ಶುಕ್ರವಾರ, ಏಪ್ರಿಲ್ 23, 2021
31 °C
ಜಾತಿ, ರಾಜಕೀಯದ ಹಿಡಿತ ತಪ್ಪಿಸಲು ಹೊಸ ಹೆಜ್ಜೆ

ಕಸಾಪ ಪ್ರಗತಿಪರರ ವೇದಿಕೆ ಅಸ್ತಿತ್ವಕ್ಕೆ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಎರಡು ಮೂರು ಜಾತಿಗಳ, ಜಿಲ್ಲೆಯಲ್ಲಿ ಒಂದೇ ಸಮುದಾಯದ ಹಿಡಿತದಲ್ಲಿದೆ. ಇದನ್ನು ತಪ್ಪಿಸಿ ಎಲ್ಲ ಸಮುದಾಯಗಳನ್ನು ಒಳಗೊಳ್ಳುವಂತೆ ಮಾಡಲು ಪ್ರಗತಿಪರರ ವೇದಿಕೆ ಅಸ್ತಿತ್ವಕ್ಕೆ ಬರುತ್ತಿದೆ.

ಮಲ್ಲಿಕಾರ್ಜುನ ಕಡಕೋಳ, ಎ.ಬಿ. ರಾಮಚಂದ್ರಪ್ಪ, ಮಲ್ಲಿಕಾರ್ಜುನ ಕಲಮರಹಳ್ಳಿ, ದಾದಾಪೀರ್‌ ನವೀಲೇಹಾಳ್‌, ಬಿ.ಎಂ. ಹನುಮಂತಪ್ಪ, ಅಂತೋನಿ, ಬಿ.ಎನ್‌. ಮಲ್ಲೇಶ್‌, ಮಂಜಪ್ಪ ಮುಂತಾದ ಸಮಾನ ಚಿಂತಕರು ದಾವಣಗೆರೆಯಲ್ಲಿ ಭಾನುವಾರ ಒಟ್ಟು ಸೇರಿ ಚರ್ಚೆ ನಡೆಸಿದ್ದಾರೆ. ಏ‍ಪ್ರಿಲ್‌ 11ರಂದು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಮಾನ ಮನಸ್ಕರನ್ನು ಸೇರಿಸಿಕೊಂಡು ಸಭೆ ನಡೆಸಲು ನಿರ್ಧರಿಸಿದ್ದಾರೆ.

‘ದಾವಣಗೆರೆಯಲ್ಲಿ ಒಂದು ಕುಟುಂಬ ಇಲ್ಲವೇ ಒಂದು ಸಮುದಾಯದವರೇ ಅಧಿಕಾರ ಹಿಡಿಯುತ್ತಾ ಬಂದಿದ್ದಾರೆ. ಈ ಬಾರಿಯೂ ಕಣದಲ್ಲಿರುವವರು ಬಹುತೇಕ ಅವರೇ ಆಗಿದ್ದಾರೆ. ಯಾರು ಬೇಕಾದರೂ ಆಯ್ಕೆಯಾಗಲಿ. ಆದರೆ ಅವರು ಪರಿಷತ್ತನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಬೇಕು. ಆ ದಾರಿಯಲ್ಲಿ ಸಾಗದೇ ಇದ್ದರೆ ತಕರಾರು ಎತ್ತುವ ಅವಕಾಶ ಇರಬೇಕು ಎಂಬ ಕಾರಣಕ್ಕೆ ವೇದಿಕೆ ಕಟ್ಟಿಕೊಳ್ಳುತ್ತಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ನಮಗಿಲ್ಲ’ ಎಂದು ಎ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

‘ಪರಿಷತ್ತು ಒಂದು ಸಮುದಾಯದ ಆಸ್ತಿಯಂತಾಗಿದೆ. ಬೇರೆಯವರಿಗೆ ಅದರ ಒಳಗೆ ಬರಲೂ ಅವಕಾಶವಾಗಿಲ್ಲ. ರಚನಾತ್ಮಕವಾಗಿ ಟೀಕೆ ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅದೆಲ್ಲ ಬದಲಾಗಬೇಕು. ಎಲ್ಲ ಸಮುದಾಯದವರು ಭಾಗವಹಿಸುವಂತಾಗಬೇಕು ಎಂಬುದು ವೇದಿಕೆ ಉದ್ದೇಶ’ ಎಂದು ದಾದಾಪೀರ್‌ ನವಿಲೇಹಾಳ್‌ ವಿವರ ನೀಡಿದ್ದಾರೆ.

‘ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲಿಯೂ ಭಿನ್ನ ಸ್ಥಿತಿ ಇಲ್ಲ. ಅಲ್ಲಿಯೂ ಕೆಲವೇ ಜಾತಿಗಳ ಪಾರಮ್ಯ ಇದೆ. ಅವರನ್ನು ಹೊರತುಪಡಿಸಿ ಬೇರೆಯವರು ಆಯ್ಕೆಯಾಗಲು ಸಾಧ್ಯವಾಗಿಲ್ಲ. ಪರಿಷತ್ತಿನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಭಾರತದಲ್ಲಿ ಮಹಿಳೆ ಪ್ರಧಾನಿ, ಮುಖ್ಯಮಂತ್ರಿ, ಶಾಸಕಿ, ಸಂಸದೆ ಎಲ್ಲ ಆಗಿದ್ದಾರೆ. ಆದರೆ 106 ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾಗಿಲ್ಲ. ಈ ಬಾರಿ ಕಣದಲ್ಲಿ ಇರುವ ಡಾ. ಸರಸ್ವತಿ ಚಿಮ್ಮಳಗಿ ಅವರು ಎಲ್ಲ ವಿಧದಲ್ಲಿಯೂ ಅರ್ಹರಿದ್ದಾರೆ. 40ಕ್ಕೂ ಅಧಿಕ ಕೃತಿ ರಚಿಸಿದ್ದಾರೆ. ಕನ್ನಡ ಉಪನ್ಯಾಸಕಿ ಆಗಿದ್ದಾರೆ. ನೂರಾರು ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ದಾನಚಿಂತಮಣಿ ಅತ್ತಿಮಬ್ಬೆ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆದರೆ ಅವರನ್ನು ಆಯ್ಕೆ ಮಾಡದೇ ಬೇರೆಯವರನ್ನೇ ಆಯ್ಕೆ ಮಾಡಲಾಗುತ್ತಿದೆ’ ಎಂದು ಮಲ್ಲಿಕಾರ್ಜುನ ಕಡಕೋಳ ಅಸಮಾಧಾನ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳು ಅಧ್ಯಕ್ಷರಾಗಬೇಕು. ಆದರೆ ಸಾಹಿತಿಗಳಲ್ಲದವರೇ ಅಧ್ಯಕ್ಷರಾಗುತ್ತಿದ್ದಾರೆ. ಗೆಲ್ಲುವುದಕ್ಕಾಗಿ ಹೆಬ್ಬೆಟ್ಟೊತ್ತುವ ಅನಕ್ಷರಸ್ಥರನ್ನು, ಕನ್ನಡೇತರರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಪರಿಷತ್ತು ಒಂದು ಸಾಂಸ್ಕೃತಿಕ, ಸಾಹಿತ್ಯಿಕ ವೇದಿಕೆಯಾಗಬೇಕಿತ್ತು. ಆದರೆ ಅದು ಜಾತಿಯ, ರಾಜಕಾರಣದ ಸಂಸ್ಥೆಯಾಗಿದೆ. ಇದರ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ಪ್ರಗತಿಪರರ ವೇದಿಕೆ ಹುಟ್ಟಿಕೊಳ್ಳುತ್ತಿದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು