ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ ನೀರು ಸಾಗಣೆದಾರರಿಗೆ ಪಾವತಿಯಾಗದ ಬಿಲ್‌

ಜಿಪಿಎಸ್‌ ಇದ್ದವರಿಗಿಲ್ಲ ಸಮಸ್ಯೆ, ನಾನ್‌ ಜಿಪಿಎಸ್‌ಗೆ ತೊಂದರೆ
Last Updated 10 ಜುಲೈ 2019, 14:43 IST
ಅಕ್ಷರ ಗಾತ್ರ

ದಾವಣಗೆರೆ: ಜಗಳೂರು ತಾಲ್ಲೂಕಿನಲ್ಲಿ ಬರಗಾಲದಲ್ಲಿ ಕುಡಿಯುವ ನೀರಿನ ಕೊರತೆ ಆಗಬಾರದು ಎಂದು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಆದರೆ ನೀರು ಪೂರೈಸಿದ ಟ್ಯಾಂಕರ್‌ ಮಾಲೀಕರಿಗೆ ಬಿಲ್‌ ಪಾವತಿಯಾಗಿಲ್ಲ.

ಜಿಪಿಎಸ್‌ ಕಡ್ಡಾಯ ಆಗುವ ಮೊದಲು ಪೂರೈಸಿದವರಿಗಷ್ಟೇ ತೊಂದರೆಯಾಗಿದೆ, ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಾ ಬಂದಿದ್ದಾರೆ. ಆದರೆ ಬಿಲ್ ಪಾವತಿಯಾಗುತ್ತಿಲ್ಲ.

‘ನಾನು 2018ರ ಜುಲೈ 16ರಿಂದ ಇಲ್ಲಿವರೆಗೆ ದಿನಕ್ಕೆ 8 ಟ್ರಿಪ್‌ನಂತೆ ನೀರು ಪೂರೈಕೆ ಮಾಡುತ್ತಿದ್ದೇನೆ. 2,500 ಟ್ರಿಪ್‌ ದಾಟಿದೆ. ಅದರಲ್ಲಿ 1,400 ಟ್ರಿಪ್‌ಗಳ ಹಣ ಪಾವತಿಯಾಗಿದೆ. ಉಳಿದ 1,100 ಟ್ರಿಪ್‌ಗಳ ಬಿಲ್‌ ಪಾವತಿಯಾಗಿಲ್ಲ. ಈಗಿನ ತಹಶೀಲ್ದಾರ್‌ ಬಂದ ಬಳಿಕ ಬಿಲ್‌ ಬಾಕಿಯಾಗಿಲ್ಲ. ಆದರೆ ಹಿಂದಿನ ಬಾಕಿ ಸಿಕ್ಕಿಲ್ಲ’ ಎನ್ನುತ್ತಾರೆ ಉದ್ದಘಟ್ಟ ಗ್ರಾಮದ ಬಸವರಾಜ್‌.

‘ತಾಲ್ಲೂಕು ಪಂಚಾಯಿತಿ ಇಒ ಅಥವಾ ತಹಶೀಲ್ದಾರ್‌ಗಿಂತಲೂ ಪಿಡಿಒ ಮಾಡುವ ಅನಾಹುತದಿಂದ ಬಿಲ್‌ ಪಾವತಿಯಾಗಿಲ್ಲ. ನಾನು ಕಳೆದ ವರ್ಷ 580 ಟ್ರಿಪ್‌ ನೀರು ಸಾಗಣೆ ಮಾಡಿದ್ದೆ. ₹ 4.64 ಲಕ್ಷ ಪಾವತಿಯಾಗಬೇಕಿತ್ತು. ಅದರಲ್ಲಿ ₹ 1.90 ಲಕ್ಷ ಮಾತ್ರ ಸಿಕ್ಕಿದೆ’ ಎನ್ನುವುದು ಚಿಕ್ಕಮ್ಮನಹಟ್ಟಿ ಗ್ರಾಮದ ರಂಗಪ್ಪ ಅವರ ಅಳಲು.

‘ತಾಲ್ಲೂಕಿನ 53 ಗ್ರಾಮಗಳಲ್ಲಿ 78 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ 319 ಟ್ರಿಪ್‌ಗಳು ಆಗುತ್ತವೆ. ಪ್ರತಿ ಟ್ರಿಪ್‌ಗೆ ₹ 800 ನಿಗದಿ ಪಡಿಸಲಾಗಿದೆ. ಹಿಂದೆ ಮೊಬೈಲ್‌ನಲ್ಲಿ ಲೊಕೇಶನ್‌ ಆನ್‌ ಮಾಡಿಕೊಂಡು ನೀರು ಸಾಗಣೆಯ ಫೋಟೊ ತೆಗೆದು ಕಳುಹಿಸಬೇಕಿತ್ತು. ಆನಂತರ ಜಿಪಿಎಸ್‌ ಕಡ್ಡಾಯ ಮಾಡಲಾಯಿತು. ಜಿ‍ಪಿಎಸ್‌ ಕಡ್ಡಾಯ ಆದ ಬಳಿಕದ ಟ್ರಿಪ್‌ಗಳಿಗೆ ಬಿಲ್‌ ಪಾವತಿ ಬಾಕಿ ಇಲ್ಲ. ತಾಂತ್ರಿಕ ಕಾರಣದಿಂದ ನಾನ್‌ ಜಿಪಿಎಸ್‌ ಟ್ರಿಪ್‌ಗಳಿಗೆ ಬಿಲ್‌ ಬಾಕಿಯಾಗಿದೆ. ಅದನ್ನು ಮೇಲಧಿಕಾರಿಗಳ ಜತೆ ಮಾತನಾಡಿ ಕೊಡಿಸುತ್ತೇನೆ’ ಎಂಬುದು ತಾಲ್ಲೂಕು ಪಂಚಾಯಿತಿ ಇಒ ಜಾನಕಿರಾಮ್‌ ನೀಡುವ ಭರವಸೆ.

ಜಿಪಿಎಸ್‌ ಅಳವಡಿಕೆ ಆದ ಬಳಿಕ 9,137 ಟ್ರಿಪ್‌ಗಳು ಆಗಿವೆ. ಅದರ ಬಿಲ್‌ ₹ 73.09 ಲಕ್ಷ ಪಾವತಿಯಾಗಿದೆ. ಅದಕ್ಕಿಂತ ಮೊದಲಿನ 3,579 ಟ್ರಿಪ್‌ಗಳ ₹ 28.63 ಲಕ್ಷ ಪಾವತಿಯಾಗಲು ಬಾಕಿ ಇದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನೊಬ್ಬನ ಸಮಸ್ಯೆಯಲ್ಲ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಎಲ್ಲರಿಗೂ ಸಮಸ್ಯೆಯಾಗಿದೆ. ಹಾಗಾಗಿ ಎಲ್ಲರಿಗೂ ಬಾಕಿ ಹಣ ಸಿಗುವಂತಾಗಬೇಕು’ ಎಂದು ಬಸವರಾಜ್‌ ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರದ ಆರೋಪ

ನೀರು ಪೂರೈಕೆಯಲ್ಲಿ ಕೆಲವು ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಆರೋಪಗಳು ಕೇಳಿ ಬರುತ್ತಿವೆ.

ಟ್ಯಾಂಕರ್‌ನಲ್ಲಿ ನೀರು ಸಾಗಣೆ ಮಾಡಿದ್ದಕ್ಕಾಗಿ ಚಿಕ್ಕಮ್ಮನಹಟ್ಟಿ ರಂಗಪ್ಪ ಅವರಿಗೆ ₹ 4.64 ಲಕ್ಷ ‍ಪಾವತಿಯಾಗಬೇಕಿತ್ತು. ಅದರಲ್ಲಿ ಅವರ ಖಾತೆಗೆ ಒಂದು ಬಾರಿ ₹ 50 ಸಾವಿರ ಜಮಾ ಮಾಡಲಾಗಿದೆ. ಇನ್ನೊಂದು ಬಾರಿ ನೇರವಾಗಿ ₹ 1 ಲಕ್ಷ ನೀಡಿದ್ದಾರೆ. ಕೈಯಲ್ಲಿ ನೇರ ನಗದು ನೀಡುವ ಪದ್ಧತಿ ಇಲ್ಲದಿದ್ದರೂ ನೀಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಮತ್ತೆ ₹ 40 ಸಾವಿರ ಅವರ ಖಾತೆಗೆ ಜಮಾ ಆಗಿದೆ.

‘ಫೈಲ್‌ ನಿರ್ವಹಿಸದೇ ರಸೀತಿ ಇಲ್ಲದೇ ಹೇಗೆ ಪಾವತಿ ಮಾಡುತ್ತೀರಿ ಎಂದು ಪ್ರಶ್ನಿಸಿದೆ. ಬಿಲ್‌ ಹಿಡಿದುಕೊಂಡು ಏನು ಮಾಡುತ್ತಿ. ನಿನ್ನ ದುಡ್ಡು ಬಂದರೆ ಆಯಿತು ಎಂದು ಪಿಡಿಒ ಹಣ ನೀಡಿದ್ದಾರೆ’ ಎನ್ನುವುದು ರಂಗಪ್ಪ ಅವರ ಆರೋಪ.

‘ಒಂದು ಟ್ಯಾಂಕರ್‌ನಲ್ಲಿ ನೀರು ಸಾಗಣೆ ಮಾಡಿ, ಎರಡು ಟ್ಯಾಂಕರ್‌ ಅನ್ನು ದಾಖಲೆಯಲ್ಲಿ ತೋರಿಸಿ ಭ್ರಷ್ಟಾಚಾರ ಮಾಡಿದ್ದಾರೆ. ಅದು ನಮಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ನೇರ ನಗದು ನೀಡಿದ್ದಾರೆ’ ಎಂದು ರಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT