ಗುರುವಾರ , ಆಗಸ್ಟ್ 5, 2021
21 °C

ಊಟದ ತಟ್ಟೆಯೂ ಬಯೋಮೆಡಿಕಲ್‌ ವೇಸ್ಟ್‌: ಕ್ವಾರಂಟೈನ್‌ ಇನ್‌ಚಾರ್ಜ್ ನಜ್ಮಾ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಕ್ವಾರಂಟೈನ್‌ನಲ್ಲಿದ್ದವರು ಊಟ ಮಾಡಿದ ತಟ್ಟೆಯನ್ನೂ, ನೀರು ಕುಡಿದ ಲೋಟವನ್ನೂ ಬಯೋ ಮೆಡಿಕಲ್‌ ವೇಸ್ಟ್‌ ಎಂದು ಪರಿಗಣಿಸಬೇಕಿತ್ತು. ಹೀಗಾಗಿ ಕ್ವಾರಂಟೈನ್‌ ಮಾಡಿದಷ್ಟೇ ಎಚ್ಚರಿಕೆಯಿಂದ ಯಾವುದೇ ವಸ್ತುಗಳು ಅಲ್ಲಿ ಉಳಿಯದಂತೆ ನೋಡಿಕೊಳ್ಳಬೇಕಿತ್ತು’.

ಕ್ವಾರಂಟೈನ್‌ ಇನ್‌ಚಾರ್ಜ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ನೀಡಿದ ವಿವರಣೆ ಇದು.

‘ಮಾರ್ಚ್‌ನಲ್ಲೇ ಜಿಲ್ಲಾಧಿಕಾರಿ ಅವರು ಹೋಟೆಲ್‌, ಲಾಡ್ಜ್‌, ಕ್ಲಬ್‌ ಮಾಲೀಕರ ಸಭೆ ನಡೆಸಿದ್ದರು. ಹೀಗಾಗಿ ಅವುಗಳನ್ನು ಕ್ವಾರಂಟೈನ್‌ ಕೇಂದ್ರ ಮಾಡಲು ಪಡೆಯುವುದು ಕಷ್ಟವಾಗಲಿಲ್ಲ. ಅಲ್ಲಿ ಸೋಂಕಿತರನ್ನು ಇಡುವುದಿಲ್ಲ ಎಂಬುದನ್ನು ಮೊದಲೇ ಎಲ್ಲರಿಗೂ ತಿಳಿಸಿದ್ದೆವು. ಸೋಂಕಿತರ ಪ್ರಥಮ ಸಂಪರ್ಕಿತರನ್ನು ಆಸ್ಪತ್ರೆಯಲ್ಲೇ ಇಟ್ಟು, ದ್ವಿತೀಯ ಸಂಪರ್ಕಿತರನ್ನಷ್ಟೇ ಹೋಟೆಲ್‌, ಲಾಡ್ಜ್‌ಗಳಲ್ಲಿ ಇಡಲಾಗುತ್ತಿತ್ತು. ಅದಕ್ಕಾಗಿ 35 ಹೋಟೆಲ್‌, ಲಾಡ್ಜ್‌, 2 ಕ್ಲಬ್‌ಗಳನ್ನು ಬಳಸಿಕೊಂಡೆವು’ ಎಂದು ವಿವರಿಸಿದರು.

‘ಕೊಠಡಿಗಳು ಸಿಕ್ಕಿದ್ದವು. ಆದರೆ, ಹಲವು ಕಡೆ ಸ್ವಚ್ಛತೆಗೆ ಹೋಟೆಲ್‌, ಲಾಡ್ಜ್‌ಗಳ ಸಿಬ್ಬಂದಿ ಬರುತ್ತಿರಲಿಲ್ಲ. ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಯೇ ಬಂದು ಸ್ವಚ್ಛಗೊಳಿಸಬೇಕಾಯಿತು. ಸುಶಾಂತ್‌ ಬಯೋ ಮೆಡಿಕಲ್‌ನವರಿಗೆ ಸ್ವಚ್ಛತೆಯ ಜವಾಬ್ದಾರಿಯನ್ನು ಆಮೇಲೆ ನೀಡಲಾಯಿತು’ ಎಂದು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯ ಜೊತೆಗೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ನಿರ್ಲಕ್ಷ್ಯ ಆಗದಂತೆ ನಾನು ಎಚ್ಚರ ವಹಿಸಬೇಕಿತ್ತು. ಎಲ್ಲರ ಜತೆಗೆ ವಿಡಿಯೊ, ಆಡಿಯೊ ಕಾನ್ಫರೆನ್ಸ್‌ ಮಾಡುತ್ತಿದ್ದೆ. ಮೆಸೇಜ್‌ ಕಳುಹಿಸುತ್ತಿದ್ದೆ. ಪ್ರತಿ ದಿನ ಕನಿಷ್ಠ ಎರಡು ಬಾರಿ ಅವರನ್ನು ಸಂಪರ್ಕಿಸಿ ಮಾಡಬೇಕಾದ ಕೆಲಸಗಳನ್ನು ಹೇಳುತ್ತಿದ್ದೆ. ಅದು ಈಗಲೂ ಮುಂದುವರಿದಿದೆ’ ಎಂದು ನೆನಪಿಸಿಕೊಂಡರು.

‘ಸ್ಲಂ ಮತ್ತು ಮಾರುಕಟ್ಟೆ ಪ್ರದೇಶದ ಎಲ್ಲರಿಗೂ ಪರೀಕ್ಷೆ ಮಾಡಲು ಈಚೆಗೆ ನಿರ್ಧಾರ ಕೈಗೊಂಡು ಅದರ ಜವಾಬ್ದಾರಿಯನ್ನು ನನಗೆ ಒಪ್ಪಿಸಿದ್ದರು. ಈಗಾಗಲೇ 2,820 ಮಂದಿಯ ಸ್ವ್ಯಾಬ್‌ ಸಂಗ್ರಹ ಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರಿದಿದೆ. ಈ ರೀತಿ ಪರೀಕ್ಷೆ ಮಾಡುವುದರಿಂದ ಯಾರಿಗೇ ಸೋಂಕು ಇದ್ದರೂ ಗೊತ್ತಾಗುತ್ತದೆ. ಇದರಿಂದ ಈಗ ಸಂಖ್ಯೆ ಹೆಚ್ಚಾದರೂ ಮುಂದೆ ಯಾರಿಗೂ ಕೊರೊನಾ ಇಲ್ಲದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.


ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ

‘ಯಾವುದೇ ಹೊತ್ತಿಗೆ ಕರೆ ಮಾಡಿದರೂ ಜಿಲ್ಲಾಧಿಕಾರಿ ಕರೆ ಸ್ವೀಕರಿಸಿ ಸ್ಪಂದಿಸುತ್ತಾರೆ. ಎಲ್ಲ ಮೇಲಧಿಕಾರಿಗಳು, ನಮ್ಮೆಲ್ಲ ಸಿಬ್ಬಂದಿಯ ಸಹಕಾರದಿಂದ ಕೊರೊನಾ ವಿರುದ್ಧದ ಹೋರಾಟ ಸುಲಲಿತವಾಗಿ ನಡೆಯುತ್ತಿದೆ. ಜತೆಗೆ ಬೆಂಗಳೂರಿನಿಂದ ಮಾಹಿತಿ ಕೇಳುತ್ತಿರುತ್ತಾರೆ. ಅವುಗಳನ್ನು ಸಕಾಲದಲ್ಲಿ ಒದಗಿಸುತ್ತಾ, ಇಲಾಖೆಯ ನಿತ್ಯದ ಕೆಲಸವನ್ನೂ ಮಾಡಿಕೊಂಡು ಕೊರೊನಾ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ರಾತ್ರಿ 11ರವರೆಗೂ ಕೆಲಸ

‘ಬಹುತೇಕ ದಿನಗಳಲ್ಲಿ ರಾತ್ರಿ 9, 10 ಗಂಟೆ ಆಗುತ್ತಿತ್ತು. ಕೊರೊನಾ ಪ್ರಕರಣ ಜಾಸ್ತಿ ಪತ್ತೆಯಾದ ದಿನಗಳಲ್ಲಿ 11 ಗಂಟೆ ದಾಟಿದ್ದೂ ಇದೆ. ಮಧ್ಯೆ ರಂಜಾನ್‌ ಹಬ್ಬ ಬಂದಾಗ ಸಂಜೆ ಮನೆಗೆ ಹೋಗಿ ಪ್ರಾರ್ಥನೆ ಮಾಡಿ ಉಪವಾಸ ಬಿಟ್ಟು ಬರಲು ಜಿಲ್ಲಾಧಿಕಾರಿ ಅವಕಾಶ ಕಲ್ಪಿಸಿದ್ದರು. ಆಗ ರಾತ್ರಿ 8.30ರ ಹೊತ್ತಿಗೆ ಮತ್ತೆ ಕಚೇರಿಗೆ ವಾಪಸ್ಸಾಗಿ ಕೆಲಸ ಮಾಡಿದ್ದೇನೆ’ ಎಂದು ನೆನಪಿಸಿಕೊಂಡರು.

‘ನನಗೆ ಆರೂವರೆ ವರ್ಷದ ಮಗ ಇದ್ದಾನೆ. ಅವನನ್ನು ಬೆಳಿಗ್ಗೆ ಕೆಲಸಕ್ಕೆ ಹೊರಡುವಾಗ ತಾಯಿ ಮನೆಗೆ ಬಿಟ್ಟು ಬರುತ್ತೇನೆ. ರಾತ್ರಿ ಮನೆಗೆ ಹೋಗಿ ಸ್ನಾನ ಮಾಡಿ ಬಳಿಕ ತಾಯಿ ಮನೆಗೆ ನಾನು ಮತ್ತು ಪತಿ ಇಬ್ಬರೂ ಹೋಗಿ ಮಗನನ್ನು ಕರೆದುಕೊಂಡು ಬರುತ್ತಿದ್ದೇವೆ. ಎಷ್ಟೋ ಬಾರಿ ರಾತ್ರಿ ಊಟ ಅಲ್ಲೇ ಆಗೋದು. ನನ್ನ ಕೆಲಸ ಮುಗಿಯುವಾಗ ಎಷ್ಟೇ ರಾತ್ರಿ ಆದರೂ ಪತಿ ಆಗಲಿ, ನನ್ನ ತಂದೆ, ತಾಯಿ ಆಗಲಿ ಒಂದು ದಿನವೂ ಗೊಣಗದೆ ಸಹಕಾರ ನೀಡಿದ್ದಾರೆ’ ಎಂದು ವೈಯಕ್ತಿಕ ಬದುಕಿನ ವಿವರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು