ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಹಿತಕ್ಕಾಗಿ ದುಡಿಯಿರಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಮಹಾ ಅಧಿವೇಶನದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ
Published 24 ಡಿಸೆಂಬರ್ 2023, 7:29 IST
Last Updated 24 ಡಿಸೆಂಬರ್ 2023, 7:29 IST
ಅಕ್ಷರ ಗಾತ್ರ

ದಾವಣಗೆರೆ: ‘ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಸಮಾಜದ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಆಗ ಸಮಾಜ ಸಂಘಟಿತವಾಗಲಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೂ ಸಾಧ್ಯವಾಗಲಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಎಂಬಿಎ ಕಾಲೇಜು ಮೈದಾನದಲ್ಲಿ ಶನಿವಾರ ಆರಂಭವಾದ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲಿ ಸಂಘಟನೆ ಬಲಿಷ್ಠವಾಗಿರುತ್ತದೆಯೋ ಅಲ್ಲಿ ಆಶೋತ್ತರಗಳು ಈಡೇರುತ್ತವೆ. ಅಂತಹ ಪ್ರಯತ್ನ ಅಧಿವೇಶನದ ಮೂಲಕ ಆಗಲಿ’ ಎಂದು ಆಶಿಸಿದರು.

‘ಸಮುದಾಯದ ಜನಸಂಖ್ಯೆ ಸಾಕಷ್ಟು ಬೆಳೆದಿದ್ದು, ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಸಮಾಜದಲ್ಲಿರುವ ಅನುಕೂಲಸ್ಥರನ್ನು ನೋಡಿ, ಇಡೀ ಸಮಾಜವೇ ಶ್ರೀಮಂತವಾಗಿದೆ ಎಂಬ ಭ್ರಮೆಗೆ ಒಳಗಾಗಬಾರದು. ಎಲ್ಲಾ ಸ್ತರದ ಜನರೂ ಇದ್ದಾರೆ. ಅವರ ಸ್ಥಿತಿ ಗತಿಯನ್ನು ಪರಿಶೀಲಿಸಿದರೆ ವಾಸ್ತವದ ಅರಿವಾಗಲಿದೆ’ ಎಂದರು.

‘ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಅವಕಾಶ ಸಿಗಬೇಕು ಎನ್ನುವ ಸದಾಶಯ, ಸದ್ಭಾವನೆಯನ್ನು ವೀರಶೈವ ಧರ್ಮ ಹೊಂದಿದೆ. ಆ ಕಾರಣಕ್ಕಾಗಿ ವಿಶ್ವಧರ್ಮ, ಬಸವಣ್ಣನನ್ನು ‘ಜಗಜ್ಯೋತಿ’ ಎಂದೇ ಕರೆಯ ಲಾಗುತ್ತಿದೆ. ಜಗತ್ತಿಗೆ ಸಾರ್ವಕಾಲಿಕ ಸತ್ಯವನ್ನು ನೀಡಿದವರು ಬಸವಾದಿ ಪ್ರಮಥರು ಹಾಗೂ ಸಮಾಜದ ಹಿರಿಯರು ಎನ್ನು ವುದನ್ನು ಮರೆಯುವಂತಿಲ್ಲ’ ಎಂದು ಹೇಳಿದರು.

‘ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ವಿವಿಧ ರಾಜ್ಯಗಳಲ್ಲಿ ಸಮುದಾಯದವರು ‌ಹಂಚಿ ಹೋಗಿದ್ದು, ಕೇರಳದಲ್ಲಿನ ಅಂಗಡಿ, ಹೋಟೆಲ್‌ಗಳಲ್ಲಿ ಇಂದಿಗೂ ಇಷ್ಟಲಿಂಗ ಪೂಜೆ ಮಾಡುವ ಪದ್ಧತಿ ಇದೆ. ಇತ್ತೀಚೆಗೆ ಮಹಾಸಭಾದವರು ಭೇಟಿ ಕೊಟ್ಟು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಶ್ಲಾಘಿಸಿದರು.

‘ವೀರಶೈವ–ಲಿಂಗಾಯತ ಮಠ ಮಾನ್ಯಗಳು, ಸಂಘ–ಸಂಸ್ಥೆಗಳು ನಾಡಿನ ಶ್ರೇಯಸ್ಸಿಗೆ ನೀಡಿದ ಕೊಡುಗೆ ಅಪಾರ. ಯಾವುದೇ ಜಾತಿ, ಮತ, ಭೇದವೆಣಿಸದೇ ಎಲ್ಲರಿಗೂ ಆಶ್ರಯ ನೀಡಿ, ಅವರ ಕ್ಷೇಮವೇ ತಮ್ಮ ಕ್ಷೇಮ ಎಂದು ಭಾವಿಸಿರುವ ಕೀರ್ತಿ ಸಮುದಾಯಕ್ಕೆ ಸಲ್ಲುತ್ತದೆ. ಹೀಗಾಗಿ ಸಮಾಜ ನಿರ್ಮಾಣ ಸಾಧ್ಯವಾಯಿತು. ಉತ್ತರ ಭಾರತದ ರಾಜ್ಯಗಳಿಗೆ ಹೋದರೆ ಇದು ತಿಳಿಯುತ್ತದೆ’ ಎಂದು ಹೇಳಿದರು.

‘ಸಮಾಜ ಕವಲು ದಾರಿಯಲ್ಲಿದೆ’

‘ಐತಿಹಾಸಿಕವಾಗಿ ಪ್ರಬಲವಾಗಿರುವ ವೀರಶೈವ –ಲಿಂಗಾಯತ ಧರ್ಮದವರು ಸಂಘಟನೆ ದೃಷ್ಟಿಯಿಂದ ಈಗಲೂ ದುರ್ಬಲರಾಗಿದ್ದೇವೆ. ಸಮಾಜ ಕವಲು ದಾರಿಯಲ್ಲಿದ್ದು, ಸಮಾಜದ ಎದುರು ಇರುವ ಸವಾಲು, ಸಮಸ್ಯೆಗಳ ಬಗ್ಗೆ ಚಿಂತನೆ ಮಾಡುವ ಕಾಲ ಇದಾಗಿದೆ. ನಮ್ಮವರೇ– ನಮಗಾಗಲ್ಲ ಎಂಬ ಬೇಸರವಿದೆ. ಹಾಗಾಗಿ ಸಮಾಜದ ಮುಂದಿರುವ ಸವಾಲುಗಳಿಗೆ ವೀರಶೈವ– ಲಿಂಗಾಯತರು ಒಂದಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.

‘ಲಿಂಗಾಯತರು ಸುಧಾರಿಸಿದರೆ ಕರ್ನಾಟಕ ಸುಧಾರಿಸುತ್ತದೆ. ಲಿಂಗಾಯತರು ಹಾಳಾದರೆ ಕರ್ನಾಟಕವೇ ಹಾಳಾಗುತ್ತದೆ. ನಮ್ಮದು ಸಾತ್ವಿಕ ಸಮಾಜ. ನಾಡು ಕಟ್ಟೋಣ, ರಾಷ್ಟ್ರ ಕಟ್ಟೋಣ’ ಎಂದು ಕರೆ ನೀಡಿದರು.

‘ವೀರಶೈವ ಮಠಮಾನ್ಯಗಳು ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿ ಆಧುನಿಕ ಸಮಾಜ ನಿರ್ಮಾಣ ಮಾಡುವತ್ತ ದೊಡ್ಡ ಹೆಜ್ಜೆ ಇಟ್ಟಿವೆ.  ಸಿರಿಗೆರೆ, ತುಮಕೂರು, ಚಿತ್ರದುರ್ಗ, ಸುತ್ತೂರು ಮಠ ಸೇರಿದಂತೆ ಹಲವು ಮಠ ಮಾನ್ಯಗಳು, ಸಂಘ ಸಂಸ್ಥೆಗಳು ವೀರಶೈವರಿಗಷ್ಟೇ ಅಲ್ಲ, ಎಲ್ಲಾ ಧರ್ಮದವರಿಗೆ ಆಶ್ರಯ, ಅನ್ನ, ಸಂಸ್ಕಾರ ಕೊಟ್ಟು ಬೆಳೆಸಿದ ಕೀರ್ತಿ ಸಲ್ಲುತ್ತದೆ’ ಎಂದರು.

‘ಅವೈಜ್ಞಾನಿಕ ಜಾತಿಗಣತಿ ವರದಿ ಒಪ್ಪಲು ಸಾಧ್ಯವೇ ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು. 

ಹುಬ್ಬಳ್ಳಿಯ ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಸಮಾಜದ ಮುಂದೆ ನಾನು ಸಣ್ಣವನು ಎಂದು ತೋರಿಸಿಕೊಟ್ಟವರು ಹಾನಗಲ್ ಕುಮಾರಸ್ವಾಮಿಗಳು. ನಮ್ಮವರೇ ಮಕ್ಕಳ ಮದುವೆ ಮಾಡಬೇಕು. ದೀಕ್ಷೆ ನೀಡುವಂತಾಗಬೇಕು ಎಂಬ ದೂರದೃಷ್ಟಿಯಿಂದ ಮಹಾಸಭಾ ಕಟ್ಟಿದವರು’ ಎಂದರು.

ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ಸಚ್ಚಿದಾನಂದಮೂರ್ತಿ, ಕೇಂದ್ರ ಸಚಿವ ಭಗವಂತ ಖೂಬಾ,  ಶಾಸಕರಾದ ಡಿ.ಜಿ.ಶಾಂತನಗೌಡ, ಬಿ.ಪಿ. ಹರೀಶ್, ಬಸವರಾಜು ವಿ. ಶಿವಗಂಗಾ, ಅಮರೇಗೌಡ ಬಯ್ಯಾಪುರ, ಭರತ್‌ರೆಡ್ಡಿ, ಶರಣ ಬಸಪ್ಪ ಕುಂದಕೂರು, ಜಿ.ಎಸ್. ಪಾಟೀಲ್, ಸಿ.ಸಿ. ಪಾಟೀಲ್, ಅಲ್ಲಮಪ್ರಭು, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಸ್.ಎಸ್. ಪಾಟೀಲ್, ರಾಣಿ ಸತೀಶ್, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಉಮಾಪತಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ, ಮಹಾಸಭೆಯ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ ಇದ್ದರು. ಚನ್ನಬಸಪ್ಪ ನ್ಯಾಮತಿ ಸುಮತಿ ಜಯಪ್ಪ ನಿರೂಪಿಸಿದರು.

ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು
ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು

1918ರಲ್ಲಿ ಹರಿಹರದಲ್ಲಿ ನಡೆದಿತ್ತು ಮಹಾ ಅಧಿವೇಶನ:

ದಾವಣಗೆರೆ: ‘1918ರಲ್ಲಿ ಹರಿಹರದಲ್ಲಿ ವೀರಶೈವ–ಲಿಂಗಾಯತ ಮಹಾ ಅಧಿವೇಶನ ನಡೆದಿತ್ತು. ಆದರೆ ಪಟ್ಟಿಯಲ್ಲಿ ಅದರ ಉಲ್ಲೇಖವಿಲ್ಲ. ಅದನ್ನು ಸರಿಪಡಿಸಬೇಕು’ ಎಂದು ಸಿರಿಗೆರೆ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ‘ಮೇ 9 1918ರಂದು ಮೈಸೂರು ಬಸವಯ್ಯ ಅವರ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆದಿದ್ದು ವೃತ್ತಾಂತ ಪತ್ರಿಕೆಯಲ್ಲಿ ಇದು ಪ್ರಕಟವಾಗಿದೆ’ ಎಂದರು.  ‘ವೀರಶೈವ ಲಿಂಗಾಯತ ಸಮುದಾಯ ಉಪಪಂಗಡಗಳಾಗಿ ಹೋದರೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಾಗದು.  ಸಮುದಾಯದವರಲ್ಲಿ ಸ್ವಾರ್ಥ ಕಡಿಮೆಯಾಗಬೇಕು. ಒಳಬೇಧವನ್ನು ತ್ಯಜಿಸಿ ಅನ್ಯೋನ್ಯದಿಂದ ವರ್ತಿಸಬೇಕು. ಈ ಬಗ್ಗೆ ಹಿಂದಿನ ಅಧಿವೇಶನಗಳಲ್ಲಿ ಕರೆ ಕೊಟ್ಟಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು. ‘ಉದ್ಘಾಟನೆಯಾದ ಮೇಲೆ ಹಚ್ಚಿದ ದೀಪಗಳು ಕಾಣೆಯಾಗುತ್ತಿವೆ. ಇದು ಯಾಕೆ ಗೊತ್ತಿಲ್ಲ. ದೀಪ ಜ್ಯೋತಿಯ ಪ್ರತೀಕ. ಅತಿಥಿಗಳು ಕಾಣದೇ ಇದ್ದರೂ ವೇದಿಕೆಯಲ್ಲಿ ಇರಬೇಕು. ಸಮಾಜದ ಸಂಘಟನೆ ದೃಷ್ಟಿಯಿಂದ ದೀಪ ಹಚ್ಚುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT