ಶುಕ್ರವಾರ, ಸೆಪ್ಟೆಂಬರ್ 30, 2022
25 °C

ದಾವಣಗೆರೆ: ಹುತಾತ್ಮ ಅರಣ್ಯಾಧಿಕಾರಿ, ಸಿಬ್ಬಂದಿಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪ್ರಾಣಿ, ಪಕ್ಷಿ, ಮರಗಳನ್ನು ಉಳಿಸಲು ಹೋಗಿ ಹುತಾತ್ಮರಾದ ಅಧಿಕಾರಿ, ಸಿಬ್ಬಂದಿಯ ಕಾರ್ಯ, ಶ್ರಮವನ್ನು ನೆನೆಯುವುದಕ್ಕಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಡಿಎಫ್‌ಒ ಜಗನ್ನಾಥ್ ಹೇಳಿದರು.

ಇಲ್ಲಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಭಾನುವಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಪ್ರಯುಕ್ತ ಹುತಾತ್ಮರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ಮನುಕುಲದ ಅಭಿವೃದ್ಧಿಗೆ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯೂ ಅತಿಮುಖ್ಯ. ಅಮೂಲ್ಯ ವೃಕ್ಷ ಸಂಪತ್ತಿಗೆ ಕೊಡಲಿ ಇಡುವ, ಕಾಡುಪ್ರಾಣಿಗಳಿಗೆ ಗುಂಡಿಕ್ಕುವ ದುಷ್ಕರ್ಮಿಗಳನ್ನು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಪಡುವ ಕಷ್ಟ ಸಾಮಾನ್ಯವಾದುದ್ದಲ್ಲ ಎಂದು ವಿಶ್ಲೇಷಿಸಿದರು.

1730ರ ಸೆಪ್ಟೆಂಬರ್ 11 ರಂದು ಜೋಧಪುರ್‌ನ ಮಹಾರಾಜ ಅಭಯಸಿಂಗ್‌ನ ಸೈನಿಕರು ಕೆಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಕಿರ್ಜಿ ಮರಗಳನ್ನು ರಾಜನ ಹೊಸ ಅರಮನೆಗಾಗಿ ಕಡಿಯಲು ಬಂದಿದ್ದರು. ಇದನ್ನು ಬಿಷ್ಟೋಯಿ ಸಮುದಾಯ ವಿರೋಧಿಸಿತ್ತು. ಅದಕ್ಕಾಗಿ ಈ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಸೈನಿಕರು ಕೊಂದಿದ್ದರು. ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ವೀರಪ್ಪನ್‌ ಕೃತ್ಯಕ್ಕೆ ಅನೇಕ ಪೊಲೀಸರು, ಅರಣ್ಯ ಇಲಾಖೆಯವರು ಪ್ರಾಣ ಕಳೆದುಕೊಂಡಿದ್ದರು ಎಂದು ನೆನಪು ಮಾಡಿಕೊಂಡರು.

ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್. ರಾಘವೇಂದ್ರ ರಾವ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮ್ಮರ್, ವಿವಿಧ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.