ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ವಿಫುಲ ಅವಕಾಶ: ಡಾ.ವೆಂಕಟೇಶ್

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿಕೆ
Published 31 ಜನವರಿ 2024, 5:31 IST
Last Updated 31 ಜನವರಿ 2024, 5:31 IST
ಅಕ್ಷರ ಗಾತ್ರ

ದಾವಣಗೆರೆ: ‘ಅಭಿವೃದ್ದಿಯ ಸಮತೋಲನ ಕಾಪಾಡಲು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳು ಇವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.

ಸಣ್ಣ ಕೈಗಾರಿಕೆಗಳ ಅಭಿವೃದ್ದಿ ಬ್ಯಾಂಕ್ ಆಫ್ ಇಂಡಿಯಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆನರಾ ಬ್ಯಾಂಕ್ ಮತ್ತು ರಾಜ್ಯ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಸಂಘಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಎಂಎಸ್‍ಎಂಇಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಉದಯೋನ್ಮುಖ ಅವಕಾಶಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕೌಶಲಯುಕ್ತ ಮಾನವ ಸಂಪನ್ಮೂಲ, ಕೌಶಲ, ಸಮತಟ್ಟಾದ ಭೂಮಿ, ತುಂಗಭದ್ರಾ ನದಿ ನೀರಿನ ಲಭ್ಯತೆ ಸೇರಿದಂತೆ ಮೂಲಸೌಲಭ್ಯಗಳು ಇದ್ದು, ಉದ್ಯಮ ಸ್ಥಾಪನೆ ಮಾಡಿದರೆ ಯಶಸ್ಸು ಗಳಿಸಬಹುದು. ಯಶಸ್ವಿ ಉದ್ಯಮಿಯಾಗಲು ಪುಸ್ತಕ ಓದಬೇಕಾಗಿಲ್ಲ. ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ನೆಟ್ ವರ್ಕಿಂಗ್ (ಸಂಪರ್ಕ) ಮುಖ್ಯ. ಉದ್ಯಮಿಯಾಗಬಯಸುವವರಿಗೆ ಹಂಬಲ ಬರಬೇಕೇ ಹೊರತು ಅಹಂಕಾರ ಇರಬಾರದು. ಅವಶ್ಯಕತೆಗೆ ತಕ್ಕಂತೆ ಹಣವನ್ನು ಹೂಡಿಕೆ ಮಾಡುವ ಆರ್ಥಿಕ ಶಿಸ್ತು ಮುಖ್ಯ’ ಎಂದರು.

‘ಉದ್ಯಮಿಗಳು ಉತ್ಪಾದಿಸುವ ವಸ್ತುಗಳು ಉತ್ತಮ ಗುಣಮಟ್ಟ ಹಾಗೂ ನಂಬಿಕೆಗೆ ಅರ್ಹವಾಗಿರಬೇಕು. ಕಂಪನಿ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕಾದರೆ ನಂಬಿಕೆ ಮುಖ್ಯ. ಲಾಭಾಂಶ ಕಡಿಮೆಯಾದರೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅಲ್ಲದೇ ನೀವು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ಸಮಾಜಮುಖಿ ಗುಣ ಇದ್ದಾಗ ಯಶಸ್ವಿ ಉದ್ಯಮಿಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಭಾರತ ಒಂದು ಕಾಲದಲ್ಲಿ ಗುಡಿ ಕೈಗಾರಿಕೆಗಳಿಗೆ ಆದ್ಯತೆ ಪಡೆದಿತ್ತು. ಶೇ 50ರಷ್ಟು ಹೆಚ್ಚು ರಫ್ತಾಗುಗುತ್ತಿತ್ತು. ಬ್ರಿಟಿಷರು ಬಂದ ನಂತರ ಗುಡಿ ಕೈಗಾರಿಕೆಗಳು ನಶಿಸಿ ಕೃಷಿಗೆ ಹೆಚ್ಚು ಅವಲಂಬಿತರಾದರು. ಸ್ವಾತಂತ್ರ್ಯ ನಂತರ ಕೈಗಾರಿಕೆಗಳು ಹೆಚ್ಚು ಒತ್ತು ನೀಡಲಾಯಿತು. ಸ್ಥಳೀಯರೂ ಕೈಗಾರಿಕೋದ್ಯಮಿಗಳಾಗಿ ಬೆಳೆಯಬೇಕು’ ಎಂದು ಹೇಳಿದರು.

‘ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಎಂ.ಆರ್. ವಿಕಾಸ್, ‘ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಇನ್ಸುರೆನ್ಸ್ ಕಂಪನಿಗಳು ಬಂಡವಾಳ ಹೂಡುತ್ತಿವೆ. ಕೈಗಾರಿಕೆಗಳ ಅಭಿವೃದ್ಧಿ, ಪ್ರೋತ್ಸಾಹ, ಹಣಕಾಸು ನೆರವು ಬ್ಯಾಂಕ್‍ನ ಕಾರ್ಯಕ್ರಮವಾಗಿವೆ’ ಎಂದರು.

ಕೆನರಾ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಎನ್. ಶಿವಪ್ರಸಾದ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಂ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ, ಕ್ಯಾಸಿಯಾ ಅಧ್ಯಕ್ಷ ಸಿ.ಎ. ಶಶಿಧರ್ ಶೆಟ್ಟಿ, ಕಾಸಿಯಾ ಉಪ ಸಮಿತಿ ಅಧ್ಯಕ್ಷ ಡಿ.ಸಿ.ಶ್ರೀನಿವಾಸ್, ಶೇಷಾಚಲ, ಗೋಪಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT