ಮಂಗಳವಾರ, ಜೂನ್ 28, 2022
26 °C
ಉದ್ಘಾಟನೆಗೆ ಬರಲಿದ್ದಾರೆ ಡಿ.ಕೆ.ಶಿ., ಖಂಡ್ರೆ ವೆಂಕಟೇಶ್‌ ಕೊಂಡಜ್ಜಿ: ಶಾಮನೂರು ಮಾಹಿತಿ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಂದಿನಿಂದ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕೊಟ್ಟ ಮಾತಿನಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ಕೆ ಜೂನ್‌ 4ರಂದು ಮಧ್ಯಾಹ್ನ 12ಕ್ಕೆ ಚಾಲನೆ ನೀಡಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಯು.ಬಿ. ವೆಂಕಟೇಶ್‌, ಕೆ.ಸಿ. ಕೊಂಡಯ್ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ತಿಳಿಸಿದರು.

‘10 ಸಾವಿರ ಕೋವಿಶೀಲ್ಡ್‌ ಡೋಸ್‌ ಬಂದಿದೆ. ಜೂನ್‌ 10ರಂದು 50 ಸಾವಿರ ಡೋಸ್‌ ನೀಡುವುದಾಗಿ ಕಂಪನಿ ಭರವಸೆ ನೀಡಿದೆ. ಎಸ್‌.ಎಂ. ಕೃಷ್ಣ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಜಾಲಿನಗರ ದುರ್ಗಾಂಬಿಕಾ ಶಾಲೆ ಆವರಣ, ನಗರದೇವತೆ ದುರ್ಗಾಂಬಿಕಾ ದೇವಸ್ಥಾನದದ ದಾಸೋಹ ಸಭಾಂಗಣ, ಎಚ್‌ಕೆಆರ್‌ನಗರ ಪ್ರಾಥಮಿಕ ಆ‌ರೋಗ್ಯ ಕೇಂದ್ರ, ಬಾಷಾನಗರ ಆರೋಗ್ಯ ಕೇಂದ್ರ ಈ ಐದು ಕಡೆಗಳಲ್ಲಿ ಲಸಿಕೆ ನೀಡಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದೇವತೆ ದುರ್ಗಾಂಬಿಕಾ ದೇವಸ್ಥಾನದದ ದಾಸೋಹ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಇರುವುದರಿಂದ, ಸಿದ್ದರಾಮಯ್ಯ ಅನಾರೋಗ್ಯದ ಕಾರಣದಿಂದ ಬರುತ್ತಿಲ್ಲ. ಉಳಿದ ನಾಯಕರು ಬರುತ್ತಿದ್ದಾರೆ ಎಂದರು.

ಸದ್ಯ ದಾವಣಗೆರೆ ದಕ್ಷಿಣದಲ್ಲಿ ನೀಡಲಾಗುತ್ತಿದೆ. 50 ಸಾವಿರ ಡೋಸ್‌ ಬಂದ ಮೇಲೆ ಉತ್ತರ ಕ್ಷೇತ್ರದ ಜನರಿಗೂ ಉಚಿತವಾಗಿ ನೀಡಲಾಗುವುದು. ಇದಲ್ಲದೇ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆ ಮತ್ತು ಬಾಪೂಜಿ ಆಸ್ಪತ್ರೆಯಲ್ಲಿ ದರ ನಿಗದಿ ಮಾಡಿ ನೀಡಲಾಗುವುದು. ಅಲ್ಲಿ ಉಳ್ಳವರು, ಈ ಎರಡು ವಿಧಾನಸಭಾ ಕ್ಷೇತ್ರದ ಹೊರಗಿನವರು ಪಡೆಯಬಹುದು ಎಂದು ಮಾಹಿತಿ ನೀಡಿದರು.

‘ಪ್ರತಿ ಡೋಸ್‌ಗೆ ಸುಮಾರು ₹ 650 ವೆಚ್ಚ ಬಿದ್ದಿದೆ. ಒಟ್ಟು 60 ಸಾವಿರ ಡೋಸ್‌ಗೆ ₹ 4 ಕೋಟಿ ದಾಟಿದೆ. ಅಷ್ಟನ್ನು ಕಂಪನಿಗೆ ಪಾವತಿ ಮಾಡಲಾಗಿದೆ. ನಮಗೆ ಲಸಿಕೆ ಸಿಗಲು ಮಲ್ಲಿಕಾರ್ಜುನ ಖರ್ಗೆ ಸಹಿತ ಹಲವರ ಪ್ರಯತ್ನ ಕಾರಣ. ಸರ್ಕಾರ ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಡಿಸೆಂಬರ್‌, ಜನವರಿ ಎಂದು ಹೇಳುತ್ತಿದೆ’ ಎಂದು ಟೀಕಿಸಿದರು.

ಲಸಿಕೆ ಕೊಡುವ ಬಗ್ಗೆ ಸರ್ಕಾರ, ಜಿಲ್ಲಾಡಳಿತದ ಜತೆಗೆ ಚರ್ಚೆ ಮಾಡಿದ್ದೇವೆ. ಲಸಿಕೆ ನೀಡುವುದು ಗೊಂದಲ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡುತ್ತಾರೆ. ಬಿಜೆಪಿ, ಕಾಂಗ್ರೆಸ್‌ ಎಂದು ನೋಡದೇ 45 ವರ್ಷ ದಾಟಿದ ಎಲ್ಲರಿಗೂ ನೀಡಲಾಗುವುದು. ಪ್ರತಿ ಕೇಂದ್ರದಲ್ಲಿ 150 ಮಂದಿಯಂತೆ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಡಿ. ಬಸವರಾಜ್‌, ಎ. ನಾಗರಾಜ್‌, ದಿನೇಶ್ ಕೆ.ಶೆಟ್ಟಿ, ಕೆ.ಎಸ್‌. ಬಸವಂತಪ್ಪ, ಮಲ್ಲಿಕಾರ್ಜುನ್, ಅಯೂಬ್‌ ಪೈಲ್ವಾನ್‌, ಮಾಲ್ತೇಶ್‌ ರಾವ್ ಜಾಧವ್‌, ಚಮನ್‌ಸಾಬ್‌, ಪರಶುರಾಮ್‌, ಹರೀಶ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು