ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಫೈನಾನ್ಸ್ ಕಚೇರಿಯಲ್ಲಿ ಕಳ್ಳತನ: ಮಾಜಿ ನೌಕರನೇ ಆರೋಪಿ

Published 18 ಜನವರಿ 2024, 8:15 IST
Last Updated 18 ಜನವರಿ 2024, 8:15 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಕ್ರೆಡಿಟ್ ಆ್ಯಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಚೇರಿಯಲ್ಲಿ (ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್) ಕಳ್ಳತನ ಮಾಡಿದ ಆರೋಪಿಯನ್ನು ಪ್ರಕರಣ ವರದಿಯಾದ 12 ಗಂಟೆಯೊಳಗೆ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಕಚೇರಿಯ ಮಾಜಿ ನೌಕರ ಯರವ್ವನಾಗತಿಹಳ್ಳಿಯ ನಿವಾಸಿ ಕಿರಣ ಕುಮಾರ ಕೆ.ಬಿ.(26) ಬಂಧಿತ. ಈತನಿಂದ ₹10,88,440ಗಳನ್ನು ವಶಪಡಿಸಿಕೊಂಡಿದ್ದಾರೆ.

ಗ್ರಾಮೀಣ ಕೂಟ ಸ್ಮಾಲ್ ಪೈನಾನ್ಸ್ ಕಚೇರಿಯಲ್ಲಿ ಗುಂಪು ಸಾಲ (ಗ್ರೂಪ್ ಲೋನ್) ನೀಡಿದ ಮಹಿಳೆಯರಿಂದ ಜ.13ರಂದು ಸಂಗ್ರಹವಾಗಿದ್ದ ₹10.88 ಲಕ್ಷವನ್ನು ಎರಡನೇ ಶನಿವಾರ ಇದ್ದುದರಿಂದ ಬ್ಯಾಂಕ್‌ಗೆ ಡಿಪಾಸಿಟ್ ಮಾಡಲು ಸಾಧ್ಯವಾಗದೇ ಸುರಕ್ಷಿತ ಲಾಕರ್ (ಸೇಫ್ ಲಾಕರ್)ನಲ್ಲಿ ಇಟ್ಟಿದ್ದರು. ಸೇಫ್ ಲಾಕರ್‌ನ ಒಂದು ಕೀ ಕ್ಯಾಷಿಯರ್ ಹಾಗೂ ಮತ್ತೊಂದು ಕೀ ಮ್ಯಾನೇಜರ್ ಅವರು ಇಟ್ಟುಕೊಂಡಿದ್ದರು.

ಜ.16ರಂದು ಸೋಮವಾರ ಸೇಫ್ ಲಾಕರ್‌ ತೆಗೆದು ನೋಡಿದಾಗ ಸೇಫ್‌ ಲಾಕರ್‌ನಲ್ಲಿ ಇಟ್ಟಿದ್ದ ಹಣ ನಾಪತ್ತೆಯಾಗಿತ್ತು. ಗಾಬರಿಗೊಂಡ ಸಿಬ್ಬಂದಿ ಕಚೇರಿಯಲ್ಲಿ ತಂಗಿದ್ದ ಅರುಣಕುಮಾರ ಅವರನ್ನು ವಿಚಾರಿಸಿದರೂ ಮಾಹಿತಿ ಸಿಗಲಿಲ್ಲ. ಮ್ಯಾನೇಜರ್ ಅವಿನಾಶ್ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‌ಜ.15ರ ಮಧ್ಯ ರಾತ್ರಿ ಕಿರಣ್‌ಕುಮಾರ್ ಮುಖಕ್ಕೆ ಬಿಳಿ ಟವಲ್ ಕಟ್ಟಿಕೊಂಡು ಕಚೇರಿಯ ಹಿಂಬದಿ ಇರುವ ಕಬ್ಬಿಣದ ಗ್ರೀಲ್ ಬಾಗಿಲನ್ನು ಯಾವುದೋ ಆಯುಧದಿಂದ ಮುರಿದು ಹಿಂಬಾಗಿಲ ಮೂಲಕ ತೆವಳಿಕೊಂಡು ಹೋಗಿ ಸೇಫ್ ಲಾಕರ್‌ನಲ್ಲಿ ಇಟ್ಟಿದ್ದ ₹10.88 ಲಕ್ಷವನ್ನು ಕಳವು ಮಾಡಿ ಲಾಕರ್‌ನ ಬೀಗ ಹಾಕಿಕೊಂಡು ಹೋಗಿದ್ದ.

ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನದ ದೃಶ್ಯಗಳು ಸೆರೆಯಾಗಿದ್ದವು.

ಮಾಜಿ ನೌಕರನೇ ಆರೋಪಿ:

ದಾವಣಗೆರೆ ಶಾಖೆಯ ಕಚೇರಿಯಲ್ಲಿ ಕಿರಣ ಕುಮಾರ ಕೆಲಸ ಮಾಡುತ್ತಿದ್ದು, ಹಣದ ವ್ಯವಹಾರದಲ್ಲಿ ವ್ಯತ್ಯಾಸವಾಗಿದ್ದರಿಂದ 3 ತಿಂಗಳ ಹಿಂದೆ ಆತನಿಂದ ರಾಜೀನಾಮೆ ಪಡೆಯಲಾಗಿತ್ತು. ‌ಎಂಸಿಸಿ ‘ಬಿ’ ಬ್ಲಾಕ್‌ನ ಶಾಖೆಯಲ್ಲಿ ಇಟ್ಟಿದ್ದ ಸೇಫ್ ಲಾಕರ್‌ ಬಗ್ಗೆ ಆತನಿಗೆ ಮಾಹಿತಿ ಇದ್ದು, ಆತನೇ ತನ್ನ ಬಳಿ ಇದ್ದ ಮತ್ತೊಂದು ಕೀಯಿಂದ ಸೇಫ್ ಲಾಕರ್ ತೆಗೆದು ಹಣವನ್ನು ಕಳ್ಳತನ ಮಾಡಿರುವುದು ತನಿಖೆಯ ವೇಳೆ ಗೊತ್ತಾಗಿದೆ.

ಆರೋಪಿಗಳ ಪತ್ತೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಎನ್. ಸಂತೋಷ, ಮಂಜುನಾಥ ಜಿ. ಅವರ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಅವರ ಮಾರ್ಗದರ್ಶನಲ್ಲಿ ಕೆಟಿಜೆ ನಗರ ಠಾಣೆಯ ಪಿಐ ಶಶಿಧರ ಯು.ಜೆ, ಪಿಎಸ್‌ಐ ಸಾಗರ್ ಅತ್ತರವಾಲ, ಮಂಜುಳ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಎಸ್‌ಪಿ ಉಮಾ ಪ್ರಶಾಂತ್ ತಂಡವನ್ನು ಪ್ರಶಂಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT