ಟೆನಿಸ್‌ ಗ್ಯಾಲರಿ, ಜಿಮ್‌ ನಿರ್ಮಾಣಕ್ಕೆ ನೆರವು

7
ರಾಜ್ಯ ಮಟ್ಟದ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಶಾಮನೂರು

ಟೆನಿಸ್‌ ಗ್ಯಾಲರಿ, ಜಿಮ್‌ ನಿರ್ಮಾಣಕ್ಕೆ ನೆರವು

Published:
Updated:
Deccan Herald

ದಾವಣಗೆರೆ: ಇಲ್ಲಿನ ಹೈಸ್ಕೂಲ್‌ ಮೈದಾನದಲ್ಲಿರುವ ಟೆನಿಸ್‌ ಅಂಗಣದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಗ್ಯಾಲರಿ ಹಾಗೂ ಜಿಮ್‌ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಭರವಸೆ ನೀಡಿದರು.

ಡಿಸ್ಟಿಕ್‌ ಟೆನಿಸ್‌ ಅಸೋಸಿಯೇಷನ್‌ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಆಹ್ವಾನಿತ ಟೆನಿಸ್‌ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಟೆನಿಸ್‌ ಅಸೋಸಿಯೇಷನ್‌ನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಶಕ್ತಿವಂತರೇ ಇದ್ದಾರೆ. ಅವರೆಲ್ಲಾ ಸಾಧ್ಯವಾದಷ್ಟು ಸಂಪನ್ಮೂಲ ಬಳಸಿ, ಗ್ಯಾಲರಿ ನಿರ್ಮಾಣಕ್ಕೆ ಮುಂದಾಗಲಿ. ಹೆಚ್ಚುವರಿಯಾಗಿ ಬೇಕಾಗುವ ನೆರವನ್ನು ವೈಯಕ್ತಿಕವಾಗಿ ನೀಡುತ್ತೇನೆ’ ಎಂದು ತಿಳಿಸಿದರು.

ಅಸೋಸಿಯೇಷನ್‌ನ ಉಪಾಧ್ಯಕ್ಷರೂ ಆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮಾತನಾಡಿ, ‘ಸಣ್ಣ ನಗರಗಳಲ್ಲೂ ಟೆನಿಸ್‌ ಈಗ ಬೆಳೆಯುತ್ತಿದೆ. ದಾವಣಗೆರೆಯ ಅಸೋಸಿಯೇಷನ್‌ನಲ್ಲೂ ಅತ್ಯುತ್ತಮ ಆಟಗಾರರು ಇದ್ದಾರೆ. ಉತ್ತಮ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆ’ ಎಂದರು.

ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ‘ದಾವಣಗೆರೆ ಜಿಲ್ಲಾ ಟೆನಿಸ್‌ ಅಸೋಸಿಯೇಷನ್‌ನಲ್ಲಿ ಈಗಾಗಲೇ ಮೂವರು ತರಬೇತುದಾರರಿದ್ದಾರೆ. ಸರ್ಕಾರದಿಂದಲೂ ಒಬ್ಬ ಉತ್ತಮ ಕೋಚ್‌ ನೇಮಕ ಮಾಡಿದರೆ ಇನ್ನಷ್ಟು ವೃತ್ತಿಪರ ಕ್ರೀಡಾಪಟುಗಳು ತಯಾರಾಗಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಈ ಮೊದಲು ರಾಜ್ಯ ತಂಡಗಳಿಗೆ ಬೆಂಗಳೂರು, ಮೈಸೂರು ನಗರದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಇತ್ತೀಚೆಗೆ ಗ್ರಾಮೀಣ ಭಾಗದ ಕ್ರೀಡಾಪಟುಗಳೂ ಸ್ಥಾನ ಪಡೆಯುತ್ತಿದ್ದಾರೆ. ಇನ್ನಷ್ಟು ವೃತ್ತಿಪರ ತರಬೇತಿ ಸಿಕ್ಕರೆ ಪ್ರತಿಭಾವಂತರಿಗೆ ಮುಂದೆ ಬರಲು ಅವಕಾಶ ನೀಡಿದಂತಾಗುತ್ತದೆ ಎಂದರು.

ಅಸೋಸಿಯೇಷನ್‌ನ ಕಾರ್ಯಾಧ್ಯಕ್ಷ ಡಾ. ಎಸ್‌.ಎಂ. ಬ್ಯಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ, ಬಾಬಣ್ಣ, ರಾಜನಹಳ್ಳಿ ರವೀಂದ್ರನಾಥ್‌ ಅವರೂ ಇದ್ದರು.

ರಾಜ್ಯದ ವಿವಿಧೆಡೆಯಿಂದ 200ಕ್ಕೂ ಹೆಚ್ಚು ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. 16, 35, 45 ಮತ್ತು 55 ಹಾಗೂ 65 ವರ್ಷಕ್ಕೆ ಮೇಲ್ಪಟ್ಟ ಮತ್ತು ತೆರೆದ ಗುಂಪಿನಲ್ಲಿ ಸಿಂಗಲ್ಸ್‌ ಮತ್ತು ಡಬಲ್ಸ್‌ ಪಂದ್ಯಗಳನ್ನು ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !