ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ಶಾಮನೂರು ಶಿವಶಂಕರಪ್ಪ ನಿಧನ: ಕಂಬನಿ ಮಿಡಿದ ಗಣ್ಯರು, ಮಠಾಧೀಶರು

Published : 15 ಡಿಸೆಂಬರ್ 2025, 9:41 IST
Last Updated : 15 ಡಿಸೆಂಬರ್ 2025, 9:41 IST
ಫಾಲೋ ಮಾಡಿ
Comments
‘ನಾಯಕನ ಯುಗಾಂತ್ಯ’
ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹಿರಿಯ ರಾಜಕಾರಣಿಯೊಬ್ಬರನ್ನು ನಾಡು ಕಳೆದುಕೊಂಡಿದೆ. ವಿಶೇಷವಾಗಿ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕನ ಯುಗಾಂತ್ಯವಾಗಿದೆ
ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
‘ದಾವಣಗೆರೆಯ ಅನ್ವರ್ಥ ನಾಮ’
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆರು ಬಾರಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆಗೆ ಅನ್ವರ್ಥ ನಾಮದಂತೆ ಇದ್ದರು. ಕೊಡುಗೈ ದಾನಿಯಾಗಿದ್ದ ಅವರು ಅಗಲಿದ್ದು ಅತೀವ ನೋವುಂಟು ಮಾಡಿದೆ. 1985ರಿಂದಲೂ ಅವರೊಂದಿಗೆ ಬಾಂಧವ್ಯವಿತ್ತು.
ಬಿ.ಸಿ. ಪಾಟೀಲ, ಮಾಜಿ ಸಚಿವ
‘ಶಿವಶಂಕರಪ್ಪ ಅಜಾತಶತ್ರು’
ಕರ್ನಾಟಕದಲ್ಲಿ ಎಲ್ಲ ರೀತಿಯ ಗೌರವಕ್ಕೆ ಶಾಮನೂರು ಶಿವಶಂಕರಪ್ಪ ಪಾತ್ರರಾಗಿದ್ದರು. ವ್ಯಾಪಾರಿಗಳಾಗಿ, ಶಿಕ್ಷಣ ಪ್ರೇಮಿಯಾಗಿ ರಾಜಕಾರಣದಲ್ಲಿ ಮಹತ್ವದ ಕಾರ್ಯ ಮಾಡಿದರು. ಅಜಾತಶತ್ರು ರೀತಿಯಲ್ಲಿದ್ದರು. ಅವರನ್ನು ದ್ವೇಷ ಮಾಡುವ ಜನರು ರಾಜ್ಯದಲ್ಲಿ ಯಾರೊಬ್ಬರೂ ಇರಲಿಲ್ಲ.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಶಾಖಾಮಠ, ಸಾಣೇಹಳ್ಳಿ
‘ಸಾಮಾಜಿಕ ಕಳಕಳಿ ಸ್ತುತ್ಯರ್ಹ’
ಶಿವಶಂಕರಪ್ಪ ಅವರು ನಾಡು ಕಂಡ ಮಹಾನ್‌ ಶಿಕ್ಷಣ ಪ್ರೇಮಿ. ಅವರ ಸಾಮಾಜಿಕ ಕಾಳಜಿ ಸ್ತ್ಯುತ್ಯರ್ಹವಾಗಿತ್ತು. ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಿಸುವ ಕನಸು ಕಂಡಿದ್ದರು. ಅವರು ಲಿಂಗೈಕ್ಯರಾಗಿದ್ದು ಅತೀವ ನೋವುಂಟು ಮಾಡಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಬಸವೇಶ್ವರ, ಮುರುಗೇಶ ಕರುಣಿಸಲಿ
ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ
‘ಅಭಿವೃದ್ಧಿಗೆ ಹೊಸ ಮಾದರಿ’
ಮುತ್ಸದ್ಧಿ ರಾಜಕಾರಣಿ ಆಗಿದ್ದರು. ಮಧ್ಯ ಕರ್ನಾಟಕದಲ್ಲಿ ದಾವಣಗೆರೆಯನ್ನು ಮಾದರಿಯಾಗಿ ರೂಪಿಸಿದರು. ಶಿಕ್ಷಣ, ಔದ್ಯೋಗಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ರೀತಿ ಇತರರಿಗೆ ಮಾದರಿಯಾಗಿದೆ. ಅಧಿಕಾರವನ್ನು ಬಯಸಿದವರಲ್ಲ ಸೇವೆ ಮಾಡಿದರು
ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ, ತುಮಕೂರು
‘ಶತಮಾನ ಪೂರೈಸುವ ವಿಶ್ವಾಸವಿತ್ತು’
ಶಾಮನೂರು ಶಿವಶಂಕರಪ್ಪ ಅವರು ಶತಮಾನದ ಅಂಚಿನಲ್ಲಿದ್ದರು. ಅವರು ಶತಮಾನ ಪೂರೈಸುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇತ್ತು. ಒಬ್ಬ ವ್ಯಕ್ತಿ ಸಾಮಾಜಿಕ ಸುಧಾರಣೆಗಳನ್ನು ಮಾಡಲು ಸಾಧ್ಯ ಎಂಬುದಕ್ಕೆ ಶಿವಶಂಕರಪ್ಪ ಪ್ರತ್ಯಕ್ಷ ಸಾಕ್ಷಿ ಆಗಿದ್ದರು. ಮಠಗಳು, ದೇವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ನಾಡಿನ ಅನೇಕ ಧಾರ್ಮಿಕ ಕ್ಷೇತ್ರಗಳ ಉದ್ದಾರಕ್ಕೆ ಶ್ರಮಿಸಿದ್ದರು. ಅವರು ಯುವಪೀಳಿಗೆಗೆ ಆದರ್ಶವಾಗಲಿ.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ, ಮೈಸೂರು
‘ಜಾತ್ಯತೀತ ವ್ಯಕ್ತಿತ್ವ ಅನುಕರಣೀಯ’
ಸಮುದಾಯಕ್ಕೆ ಇದೊಂದು ಕರಾಳ ದಿನ. ನೇರ ವ್ಯಕ್ತಿತ್ವದ ಮಹಾಪುರುಷರು ನಮ್ಮ ನಡುವೆ ಇಲ್ಲದೇ ಇರುವುದು ಅತ್ಯಂತ ನೋವಿನ ಸಂಗತಿ. ಮಠಕ್ಕೆ ಹರಧ್ಯಾನ ಮಂದಿರವನ್ನು ಕಟ್ಟಿಸಿಕೊಟ್ಟಿದ್ದರು. ರಾಜ್ಯದ ಎಲ್ಲ ಮಠ, ಪೀಠಗಳಿಗೆ ಬೇಕಾಗಿದ್ದ ಜಾತ್ಯತೀತ ವ್ಯಕ್ತಿತ್ವ ಹೊಂದಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಸಮರ್ಥವಾಗಿ ಮುನ್ನಡೆಸಿದರು.
ವಚನಾನಂದ ಸ್ವಾಮೀಜಿ, ಪಂಚಮಸಾಲಿ ಗುರುಪೀಠ, ಹರಿಹರ
‘ಶಿವಶಂಕರಪ್ಪ ಕೊಡುಗೆ ಅಜರಾಮರ’
ಶಿವಶಂಕರಪ್ಪ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ದಾವಣಗೆರೆ ನಗರವನ್ನು ಶಿಕ್ಷಣ ಕಾಶಿಯಾಗಿ ರೂಪಿಸಿದವರು ಶಿವಶಂಕರಪ್ಪ. ಈ ಊರಿಗೆ ಅವರ ಕೊಡುಗೆ ಅಜರಾಮರ. ಅವರ ಕೊಡುಗೆಯನ್ನು ಕಾಪಾಡಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT