ಶುಕ್ರವಾರ, ಜುಲೈ 30, 2021
28 °C
111 ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದ್ದ ಕಂಟೈನ್‌ಮೆಂಟ್‌ ವಲಯ

ದಾವಣಗೆರೆ: ನಲುಗಿದ್ದ ಜಾಲಿನಗರ ನಗುವಿನತ್ತ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ದೇಶದಲ್ಲಿಯೇ ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದ್ದ ಜಾಲಿನಗರ ಕಂಟೈನ್‌ಮೆಂಟ್‌ ಕೊರೊನಾದಿಂದ ಮುಕ್ತವಾಗಿದೆ.

ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಪ್ರಕರಣಗಳಲ್ಲಿ ಸಿಂಹಪಾಲು ಈ ಒಂದೇ ಕಂಟೈನ್‌ಮೆಂಟ್‌ನಲ್ಲಿತ್ತು. ಜಾಲಿನಗರದ 69 ವರ್ಷದ ವೃದ್ಧರೊಬ್ಬರಲ್ಲಿ ಮಾರ್ಚ್‌ 30ಕ್ಕೆ ಸೋಂಕು ಪತ್ತೆಯಾಗಿತ್ತು. ಅಲ್ಲಿಂದ ಶುರುವಾದ ಸೋಂಕಿನ ನಾಗಲೋಟ ಜೂನ್‌ 11ರವರೆಗೆ ಮುಂದುವರಿದಿತ್ತು. ಅಷ್ಟು ಹೊತ್ತಿಗೆ ಅಲ್ಲಿ 111 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅಲ್ಲಿನ ಮೊದಲ ಸೋಂಕಿತ ವೃದ್ಧ ಸೇರಿ ನಾಲ್ವರು ಮೃತಪಟ್ಟಿದ್ದರು. ಉಳಿದ ಎಲ್ಲ 107 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

‘ಆರೋಗ್ಯ ಇಲಾಖೆ, ಸರ್ವೇಕ್ಷಣಾ ತಂಡ ಸೇರಿದಂತೆ ಕೊರೊನಾ ನಿಯಂತ್ರಣಕ್ಕಾಗಿ ನಮ್ಮ ತಂಡದ ಪ್ರತಿಯೊಬ್ಬರೂ ಕೆಲಸ ಮಾಡಿದ್ದರಿಂದ ಜಾಲಿನಗರದಲ್ಲಿ ಒಂದು ವಾರದಿಂದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂತಸ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಸೂಚನೆಯಂತೆ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಮುದಾಯದಲ್ಲಿ ಹರಡದಂತೆ ಎಚ್ಚರ ವಹಿಸಲಾಯಿತು. ಒಂದು ಕಡೆ ಹತ್ತು ಪ್ರಕರಣ ಬಂದರೆ ಸೊನ್ನೆಗೆ ತರುವುದು ದೊಡ್ಡ ಸವಾಲಲ್ಲ. ನೂರು ದಾಟಿದ ಪ್ರದೇಶವನ್ನು ಸೊನ್ನೆಗೆ ತರುವುದು ಸುಲಭವಲ್ಲ’ ಎಂದು ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ಜಿ.ಡಿ. ರಾಘವನ್‌ ಪ್ರತಿಕ್ರಿಯಿಸಿದ್ದಾರೆ.

‘ಜಿಲ್ಲಾಧಿಕಾರಿ, ಎಸ್‌ಪಿ, ಸಿಇಒ, ಎಡಿಸಿ, ಎಸಿ, ಪಾಲಿಕೆ ಆಯುಕ್ತರು, ಇನ್ಸಿಡೆಂಟ್‌ ಕಮಾಂಡರ್‌ ಕುಮಾರಸ್ವಾಮಿ ಸಹಿತ ಎಲ್ಲರೂ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ಹಾಗಾಗಿ ನಿಯಂತ್ರಿಸಲು ಸಾಧ್ಯವಾಯಿತು’ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 233 ಪ್ರಕರಣಗಳು ದಾಖಲಾಗಿದ್ದು, 215 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು