ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಅರಿಯದಿದ್ದರೆ ಸಾಧನೆ ಅಸಾಧ್ಯ: ಸ್ವಾಮೀಜಿ

Published 8 ಜೂನ್ 2023, 15:59 IST
Last Updated 8 ಜೂನ್ 2023, 15:59 IST
ಅಕ್ಷರ ಗಾತ್ರ

ಆನಂದಪುರ: ‘ನಾವು ಹಿಂದಿನ ಇತಿಹಾಸವನ್ನು ಅರಿಯದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಬೆಳಗಾವಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಮಲಂದೂರಿನಲ್ಲಿ ಗುರುವಾರ ನಡೆದ ಇತಿಹಾಸ ಪ್ರಸಿದ್ಧ ಮಹಂತಿನ ಮಠದಲ್ಲಿ ನೂತನ ಶಿವಲಿಂಗ, ನಂದಿಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ‌ಮಾತನಾಡಿದರು.

‘ಆಧುನಿಕ ಯುಗದಲ್ಲಿ ಯಾಂತ್ರಿಕ‌ ಜೀವನ ನಡೆಸುತ್ತಿದ್ದು, ಮೊಬೈಲ್‌ನಲ್ಲೇ ಹೆಚ್ಚಿನ ಕಾಲಹರಣ ಮಾಡುತ್ತಿದ್ದೇವೆ. ಸಮ್ಮನೆ ಕಾಲಹರಣ ಮಾಡುವುದಕ್ಕಿಂತ ನಮ್ಮ ಇತಿಹಾಸದ ಪುಟಗಳನ್ನು ತಿರುಚಿ ನೋಡಬೇಕಾಗಿದೆ. ಈಗ ಮಕ್ಕಳಲ್ಲಿ ಇತಿಹಾಸದ ಅರಿವಿಲ್ಲ. ರೊಕ್ಕದ ಮಕ್ಕಳಾಗಿದ್ದೇವೆಯೇ ಹೊರತು ಇತಿಹಾಸದ ಮಕ್ಕಳಾಗಿಲ್ಲ’ ಎಂದು ಹೇಳಿದರು.

‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಸಮಾಜ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಜಗತ್ತಿನಲ್ಲಿ ಸಾಕಷ್ಟು ಭೂಮಿ, ನೀರು, ಹಣ ಇದ್ದು, ಮನುಷ್ಯನೇ ಸರಿಯಾದ ದಾರಿಯಲ್ಲಿ ನಡೆಯದಿದ್ದರೆ ಪ್ರಯೋಜನವಿಲ್ಲ. ಮನಸ್ಸಿನ, ಸಮಾಜದ ಒಳಿತಿಗಾಗಿ ಸಮಾಜದ ರಕ್ಷಣೆ ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.

‘ಇತಿಹಾಸ ಗೊತ್ತಿದ್ದವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನು ದುರಾಭಿಮಾನದಿಂದ ತಿಳಿದುಕೊಳ್ಳುತ್ತಿದ್ದೇವೆ. ಇದು ಸರಿಯಲ್ಲ. ಇತಿಹಾಸದ ಜತೆಗೆ ಮುಂದೆ ಏನಾಗಬೇಕು ಎಂಬುದರ ಯೋಚನೆಯೂ ಅಗತ್ಯ‘ ಎಂದು ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ಕೆಳದಿ ಅರಸರು ಕೆರೆಯ ನಿರ್ಮಾಣದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 5800ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿ ನೀರಿನ ಸಂರಕ್ಷಣೆ ಹಾಗೂ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಪ್ರಕೃತಿ ಮಡಿಲಲ್ಲಿ ಇರುವ ಸುಂದರ ದೇವಸ್ಥಾನ ನಶಿಸಿ ಹೋಗಬಾರದು ಎನ್ನುವ ಉದ್ದೇಶದಿಂದ ಶಿವಲಿಂಗ ಹಾಗೂ ನಂದಿಮೂರ್ತಿ ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಇದರ ರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಗುತ್ತಲ ಮಠದ ಪ್ರಭು ಸ್ವಾಮೀಜಿ, ಕೆಳದಿ ಅರಸರ ವಂಶಜ ಚಂದ್ರಕಾಂತ ತಮ್ಮಣ್ಣ ಮುತವಾಡ, ಮಹಂತಿನ ಮಠದ ಕಾರ್ಯದರ್ಶಿ ರಾಜು ಕೆ.ಆರ್., ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಶರತ್ ನಾಗಪ್ಪ, ಕೋಮಲ, ಶಿವನಾಂದ, ಪ್ರಮುಖರಾದ ನವೀನ್‌, ಗಜೇಂದ್ರ, ಟಾಕಪ್ಪ, ಅಶ್ವಿ‌ನ್, ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT