ಶನಿವಾರ, ಸೆಪ್ಟೆಂಬರ್ 18, 2021
26 °C
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ

ಮೊಬೈಲ್ ಟವರ್ ತೆರಿಗೆ ₹61 ಲಕ್ಷ ಬಾಕಿ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಿರುವ ಮೊಬೈಲ್ ಟವರ್ ಕಂಪನಿಗಳಿಂದ ತೆರಿಗೆ ವಸೂಲಾತಿಯಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಹಿಂದೆ ಬಿದ್ದಿವೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದರಿಂದ ಮೊಬೈಲ್ ಟವರ್ ಸ್ಥಾಪಿಸಿರುವ ಖಾಸಗಿ ಕಂಪನಿಗಳು ಎರಡರಿಂದ ಆರು ವರ್ಷ ಕಳೆದರೂ ಲಕ್ಷಾಂತರ ರೂಪಾಯಿ ತೆರಿಗೆಯ ಹಣ ಬಾಕಿ ಉಳಿಸಿಕೊಂಡಿವೆ. ಇದರಿಂದ ಬೀದಿ ದೀಪದ ವ್ಯವಸ್ಥೆ, ಚರಂಡಿ ಸ್ವಚ್ಛತೆ, ಸಿಬ್ಬಂದಿ ವೇತನ, ಕುಡಿಯುವ ನೀರಿನ ನಿರ್ವಹಣೆ ಮಾಡುವುದು ಗ್ರಾಮ ಪಂಚಾಯಿತಿಗಳಿಗೆ ಕಷ್ಟವಾಗುತ್ತಿದೆ.

ಮನೆ ತೆರಿಗೆ, ಕಟ್ಟಡ ಪರವಾನಗಿ ತೆರಿಗೆ, ವಾಣಿಜ್ಯ ಮಳಿಗೆ ಸೇರಿದಂತೆ ಸಾಮಾನ್ಯ ತೆರಿಗೆಗಳಿಂದ ಸಂಗ್ರಹಿಸುವ ತೆರಿಗೆ ಹಣವನ್ನು ವರ್ಗ–1ರ ಖಾತೆಗೆ ಪಾವತಿಸುತ್ತಾರೆ. ಅಲ್ಲಿ ಸಂಗ್ರಹವಾಗುವ ಹಣದಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪದ ವ್ಯವಸ್ಥೆಗೆ ವ್ಯಯಿಸುತ್ತಾರೆ. ₹ 1 ಲಕ್ಷಕ್ಕಿಂತ ಹೆಚ್ಚು ಹಣ ಬಳಕೆಯಾದರೆ ಟೆಂಡರ್ ಪ್ರಕ್ರಿಯೆ ಮೂಲಕ, ₹ 1 ಲಕ್ಷಕ್ಕಿಂತ ಕಡಿಮೆ ಖರ್ಚಿದ್ದರೆ ಟೆಂಡರ್ ರಹಿತವಾಗಿ ಬಳಕೆ ಮಾಡುವ ಪರಿಪಾಠವಿದೆ. ಮಾಡಿದ ಖರ್ಚಿಗೆ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಿ ಇರುವ ಚೆಕ್ ಮೂಲಕವೇ ಹಣ ಪಾವತಿಸಬೇಕು ಎನ್ನುವ ನಿಯಮ ಜಾರಿಯಲ್ಲಿದೆ.

2020 ಮತ್ತು 2021ನೇ ಸಾಲಿನಲ್ಲಿ ಕೋವಿಡ್ ಲಾಕ್‌ಡೌನ್ ಪರಿಣಾಮ ವಿವಿಧ ತೆರಿಗೆಗಳನ್ನು ಸಂಗ್ರಹಿಸುವಲ್ಲಿ
ಕೆಲ ಪಂಚಾಯಿತಿಗಳಲ್ಲಿ ಹಿನ್ನಡೆಯಾಗಿದೆ. ಚಟ್ನಿಹಳ್ಳಿ, ಹೊಸಕೋಟೆ, ಕೂಲಹಳ್ಳಿ, ಮಾಡ್ಲಗೇರಿ, ನಿಟ್ಟೂರು ಗ್ರಾಮ
ಪಂಚಾಯಿತಿಗಳಲ್ಲಿ ಮೊಬೈಲ್ ಟವರ್‌ಗಳಿಂದ ಶೇ 100ರಷ್ಟು ತೆರಿಗೆ ಪಾವತಿಯಾಗಿದೆ.

ಅಣಜಿಗೆರೆ ₹ 3.84 ಲಕ್ಷ, ಅಡವಿಹಳ್ಳಿ ₹ 5.76 ಲಕ್ಷ, ಅರಸೀಕೆರೆ‌ ₹ 5.76 ಲಕ್ಷ, ಬಾಗಳಿ ₹ 3.60 ಲಕ್ಷ, ಬೆಣ್ಣಿಹಳ್ಳಿ ₹ 2.88 ಲಕ್ಷ, ಚಿಗಟೇರಿ ₹ 2.40 ಲಕ್ಷ, ಚಿರಸ್ತಹಳ್ಳಿ ₹ 36 ಸಾವಿರ, ದುಗ್ಗಾವತಿ ₹36 ಸಾವಿರ, ಗುಂಡಗತ್ತಿ ₹ 1.20 ಲಕ್ಷ, ಹಲುವಾಗಲು ₹ 3.60 ಲಕ್ಷ, ಹಾರಕನಾಳು ₹ 2.80 ಲಕ್ಷ, ಹಿರೇಮೇಗಳಗೆರೆ ₹ 72 ಸಾವಿರ, ಕೆ. ಕಲ್ಲಹಳ್ಳಿ ₹ 96 ಸಾವಿರ, ಕಡಬಗೆರೆ ₹ 1.20 ಲಕ್ಷ, ಕಂಚಿಕೇರೆ ₹ 1.80 ಲಕ್ಷ, ಕುಂಚೂರು ₹ 2 ಲಕ್ಷ, ಮತ್ತಿಹಳ್ಳಿ 1.20 ಲಕ್ಷ, ಮೈದೂರು ₹ 2.20 ಲಕ್ಷ, ನಂದಿಬೇವೂರು ₹ 1.92 ಲಕ್ಷ, ನಿಚ್ಚವ್ವನಹಳ್ಳಿ ₹ 1.08 ಲಕ್ಷ, ನೀಲಗುಂದ ₹ 24 ಸಾವಿರ, ಪುಣಬಗಟ್ಟ ₹ 1.08 ಲಕ್ಷ, ರಾಗಿಮಸಲವಾಡ ₹ 1.20 ಲಕ್ಷ, ಸಾಸ್ವಿಹಳ್ಳಿ ₹6 ಲಕ್ಷ, ಶಿಂಗ್ರಿಹಳ್ಳಿ ₹ 60 ಸಾವಿರ, ತೆಲಿಗಿ ₹ 3.06 ಲಕ್ಷ, ತೌಡೂರು ₹3 ಲಕ್ಷ, ತೊಗರಿಕಟ್ಟೆ ₹12 ಸಾವಿರ, ಉಚ್ಚಂಗಿದುರ್ಗ ₹36 ಸಾವಿರ, ಯಡಿಹಳ್ಳಿ ₹ 84 ಸಾವಿರ, ಕಡತಿ ₹ 24 ಸಾವಿರ, ಲಕ್ಷ್ಮೀಪುರ ₹ 36 ಸಾವಿರ ಸೇರಿ ಒಟ್ಟು ₹ 61.12 ಲಕ್ಷ ತೆರಿಗೆ ವಸೂಲಾತಿ ಬಾಕಿ ಉಳಿದಿದೆ ಎಂದು ತಾಲ್ಲೂಕು ಪಂಚಾಯಿತಿ ಕಚೇರಿಯು ಬಳ್ಳಾರಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.