ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯಲ್ಲಿ ಲಂಚವಿಲ್ಲದೆ ಕೆಲಸವಿಲ್ಲ

ಪಾಲಿಕೆ ಸಭೆಯಲ್ಲಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಹರಿಹಾಯ್ದ ಸದಸ್ಯರು
Last Updated 16 ಸೆಪ್ಟೆಂಬರ್ 2020, 13:58 IST
ಅಕ್ಷರ ಗಾತ್ರ

ದಾವಣಗೆರೆ: ‘ಪಾಲಿಕೆಯಲ್ಲಿ ಕೆಲವು ಸಿಬ್ಬಂದಿ 20–25 ವರ್ಷಗಳಿಂದ ಒಂದೇ ಕಡೆ ಇದ್ದಾರೆ. ಯಾವುದೇ ಕೆಲಸ ಆಗಬೇಕಿದ್ದರೂ ₹ 1,000, ₹ 2,000 ಹಣ ನೀಡಬೇಕು. ಕೆಲವರು ₹ 30 ಸಾವಿರ ಕೇಳುತ್ತಿದ್ದಾರೆ. ಡೋರ್‌ ನಂಬರ್‌ ಸಿಗಬೇಕಿದ್ದರೆ ₹ 1 ಲಕ್ಷ ಕೊಡಬೇಕು...’

ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪಾಲಿಕೆ ಸದಸ್ಯರು ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಚ್ಚಿಟ್ಟ ಪರಿ ಇದು.

ಹಣ ನೀಡಿದರೆ ಕೆಲಸ ಆಗುತ್ತದೆ. ಇಲ್ಲದೇ ಇದ್ದರೆ ಆಗುವುದಿಲ್ಲ ಎಂದು ಶಿವಕುಮಾರ್‌ ಆರೋಪಿಸಿದರು. ‘ನನ್ನ ಮಗನ ಖಾತೆ ಮಾಡಿಸಲು 6 ತಿಂಗಳುಗಳಿಂದ ಓಡಾಡುತ್ತಿದ್ದೇನೆ. ಆದರೂ ಆಗುತ್ತಿಲ್ಲ. ನಾನು ಪಾಲಿಕೆ ಸದಸ್ಯ ಎಂದು ಮಾಡಿಸಲು ಹೋಗುವ ಬದಲು ಬ್ರೋಕರ್‌ಗೆ ಒಪ್ಪಿಸಿದ್ದರೆ ಎರಡೇ ತಿಂಗಳಲ್ಲಿ ಖಾತೆಯಾಗುತ್ತಿತ್ತು’ ಎಂದು ಚಮನ್‌ಸಾಬ್‌ ತಿಳಿಸಿದರು.

ಒಂದು ನಿವೇಶನ 50 ವರ್ಷಗಳಿಂದ ಒಬ್ಬರ ಹೆಸರಲ್ಲಿದೆ. ಅವರಲ್ಲಿ ಎಲ್ಲ ದಾಖಲೆಗಳೂ ಇವೆ. ಅದನ್ನು ಪಾಲಿಕೆಯಲ್ಲಿ ಎಂಟ್ರಿ ಮಾಡುವವರು ಅಳತೆ ಬರೆಯುವಾಗ ವ್ಯತ್ಯಾಸ ಮಾಡಿದ್ದಾರೆ. ಅದನ್ನು ಸರಿಪಡಿಸಿ ಎಂದು ಆರು ತಿಂಗಳಿನಿಂದ ಹೇಳಿದರೂ ಪ್ರಯೋಜನವಾಗಿಲ್ಲ. ಸಿಬ್ಬಂದಿಯೇ ಮಾಡಿದ ತಪ್ಪಿಗೆ ಸಾರ್ವಜನಿಕರು ಅಲೆದಾಡಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ವಿಷಾದ ವ್ಯಕ್ತಪಡಿಸಿದರು.

ಪಾಲಿಕೆಯ ಕಂದಾಯ ವಿಭಾಗದ ಕಾರ್ಯವೈಖರಿಯಿಂದಲೇ ಪಾಲಿಕೆಗೆ ಕೆಟ್ಟ ಹೆಸರು ಬರುತ್ತದೆ. ಆಂತರಿಕ ಬದಲಾವಣೆಗಳು ಏನಾದವು ಎಂದು ಹಲವು ಸದಸ್ಯರು ಪ್ರಶ್ನೆ ಮಾಡಿದರು.

‘ಒಂದು ತಿಂಗಳ ಹಿಂದೆ ಆಂತರಿಕ ಬದಲಾವಣೆಗಳನ್ನು ಮಾಡಲಾಗಿದೆ. ಮೂರು ಮಂದಿ ತಮ್ಮ ಸ್ಥಾನ ಬಿಟ್ಟು ಹೋಗಲು ತಯಾರಿಲ್ಲ. ಅವರ ಬಗ್ಗೆ ಜಿಲ್ಲಾಧಿಕಾರಿಗೂ ದೂರು ನೀಡಿದ್ದೇನೆ. ಗುರುವಾರ ಸಂಜೆ 5 ಗಂಟೆಯ ಒಳಗೆ ಬದಲಾವಣೆ ಮಾಡಿರುವ ಸ್ಥಾನಕ್ಕೆ ಹೋಗಿ ಕಾರ್ಯನಿರ್ವಹಿಸಬೇಕು’ ಎಂದು ಆಯುಕ್ತರಿಗೆ ಮೇಯರ್‌ ಬಿ.ಜಿ. ಅಜಯಕುಮಾರ್‌ ಸೂಚನೆ ನೀಡಿದರು.

ಇ–ಆಸ್ತಿ ಪದ್ಧತಿ ಜಾರಿಗೆ ಬರುತ್ತಿದೆ. ಆಗ ಎಲ್ಲವೂ ಆನ್‌ಲೈನ್ ಮೂಲಕ ಕೆಲಸ ಆಗುವುದರಿಂದ ಹಣ ಕೊಡುವ ಪ್ರಮೇಯ ತಪ್ಪಲಿದೆ. ಒಂದು ತಿಂಗಳಲ್ಲಿ ಈ ಕೆಲಸ ಆಗಲಿದೆ ಎಂದು ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್‌ ಮಾಹಿತಿ ನೀಡಿದರು.

ಮಧ್ಯರಾತ್ರಿ ನೀರು: ‘ಯಲ್ಲಮ್ಮನಗರ ಬಡವರು ಇರುವ ಪ್ರದೇಶ. ರಾತ್ರಿ 2 ಗಂಟೆಗೆ ನೀರು ಸರಬರಾಜು ಆಗುತ್ತದೆ. ಅವರು ದುಡಿದು ಬಂದು ಮಲಗಿಕೊಂಡಿರುವ ಸಮಯದಲ್ಲಿ ನೀರು ಬಂದರೆ ಹೇಗೆ? ನನಗೆ ನೀರಿನ ಸಮಸ್ಯೆ ಗೊತ್ತಿರಲಿಲ್ಲ. ಪಾಲಿಕೆ ಸದಸ್ಯನಾದ ಮೇಲೆ ಅರ್ಥವಾಯಿತು. ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಕಶ್ಮಲಯುಕ್ತ ನೀರು ಬರುತ್ತಿದೆ. ಇದರಿಂದ ಚರ್ಮರೋಗ ಬರುತ್ತಿದೆ’ ಎಂದು ದೇವರಮನಿ ಶಿವಕುಮಾರ್‌ ಸಭೆಯ ಗಮನಕ್ಕೆ ತಂದರು.

ಬಡವರು ಇರುವ ಪ್ರದೇಶಕ್ಕೆ ಮಧ್ಯರಾತ್ರಿ ನೀರು ಬಿಡದಂತೆ ತಿಳಿಸಿದ್ದೇನೆ. ಸಂಪು ವ್ಯವಸ್ಥೆ ಇರುವ ಶ್ರೀಮಂತರಿರುವ ವಾರ್ಡ್‌ಗೆ ರಾತ್ರಿ ನೀರು ಬಿಟ್ಟರೆ ಸಂಪು ತುಂಬಿಕೊಳ್ಳುತ್ತದೆ. ಕೊಡ, ಬಕೆಟ್‌ಗಳಲ್ಲಿ ತುಂಬಿಸುವವರಿಗೆ ಕಷ್ಟ ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಎಂಜಿನಿಯರ್‌ಗೆ ಹೇಳಿದರು.

‘ಮೇಯರ್‌ ಹೇಳಿದರೂ ಎಂಜಿನಿಯರ್‌ ನಮ್ಮ ವಾರ್ಡ್‌ಗೆ ಬಂದಿಲ್ಲ. ಸಂಬಳ ತೆಗೆದುಕೊಳ್ಳಲಷ್ಟೇ ಇದ್ದಾರೆ’ ಎಂದು ದೇವರಮನಿ ಶಿವಕುಮಾರ್‌ ತರಾಟೆಗೆ ತೆಗೆದುಕೊಂಡರು.

ಮಳಿಗೆಗಳ ಟೆಂಡರ್‌: ಟೆಂಡರ್‌ ಅವಧಿ ಮೀರಿದ 340 ಮಳಿಗೆಗಳಿಗೆ ಟೆಂಡರ್‌ ಕರೆಯಲು ಮೇಯರ್‌ ಸೂಚಿಸಿದರು. ಅಲ್ಲೇ ಇರುವವರಿಗೆ ಬಾಡಿಗೆ ಹೆಚ್ಚು ಮಾಡಿ ನೀಡುವುದು ಒಳಿತು. ಅದನ್ನೇ ನಂಬಿದವರನ್ನು ಎಬ್ಬಿಸುವುದು ಸರಿಯಲ್ಲ ಎಂದು ಎ.ನಾಗರಾಜ್‌ ಸಲಹೆ ನೀಡಿದರು. ಕೆಲವರು ಬೇರೆಯವರಿಗೆ ಒಳ ಬಾಡಿಗೆ ನೀಡಿದ್ದಾರೆ ಎಂದು ಎಸ್‌.ಟಿ. ವೀರೇಶ್‌ ತಿಳಿಸಿದರು. ಶೇ 20 ಕಂದಾಯ ವಸೂಲಿ ಆಗಿದೆ. 2019ರ ಸಾಲಿನಲ್ಲಿ ₹ 2.14 ಕೋಟಿ ಬರಲು ಬಾಕಿ ಇದೆ. ಇದು ಒಂದು ವರ್ಷದ ಲೆಕ್ಕ. ಕಳೆದ 10 ವರ್ಷಗಳಲ್ಲಿ ಇದೇ ರೀತಿ ಕಂದಾಯ ಬಾಕಿ ಇದೆ ಎಂದು ಪ್ರಸನ್ನಕುಮಾರ್‌ ಮಾಹಿತಿ ನೀಡಿದರು. ಕಂದಾಯ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳಿ. ಆದರೆ ಬೇರೆಯವರಿಗೆ ನೀಡಿ ಗೊಂದಲ ಉಂಟು ಮಾಡಬೇಡಿ ಎಂದು ನಾಗರಾಜ್‌ ತಿಳಿಸಿದರು. ಕಂದಾಯ ಕಟ್ಟದ, ಒಳ ಬಾಡಿಗೆ ನೀಡಿರುವ ಅಂಗಡಿಗಳನ್ನಷ್ಟೇ ಟೆಂಡರ್‌ ಕರೆಯಿರಿ. ಕಂದಾಯ ಕಟ್ಟಿದವರಿಗೆ, ಕಟ್ಟುವವರಿಗೆ ಕಂದಾಯ ಹೆಚ್ಚಿಸಿ ನೀಡಿ ಎಂದು ಚಮನ್‌ಸಾಬ್‌, ದೇವರಮನಿ ಶಿವಕುಮಾರ್‌ ಸಲಹೆ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಉಪಮೇಯರ್ ಸೌಮ್ಯ ನರೇಂದ್ರಕುಮಾರ್,ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಉಪಸ್ಥಿತರಿದ್ದರು.

ಬಳಕೆಗೆ ಬಾರದ ವೆಂಟಿಲೇಟರ್‌

ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿ ವೆಂಕಟೇಶ್‌ ಅವರು ಕೊರೊನಾದಿಂದ ಮೃತಪಟ್ಟ ಸಂಗತಿ ಸಭೆಯ ಮಧ್ಯದಲ್ಲಿ ಪ್ರಸ್ತಾಪವಾಯಿತು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಸಿ.ಜಿ. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳನ್ನು ಒಂದು ಕೊಠಡಿಯಲ್ಲಿ ಇಡಲಾಗಿದೆ. ಅವನ್ನು ಬಳಸಲು ಸಿಬ್ಬಂದಿ ಇಲ್ಲ. ವೆಂಟಿಲೇಟರ್‌ ಇಲ್ಲದೇ ಜನ ಸಾಯುತ್ತಿದ್ದಾರೆ. ಸಿಬ್ಬಂದಿ ವ್ಯವಸ್ಥೆ ಮಾಡಬೇಕು’ ಎಂದು ಎ. ನಾಗರಾಜ್ ಮನವಿ ಮಾಡಿದರು.

‘ಅದಕ್ಕೆ ಸಂಬಂಧಿಸಿದಂತೆ ವೈದ್ಯರು, ನರ್ಸ್‌ಗಳು ಶೀಘ್ರದಲ್ಲಿ ಬರುತ್ತಾರೆ. ಸಮಸ್ಯೆ ಪರಿಹಾರವಾಗಲಿದೆ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

ಸಿ.ಜಿ. ಆಸ್ಪತ್ರೆಯಲ್ಲಿ 30 ವೆಂಟಿಲೇಟರ್‌ಗಳಿವೆ. ಅದರಲ್ಲಿ 11 ಕೆಲಸ ಮಾಡುತ್ತಿವೆ. ಉಳಿದವುಗಳಿಗೆ ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ. ನೇಮಕಕ್ಕೆ ಸರ್ಕಾರದ ಆದೇಶ ಬೇಕಿತ್ತು. ಈಗ ಆದೇಶ ಸಿಕ್ಕಿದೆ. ನೇಮಕಾತಿ ಆಗಲಿದೆ ಎಂದು ಮೇಯರ್‌ ಅಜಯ್‌ಕುಮಾರ್‌, ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್‌ ಸ್ಪಷ್ಟನೆ ನೀಡಿದರು.

ಕೆಲಸ ಮಾಡದ ಪೌರಕಾರ್ಮಿಕರು

ಪಾಲಿಕೆಯ ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ 729 ಪೌ ಕಾರ್ಮಿಕರು ಇರಬೇಕು. 317 ಮಂದಿ ಕಾಯಂ, 200 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ 212 ಮಂದಿ ಬೇಕಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಈಗಿರುವ ಪೌರಕಾರ್ಮಿಕರಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಿ. ಸುಮಾರು 250 ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದವರು ಕೆಲಸ ಮಾಡುತ್ತಿಲ್ಲ ಎಂದು ಎ.ನಾಗರಾಜ್‌ ತಿಳಿಸಿದರು.

15 ವರ್ಷಗಳಿಗೂ ಅಧಿಕ ಸಮಯದಿಂದ ಕೆಲಸ ಮಾಡುವ ಪೌರಕಾರ್ಮಿಕರನ್ನು ದಫೇದಾರ್‌ ಮಾಡಿದರೆ ಪರವಾಗಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಲ್ಲಿ 26 ಮಂದಿ ದಫೇದಾರ್‌ ಎಂದು ಕೆಲಸ ಮಾಡದೇ ಸುತ್ತಾಡುತ್ತಿದ್ದಾರೆ. ಕೆಲವರು ಕೆಲಸ ಮಾಡದೇ ಮನೆಯಲ್ಲೇ ಇದ್ದು, ವೇತನ ಪಡೆಯುತ್ತಿದ್ದಾರೆ ಎಂದು ಉದಯಕುಮಾರ್‌ ತಿಳಿಸಿದರು.

ಬೆಳಿಗ್ಗೆ 6ರಿಂದ 11ರವರೆಗೆ ಸ್ವಚ್ಛತಾ ಕೆಲಸ ಮಾಡಬೇಕು. ಬಳಿಕ ವಿಶ್ರಾಂತಿ ತೆಗೆದುಕೊಂಡು ಮಧ್ಯಾಹ್ನ 2ರಿಂದ 5ರವರೆಗೆ ಗ್ಯಾಂಗ್‌ಮನ್‌ಗಳಾಗಿ ಕೆಲಸ ಮಾಡಬೇಕು. ಆಗ ಸ್ವಚ್ಛತೆಯಲ್ಲಿ ಸುಧಾರಣೆ ಕಾಣಲು ಸಾಧ್ಯ. ಎಲ್ಲರೂ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT