ಸೋಮವಾರ, ಸೆಪ್ಟೆಂಬರ್ 26, 2022
22 °C

ವೀರಾಚಾರಿ ಆತ್ಮಹತ್ಯೆ: ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಪಡಿಸಬೇಕು ಹಾಗೂ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶವದ ಮುಂದೆ ಪ್ರತಿಭಟನೆ ನಡೆಸಿದರು.

ವೀರಾಚಾರಿ ಅವರ ಮಕ್ಕಳಿಗೆ ಪರಿಹಾರ ನೀಡಬೇಕು. ಅವರ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹರಿಹರ ತಹಶೀಲ್ದಾರ್ ಅಶ್ವತ್ಥ್‌ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದುದರ ವಿರುದ್ಧ ಹಲವು ಧ್ವನಿ ಎತ್ತಿದ್ದ ವೀರಾಚಾರಿ ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ಅನ್ನು ರದ್ದುಪಡಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು. ನ್ಯಾಯ ಸಿಗದೇ ಇದ್ದರೆ ಸಾಯಲು ಸಿದ್ಧ ಎಂದು ಗ್ರಾಮಸ್ಥರ ಬಳಿ ಹೇಳಿದ್ದರು.

ಸಾಲುಮರದ ವೀರಾಚಾರಿಯ ಪರಿಸರ ಪ್ರೇಮ

ಸಾಲುಮರದ ವೀರಾಚಾರಿ ಅವರು ಹುಟ್ಟಿದ್ದು, ಚಿತ್ರದುರ್ಗದ ನಂದೀಹಳ್ಳಿಯಲ್ಲಿ. 1983ರಲ್ಲಿ ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಗೆ ಬಂದು ನೆಲೆಸಿದರು. ಹೊಟ್ಟೆಪಾಡಿಗಾಗಿ ಕುಲುಮೆ ಕೆಲಸ ಮಾಡಿದರೂ ಪರಿಸರ ಪ್ರೇಮ ಕುಂದಲಿಲ್ಲ. ಗಿಡ, ಮರ ಬೆಳೆಸುವ ಗೀಳು ನಿಧಾನವಾಗಿ ಬೆಳೆಯಿತು. ರಸ್ತೆ ಬದಿ ಗಿಡ ನೆಡಲು ಆರಂಭಿಸಿದ ಇವರ ಪರಿಸರ ಪ್ರೇಮ ಎಷ್ಟರಮಟ್ಟಿಗೆ ಬೆಳೆಯಿತು ಎಂದರೆ ಮಕ್ಕಳು, ಕುಟುಂಬ ಎಲ್ಲವನ್ನೂ ನಿರ್ಲಕ್ಷಿಸಿ, ಸಾಲ ತಂದು ಗಿಡ ನೆಡುವ ಮಟ್ಟಿಗೆ ಬೆಳೆಸಿತು.

ಒಂದು ಸಾರಿ ಗಿಡಗಳಿಗೆ ನೀರು ಹಾಯಿಸಿದ ಕಾರ್ಮಿಕರಿಗೆ ಕೂಲಿ ಕೊಡಲು ವೀರಾಚಾರಿ ಅವರ ಬಳಿ ಹಣವಿರಲಿಲ್ಲ. ಆಗ ಪತ್ನಿಯ ಕಿವಿಯ ಓಲೆ ಮಾರಾಟ ಮಾಡಿ ಕೂಲಿ ಹಣ ನೀಡಿದ ನಿದರ್ಶನ ಉಂಟು. ಇನ್ನೊಮ್ಮೆ ಕೂಲಿ ಹಣ ನೀಡದೇ ಇದ್ದಾಗ ಆಳುಗಳು ವೀರಾಚಾರಿ ಅವರ ಸೈಕಲ್ ಅನ್ನು ಹೊತ್ತೊಯ್ದಿದ್ದ ಪ್ರಸಂಗವೂ ಉಂಟು.

ಹೋದಲ್ಲೆಲ್ಲಾ ಗಿಡ ನೆಡುವ ಕಾಯಕ
ವೀರಾಚಾರಿ ಅವರು ಬೇರೆಯವರ ಮನೆಗೆ ಹೋದರೆ ಅವರ ಮನೆಯ ಮುಂದೆ ಒಂದು ಸಸಿ ನೆಟ್ಟು ಬರುತ್ತಾರೆ. ಸಾರ್ವಜನಿಕ ಸ್ಥಳಗಳು, ಹಳ್ಳಿಗಳ ಬಸ್ ನಿಲ್ದಾಣಗಳಲ್ಲಿ ಜನರಿಗೆ ನೆರಳಾಗುವಂತೆ ಗಿಡ ನೆಟ್ಟು ಬೆಳೆಸಿದ್ದಾರೆ. ಸಾರ್ವಜನಿಕ ಸ್ಥಳಗಳು  ಬಸ್ ನಿಲ್ದಾಣಗಳಲ್ಲಿ ಹೆಚ್ಚು ಕಸ ಕಂಡರೆ ಸಾಕು. ಸ್ವತಃ ಕಸಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛ ಮಾಡುತ್ತಾರೆ.

1994-95ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ತಾಲ್ಲೂಕಿನ ದುರ್ಗಾಂಬಿಕಾ ಕ್ಯಾಂಪ್ ಶಾಲೆಗಳಲ್ಲಿ ಹಲವು ಗಿಡಗಳನ್ನು ನೆಟ್ಟಿದ್ದಾರೆ. ಹಲೇಹಳ್ಳಿ ರಸ್ತೆಯಿಂದ ದೊಡ್ಡ ಚಾನಲ್‌ವರೆಗೆ ಎರಡೂ 2 ಬದಿಗೆ 300 ಗಿಡಗಳು ಸೇರಿ ಒಟ್ಟು 500 ಗಿಡ ನೆಡಿಸಿದ್ದರು.

ಪರಿಸರ ಪ್ರಿಯ: 1997ರಲ್ಲಿ ಭಾರತ ಸ್ವಾತಂತ್ರ ಸುವರ್ಣ ಮಹೋತ್ಸವ ಸಂದರ್ಭ ಭಾರತ ಸೇವಾದಳ ಆಯೋಜಿಸಿದ್ದ  ಹರಿಹರ ತಾಲೂಕು ಮಟ್ಟದ ಭಾವೈಕ್ಯ ಮೇಳದಲ್ಲಿ ವೀರಾಚಾರ್‌ ಅವರಿಗೆ ‘ಪರಿಸರ ಪ್ರಿಯ’ ಪ್ರಶಸ್ತಿ, 1998ರಲ್ಲಿ ಹರಿಹರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ‘ವೃಕ್ಷಪ್ರೇಮಿ’, 1994 ಹಾಗೂ 1998ರಲ್ಲಿ  ಡಾ. ಶಿವರಾಮ ಕಾರಂತ ಪರಿಸರ ಫೆಲೋಶಿಪ್‌ ನೀಡಲಾಗಿದೆ. ವೀರಾಚಾರ್ ಈ ಹಣವನ್ನೂ ಗಿಡ ನೆಡಲು ಬಳಸಿಕೊಂಡಿರುವುದು ಇವರ ಪರಿಸರ ಪ್ರೇಮಕ್ಕೆ ಹಿಡಿದ ಕನ್ನಡಿ.

ದಾವಣಗೆರೆ ಧವನ್ ಜ್ಯೂನಿಯರ್ ಚೇಂಬರ್ ಸಂಸ್ಥೆಯವರ ನೇತೃತ್ವದಲ್ಲಿ ಜರುಗಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ವೀರಾಚಾರ್ ಅವರನ್ನು ‘2019ರ ಸಾವಿರ ಗಿಡಗಳ ಸರದಾರ’ ಎಂಬ ಬಿರುದು ನೀಡಿ ಗೌರವಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು