದಿ ಮಾಡಬಹುದು ಎಂದು ಸೂಚನೆ ನೀಡಿದರು.

ರೋಡ್‌ ಸಂತೆ: ಪೇಟೆಗಳಲ್ಲಿ ಇರುವ ಸಂತೆಗೆ ಹೋಗಿ ಹಣ್ಣು ತರಕಾರಿ ಖರೀದಿ ಮಾಡುತ್ತಾರೆ. ಅದೇ ರೀತಿ ರಸ್ತೆ ಬದಿಯಲ್ಲಿ ಸಂತೆ ಮಾಡುವಂತಾಗಬೇಕು. ಯಾವುದೋ ಊರಿನವರು ಈ ರಸ್ತೆಗಳಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಹಣ್ಣು, ತರಕಾರಿಗಳನ್ನು ನೋಡಿ ನಿಲ್ಲಿಸಿ ಬೇಕಾದಷ್ಟು ಒಯ್ಯುತ್ತಾರೆ. ಆಗ ಮಧ್ಯವರ್ತಿಗಳಿಗೆ, ವರ್ತಕರಿಗೆ ಲಾಭ ಹೋಗುವ ಬದಲು ನೇರವಾಗಿ ಕೃಷಿಕರಿಗೇ ಲಾಭ ಸಿಗುತ್ತದೆ. ಅಂಥ ಸಂತೆ ಮಾಡುವಲ್ಲಿ ಶೌಚಾಲಯ, ಮಳೆಯಿಂದ ರಕ್ಷಿಸಿಕೊಳ್ಳುವ ವ್ಯವಸ್ಥೆ ಇರಬೇಕು. ಇವೆಲ್ಲವನ್ನು ಜಿಲ್ಲಾ ಪಂಚಾಯಿತಿಯಿಂದ ಮಾಡಿಸಬಹುದು ಎಂದು ತಿಳಿಸಿದರು.

ರೈತರು ಬೆಳೆದಂತಹ ಬೆಳಗಳು ಹಾಳಾಗದಂತೆ ನೋಡಿಕೊಳ್ಳಲು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಅವಶ್ಯವಿರುವುದರಿಂದ ಅವನ್ನು ಸ್ಥಾಪಿಸಬೇಕು. ಅದಕ್ಕಾಗಿ ಜಾಗ ಗುರುತಿಸಬೇಕು. ಎಲ್ಲ ರೈತರಿಗೆ ಬೆಳೆ ವಿಮೆ ಮಾಡಿಸಿಕೊಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 650 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಮಳೆ ಹೆಚ್ಚಾಗಿ ಈರುಳ್ಳಿ ಕೊಳೆತು ಹೋಗುತ್ತಿದೆ. ರೈತರಿಗೆ ನಷ್ಟವಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಗಮನ ಹರಿಸಬೇಕು ಎಂದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 77.56 ಹೆಕ್ಟರ್ ಪ್ರದೇಶದ ಬೆಳೆ ಹಾನಿಯಾಗಿದೆ. 130 ಸಂತ್ರಸ್ತ ರೈತರ ಖಾತೆಗೆ ₹ 11 ಲಕ್ಷ ಪರಿಹಾರ ಜಮಾ ಆಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನೀರ್ದೆಶಕ ಲಕ್ಷ್ಮೀಕಾಂತ್ ಬೋಮ್ಮನ್ನರ್‌ ಮಾಹಿತಿ ನೀಡಿದರು.

ಕೆಲ ಜಿಲ್ಲೆಗಳಲ್ಲಿ ಹಳೆಯ ಕೃಷಿ ಹೊಂಡಗಳ ಮಣ್ಣನ್ನು ತೆಗೆದು ಬಿಲ್ ಪಾಸ್ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಅಂಥವಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, ಈ ಬಾರಿ ಮುಂಬೈಯಲ್ಲಿ 4 ರೇಷ್ಮೆ ಸೀರೆಯ ಅಂಗಡಿಯನ್ನು ಹಾಗೂ ಅಮೆರಿಕದಲ್ಲಿ ನಡೆಯುವ ’ಅಕ್ಕ’ ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ಉತ್ಪಾದಿಸುವ ರೇಷ್ಮೆಯ ಮಾರ್ಕೆಟಿಂಗ್ ಮಾಡಲಾಗುವುದು. ವಿಶ್ವ ವ್ಯಾಪ್ತಿಯಲ್ಲಿ ರೇಷ್ಮೆಯ ಖ್ಯಾತಿಯನ್ನು ಹೆಚ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ರೇಷ್ಮೆ ಇಲಾಖೆಯ ಉಪನೀರ್ದೇಶಕ ಹರ್ಷ ರೇಷ್ಮೆ ಇಲಾಖೆಯ ಮಾಹಿತಿ ನೀಡಿದರು. ಚನ್ನಗಿರಿ ತಾಲ್ಲೂಕಿನಲ್ಲಿ ರೇಷ್ಮೆ ಸಾಕಾಣಿಕೆಗೆ ಸಂಬಂಧಿಸಿರುವ 33 ಎಕರೆ ಪ್ರದೇಶ ಒತ್ತುವರಿಯಾಗುತ್ತಿದ್ದು, ಟ್ರಂಚ್‌ ಹಾಗೂ ತಂತಿ ಬೇಲಿ ಹಾಕಲು ಅನುದಾನ ಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್ ಮನವಿ ಮಾಡಿದರು.

ಅಂಗಡಿ ಮಳಿಗೆಗಳ ತೆರಿಗೆ ಶೇ 20ರಷ್ಟು ಮಾತ್ರ ಇದೆ. ಸಿಬ್ಬಂದಿ ಕೊರತೆಯಿಂದ ತೆರಿಗೆ ಸಂಗ್ರಹ ಸಾಧ್ಯವಾಗುತ್ತಿಲ್ಲ ಎಂದು ನಗರಾಭಿವೃದ್ಧಿಕೋಶದ ಯೋಜನ ನಿರ್ದೇಶಕಿ ನಜ್ಮಾ ವಿವರಿಸಿದರು.

ಒಣಕಸವನ್ನು ಸಿಮೆಂಟ್‌ ಫ್ಯಾಕ್ಟರಿಗೆ ನೀಡಲಾಗುತ್ತಿದೆ ಎಂದು ರಾಜ್ಯಮಟ್ಟದ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇಲ್ಲಿ ನೋಡಿದರೆ ಪ್ಲಾಸ್ಟಿಕ್‌ ಮುಂತಾದ ಕಸವನ್ನು ಕಟ್ಟಿ ಇಡಲಾಗುತ್ತಿದೆ. ಸಿಮೆಂಟ್‌ ಫ್ಯಾಕ್ಟರಿಗಳಿಗೆ ಹೋಗುತ್ತಿಲ್ಲ. ಕೂಡಲೇ ಕಳುಹಿಸುವ ಕೆಲಸ ಮಾಡಿ. ಇಲ್ಲದಿದ್ದರೆ ಪರಿಸರಕ್ಕೆ ಹಾನಿಯಾಗದಂತೆ ಉರಿಸಲು ಸಾಧ್ಯವೇ ನೋಡಿ ಎಂದು ಸಚಿವರು ಸಲಹೆ ನೀಡಿದರು.

ಹರಿಹರ ನಗರಸಭೆಗೆ ಮಂಜೂರಾಗಿರುವ ₹ 8 ಕೋಟಿ ಸ್ಥಗಿತವಾಗಿರುವ ಬಗ್ಗೆ ಶಾಸಕ ರಾಮಪ್ಪ ಗಮನ ಸೆಳೆದರು.

ಪೌರಾಡಳಿತ ನಿರ್ದೇಶನಾಲಯದ ಸ್ಥಾನಿಕ ಅಧಿಕಾರಿ ವೀರೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರೂ ಇದ್ದರು.

ಗ್ಲಾಸ್‌ಹೌಸ್ ಪ್ರಚಾರ ಸಾಲದು
ಇಲ್ಲಿ ಸುಸಜ್ಜಿತ ಗ್ಲಾಸ್‌ಹೌಸ್‌ ಇದೆ ಎಂಬುದು ನನಗೆ ಇಲ್ಲಿಗೆ ಬಂದಮೇಲಷ್ಟೇ ಗೊತ್ತಾಯಿತು. ಹಾಗಾಗಿ ಹೈವೆಯಲ್ಲಿ ಈ ಬಗ್ಗೆ ಪ್ರಚಾರ ಫಲಕ ಅಳವಡಿಸಬೇಕು ಎಂದು ಸಚಿವರು ಸೂಚಿಸಿದರು.

ಎಲ್ಲೋ ಹೋಗುವವರು 20 ನಿಮಿಷ ಗ್ಲಾಸ್‌ಹೌಸ್‌ ನೋಡಿಕೊಂಡು ಹೋಗುವಂತಾಗಬೇಕು. ಅಲ್ಲೇ ಪಕ್ಕದಲ್ಲಿ ಉತ್ತಮ ಆಹಾರ ದೊರೆಯಬೇಕು. ಅದಕ್ಕೆಲ್ಲ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿ ಎಂದು ತಿಳಿಸಿದರು.

‘ಇಲಾಖೆ ತಲೆಯೊಳಗೆ ಇರಬೇಕು’
ಸಭೆಗೆ ಬರುವಾಗ ಪೂರ್ಣವಾಗಿ ತಯಾರಾಗಿ ಬರಬೇಕು. ಇಲಾಖೆಯೇ ತಲೆಯೊಳಗೆ ಇದ್ದರೆ ಮಾಹಿತಿಗೆ ಪರದಾಡಬೇಕಿಲ್ಲ. ಅರೆಬರೆ ಮಾಹಿತಿ ನೀಡಲು ಯಾರೂ ಬರಬಾರದು ಎಂದು ನಾರಾಯಣ ಗೌಡ ಎಚ್ಚರಿಸಿದರು.

ಹರಿಹರ ನಗರಸಭೆಯ ಕಸ ಸಂಗ್ರಹಕ್ಕೆ ಸಂಬಂಧಿಸಿದಂತೆ ಮತ್ತು ತೋಟಗಾರಿಕೆ ಇಲಾಖೆಯ ತೆಂಗಿನ ಸಸಿ ವಿತರಣೆಗೆ ಸಂಬಂಧಿಸಿದ ಮಾಹಿತಿ ನೀಡುವಾಗ ಅಧಿಕಾರಿಗಳು ತಡವರಿಸಿದಾಗ ಎರಡು ಬಾರಿ ಈ ಎಚ್ಚರಿಕೆ ನೀಡಿದರು.

ಮೈಸೂರು ಸಿಲ್ಕ್‌ ಶೋರೂಂ ತೆರೆಸಲು ಸೂಚನೆ
ಜಿಲ್ಲೆಯಲ್ಲಿ ಮುಚ್ಚಲಾಗಿದ್ದ ಮೈಸೂರು ಸಿಲ್ಕ್ ಸೀರೆಯ ಅಂಗಡಿಯನ್ನು ತೆರೆಯಲು ಸೂಚಿಸುತ್ತೇನೆ. ರಾಜ್ಯದಾದ್ಯಂತ ರೇಷ್ಮೆ ಸೀರೆ ಅಂಗಡಿಗಳನ್ನು ತೆರೆಯುವುದರಿಂದ ಮಹಿಳೆಯರಿಗೂ ಉದ್ಯೋಗ ಸಿಗುತ್ತದೆ. ಅವರಿಗೆ ಸಂಬಳದ ಜೊತೆ ಪ್ರೋತ್ಸಾಹಕ ಭತ್ಯೆಯನ್ನು ನೀಡಲಾಗುವುದು ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT