ಸೋಮವಾರ, ಸೆಪ್ಟೆಂಬರ್ 27, 2021
23 °C
ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ ಇಬ್ಬರು * ದೂರು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಉಳಿದ ಏಳು ಮಂದಿ

ಉಪಯೋಗಕ್ಕೆ ಬಾರದ ಸ್ಮಾರ್ಟ್‌ಸಿಟಿ ಆಟೊ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ವಾಯು ಮಾಲಿನ್ಯ ಇಲ್ಲ. ಪರಿಸರಕ್ಕೆ ಒಳ್ಳೆಯದು. ಸ್ಮಾರ್ಟ್‌ಸಿಟಿಯಿಂದ ಸಬ್ಸಿಡಿಯೂ ಇದೆ ಎಂದು ನಂಬಿಸಿ ನೀಡಿದ ಆಟೊ ನಮ್ಮನ್ನು ಬೀದಿಗೆ ತಂದಿದೆ. ಆಟೊ ವಾಪಸ್‌ ತಗೊಳ್ಳಿ ಅಂದರೆ ಸ್ಮಾರ್ಟ್‌ಸಿಟಿಯವರು ಸ್ಪಂದಿಸುತ್ತಿಲ್ಲ. ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯ’.

ಆಟೊ ಚಾಲಕ ಕೊಟ್ರೇಶ್‌ ಅವರು ನೋವಿನಿಂದ ಹೇಳಿದ ಮಾತಿದು. ಕೊಟ್ರೇಶ್‌ ಒಬ್ಬರ ಕಥೆಯಲ್ಲಿ ಈ ಪರಿಸರ ಸ್ನೇಹಿ ಆಟೋ ಪಡೆದು ಮೈಲೇಜ್‌ ಇಲ್ಲದೇ, ಹಾಳಾದರೆ ರಿಪೇರಿಯೂ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿರುವ ನಿಟುವಳ್ಳಿ ಬಸವರಾಜ್‌, ಬಸಾಪುರ ಚಂದ್ರಪ್ಪ, ಎಸ್‌ಎಂಕೆ ನಗರ ಸ್ವಾಮಿ, ಕೆಟಿಜೆನಗರ ಸೈಯದ್‌, ಲಕ್ಷ್ಮಣ, ಶಾಮನೂರಿನ ಕಾಂತರಾಜು, ಸಿದ್ದರಾಮೇಶ್ವರ, ಆವರಗೆರೆ ರಮೇಶ್‌ ಸೇರಿ ಎಲ್ಲ 9 ಮಂದಿಯ ನೋವು ಇದು.

‘ಎಲೆಕ್ಟ್ರಿಕ್‌ ಆಟೊ ನೀಡುವುದಾಗಿ 2 ವರ್ಷದ ಹಿಂದೆ ಸ್ಮಾರ್ಟ್‌ಸಿಟಿಯವರು ಅರ್ಜಿ ಆಹ್ವಾನ ಮಾಡಿದ್ದರು. ₹ 1.81 ಲಕ್ಷದ ಆಟೊ ಸಬ್ಸಿಡಿಯಲ್ಲಿ ₹ 72,400ಕ್ಕೆ ಬರುತ್ತದೆ ಎಂದು ಹೇಳಿದ್ದರು. ಆಟೊ ಟ್ರಯಲ್‌ ಓಡಿಸಲು ಕೇಳಿದರೂ ಕಂಪನಿಯಾಗಲಿ, ಸ್ಮಾರ್ಟ್‌ಸಿಟಿಯಾಗಲಿ ನೀಡಲಿಲ್ಲ. ಸಾಲವನ್ನು ಅವರೇ ಕೊಡಿಸಿದರು. 3 ಗಂಟೆ ಚಾರ್ಜ್‌ ಆದರೆ 80 ಕಿಲೋಮೀಟರ್‌ ಬರುತ್ತದೆ ಎಂದು 35 ಕಿಲೋಮೀಟರ್‌ ಕೂಡ ಮೈಲೆಜ್‌ ಸಿಗದ ಆಟೊ ನೀಡಿದ್ದಾರೆ’ ಎಂಬುದು ಚಾಲಕರ ಆರೋಪ.

‘ಒಮ್ಮೆ ಆಟೊಗೆ ಹತ್ತಿದವರು ಮತ್ತೊಮ್ಮೆ ಹತ್ತಲ್ಲ. ಆ ರೀತಿ ಆಟೋ ಓಲಾಡುತ್ತಿತ್ತು. ಈಗ ಮನೆ ಪಕ್ಕದಲ್ಲಿ ನಿಲ್ಲಿಸಿಬಿಟ್ಟಿದ್ದೇವೆ. ಹ್ಯಾಂಡ್‌ ಲಾಕ್‌ ಇಲ್ಲದೇ ಯಾರೂ ಕೂಡ ಕದಿಯಬಹುದಾದ ಪರಿಸ್ಥಿತಿ ಇದೆ. ಗುಜರಿ ಅಂಗಡಿಯಲ್ಲಿದ್ದ ಆಟೊಗೆ ಪೈಂಟ್‌ ಹೊಡೆದು ತಂದು ಕೊಟ್ಟಿರಬೇಕು.ಸ್ಮಾರ್ಟ್‌ಸಿಟಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಎರಡು ವರ್ಷಗಳ ಹಿಂದೆ ನೀಡಿದ್ದ ಆಟೊ ಎರಡು ತಿಂಗಳೂ ಸರಿಯಾಗಿ ಓಡಿಲ್ಲ. ಈಗ ಸಾಲ ನೀಡಿರುವ ಬ್ಯಾಂಕ್‌ನವರು ನೋಟಿಸ್‌ ಮೇಲೆ ನೋಟಿಸ್‌ ನೀಡುತ್ತಿದ್ದಾರೆ. ಈ ಸಾಲದಿಂದಾಗಿ ಬೇರೆ ಆಟೊ ತೆಗೆದುಕೊಳ್ಳಲೂ ಸಾಲ ಸಿಗುತ್ತಿಲ್ಲ’ ಎಂದು ಅಳವತ್ತುಕೊಂಡರು.

ದೂರು ದಾಖಲು

‘ಆಟೊ ನೀಡಿದ ಕೈನೆಟಿಕ್‌ ಸೊಲ್ಯೂಶನ್ ಸಂಸ್ಥೆಯನ್ನು ಮೊದಲ ಆರೋಪಿ ಮತ್ತು ಸ್ಮಾರ್ಟ್‌ಸಿಟಿಯನ್ನು ಎರಡನೇ ಆರೋಪಿಯನ್ನಾಗಿ ಮಾಡಿ ಇಬ್ಬರು ಚಾಲಕರು ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದಾರೆ. ನಮ್ಮ ಆಟೊಗಳನ್ನು ಸ್ಮಾರ್ಟ್‌ಸಿಟಿ ವಾಪಸ್‌ ತಗೊಳ್ಳದೇ ಹೋದರೆ ಕೆಲವೇ ದಿನಗಳಲ್ಲಿ ಉಳಿದ ಏಳು ಮಂದಿಯೂ ದೂರು ದಾಖಲು ಮಾಡುತ್ತೇವೆ’ ಎಂದು ಕೊಟ್ರೇಶ್‌ ತಿಳಿಸಿದ್ದಾರೆ.

ನಾವೂ ದೂರು ನೀಡಿದ್ದೇವೆ: ಸ್ಮಾರ್ಟ್‌ಸಿಟಿ ಎಂಡಿ

‘ಕೈನೆಟಿಕ್‌ ಸೊಲ್ಯೂಶನ್ ಕಂಪನಿಯ ಡಿಫಾಲ್ಟ್‌ ಅದು. ಉತ್ತಮ ವಾಹನ ನೀಡದೇ ಇದ್ದರೆ ಅದನ್ನು ಅವರು ಸರಿಪಡಿಸಿಕೊಡಬೇಕು. ಆಟೊ ಪಡೆದುಕೊಂಡಿರುವವರು ಹೇಳಿದ್ರು ಎಂಬ ಕಾರಣಕ್ಕೆ ನಾವು ಆಟೊ ತಂದು ಇಟ್ಟುಕೊಳ್ಳಲು ಆಗುವುದಿಲ್ಲ. ಹಾಗಾಗಿ ನಾವು ಕೂಡ ಕೈನೆಟಿಕ್‌ ಸೊಲ್ಯೂಶನ್ ಕಂಪನಿ ವಿರುದ್ಧ ಕೋರ್ಟ್‌ಗೆ ಹೋಗಿದ್ದೇವೆ’ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆಟೊ ಪಡೆದವರಿಗೆ ಅವರು ಹಾಕಿದ ಹಣ ನೀಡಬೇಕು. ನಾವು ನೀಡಿರುವ ಸಬ್ಸಿಡಿಯನ್ನು ನಮಗೆ ವಾಪಸ್‌ ಕೊಡಬೇಕು ಎಂದು ದೂರಲ್ಲಿ ತಿಳಿಸಿದ್ದೇವೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು