ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಮತಿ | ಸಂಚಾರ ಅವ್ಯವಸ್ಥೆ: ಗೋಳು ಕೇಳುವವರಿಲ್ಲ

Published 19 ಮೇ 2024, 6:36 IST
Last Updated 19 ಮೇ 2024, 6:36 IST
ಅಕ್ಷರ ಗಾತ್ರ

ನ್ಯಾಮತಿ: ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ಪಾದಚಾರಿಗಳು, ಮಹಿಳೆಯರು ಪರದಾಡುವಂತಾಗಿದೆ.

ಪ್ರತಿದಿನ ನೂರಾರು ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಇಲ್ಲಿನ ಗಾಂಧಿ ರಸ್ತೆ, ನೆಹrU ರಸ್ತೆ, ಮಹಾಂತೇಶ್ವರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ ಹಾದು ಹೋಗಬೇಕು. ಸರ್ಕಲ್ ಕಿರಿದಾಗಿದ್ದು ವಾಹನ ದಟ್ಟಣೆ ಹೆಚ್ಚಾಗಿದೆ.

ಸರ್ಕಲ್‌ನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ಇಟ್ಟುಕೊಂಡಿದ್ದಾರೆ. ವ್ಯಾಪಾರಿಗಳು ತಳ್ಳುವ ಗಾಡಿಯನ್ನು ಪಾದಚಾರಿ ರಸ್ತೆಯಲ್ಲಿಯೇ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಪಾದಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಗೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ ಎಂದು ಮಹಿಳೆಯರು ದೂರುತ್ತಾರೆ.

ಈ ಹಿಂದೆ ಪೊಲೀಸ್ ಇಲಾಖೆಯಿಂದ ಮಹಾಂತೇಶ್ವರ ರಸ್ತೆಯಿಂದ ಹೋಗುವ ವಾಹನಗಳು ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಮೂಲಕ ಹಾಗೂ ಸುರಹೊನ್ನೆ ಕಡೆಯಿಂದ ಬರುವ ವಾಹನಗಳು ಮಾಜಿ ಶಾಸಕ ಗಂಗಪ್ಪನವರ ಮನೆಯ ತಿರುವಿನ ಮೂಲಕ ಸಂಚರಿಸುವ ನಿಯಮ ಜಾರಿಗೆ ತಂದಿದ್ದರು. ಬಳಿಕ ಅದು ಪಾಲನೆಯಾಗಲಿಲ್ಲ. ಈಗ ಅದೇ ನಿಯಮ ಪಾಲಿಸಿದರೆ ಸಂಚಾರ ನಿಯಂತ್ರಣ ಸಾಧ್ಯ ಎಂದು ಕಸಾಪ ಸದಸ್ಯರಾದ ಜಿ. ನಿಜಲಿಂಗಪ್ಪ, ಚಂದ್ರೇಗೌಡ, ಎಂ.ಎಸ್.ಜಗದೀಶ, ಬಂಡಿ ಈಶ್ವರಪ್ಪ ಅವರ ಅಭಿಪ್ರಾಯ.

ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಮತ್ತು ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT