ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ತಡೆಗಟ್ಟಲು ಕ್ರಮ ವಹಿಸಿ: ಮಳೆಗಾಲ ಮಲೇರಿಯಾ ಹರಡುವ ಕಾಲ- ಡಿಸಿ ಮಹಾಂತೇಶ ಬೀಳಗಿ

Last Updated 23 ಜೂನ್ 2021, 3:19 IST
ಅಕ್ಷರ ಗಾತ್ರ

ದಾವಣಗೆರೆ:ಮಳೆಗಾಲ ಪ್ರಾರಂಭವಾಗಿದೆ. ಇದು ಮಲೇರಿಯಾ ಹರಡುವ ಕಾಲ. ಹೀಗಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಹರಿದುಹೋಗುವ ಚರಂಡಿಗಳನ್ನು ಶುಚಿಗೊಳಿಸಬೇಕು. ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಂಡು ಮಲೇರಿಯಾ ಹರಡದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ಶೂನ್ಯ ಮಲೇರಿಯಾ ಗುರಿಯನ್ನು ತಲುಪಿ’ ಎಂಬ ಧೈಯವಾಕ್ಯದಡಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಮಲೇರಿಯಾ ವಿರೋಧಿ ಮಾಸಾಚರಣೆ’ ಕಾರ್ಯಕ್ರಮ ಹಾಗೂ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಚ್ಛತೆ ಇಲ್ಲದೇ ಹೋದಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ನಗರ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇ ಮಾಡಬೇಕು. ಮೈನಿಂಗ್ ಪ್ರದೇಶದ ವ್ಯಾಪ್ತಿಯ ಕ್ವಾರಿಗಳಲ್ಲಿ, ಟೈರು, ಎಳನೀರು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಟರಾಜ್, ‘2025 ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿಯಾಗಿದೆ. 2015 ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 26 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, 2020ರಲ್ಲಿ ಕೇವಲ 4 ಪ್ರಕರಣಗಳು ಕಂಡುಬಂದಿದೆ’ ಎಂದು ಮಾಹಿತಿ ನೀಡಿದರು.

ಸೊಳ್ಳೆಗಳಿಂದ ಮಲೇರಿಯಾ, ಡೆಂಗಿ, ಚಿಕೂನ್‍ಗೂನ್ಯ ಇನ್ನಿತರ ಸಾಂಕ್ರಾಮಿಕ ರೋಗಗಳು ಕಂಡುಬರುತ್ತವೆ. ಅಡ್ವೊಕಸಿ ಕಾರ್ಯಾಗಾರ, ಡಿಜಿಟಲ್ ಪ್ರದರ್ಶನ ಫಲಕಗಳ ಮೂಲಕ ಸ್ಕ್ರೋಲಿಂಗ್ ಮೆಸೆಜ್ ಕಳುಹಿಸುವುದು, ಡಂಗುರ ಅಥವಾ ಟಾಂಟಾಂ ಮೂಲಕ ಜಾಗೃತಿ ಮೂಡಿಸುವುದು ಮುಂತಾದ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಈ ವರ್ಷ ಇಲ್ಲಿವರೆಗೆ 4 ಮಲೇರಿಯಾ, 44 ಡೆಂಗಿ, 18 ಚಿಕೂನ್‌ಗುನ್ಯ ಪ್ರಕರಣಗಳು ವರದಿಯಾಗಿವೆ. ಇಬ್ಬರಲ್ಲಿ ಕೋವಿಡ್ ಜತೆ ಡೆಂಗಿ ಬಂದಿದ್ದು ಇದೀಗ ಗುಣಮುಖರಾಗಿದ್ದಾರೆ. 4 ಜನರಲ್ಲಿ ಮೆದುಳು ಜ್ವರದ ಲಕ್ಷಣಗಳು ಕಂಡುಬಂದಿದ್ದು ಖಚಿತಪಟ್ಟಿಲ್ಲ ಎಂದು ಮಾಹಿತಿ ನೀಡಿದರು.

ವಲಸೆ ಕಾರ್ಮಿಕರು ಯಾವ ಇಲಾಖೆಯಡಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಆಯಾ ಇಲಾಖೆಯವರೇ ಖುದ್ದಾಗಿ ಕಾರ್ಮಿಕರ ಕುರಿತು ಅವರು ಎಲ್ಲಿಂದ ಬಂದಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಹಾಗೂ ಕೈಗಾರಿಕ ವಲಯಗಳಲ್ಲಿ ಹೆಚ್ಚು ಜನ ವಲಸೆ ಬರುತ್ತಿರುವುದು ಕಂಡು ಬಂದಿದ್ದು, ಹೊಸ ಕಾರ್ಮಿಕರು ಬಂದಾಗ ಆರೋಗ್ಯ ಇಲಾಖೆಗೆ ತಿಳಿಸಬೇಕು. ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಎಚ್‍ಒ ಡಾ.ನಾಗರಾಜ್, ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಆರ್.ಸಿ.ಎಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ರೇಣುಕಾರಾಧ್ಯ, ಡಾ.ಜಯಪ್ರಕಾಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT