ಶುಕ್ರವಾರ, ಜನವರಿ 24, 2020
17 °C
ಕಾರ್ಮಿಕರಿಗೆ ಮಾಹಿತಿ ಕೊರತೆ, ಮಂಡಳಿಗೆ ನಿರಾಸಕ್ತಿ

ದಾವಣಗೆರೆ: ಕಟ್ಟಡ ಕಾರ್ಮಿಕರಿಗೆ ತಲುಪುತ್ತಿಲ್ಲ ಸೌಲಭ್ಯ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನನ್ನ ಮಗಳು ಪ್ರಥಮ ಪಿಯುಸಿಯಲ್ಲಿರುವಾಗಲೂ, ದ್ವಿತೀಯ ಪಿಯು ಓದುವಾಗಲೂ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ಹಣ ಬರಲೇ ಇಲ್ಲ. ಅಧಿಕಾರಿಗಳನ್ನು ಕೇಳಿದರೆ, ‘ನಿಮ್ಮ ಒಬ್ಬರದ್ದಲ್ಲ, ಹಲವು ಮಂದಿಗೆ ಬಾಕಿ ಇದೆ. ಏನೂ ತಲೆಬಿಸಿ ಮಾಡಬೇಡಿ, ಬರುತ್ತದೆ' ಎಂದು ಎರಡೂ ವರ್ಷವೂ ನಮ್ಮನ್ನು ನಂಬಿಸಿದರು. ಹಣ ಮಾತ್ರ ಕೈ ಸೇರಲೇ ಇಲ್ಲ’..

ಎಸ್‌ಎಸ್‌ಎಂ ನಗರದ ಇಸ್ಮಾಯಿಲ್‌ ಅಶ್ರಫಿ ಅವರ ಮಾತಿದು. ಹೀಗೆ ಅರ್ಹರಾಗಿಯೂ ಸವಲತ್ತು ಪಡೆಯದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹಲವು ಮಂದಿ ಇದ್ದಾರೆ.

ಇದಕ್ಕೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೇ ಇರುವುದು ಒಂದು ಕಾರಣವಾದರೆ, ಮಂಡಳಿಯ ನಿರ್ಲಕ್ಷ್ಯ, ಕಠಿಣ ನಿಯಮ ಎರಡನೇ ಕಾರಣವಾಗಿದೆ.

ಅಸಂಘಟಿತರಾಗಿ ಕೆಲಸ ಮಾಡುವ 70ಕ್ಕೂ ಅಧಿಕ ವಲಯಗಳನ್ನು ಗುರುತಿಸಲಾಗಿದೆ. ಅದರಲ್ಲಿ 51 ವಲಯಗಳನ್ನು ಈ ಮಂಡಳಿಯ ಅಡಿಯಲ್ಲಿ ತರಲಾಗಿದೆ. ಇಲ್ಲಿ ನೋಂದಣಿಯಾದ ಕಾರ್ಮಿಕರಿಗೆ ಪಿಂಚಣಿ, ತರಬೇತಿ, ಮನೆ ಖರೀದಿ/ ಮನೆ ನಿರ್ಮಾಣ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ/ಪ್ರೋತ್ಸಾಹ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅನಿಲ ಭಾಗ್ಯ, ಬಸ್‌ಪಾಸ್ ಸೌಲಭ್ಯ ನೀಡಬೇಕು.

ವೈದ್ಯಕೀಯ ವೆಚ್ಚ, ಪಿಂಚಣಿ ಮತ್ತು ಮೃತಪಟ್ಟರೆ ಸಿಗುವ ಪರಿಹಾರದ ಬಗ್ಗೆಯಷ್ಟೇ ಹೆಚ್ಚಿನವರಿಗೆ ಗೊತ್ತಿದೆ. ಇನ್ನೂ ಒಂದಷ್ಟು ಮಂದಿಗೆ ಈ ಮೂರರ ಜತೆಗೆ ಮಕ್ಕಳಿಗೆ ಸಿಗುವ ಶೈಕ್ಷಣಿಕ ನೆರವಿನ ಬಗ್ಗೆ ಗೊತ್ತು. ಮದುವೆಯಾದರೆ ಹಣ ಸಿಗುತ್ತದೆ ಎಂಬ ಬಗ್ಗೆ ಮದುವೆಯಾಗಿ ಅವಧಿ ಮೀರಿದ ಮೇಲೆಯೇ (6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು) ಜಾಗೃತರಾಗುವವರ ಸಂಖ್ಯೆ ಹೆಚ್ಚಾಗಿದೆ.

ಪ್ರಮುಖ ಬಡಾವಣೆಗಳನ್ನು ಹೊರತುಪಡಿಸಿದರೆ ನಗರದ ಎಲ್ಲಾ ಕಡೆ ಈ ಕಾರ್ಮಿಕರಿದ್ದಾರೆ. ಅಜಾದ್‌ನಗರ, ಮಿರ್ಜಾ ಇಸ್ಮಾಯಿಲ್‌ ನಗರ, ಆಟೊ ಕಾಲೊನಿ, ಶೇಖರಪ್ಪ ನಗರ, ಭಾರತ್‌ ಕಾಲೊನಿ, ಮಂಡಕ್ಕಿಭಟ್ಟಿ ಲೇಔಟ್‌, ಬೀಡಿ ಲೇಔಟ್‌, ಮುದ್ದಬೋವಿ ಕಾಲೊನಿ, ಕಾರ್ಲ್‌ ಮಾರ್ಕ್ಸ್‌ನಗರ, ಬಸಪ್ಪನಗರ, ಎಚ್‌ಕೆಆರ್‌ ನಗರ, ಅಣ್ಣಾನಗರ, ನೀಲಮ್ಮನ ತೋಟ, ನಿಟುವಳ್ಳಿಯ ಲೆನಿನ್‌ನಗರ, ಶ್ರೀರಾಮ ಬಡಾವಣೆ, ರಾಮನಗರ, ಶಾಮನೂರು, ಆವರಗೆರೆ, ಬಸಾಪುರ, ಕುಂದವಾಡ, ಗಾಂಧಿನಗರ, ಎಸ್‌ಜೆಎಂ ನಗರ, ಎಸ್‌ಎಂ ಕೃಷ್ಣನಗರ, ಯರಗುಂಟೆ, ಕರೂರು, ಆವರಗೊಳ್ಳ, ಕಕ್ಕರಗೊಳ್ಳ, ಚಿಕ್ಕಬೂದಿಹಾಳ್‌, ಹಿರೇ ಬೂದಿಹಾಳ್‌, ಎಸ್‌ಪಿಎಸ್‌ ನಗರ, ವಿಜಯನಗರ, ವಿನಾಯಕ ನಗರ, ಯಲ್ಲಮ್ಮನಗರ, ಆಂಜನೇಯ ಮಿಲ್‌, ಗೋಶಾಲೆ, ಹರಳಯ್ಯ ನಗರ, ಹೊಸ ಚಿಕ್ಕನಹಳ್ಳಿ, ಹಳೇ ಚಿಕ್ಕನಹಳ್ಳಿ, ಪಿ.ಬಸವನಗೌಡ ನಗರ ಅಲ್ಲದೇ ನಗರದ ಹೊರ ಆವರಣದಲ್ಲಿರುವ ಪ್ರದೇಶಗಳಲ್ಲಿಯೂ ಈ ಕಾರ್ಮಿಕರೇ ಹೆಚ್ಚಿದ್ದಾರೆ.

ಸರಳಗೊಳಿಸಿ: ಈ ಕಲ್ಯಾಣ ಮಂಡಳಿಯಲ್ಲಿ ₹ 8, 000 ಕೋಟಿ ಇದೆ. ಅದು ಸರ್ಕಾರದ ಹಣವಲ್ಲ. ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಕಟ್ಟಡ, ರಸ್ತೆ, ಕಾಲುವೆ, ಸೇತುವೆ ಸಹಿತ ಎಲ್ಲ ನಿರ್ಮಾಣ ಕಾರ್ಯ ನಡೆದರೆ ಅದರಲ್ಲಿ ಶೇ 1 ಸೆಸ್‌ ಈ ಮಂಡಳಿಗೆ ಹೋಗುತ್ತದೆ. ಈ ಮೊತ್ತವನ್ನು ನಿರ್ಮಾಣ ಕಾರ್ಮಿಕರ ಅಭಿವೃದ್ಧಿಗೆ ಬಳಸಬೇಕು. ಹೀಗಿದ್ದೂ ಬೇರೆ ಕಾರ್ಯಗಳಿಗೆ ಬಳಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆಗ ಮಂಡಳಿಯ ಕಾರ್ಯದರ್ಶಿಯಾಗಿದ್ದ ರೋಹಿಣಿ ಸಿಂಧೂರಿ ಅದಕ್ಕೆ ಒಪ್ಪದೇ ಇದ್ದುದರಿಂದ ಹಣ ಉಳಿದಿದೆ. ಆದರೆ ಈ ಹಣ ಕಾರ್ಮಿಕರ ಅಭಿವೃದ್ಧಿಗೆ ವ್ಯಯವಾಗಬೇಕಿದ್ದರೆ ಈಗಿರುವ ನಿಯಮಗಳನ್ನು ಸರಳಗೊಳಿಸಬೇಕು ಎನ್ನುತ್ತಾರೆ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ, ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಜಿ. ಉಮೇಶ್‌.

ಕಾರ್ಮಿಕ ಕಾರ್ಡ್‌ ಪಡೆಯಲು, ಇತರ ಸೌಲಭ್ಯ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಕಾರ್ಮಿಕರ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು 2 ನಿಮಿಷಗಳ ಒಳಗೆ ನೀಡಬೇಕು. ಕಾರ್ಮಿಕರಿಗೆ ಈ ಬಗ್ಗೆ ಅರಿವಿಲ್ಲ. ಹೆಚ್ಚಿನವರು ಅವಿದ್ಯಾವಂತರಾಗಿರುವುರಿಂದ ಈ ಒಟಿಪಿ ಎಲ್ಲ ಅರ್ಥವಾಗುವುದಿಲ್ಲ. ಅರ್ಥವಾದರೂ ಕೂಡಲೇ ನೀಡಲು ಆಗುವುದಿಲ್ಲ. ಒಟಿಪಿ ಬರುವುದು ತಡವಾದರೆ ಮತ್ತೆ ಪ್ರಾರಂಭದಿಂದಲೇ ಅರ್ಜಿ ತುಂಬಿಸಬೇಕಾಗುತ್ತದೆ. ಈ ಒಟಿಪಿ ವ್ಯವಸ್ಥೆ ತೆಗೆದುಹಾಕಬೇಕು. ಅರ್ಜಿ ಸಲ್ಲಿಸಿದ ಬಳಿಕ ಅವರು ನಿರ್ಮಾಣ ಕಾರ್ಮಿಕರು ಹೌದೇ ಅಲ್ಲವೇ ಎಂಬುದನ್ನು ಪರಿಶೀಲಿಸಲಿ ಎಂಬುದು ಅವರ ಒತ್ತಾಯ.

ಕಠಿಣ ಕೆಲಸ ಮಾಡುವ ಕಾರ್ಮಿಕರು ಮದುವೆಯಾದ ಕೆಲವೇ ತಿಂಗಳಲ್ಲಿ ಪರಿಹಾರಧನ ದೊರೆಯಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮುಗಿಯುವ ಒಳಗೆ ವಿದ್ಯಾರ್ಥಿವೇತನ ಸಿಗಬೇಕು. ಮೃತಪಟ್ಟರೆ ಒಂದೆರಡು ತಿಂಗಳ ಒಳಗೆ ಪರಿಹಾರ ಕೊಡಬೇಕು. ಅದೆಲ್ಲ ನಡೆಯದೇ ವರ್ಷಗಟ್ಟಳೆ ಅದಕ್ಕಾಗಿ ಅಲೆದಾಡಿದರೆ ಈ ಮಂಡಳಿ ಯಾಕಾದರೂ ಬೇಕು ಎಂಬ ಪ್ರಶ್ನೆ ಕಾರ್ಮಿಕರಲ್ಲಿ ಮೂಡುತ್ತದೆ ಎಂದು ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಜಬೀನಾ ಖಾನಂ ಬೇಸರ ವ್ಯಕ್ತಪಡಿಸಿದರು.

ಈ ಮಂಡಳಿಯಿಂದ ಸೌಲಭ್ಯಗಳನ್ನು ನೀಡುವುದರ ಜತೆಗೆ ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ನಿರುದ್ಯೋಗ ಭತ್ಯೆ ನೀಡಬೇಕು. ಅದಕ್ಕೆ ಮಂಡಳಿಯಲ್ಲಿ ಹಣದ ಕೊರತೆ ಇಲ್ಲ. ಬೇಕಾದ ಮಾನದಂಡಗಳನ್ನು ತಜ್ಞರ ಜತೆಗೆ ಚರ್ಚಿಸಿ ನಿರ್ಧರಿಸಲಿ. ಈಗ ₹ 1 ಸಾವಿರ ಪಿಂಚಣಿ ಸಿಗುತ್ತದೆ. ಅದನ್ನು ಕನಿಷ್ಠ ₹ 5 ಸಾವಿರಕ್ಕೆ ಏರಿಸಬೇಕು ಎಂದು ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್‌ ಗೌರವ ಅಧ್ಯಕ್ಷ ಎಂ. ಕರಿಬಸಪ್ಪ ಒತ್ತಾಯಿಸಿದ್ದಾರೆ.

ಯಾವೆಲ್ಲ ಕೆಲಸಗಾರರು ಬರುತ್ತಾರೆ...?
ಕಟ್ಟಡ ನಿರ್ಮಾಣ, ಮಾರ್ಪಾಡು, ರಿಪೇರಿ, ನಿರ್ಹವಣೆ, ಕೆಡವಿಕೆ, ಬೀದಿ, ರಸ್ತೆ, ರೈಲ್ವೆ, ಟಾಮ್‌ವೇ, ಏರ್‌ಫೀಲ್ಡ್‌, ಚರಂಡಿ, ಏರಿ ನಿರ್ಮಿಸುವವರು, ಪ್ರವಾಹ ನಿಯಂತ್ರಣ ಕಾಮಗಾರಿ, ವಿದ್ಯುತ್‌ ಉತ್ಪಾದನೆ, ಪ್ರಸರಣ, ವಿದ್ಯುತ್‌ ಮಾರ್ಗ, ಜಲ ಕಾಮಗಾರಿ, ತೈಲ, ಅನಿಲ ಸ್ಥಾವರ ನಿರ್ಮಾಣ, ವೈರ್‌ಲೆಸ್‌, ರೇಡಿಯೊ, ಟಿ.ವಿ, ದೂರವಾಣಿ, ದೂರ ಸಂಪರ್ಕ ನಿರ್ಮಾಣ– ದುರಸ್ತಿ, ಅಣೆಕಟ್ಟು, ನಾಲೆ, ಜಲಾಶಯ, ಜಲಮೂಲ, ಸುರಂಗ, ಸೇತುವೆ, ವಯಾಡೆಕ್ಟ್ಸ್‌, ಅಕ್ವಡೆಕ್ಟ್ಸ್‌, ಕೊಳವೆ ಮಾರ್ಗ, ಸ್ಥಾವರ, ಕೂಲಿಂಗ್ ಟವರ್‌ ‌ಕೆಲಸಗಾರರು, ಕಲ್ಲುಗಣಿಗಾರಿಕೆ, ಚಪ್ಪಡಿ, ಟೈಲ್‌ ಅಳವಡಿಕೆ, ಯೂಜಿಡಿ, ಪ್ಲಂಬಿಂಗ್‌, ವೈರಿಂಗ್‌, ಪ್ಯಾನಲ್‌ ಫಿಕ್ಸಿಂಗ್‌, ಕೂಲಿಂಗ್‌/ಹೀಟಿಂಗ್‌ ಸಿಸ್ಟಂ ಅಳವಡಿಕೆ, ಲಿಫ್ಟ್‌, ಎಕ್ಸಲೇಟರ್‌, ಸೆಕ್ಯೂರಿಟಿ ಗೇಟ್‌, ಲೋಹದ ಬಾಗಿಲು, ಕಿಟಕಿ, ಗ್ರಿಲ್‌ ಅಳವಡಿಕೆ, ಸಿಗ್ನೇಜ್‌, ನೀರಿನ ಟ್ಯಾಂಕ್‌/ಸಂಗ್ರಹಗಳ ನಿರ್ಮಾಣ, ಫ್ಲೋರಿಂಗ್‌, ಫಾಲ್ಸ್‌ ಸೀಲಿಂಗ್‌, ವಾಲ್‌ ಪ್ಯಾನಲಿಂಗ್‌, ಕಟ್ಟಡ ನಿರ್ಮಾಣಕ್ಕೆ ಅಳವಡಿಸುವ ಗ್ಲಾಸ್‌, ಶೀಟ್‌ ಮುಂತಾದವುಗಳು, ಕಾಂಕ್ರಿಟ್‌ ಹೋಲೊಬ್ಲಾಕ್‌, ಟೈಲ್ಸ್‌, ರಸ್ತೆ ಪೀಠೋಪಕರಣ, ಬಸ್‌ ಆಶ್ರಯಗಳು, ಸಿಗ್ನಲಿಂಗ್‌ ಸಿಸ್ಟಂ, ಕಾರಂಜಿ, ಉದ್ಯಾನ, ತೋಟ, ಈಜುಕೊಳ ನಿರ್ಮಾಣ, ನಿರ್ಮಾಣಕ್ಕಾಗಿ ಭೂಮಿ ಕೆಲಸ, ತಾತ್ಕಾಲಿಕ ಆಶ್ರಯ, ಫಿಲಂ ಸೆಟ್‌ ನಿರ್ಮಾಣ.

ನಕಲಿ ಪ್ರಕರಣಗಳಿಂದಾಗಿ ತಡ
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಇರುವ ಸೌಲಭ್ಯಗಳಿಗೆ ಅರ್ಜಿಗಳ ಮಹಾಪೂರವೇ ಹರಿದುಬಂದಿದ್ದರಿಂದ ಮಂಡಳಿಯ ಆಗಿನ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ನಾಲ್ಕೈದು ಜಿಲ್ಲೆಗಳಲ್ಲಿ ಅರ್ಜಿದಾರರು ಯಾರು ಎಂದು ಸಮೀಕ್ಷೆ ನಡೆಸಿದ್ದರು. ಆಗ ಈ ವ್ಯಾಪ್ತಿಯಲ್ಲಿ ಇಲ್ಲದವರೂ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿತ್ತು. ಅದಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಅರ್ಜಿದಾರರ ಮನೆಗೆ ಹೋಗಿ ಪರಿಶೀಲನೆ ನಡೆಸಲು ಆದೇಶ ಬಂತು. ಈ ಪರಿಶೀಲನೆ ನಡೆಸಲು ಸಮಯ ಹಿಡಿಯಿತು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 14 ಸಾವಿರ ಅರ್ಜಿಗಳು ಬಂದಿದ್ದವು. ಅವುಗಳ ಪರಿಶೀಲನೆ ನಡೆಸಿದಾಗ ಅದರಲ್ಲಿ 3,500 ಅರ್ಜಿಗಳು ನಕಲಿ ಆಗಿದ್ದವು. ಉಳಿದ 10 ಸಾವಿರ ಅರ್ಹರಲ್ಲಿ ಸುಮಾರು 4 ಸಾವಿರ ಮಂದಿಗೆ ಈಗಾಗಲೇ ಸಿಗಬೇಕಾದ ಸೌಲಭ್ಯ ತಲುಪಿದೆ. ಉಳಿದವರಿಗೆ ಇನ್ನೆರಡು ತಿಂಗಳುಗಳೊಳಗೆ ತಲುಪಲಿದೆ ಎಂದು ಅವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಸುಮಾರು 40 ಸಂಘಟನೆಗಳು ಈ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿವೆ. ಹಾಗಾಗಿ ಕಾರ್ಮಿಕರಿಗೆ ಮಾಹಿತಿ ಕೊರತೆ ಇಲ್ಲ. ಆದರೂ ಸುಳ್ಳು ಮಾಹಿತಿ ನೀಡುವ ಕೆಲವರಿಂದಾಗಿ ಅರ್ಹತೆ ಇರುವ ಹಲವರಿಗೆ ತೊಂದರೆಯಾಗುತ್ತಿದೆ ಎಂಬುದು ಅವರ ಅನಿಸಿಕೆ.

ಕೆಲವರಲ್ಲಿ ಆಧಾರ್‌ ಕಾರ್ಡ್‌ನಲ್ಲಿ ಒಂದು ವಯಸ್ಸು, ಮತದಾರರ ಚೀಟಿಯಲ್ಲಿ ಇನ್ನೊಂದು, ಪಡಿತರ ಚೀಟಿಯಲ್ಲಿ ಮತ್ತೊಂದು ವಯಸ್ಸು ನಮೂದಾಗಿರುತ್ತದೆ. ಆಗ ವೈದ್ಯರಿಂದ ವಯಸ್ಸಿನ ದೃಢೀಕರಣ ಪತ್ರ ಬೇಕಾಗುತ್ತದೆ. ಆನ್‌ಲೈನ್‌ ತಾಂತ್ರಿಕ ಅಡಚಣೆ, ಸಿಬ್ಬಂದಿ ಕೊರತೆ ಮುಂತಾದ ಕಾರಣಗಳೂ ಸೌಲಭ್ಯ ತಡವಾಗುತ್ತಿರುವುದಕ್ಕೆ ಕಾರಣ ಎನ್ನುತ್ತಾರೆ ಅವರು.

ಸಿಬ್ಬಂದಿ ಕೊರತೆ
ಕಾರ್ಮಿಕ ಇಲಾಖೆಯಲ್ಲಿ 8 ಮಂದಿ ಕಾರ್ಮಿಕ ನಿರೀಕ್ಷಕರು ಇರಬೇಕು. ಆದರೆ ಇಬ್ಬರು ಮಾತ್ರ ಇದ್ದಾರೆ. ಈ 8 ಹುದ್ದೆ ಕೂಡ ಸಾಮಾಜಿಕ ಭದ್ರತೆಯ ಕೆಲಸಗಳು ಆರಂಭವಾಗುವ ಮುಂಚೆ ಮಂಜೂರಾದವು. ಕಂಪ್ಯೂಟರ್‌ ಆಪರೇಟರ್‌, ಇನ್ನಿತರ ಸಿಬ್ಬಂದಿ ಅಗತ್ಯಕ್ಕೆ ಬೇಕಾದಷ್ಟು ಇಲ್ಲ. ಒಬ್ಬ ಇನ್‌ಸ್ಪೆಕ್ಟರ್‌ಗೆ ಮೂರು ಮಂದಿ ಕಂಪ್ಯೂಟರ್‌ ಆಪರೇಟರ್‌ ಇರಬೇಕು. ಆದರೆ ಈಗ ಒಬ್ಬರೇ ಇದ್ದಾರೆ. ಅವರೂ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರು ಆಗಿದ್ದಾರೆ.

ಬೇರೆ ಕಾರ್ಮಿಕರಿಗೂ ಮಂಡಳಿ ಮಾಡಿ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅಭಿವೃದ್ಧಿಗಾಗಿ ಮಂಡಳಿ ಮಾಡಿದಂತೆ ಬೇರೆ ಕ್ಷೇತ್ರಗಳಲ್ಲಿ ಇರುವ ಅಸಂಘಟಿತ ಕಾರ್ಮಿಕರಿಗೂ ಕಲ್ಯಾಣ ಮಂಡಳಿ ಅಗತ್ಯ ಇದೆ.

ಟೈಲರಿಂಗ್‌, ಔಷಧ ಅಂಗಡಿ, ಚಾಲಕರು, ಮನೆ ಕೆಲಸ ಮಾಡುವವರು, ಸೊಪ್ಪು ಮಾರುವವರು, ಬೀದಿ ವ್ಯಾಪಾರಿಗಳು, ಹೋಟೆಲ್‌, ಚೌಟ್ರಿಗಳಲ್ಲಿ ಕೆಲಸ ಮಾಡುವವರು ಹೀಗೆ ಇನ್ನೂ 30ಕ್ಕೂ ಅಧಿಕ ವಲಯಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ಸೌಲಭ್ಯಗಳಿಲ್ಲ. ಹಾಗಾಗಿ ಅವರಿಗೆ ಒಂದು ಮಂಡಳಿ ಮಾಡಿ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಎಚ್‌.ಜಿ. ಉಮೇಶ್‌ ಅವರ ಸಲಹೆ.

ಅಲ್ಲದೇ ಮಂಡಳಿ ವ್ಯಾಪ್ತಿಗೆ ಬರುವ ಕಾರ್ಮಿಕರನ್ನು ಇಎಸ್‌ಐ ಮತ್ತು ಇಪಿಎಫ್‌ ಅಡಿಯಲ್ಲಿ ತರಬೇಕು. ಆಗ ಅನಾರೋಗ್ಯ ಉಂಟಾದಾಗ ಇಎಸ್‌ಐ ಆಸ್ಪತ್ರೆ ಅಥವಾ ಅವರು ತಿಳಿಸಿದ ಆಸ್ಪತ್ರೆಗೆ ಹೋದರೆ ಸಾಕಾಗುತ್ತದೆ. ಈಗ ಆಸ್ಪತ್ರೆಯಲ್ಲಿ ಬಿಲ್‌ ಕಟ್ಟಿ ಅದನ್ನು ಮಂಡಳಿಗೆ ನೀಡಿದರೂ ಅದರಲ್ಲಿ ಇನ್ನಷ್ಟು ಕಡಿತಗೊಳಿಸುತ್ತಾರೆ ಎನ್ನುತ್ತಾರೆ ಅವರು.

‘ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಎಐಟಿಯುಸಿ ನಿರಂತರ ಹೋರಾಟ ಮಾಡುತ್ತಾ ಬಂದಿತ್ತು. 1996ರಲ್ಲಿ ದೇವೇಗೌಡ ಪ್ರಧಾನಿ ಆದಾಗ ಆಯಾ ರಾಜ್ಯಗಳಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಮಂಡಳಿ ಸ್ಥಾಪಿಸಲು ಕಾಯ್ದೆ ಜಾರಿಗೆ ತಂದರು. ಆನಂತರ ರಾಜ್ಯದಲ್ಲಿ ಎಐಟಿಯುಸಿ ನಿರಂತರ ಹತ್ತು ವರ್ಷಗಳ ಕಾಲ ಹೋರಾಟ ಮಾಡಿದ್ದರಿಂದ 2006ರಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅನುಷ್ಠಾನಗೊಂಡಿತು. ಈಗ ಮಂಡಳಿಯಿಂದ ಹೊರ ಉಳಿದವರಿಗೆ ಪ್ರತ್ಯೇಕ ಮಂಡಳಿ ಮಾಡಬೇಕೆಂದು ಹೋರಾಟ ನಡೆಸುತ್ತಿದ್ದೇವೆ’ ಎಂದು ಉಮೇಶ್‌ ತಿಳಿಸಿದರು.

ಸೌಲಭ್ಯ ವಂಚಿತರು ಏನಂತಾರೆ..

ಮದುವೆಯಾಗಿ ಮೂರು ವರ್ಷ ಕಳೆಯಿತು
ನಂಗೆ ಮದುವೆಯಾಗಿ ಮೂರು ವರ್ಷ ಒಂದು ತಿಂಗಳು ಕಳೆಯಿತು. ಮದುವೆಯಾದಾಗಲೇ ಅರ್ಜಿ ಸಲ್ಲಿಸಿದ್ದೆ. ಹಣ ಬರಲು ಇನ್ನೊಂದು ತಿಂಗಳು, ಇನ್ನೊಂದು ತಿಂಗಳು ಎಂದು ಅಧಿಕಾರಿಗಳು ಹೇಳುತ್ತಲೇ ಬರುತ್ತಾರೆ. ಆದರೆ ದುಡ್ಡು ಮಾತ್ರ ಬಂದಿಲ್ಲ.
–ಬಾಬಾಜಾನ್‌, ಬಾಷಾನಗರ

**
ಪ್ರತಿಭಟನೆಯೂ ಪ್ರಯೋಜನವಾಗಿಲ್ಲ
ದೊಡ್ಡ ಮಗಳು ಬೀಬಿ ಆಯಿಷಾ ಬಿಎಡ್‌ ಮಾಡುವಾಗ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದರೆ ಮೊದಲ ವರ್ಷ ಬರಲಿಲ್ಲ. ಎರಡನೇ ವರ್ಷ ಬಂತು. ಎರಡನೇ ಮಗಳು ಬೀಬಿ ಹಾಜಿರಾ ಪಿಯು ಓದುವಾಗ ಎರಡೂ ವರ್ಷ ಅರ್ಜಿ ಹಾಕಿದರೂ ಬಂದಿಲ್ಲ. ವಿದ್ಯಾರ್ಥಿವೇತನ ಸಿಗದವರನ್ನೆಲ್ಲ ಒಟ್ಟು ಮಾಡಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ.
–ಇಸ್ಮಾಯಿಲ್‌ ಅಶ್ರಫಿ, ಎಸ್‌ಎಸ್‌ಎಂ ನಗರ

**
ಸಾಯೋ ಮೊದಲು ಪಿಂಚಣಿ ಕೊಡಿ
ಪಿಂಚಣಿಗೆ ಅರ್ಜಿ ಹಾಕಿದರೆ ಏನೇನೋ ಕಾರಣ ಕೊಡುತ್ತಿದ್ದಾರೆ. ಪಿಂಚಣಿ ಮಾತ್ರ ಕೊಡುತ್ತಿಲ್ಲ. ಸಾಯುವ ಮೊದಲು ಒಂದು ತಿಂಗಳ ಪಿಂಚಣಿಯಾದರೂ ಪಡೆಯಬೇಕು ಎಂದು ಆಸೆ ಇಟ್ಟುಕೊಂಡಿದ್ದೇನೆ.
–ಶೇಖ್‌ಸಾಬ್‌, ದೊಡ್ಡಬಾತಿ

**
ತಂದೆ, ತಾಯಿ ನಿಧನರಾಗಿ 4 ವರ್ಷ
2015ರ ಡಿಸೆಂಬರ್‌ನಲ್ಲಿ 10 ದಿನಗಳ ಅಂತರದಲ್ಲಿ ತಾಯಿ ಮತ್ತು ತಂದೆ ಇಬ್ಬರೂ ಮೃತಪಟ್ಟರು. ಕಟ್ಟಡ ಕಾರ್ಮಿಕರು ನಿಧನರಾದರೆ ಅವರ ಕುಟುಂಬಕ್ಕೆ ₹ 50 ಸಾವಿರ ಪರಿಹಾರಧನ ನೀಡಬೇಕು ಎಂದು ನಿಯಮ ಇದೆ. ಆದರೆ ನಾಲ್ಕು ವರ್ಷ ಕಳೆದರೂ ಸಿಕ್ಕಿಲ್ಲ.
–ಹಜರತ್‌ ಅಲಿ, ಎಸ್‌ಎಸ್‌ಎಂ ನಗರ

**
ಬೆರಳೇ ತೆಗೆದರೂ ಬಾರದ ಹಣ
ಶುಗರ್‌ ಜಾಸ್ತಿಯಾಗಿದ್ದರಿಂದ ಕಾಲಿನ ಒಂದು ಬೆರಳನ್ನೇ ತೆಗೆಯಬೇಕಾಯಿತು. ಅದಕ್ಕಾಗಿ ₹ 50 ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಅದರ ಬಿಲ್‌ ಸಲ್ಲಿಸಿದ್ದೇನೆ. ವರ್ಷ ಕಳೆದರೂ ಹಣ ಬಂದಿಲ್ಲ.
–ಬಾಬುಖಾನ್‌, ಮೆಹಬೂಬ್‌ನಗರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು