ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೆಳೆಗಾರರ ಕೈ ಹಿಡಿಯಲಿದೆಯೇ ಕಡಲೆ?

Published 17 ಡಿಸೆಂಬರ್ 2023, 6:22 IST
Last Updated 17 ಡಿಸೆಂಬರ್ 2023, 6:22 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಹಿಂಗಾರು ಬೆಳೆಯಾಗಿ ಕಡಲೆ ಬೆಳೆದಿರುವ ರೈತರು ಈ ವರ್ಷ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಲೆ ಕಾಳಿಗೆ ಉತ್ತಮ ದರವಿದ್ದು, ಬೆಳೆಗಾರರಲ್ಲಿ ಲಾಭದ ಭರವಸೆ ಚಿಗುರೊಡೆದಿದೆ.

ಹಿಂಗಾರಿನಲ್ಲಿ ಜಿಲ್ಲೆಯಲ್ಲಿ 6,370 ಹೆಕ್ಟೇರ್‌ ಜಮೀನಿನಲ್ಲಿ ಕಡಲೆ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 6,140 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆರಂಭದಲ್ಲಿ ಸುರಿದ ಕೊಂಚ ಮಳೆಯಿಂದ ಬೆಳೆಗೆ ಅನುಕೂಲವಾಗಿದೆ. ಈಗ ಚಳಿ ಹೆಚ್ಚಾಗಿದ್ದು, ಇಬ್ಬನಿಯೂ ಬೀಳುತ್ತಿದೆ. ಇದು ಕೂಡ ಬೆಳೆಗೆ ವರದಾನವಾಗಿದೆ. 

ಜಿಲ್ಲೆಯ ಪೈಕಿ ಜಗಳೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು (3,750 ಹೆಕ್ಟೇರ್‌) ಪ್ರದೇಶದಲ್ಲಿ ಕಡಲೆ ಬೆಳೆಯಾಗಿದೆ. ಉಳಿದಂತೆ ಚನ್ನಗಿರಿ ತಾಲ್ಲೂಕಿನಲ್ಲಿ 1,090, ನ್ಯಾಮತಿಯಲ್ಲಿ 500, ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕಿನಲ್ಲಿ ತಲಾ 400 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ.

ಕೃಷಿ ಇಲಾಖೆಯಿಂದ ಈ ವರ್ಷ ‘ಸೂಪರ್‌ ಅಣ್ಣಿಗೇರಿ’ ಹಾಗೂ ಎನ್‌.ಬಿ.ಇ.ಜಿ. ತಳಿಯ ಬೀಜಗಳನ್ನು ವಿತರಿಸಲಾಗಿದೆ. ಈ ಬೆಳೆಯನ್ನು ಯಂತ್ರದ ಮೂಲಕವೇ ಕಟಾವು ಮಾಡಿ, ಕಾಳುಗಳನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈ ಮೊದಲು ‘ಜೆ.ಜಿ. 11’ ಸಾಂಪ್ರದಾಯಿಕ ತಳಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು.

‘ಕಡಲೆಯು 3 ತಿಂಗಳ ಬೆಳೆಯಾಗಿದ್ದು, ಇನ್ನು 15 ರಿಂದ 20 ದಿನಗಳಲ್ಲಿ ಫಸಲು ರೈತರ ಕೈ ಸೇರುವ ನಿರೀಕ್ಷೆ ಇದೆ. ಕಪ್ಪು ಮಣ್ಣು ಹೆಚ್ಚು ಸೂಕ್ತವಾಗಿರುವುದರಿಂದ ಗದಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು ಭಾಗದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಎಂ.ಪಿ.

ಹಸಿರು ಕಡಲೆ ಗಿಡ ಮಾರಾಟ

ಜಿಲ್ಲೆಯಲ್ಲಿ ಬೆಳೆಗಾರರು ಹಸಿರು ಕಡಲೆ ಗಿಡ ಮಾರಾಟಕ್ಕೆ ಆದ್ಯತೆ ನೀಡುತ್ತಿಲ್ಲ. ‘ಬೆಳೆ ಕಟಾವಿನ ನಂತರ ಕಾಳುಗಳನ್ನು ಒಣಗಿಸಿ ಮಾರಿದರೆ ಮಾತ್ರ ಹೆಚ್ಚಿನ ಲಾಭ ಸಿಗುತ್ತದೆ. ಹಸಿರು ಕಡಲೆ ಗಿಡಗಳನ್ನು ಮಾರುವುದರಿಂದ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆಯೇ ಹೊರತು, ಬೆಳೆಗಾರರಿಗಲ್ಲ’ ಎನ್ನುತ್ತಾರೆ ರೈತ ವೆಂಕಟೇಶ್‌. 

ನಗರದ ಮಾರುಕಟ್ಟೆಗಳಲ್ಲಿ ಸಿಗುವ ಕಡಲೆ ಗಿಡಗಳನ್ನು ಗದಗ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ತರಿಸಿಕೊಳ್ಳಲಾಗುತ್ತಿದೆ. ನಗರದ ವಿವಿಧೆಡೆ ಕೆ.ಜಿ.ಗೆ ₹ 50ರಂತೆ ಕಡಲೆ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.

‘20 ಕೆ.ಜಿ.ಗೂ ಹೆಚ್ಚಿನ ತೂಕದ ಪೆಂಡಿಯೊಂದಕ್ಕೆ ₹ 650 ನೀಡಿ ತರುತ್ತೇನೆ. ಕಳೆದ ವರ್ಷ ದಿನಕ್ಕೆ 2 ಪೆಂಡಿ ಮಾರುತ್ತಿದ್ದೆ, ಈಗ 1 ಪೆಂಡಿಯಷ್ಟೇ ಮಾರಾಟವಾಗುತ್ತಿದೆ, ವ್ಯಾಪಾರ ಕಡಿಮೆ ಇದೆ’ ಎನ್ನುತ್ತಾರೆ ಕೆ.ಆರ್.ಮಾರ್ಕೆಟ್‌ನಲ್ಲಿ ಕಡಲೆ ಗಿಡ ಮಾರುತ್ತಿದ್ದ ಸಂಗವ್ವ.

ಶಿವಮೊಗ್ಗ ಎಪಿಎಂಸಿಯಲ್ಲಿ ಉತ್ತಮ ದರ

‘ಶಿವಮೊಗ್ಗ ಎಪಿಎಂಸಿಯಲ್ಲಿ ಶನಿವಾರ ಒಂದು ಕ್ವಿಂಟಲ್‌ ಕಡಲೆ ಕಾಳಿಗೆ ಕನಿಷ್ಠ ₹6900 ಗರಿಷ್ಠ ₹7350 ಮಾದರಿಗೆ ₹7125 ದರವಿತ್ತು. ಚಿತ್ರದುರ್ಗ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹2905 ಗರಿಷ್ಠ ₹5401 ಹಾಗೂ ಮಾದರಿ ₹4153 ಬೆಲೆ ಇದೆ. ದಾವಣಗೆರೆ ಎಪಿಎಂಸಿಗೆ ಕಡಲೆ ಕಾಳು ಇನ್ನು ಬಂದಿಲ್ಲ. ಜಗಳೂರು ತಾಲ್ಲೂಕಿನ ಕಡಲೆ ಬೆಳೆಗಾರರು ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಚಿತ್ರದುರ್ಗ ಮಾರುಕಟ್ಟೆಗೆ ಹೆಚ್ಚಾಗಿ ಕಾಳು ಒಯ್ಯುತ್ತಾರೆ’ ಎಂದು ದಾವಣಗೆರೆ ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದರು. ‘ಎಪಿಎಂಸಿ ಮಾರುಕಟ್ಟೆಗಳನ್ನು ಹೆಚ್ಚಾಗಿ ಅವಲಂಬಿಸದ ಜಿಲ್ಲೆಯ ರೈತರು ಹೊರಗಡೆಯೇ ಹೆಚ್ಚಾಗಿ ಖರೀದಿದಾರರಿಗೆ ಕಡಲೆ ಕಾಳು ಮಾರಾಟ ಮಾಡುತ್ತಾರೆ. ಚಳ್ಳಕೆರೆ ಚಿತ್ರದುರ್ಗ ಭಾಗದ ಖರೀದಿದಾರರು ರೈತರ ಜಮೀನುಗಳಿಗೇ ಬಂದು ಕಾಳು ಖರೀದಿಸುತ್ತಾರೆ’ ಎಂದು ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಕಡಲೆ ಕಾಳಿಗೆ ₹5500 ರಿಂದ ₹6000 ದರ ಇದೆ. ಇದೀಗ ಮಾರುಕಟ್ಟೆಗೆ ಬರುತ್ತಿರುವುದು ಹಳೆಯ ಕಾಳು. ಈ ವರ್ಷದ ಹಿಂಗಾರಿನಲ್ಲಿ ಬೆಳೆದ ಕಡಲೆಕಾಳು ಮಾರುಕಟ್ಟೆಗೆ ಬಂದಾಗ ದರದ ನಿಖರ ಮಾಹಿತಿ ತಿಳಿಯಲಿದೆ’ ಎಂದರು.

ಉತ್ತಮ ಇಳುವರಿ ಪಡೆಯಲು ಸಲಹೆ

  • ಹೂವಾಡುವ ಪ್ರಾರಂಭಿಕ ಹಂತದಲ್ಲಿ ಶೇ 2ರಷ್ಟು ಯೂರಿಯಾ (ಪ್ರತೀ ಲೀಟರ್ ನೀರಿಗೆ 20 ಗ್ರಾಂ ಯೂರಿಯಾ) ಸಿಂಪಡಣೆ ಮಾಡಬೇಕು.

  • ಬಿತ್ತನೆ ಮಾಡಿದ 35 ರಿಂದ 40 ದಿನಗಳಲ್ಲಿ ಕುಡಿ ಚಿವುಟಬೇಕು.

  • ಶೇ 2 ರಷ್ಟು ಕ್ಯಾಲ್ಸಿಯಂ ಕ್ಲೋರೈಡ್‌ನಿಂದ ಬೀಜೋಪಚಾರ ಮಾಡುವುದರ ಜೊತೆಗೆ ಹೂವಾಡುವ ಹಂತದಲ್ಲಿ ಸಿಸಿಸಿ (ಸೈಕೊಸಿಲ್) 100 ಪಿಪಿಎಂ ಪ್ರಚೋದಕವನ್ನು ಸಿಂಪಡಿಸುವುದು.

  • ಬಿತ್ತಿದ 35 ದಿನಗಳ ನಂತರ 20 ಪಿಪಿಎಂ ನ್ಯಾಫ್ತಲಿಕ್ ಆ್ಯಸಿಟಿಕ್ ಆ್ಯಸಿಡ್‌ (100 ಲೀ. ನೀರಿನಲ್ಲಿ 2 ಮಿ.ಲೀ. ಎನ್‌ಎಎ ಬೆರೆಸುವುದು) ಸಿಂಪಡಿಸಬೇಕು.

ಈ ಬಾರಿ ಬೀಜ ಬಿತ್ತನೆ ವೇಳೆ ಸುರಿದ ಮಳೆ ಹಾಗೂ ಇಬ್ಬನಿಯಿಂದಾಗಿ ಉತ್ತಮ ಇಳುವರಿ ಬಂದಿದೆ. ಬೆಳೆಗೆ ಹೆಚ್ಚಿನ ರೋಗ ತಗುಲಿಲ್ಲ. ಬೆಳೆಗಾರರು ಇಲಾಖೆ ಸೂಚಿಸಿದ ಔಷಧೋಪಚಾರವನ್ನು ಪಾಲಿಸಬೇಕು.
ಶ್ರೀನಿವಾಸ್ ಚಿಂತಾಲ್, ಜಂಟಿ ನಿರ್ದೇಶಕ ಕೃಷಿ ಇಲಾಖೆ
2 ಎಕರೆಯಲ್ಲಿ ಕಡಲೆ ಬೆಳೆದಿದ್ದೇನೆ. ಕಳೆದ ವರ್ಷ 4 ಕ್ವಿಂಟಲ್‌ ಕಾಳು ಸಿಕ್ಕಿತ್ತು ಈ ವರ್ಷ ಒಂದೆರಡು ಕ್ವಿಂಟಲ್ ಜಾಸ್ತಿ ಸಿಗುವ ನಿರೀಕ್ಷೆ ಇದೆ.
ಮುನಿ ಎಸ್‌.ಎಂ. ಶೆಟ್ಟಿಹಳ್ಳಿ, ಚನ್ನಗಿರಿ
ಕಳೆದ ವರ್ಷ ಕಡಲೆ ಕಾಳಿನ ದರ ಕ್ವಿಂಟಲ್‌ಗೆ ₹ 4000 ರಿಂದ ₹ 5000 ಇತ್ತು. ಈ ವರ್ಷ ₹ 6000 ರಿಂದ ₹ 7000 ಬೆಲೆ ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗ ಮಾರುಕಟ್ಟೆಗೆ ಕಾಳು ಒಯ್ಯುತ್ತೇವೆ.
ಟಿ.ವೆಂಕಟೇಶ್ ಜಗಳೂರಿನ, ಗೊಲ್ಲರಹಟ್ಟಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT