ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಸ್ಥಳೀಯ ಗಂಡಸರು ಯಾರೂ ಸಿಗಲಿಲ್ಲವೇ?- ಬೈರತಿ ಬಸವರಾಜ

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಟೀಕೆ
Last Updated 3 ಡಿಸೆಂಬರ್ 2021, 9:10 IST
ಅಕ್ಷರ ಗಾತ್ರ

ದಾವಣಗೆರೆ: ‘ಚಿತ್ರದುರ್ಗ ಹಾಗೂ ದಾವಣಗೆರೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬೆಂಗಳೂರಿನಿಂದ ಅಭ್ಯರ್ಥಿಯನ್ನು ಕರೆತಂದು ನಿಲ್ಲಿಸಿರುವ ಕಾಂಗ್ರೆಸ್‌ಗೆ ಸ್ಥಳೀಯ ಗಂಡಸರ್‍ಯಾರೂ ಅಭ್ಯರ್ಥಿಯಾಗಿ ಸಿಗಲಿಲ್ಲವೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಟೀಕಿಸಿದರು.

ಚಿತ್ರದುರ್ಗ ಹಾಗೂ ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್‌. ನವೀನ್‌ ಪರ ಪ್ರಚಾರ ನಡೆಸಲು ಜಿಲ್ಲೆಗೆ ಬಂದಿದ್ದ ಸಚಿವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದರು.

ಮತದಾರರಿಗೆ ₹50 ಸಾವಿರ ನೀಡುವ ಬಗ್ಗೆ ಆರೋಪಗಳು ಕೇಳಿಬರುತ್ತಿರುವ ಕುರಿತ ಪ್ರಶ್ನೆಗೆ, ‘ದಾವಣಗೆರೆ ಅಥವಾ ಚಿತ್ರದುರ್ಗ ಜಿಲ್ಲೆಯ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸುವ ಶಕ್ತಿ ಕಾಂಗ್ರೆಸ್‌ನವರಿಗೆ ಇರಲಿಲ್ಲ. ಹೀಗಾಗಿ ದುಡ್ಡು ಇರುವ ಬೆಂಗಳೂರಿನ ಉದ್ಯಮಿಯನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳಬಾರದು. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಹಾಗೂ ದಾವಣಗೆರೆ–ಚಿತ್ರದುರ್ಗದ ಮಗನಾಗಿರುವ ನವೀನ್‌ ಅವರಿಗೆ ಬೆಂಬಲ ನೀಡಬೇಕು’ ಎಂದು ಸಚಿವರು ಮನವಿ ಮಾಡಿದರು.

‘ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಬರುತ್ತಿದ್ದ ₹ 250 ಗೌರವಧನವನ್ನು ₹ 1,000ಕ್ಕೆ ಹೆಚ್ಚಿಸಿದ್ದೇವೆ. ಇದನ್ನು ₹ 3,000ಕ್ಕೆ ಹೆಚ್ಚಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಈ ಬಾರಿ ಬಿಜೆಪಿಯ ಎಂಟು ಶಾಸಕರು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಸೋತಿದ್ದಾರೆ ಎಂಬ ಅನುಕಂಪವೂ ಇದೆ. ಹೀಗಾಗಿ ನವೀನ್‌ ಅವರು 3,500ಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮ ಪಕ್ಷದ ಸದಸ್ಯರು ಮತ ಹಾಕಲು ಹಣ ಕೇಳುವುದಿಲ್ಲ. ಪಕ್ಷದ ಶಿಸ್ತಿಗೆ ಬದ್ಧರಾಗಿ ಮತ ಚಲಾಯಿಸುತ್ತಾರೆ’ ಎಂದು ಸಂಸದರು ಪ್ರತಿಪಾದಿಸಿದರು.

ಶಾಸಕರಾದ ಎಸ್‌.ವಿ. ರಾಮಚಂದ್ರ, ಪ್ರೊ. ಎನ್‌. ಲಿಂಗಣ್ಣ, ಮಾಜಿ ಶಾಸಕ ಬಸವರಾಜ ನಾಯ್ಕ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಮೇಯರ್‌ ಎಸ್‌.ಟಿ. ವೀರೇಶ್‌, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ, ಉಪಾಧ್ಯಕ್ಷ ಶಿವರಾಜ ಪಾಟೀಲ, ಜಿಲ್ಲಾ ವಕ್ತಾರ ಡಿ.ಎಸ್‌. ಶಿವಶಂಕರ್‌ ಇದ್ದರು.

ಹಣಕ್ಕಿಂತ ವಿಶ್ವಾಸಕ್ಕೆ ಬೆಲೆ ಕೊಡುವರು

‘ಕಳೆದ ಬಾರಿಯ ಚುನಾವಣೆಯಲ್ಲಿ 2,429 ಮತಗಳನ್ನು ಪಡೆದು ಸೋತಿದ್ದೆ. ಈ ಬಾರಿ ಗ್ರಾಮ ಪಂಚಾಯಿತಿ ಸದಸ್ಯರ ಮನೆಗಳಿಗೂ ತೆರಳಿ ಮಾತನಾಡಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನಗಳ ಬಗ್ಗೆ ವಿಶೇಷವಾಗಿ ಯುವ ಸದಸ್ಯರಿಗೆ ತರಬೇತಿ ನೀಡಿದ್ದೇವೆ. ಗ್ರಾಮ ಸ್ವರಾಜ್‌, ಜನ ಸೇವಕ ಹಾಗೂ ಜನ ಸ್ವರಾಜ್‌ ಸಮಾವೇಶಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಹಣಕ್ಕಿಂತ ವಿಶ್ವಾಸಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ’ ಎಂದು ಅಭ್ಯರ್ಥಿ ಕೆ.ಎಸ್‌. ನವೀನ್‌ಕುಮಾರ್‌ ಅಭಿಪ್ರಾಯಪಟ್ಟರು.

‘ಶಾಸಕ ತಿಪ್ಪಾರಡ್ಡಿ ಜೊತೆ ಮನಸ್ತಾಪ ಇಲ್ಲ. ಪ್ರಚಾರ ಕಾರ್ಯಕ್ರಮಗಳಲ್ಲಿ ಅವರೂ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷದ ಉಳಿದ ಶಾಸಕರೂ ಉತ್ಸಾಹದಿಂದ ಪ್ರಚಾರಕ್ಕೆ ಬರುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಿಷತ್‌ ಕ್ಷೇತ್ರ ಮರುವಿಂಗಡಣೆ: ಸದನದಲ್ಲಿ ಪ್ರಶ್ನಿಸುವೆ

‘ವಿಧಾನ ಪರಿಷತ್‌ ಕ್ಷೇತ್ರ ಮರು ವಿಂಗಡಣೆ ಮಾಡುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳುತ್ತೇನೆ’ ಎಂದು ಪರಿಷತ್‌ ಸದಸ್ಯರೂ ಆಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ದೇಶದಲ್ಲಿ ಈಗ ಜನಸಂಖ್ಯೆಯೂ ಹೆಚ್ಚಾಗಿದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಿಸಲಾಗಿದೆ. ಅದೇ ರೀತಿ ವಿಧಾನಸಭೆಯ ಸದಸ್ಯರ ಸಂಖ್ಯೆಯೂ ಹೆಚ್ಚಾಗಬೇಕಾಗಿದೆ. ಆಗ ಪರಿಷತ್ತಿನ ಸದಸ್ಯರ ಸಂಖ್ಯೆಯೂ ಹೆಚ್ಚಾಗಲಿದೆ. ಆದರೆ, ಇದು ಸುಲಭದ ಕೆಲಸವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT