ಶುಕ್ರವಾರ, ಆಗಸ್ಟ್ 6, 2021
22 °C

ಮೋದಿಯಿಂದ ಯೋಗ ಜನಪ್ರಿಯ: ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯೋಗ ಮಾಡುವುದರಿಂದ ಕೊರೊನಾ ಸೇರಿದಂತೆ ಹಲವು ರೋಗಗಳನ್ನು ಗುಣಪಡಿಸಬಹುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಜಿಎಂಐಟಿ ಆವರಣದಲ್ಲಿ ಸೋಮವಾರ ನಡೆದ 7ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿಯವರು 7 ವರ್ಷಗಳ ಹಿಂದೆಯೇ ಯೋಗ ದಿನ ಘೋಷಣೆ ಮಾಡಿದ ಮೇಲೆ ಇಡೀ ವಿಶ್ಚವೇ ಯೋಗ ದಿನಾಚರಣೆ ಆಚರಿಸುತ್ತಿದೆ. ಯೋಗ ಮಾಡುವುದರಿಂದ ಉಸಿರಾಟ ಸಲೀಸಾಗಿ ಆಗುತ್ತದೆ. ಇಂದಿನ ಕೊರೊನಾ ಸಂದರ್ಭದಲ್ಲಿ ಆರೋಗ್ಯವಾಗಿ ಇರಬೇಕಾದರೆ ಯೋಗ ಅವಶ್ಯಕ ಎಂಬುದನ್ನು ಮುಂದಾಲೋಚನೆ ಮಾಡಿ ಯೋಗ ದಿನಾಚರಣೆ ಘೋಷಣೆ ಮಾಡಿದ್ದಾರೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕ್ಕೆ ನಂಬರ್–1 ಸ್ಥಾನದಲ್ಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಜೊಬೈಡನ್ 2ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ನಮ್ಮ ದೇಶದ ಪ್ರಧಾನಿಗಳು ವಿದೇಶಕ್ಕೆ ಹೋದರೆ ಸಾಲ ಕೇಳಲು ಬರುತ್ತಾರೆ ಎಂದು ಹೇಳುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅವರನ್ನು ರೆಡ್‌ ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತದೆ’ ಎಂದು ಶ್ಲಾಘಿಸಿದರು.

ಮೂರ್ನಾಲ್ಕು ದಿನಗಳಲ್ಲಿ ದಾವಣಗೆರೆ ಪೂರ್ಣ ಅನ್‌ಲಾಕ್‌: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ 8ರಷ್ಟಿದ್ದು, ಶೇ 5ಕ್ಕಿಂತ ಕಡಿಮೆ ಪ್ರಮಾಣ ಇರುವ ಜಿಲ್ಲೆಗಳನ್ನು ಅನ್‌ಲಾಕ್‌ ಮಾಡಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಜಿಲ್ಲೆಯ ಸೋಂಕಿನ ಪ್ರಮಾಣ ಕಡಿಮೆಯಾಗಲಿದ್ದು, ಜಿಲ್ಲೆಯನ್ನೂ ಅನ್‌ಲಾಕ್ ಮಾಡಲಾಗುವುದು. ಕೊರೊನಾ ಕಡಿಮೆಯಾಯಿತು ಎಂದು ಎಚ್ಚರ ತಪ್ಪುವಂತಿಲ್ಲ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮೂರನೇ ಅಲೆ ಬರುವುದಾಗಿ ತಜ್ಞರು ಎಚ್ಚರಿಕೆ ನೀಡಿದ್ದು, ನಾವು ಎಚ್ಚೆತ್ತುಕೊಳ್ಳಬೇಕು’ ಎಂದು ಎಚ್ಚರಿಸಿದರು.

ವೈದ್ಯಗುರು ಚನ್ನಬಸವಣ್ಣ  ಮಾತನಾಡಿ, ‘ಯೋಗವನ್ನು ಕೇವಲ ಒಂಧು ದಿನಕ್ಕೆ ಸೀಮಿತಗೊಳಿಸದೇ ನಿರಂತರವಾಗಿ ಅಭ್ಯಾಸ ಮಾಡಬೇಕು. ಪ್ರತಿನಿತ್ಯ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದಾಗಿ ಯಾವ ವೈರಸ್ ಕೂಡ ದಾಳಿ ಮಾಡುವುದಿಲ್ಲ’ ಎಂದು ಹೇಳಿದರು.

‘ಕೊರೊನಾ ವೈರಸ್‌ ಭಯದಿಂದ ಹಚ್ಚಿನ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲೋಪತಿ, ಆಯುರ್ವೇದ ಹಾಗೂ ಹೊಮಿಯೊಪಥಿಯಲ್ಲೂ ಶೇ 97ರಷ್ಟು ಗುಣವಾಗುತ್ತದೆ. ಶೇ 3ರಷ್ಟು ತೀವ್ರಸ್ವರೂಪಕ್ಕೆ ಹೋಗುತ್ತಿದೆ. ಶ್ವಾಸಕೋಶ ಸೋಂಕು ಶುದ್ಧೀಕರಣಕ್ಕಾಗಿ ರಸೌಷಧವನ್ನು ಬಳಸಬಹುದು. ಆಯುರ್ವೇದದಿಂದ ತೀವ್ರ ಸ್ವರೂಪದ ಕಾಯಿಲೆಯನ್ನು ಗುಣಪಡಿಸಬಹುದು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ನೀವು ಇರುವ ಜಾಗದಲ್ಲೇ ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಗಮನ ಸೆಳೆದ 3 ವರ್ಷದ ಬಾಲಕಿ

ಯೋಗ ದಿನದಲ್ಲಿ ಮೂರು ವರ್ಷದ ಬಾಲಕಿ ಆನ್ಯಾ ಯೋಗ ಮಾಡುವ ಮೂಲಕ ಗಮನ ಸೆಳೆದಳು. ತಾಯಿ ಚೈತ್ರಾ ಅವರು ಬಾಲಕಿಗೆ ಯೋಗ ಹೇಳಿಕೊಡುತ್ತಿದ್ದರು. ಅಕ್ಕಪಕ್ಕದವರನ್ನು ನೋಡಿಕೊಂಡೂ ಈ ಪುಟ್ಟ ಬಾಲಕಿ ವಿವಿಧ ಭಂಗಿಗಳಲ್ಲಿ ಯೋಗ ಮಾಡುತ್ತಿದ್ದುದ್ದನ್ನು ನೋಡಿ ಅಲ್ಲಿದ್ದವರು ಖುಷಿಪಟ್ಟರು.

ಮನೆಯಲ್ಲೇ ಯೋಗ

ಕೊರೊನಾ ಕಾರಣದಿಂದ ಹೆಚ್ಚಿನ ಮಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದಾಗಿ ಮನೆಯಲ್ಲೇ ಯೋಗ ಮಾಡುವಂತೆ ಸಲಹೆ ನೀಡಲಾಯಿತು. ಇದಕ್ಕೆ ಅನುಕೂಲವಾಗಲು ಫೇಸ್‌ಬುಕ್‌, ಯೂಟ್ಯೂಬ್, ಗೂಗಲ್ ಮೀಟ್ ಹಾಗೂ ಸ್ಥಳೀಯ ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಸಂಸದರ ಪತ್ನಿ ಗಾಯಿತ್ರಿ ಸಿದ್ದೇಶ್ವರ, ತಹಶೀಲ್ದಾರ್ ಬಿ.ಎನ್‌. ಗಿರೀಶ್, ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಡಿಎಚ್‌ಒ ಡಾ. ನಾಗರಾಜ್, ಸ್ಮಾರ್ಟ್‌ ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರೇಗೌಡ, ಸಂಸ್ಥೆಯ ಕಾರ್ಯದರ್ಶಿ ವಾಸುದೇವ ರಾಯ್ಕರ್ ಯೋಗದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು